ಅಮೆರಿಕ ಸಂಯುಕ್ತ ಸಂಸ್ಥಾನವು 1945ರ ಆಗಸ್ಟ್ 6 ಮತ್ತು 9ರಂದು ಜಪಾನ್‌ನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣ್ವಸ್ತ್ರ ದಾಳಿ ನಡೆಸಿದಾಗ, ಜಪಾನ್ ಅಪಾರ ಸಾವುನೋವಿನ ನಷ್ಟದ ಜೊತೆಗೆ ದೀರ್ಘಕಾಲೀನ ಪರಿಣಾಮಗಳನ್ನು ಅನುಭವಿಸಿತು. ಈಗ ಪರಿಸ್ಥಿತಿ ಭಿನ್ನವಾಗಿದೆ. ಅಕಸ್ಮಾತ್ ಭಾರತ ಹಾಗೂ ಪಾಕಿಸ್ತಾನ ಅಣ್ವಸ್ತ್ರಗಳನ್ನು ಪ್ರಯೋಗಿಸಿದರೆ, ಪರಿಣಾಮವನ್ನು ಊಹಿಸಲೂ ಸಾಧ್ಯವಿಲ್ಲದಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ತಾಣಗಳ ಮೇಲೆ ಭಾರತದ ವಾಯು ಸೇನೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಮೂಲಕ 90 ಉಗ್ರರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಆಪರೇಷನ್ ಸಿಂಧೂರ ಭಾರತ ಮತ್ತು ಪಾಕಿಸ್ತಾನದ ನಡುವೆ ಈಗಾಗಲೇ ದುರ್ಬಲವಾಗಿರುವ ಸಂಬಂಧಗಳನ್ನು ಮತ್ತಷ್ಟು ಒತ್ತಡಕ್ಕೆ ಒಳಪಡಿಸಿದೆ. ಈಗ ಪ್ರತೀಕಾರದ ಕಾರ್ಯಾಚರಣೆಯು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪಾಕ್‌ನ ಕೋಟ್ಲಿ, ಮುರಿದ್ಕೆ, ಬಹಾವಲ್ಪುರ, ಚಕ್ ಅಮ್ರು, ಭೀಂಬರ್, ಗುಲ್ಪುರ್, ಸಿಯಾಲ್ಕೋಟ್ ಮತ್ತು ಮುಜಾಫರಾಬಾದ್‌ನ ಎರಡು ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ.
ಸಿಯಾಲ್ಕೋಟ್, ಬಹಾವಲ್ಪುರ, ಚಕ್ ಅಮ್ರು ಮತ್ತು ಮುರಿದ್ಕೆ ಅಂತಾರಾಷ್ಟ್ರೀಯ ಗಡಿಯಲ್ಲಿವೆ. ಉಳಿದ ಪ್ರದೇಶಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ. ಅಣ್ವಸ್ತ್ರ ಹೊಂದಿರುವ ಎರಡೂ ರಾಷ್ಟ್ರಗಳ ಪರಿಸ್ಥಿತಿ ಮತ್ತಷ್ಟು ಜಟಿಲವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಪಾಕಿಸ್ತಾನದ ಗಡಿಯಾಚೆಗಿನ ಶೆಲ್ ಮತ್ತು ಗುಂಡಿನ ದಾಳಿಗಳು ಈಗಾಗಲೇ ತೀವ್ರಗೊಂಡಿವೆ. ಪಾಕ್ ಪ್ರಧಾನಿ ಕೂಡ “ಸೂಕ್ತ ಪ್ರತಿಕ್ರಿಯೆ” ನೀಡುತ್ತೇವೆ ಎಂದು ಹೇಳಿಕೆ ನೀಡುವುದರ ಮೂಲಕ ಭವಿಷ್ಯದ ಸೇನಾ ಕಾರ್ಯಾಚರಣೆಯ ಸಾಧ್ಯತೆಯನ್ನು ಸೂಚಿಸಿದ್ದಾರೆ. ಎರಡೂ ದೇಶಗಳು ಪರಮಾಣು ಶಕ್ತಿಯನ್ನು ಹೊಂದಿರುವುದರಿಂದ, ಯಾವುದೇ ಮಿಲಿಟರಿ ಘರ್ಷಣೆಯು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಇದು ಎರಡೂ ದೇಶಗಳ ಸೇನೆಗಳ ನಡುವೆ ಸಂಪೂರ್ಣ ಯುದ್ಧಕ್ಕೆ ಕಾರಣವಾಗಬಹುದು.
