ಮಹಿಳೆಯರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ಜೀವ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಯಾದಗಿರಿ ಜಿಲ್ಲಾ ವಡಗೇರಾ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ದೂರು ಸ್ವೀಕರಿಸದೇ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಕಳಿಸಿರುವ ಪಿಎಸ್ಐ ಮೇಲೆ ಕ್ರಮ ಕೈಗೊಂಡು, ವರ್ಗಾವಣೆ ಮಾಡಬೇಕು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ನಡೆಸಿದರು.
ಮಹಾದೇವಮ್ಮ W/O ಸಿದ್ದಲಿಂಗಪ್ಪ ನಟೇಕಾರ, ಕ್ಯಾತನಾಳ ಗ್ರಾಮದ ದಲಿತ ಸಮುದಾಯದ ಬಡ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ.
ಕ್ಯಾತನಾಳ ಗ್ರಾಮದ ಬಂಡಪ್ಪಗೌಡ, ಆದೆಪ್ಪಗೌಡ ಕುರುಬ ಸಮುದಾಯದ ಇಬ್ಬರೂ ಸ ನಂ 1822ರ ಜಮೀನಿಗೆ ಹೊಂದಿಕೊಂಡಂತೆ ಇರುವ ಡೊಣವನ್ನು ಈಗಾಗಲೇ ಆಕ್ರಮಿಸಿಕೊಂಡಿದ್ದು, ಹೊಲದ ಒಡ್ಡು ಕೆಡಿಸುವುದು, ಜಮೀನಿನಲ್ಲಿ ನೀರು ಬಿಡುವುದು ಮಾಡುತ್ತಾರೆ. ಈ ರೀತಿ ಹಲವು ಬಾರಿ ಮಾಡಿದ್ದಾರೆ” ಎಂದು ಆರೋಪಿಸಿದರು.
“ಅವರು ಮಾಡುವ ದಬ್ಬಾಳಿಕೆಗಳನ್ನು ಕೇಳಲು ಹೋದರೆ ಇದನ್ನು ಕೇಳಲು ಹೋದರೆ, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುತ್ತಾರೆ. ಜುಲೈ 4ರಂದು ಇದೇ ವಿಚಾರವಾಗಿ ಕೇಳಿದ್ದಕ್ಕೆ ಬಸವಿ, ಸೂಳೆ ಎಂದು ಬೈದಿದ್ದು, ಜಾತಿ ನಿಂದನೆ ಮಾಡಿದ್ದಾರೆ. ಮಹಿಳೆ, ಹಿರಿಯಳು ಎನ್ನದೇ ಬಾಯಿಗೆ ಬಂದಂತೆ ಬೈದು ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ ಹಾಕಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು
“ಸಂತ್ರಸ್ತೆ ಮಹಾದೇವಮ್ಮ ಅವರ ಮಗ-ಸೊಸೆಯೊಂದಿಗೆ ಜುಲೈ 4ರಂದು ವಡಗೇರಾ ಠಾಣೆಗೆ ದೂರು ನೀಡಲು ಹೋದರೆ ಪಿಎಸ್‌ಐ ದೂರು ಸ್ವೀಕರಿಸದೆ, ʼನಿಮಗೆ ಮಾಡಲು ಕೆಲಸ ಇಲ್ಲವೇ, ನಿಮ್ಮದೇ ತಪ್ಪಿದೆʼ ಎಂದು ಬೆದರಿಸಿ, ಸಂತ್ರಸ್ತರ ದೂರು ತೆಗೆದುಕೊಳ್ಳದೆ ಜಾತಿ ನಿಂದನೆ ಮಾಡಿ, ಅಪಮಾನ ಮಾಡಿ, ಕಳಿಸಿದ್ದಾರೆ. ದಲಿತರಿಗೆ ರಕ್ಷಣೆ ನೀಡುವ ಬದಲಾಗಿ ನಿಂದನೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ವಡಗೇರಾ ಠಾಣಾಗೆ ದೂರು ನೀಡಲು ಹೋದರೆ ಪಿಎಸ್‌ಐ ದೂರು ಸ್ವೀಕರಿಸದೆ ಅವಾಚ್ಯ ಶಬ್ದಗಳಿಂದ ಬೈದು ಕಳಿಸಿರುವ ಪಿಎಸ್ಐ ಮೇಲೆ ಕ್ರಮ ಕೈಗೊಂಡು, ವರ್ಗಾವಣೆ ಮಾಡಬೇಕು” ಎಂದು ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
“ಒಂದು ವಾರದೊಳಗೆ ಕ್ರಮ ಕೈಗೊಳ್ಳದೆ ಹೋದರೆ ಕುಟುಂಬದವರೊಂದಿಗೆ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡಲಾಗುವುದು” ಎಂದು ಅಂಬೇಡ್ಕರ್ ಸ್ವಾಭಿಮಾನ ಸೇನೆ ಜಿಲ್ಲಾ ಅಧ್ಯಕ್ಷ ಕಾಶಿನಾಥ್ ನಟೇಕಾರ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ₹7 ಕೋಟಿ ವೆಚ್ಚದ ʼಕ್ಲಾಕ್ ಟವರ್ʼ ಕಾಮಗಾರಿ ಸ್ಥಗಿತ
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರಾಹುಲ್ ಕೊಲ್ಲೂರು, ಜಿಲ್ಲಾ ಸದಸ್ಯ ಮಲ್ಲಪ್ಪ ಕುರಕುಂದಿ, ವಡಗೇರಿ ತಾಲೂಕ ಅಧ್ಯಕ್ಷ ಸಾಬಣ್ಣ ಹಂಚಿನಾಳ, ಜಿಲ್ಲಾ ಕಾರ್ಯದರ್ಶಿ ಮೌನೇಶ್ ಯಡ್ಡಳ್ಳಿ, ಜಿಲ್ಲಾ ಸದಸ್ಯ ಭೀಮರಾಯ ಕ್ಯಾತ್ನಾಳ್ ಸೇರಿದಂತೆ ಇತರರು ಇದ್ದರು.