ಸರ್ಕಾರದ ಮಾರ್ಗಸೂಚಿ ಅನ್ವಯ ಅವಧಿ ಪೂರ್ಣಗೊಂಡರೂ ದೀರ್ಘಾವಧಿ ಕಾಲ ಅದೇ ಹುದ್ದೆಯಲ್ಲಿ ಠಿಕಾಣಿ ಹೂಡಿದ್ದ ಅಧಿಕಾರಿ, ಸಿಬ್ಬಂದಿಗಳನ್ನು ವರ್ಗಾವಣೆ ಮಾಡಬೇಕೆಂದು ಕರ್ನಾಟಕ ದಲಿತ ಸೇನೆ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಮಂಗಳವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು
‘ಬೀದರ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿಯೇ ಠಿಕಾಣಿ ಹೂಡಿದ್ದ ಹೂಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದರು.
‘ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸರ್ಕಾರದ ಮಾರ್ಗಸೂಚಿ ಅನ್ವಯ ಅವಧಿ ಪೂರ್ಣಗೊಳ್ಳುವ ವೇಳೆ ಇತರೆ ಇಲಾಖೆಯಲ್ಲಿ ನಿಯೋಜನೆ ಪಡೆಯುತ್ತಾರೆ. ತದನಂತರ ಪುನಃ ಮಾತೃ ಇಲಾಖೆಗೆ ಮರು ನಿಯೋಜನೆ ಪಡೆಯುತ್ತಾರೆ’ ಎಂದು ದೂರಿದರು.
‘ಸರ್ಕಾರದ ಮಾರ್ಗಸೂಚಿಯಲ್ಲಿರುವ ನ್ಯೂನ್ಯತೆಗಳನ್ನು ಬಳಸಿಕೊಂಡು ಮೇಲಾಧಿಕಾರಿಗಳೊಂದಿಗೆ ಶಾಮೀಲಾಗಿ ಸರ್ಕಾರದ ಕಣ್ಣಿಗೆ ಮಣ್ಣೆರಚುತಿದ್ದಾರೆ. ಈ ಬಗ್ಗೆ ಸರ್ಕಾರದ ಗಮನದಲ್ಲಿದ್ದರೂ ಯಾವುದೇ ಕ್ರಮಕೈಗೊಳ್ಳದಿರುವುದು ಶೋಚನೀಯ. ಕೂಡಲೇ ಇಂತಹ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಜಿಲ್ಲೆಯಿಂದ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಧನರಾಜ ಕೊಳಾರ್ ಸೇರಿದಂತೆ ಪ್ರಮುಖರಾದ ಜಾನಸಾನ್ ಘೋಡೆ, ಗುರುದಾಸ ಅಮದಲಪಾಡ, ವಿಲ್ಸನ್ ದೊಡ್ಡಮನಿ, ಸಂಜು ಲಕ್ಮಿದೊಡ್ಡಿ, ಪಂಡಿತ್, ರಾಜಕುಮಾರ, ಬಸವರಾಜ ಮತ್ತಿತರರು ಇದ್ದರು.