ಈ ಸುದ್ದಿ ಓದಿದ್ದೀರಾ? ಭಾರೀ ಮಿಲಿಟರಿ ಕಾರ್ಯಾಚರಣೆಗೆ ಉಭಯ ದೇಶಗಳಿಂದ ತಯಾರಿ: ಯುದ್ಧದ ನಂತರ ಆಗುವ ಅನಾಹುತಗಳೇನು?
‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ನಂತರ ಪಾಕಿಸ್ತಾನ ಸೇನೆ ಕೂಡ ಪ್ರತ್ಯುತ್ತರ ನೀಡಿದೆ. ತಾನು ಭಾರತದ ಯುದ್ಧ ವಿಮಾನಗಳನ್ನು ಉರುಳಿಸಿರುವುದಾಗಿ ಹೇಳಿದೆ. ಹಾಗೆಯೇ ಜಮ್ಮು ಮತ್ತು ಕಾಶ್ಮೀರದ ಬಳಿ ಕಳೆದ 12 ದಿನದಿಂದ ಕದನವಿರಾಮವನ್ನು ಉಲ್ಲಂಘಿಸಿ ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಮನಸ್ಸಿಗೆ ಬಂದಂತೆ ಗುಂಡಿನ ದಾಳಿ ಮಾಡಿದೆ. ಹಲವು ಕಡೆಗಳಿಂದ ಫಿರಂಗಿಗಳನ್ನು ಬಳಸಿ ಶೆಲ್ ದಾಳಿ ನಡೆಸಿದೆ. ಪಾಕಿಸ್ತಾನದ ಪ್ರತಿದಾಳಿಗೆ ಜಮ್ಮು ಕಾಶ್ಮೀರದಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 38 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಸ್ಥಳೀಯರು ಸೇರಿದ್ದಾರೆ. ಪಾಕ್‌ನ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಎಲ್ಲ ಶಾಲೆ-ಕಾಲೇಜುಗಳನ್ನು ಮುಚ್ಚಲು ಆದೇಶಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಿದ್ದಾರೆ ಮತ್ತು ಜನರಿಗೆ ಅಗತ್ಯವಿಲ್ಲದೇ ಓಡಾಡದಂತೆ ಸೂಚಿಸಿದ್ದಾರೆ. ಪಂಜಾಬ್‌ನಾದ್ಯಂತ 1122, ಜಿಲ್ಲಾಡಳಿತಗಳು ಮತ್ತು ನಾಗರಿಕ ರಕ್ಷಣಾ ಇಲಾಖೆಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ.
ಭಾರತದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು ಉತ್ತರ ಭಾರತದ ಧರ್ಮಶಾಲಾ, ಲೇಹ್, ಜಮ್ಮು, ಶ್ರೀನಗರ ಮತ್ತು ಅಮೃತಸರದ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಜಮ್ಮು, ಸಾಂಬ, ಕಠುವಾ, ರಜೌರಿ ಮತ್ತು ಪೂಂಚ್‌ನ ಶಾಲೆ-ಕಾಲೇಜುಗಳನ್ನು ಮುಚ್ಚಲಾಗಿದೆ. ಅಲ್ಲದೆ ಯಾವುದೇ ಸನ್ನಿವೇಶ ಎದುರಿಸಲು ಸ್ವರಕ್ಷಣೆ ತಾಲೀಮು ನಡೆಸಿ ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯವು ಸೂಚಿಸಿದೆ. ಈ ಸ್ವರಕ್ಷಣೆ ತಾಲೀಮು ಸಂದರ್ಭದಲ್ಲಿ, ವಾಯುದಾಳಿಯ ಎಚ್ಚರಿಕೆ ನೀಡುವ ಸೈರನ್ ಮೊಳಗಿಸುವಂತೆ ಹೇಳಲಾಗಿದೆ. ತಾಲೀಮಿನಲ್ಲಿ ಸ್ವರಕ್ಷಣೆಯ ಕ್ರಮಗಳನ್ನು ಸೇರಿಸಿಕೊಳ್ಳಬೇಕು ಎಂದೂ ಸೂಚಿಸಲಾಗಿದೆ. ಈ ಪರಿಸ್ಥಿತಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳನ್ನು 1971ರ ಯುದ್ಧದ ನಂತರದ ಅತ್ಯಂತ ಕೆಟ್ಟ ಹಂತಕ್ಕೆ ಕೊಂಡೊಯ್ದಿವೆ.
ವಿಶ್ವಸಂಸ್ಥೆ, ಅಮೆರಿಕ ಸೇರಿದಂತೆ ಪ್ರಮುಖ ಎರಡೂ ರಾಷ್ಟ್ರಗಳ ಸಂಘರ್ಷವನ್ನು ತಗ್ಗಿಸುವ ಸಲುವಾಗಿ ಸಂಯಮ ವಹಿಸುವಂತೆ ಮನವಿ ಮಾಡಿವೆ. ಪರಿಸ್ಥಿತಿ ತೀವ್ರ ಬಿಗಡಾಯಿಸುವ ಹಿನ್ನೆಲೆಯಲ್ಲಿ ಅಮೆರಿಕವು ಕಠಿಣ ನಿಲುವು ತಳೆದು ಭಾರತದ ಮಿಲಿಟರಿ ಕ್ರಮಕ್ಕೆ ಪಾಕಿಸ್ತಾನ ಪ್ರತಿಕ್ರಿಯಿಸುವ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಎಂದು ಹೇಳಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಭಾರತದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳುವುದನ್ನು ತಡೆಯಬೇಕು. ಭಯೋತ್ಪಾದನೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಹಕ್ಕು ಭಾರತಕ್ಕೆ ಇದೆ. ಈ ವಿಷಯದಲ್ಲಿ ಪಾಕಿಸ್ತಾನ ಏನನ್ನೂ ಮಾಡಲು ಧೈರ್ಯ ಮಾಡಬಾರದು. ಸಂಮಯದಿಂದ ವರ್ತಿಸುವಂತೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಮನವಿ ಮಾಡಿದ್ದಾರೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಮಾತನಾಡಿ ಭಾರತದ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾರತ ಮತ್ತು ಪಾಕಿಸ್ತಾನ ಬಹಳ ಸಮಯದಿಂದ ಉದ್ವಿಗ್ನತೆಯಿಂದ ಕೂಡಿದ್ದು, ಈ ಸಂಘರ್ಷ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ ವಿಶ್ವದ ಹಲವು ರಾಷ್ಟ್ರಗಳಂತೆ ಪಾಕ್‌ನಲ್ಲೂ ಕೂಡ ಭಯೋತ್ಪಾದಕರನ್ನು ಸೃಷ್ಟಿಸಿದ್ದು ಅಮೆರಿಕ. ಸದ್ಯಕ್ಕೆ ಭಾರತದಿಂದ ಲಾಭ ಬೇಕಿರುವುದರಿಂದ ಯುದ್ಧ ವಿರೋಧಿ ನಿಲುವನ್ನು ಅನುಸರಿಸುತ್ತಿದೆ.
ಭಾರತದ ವೈಮಾನಿಕ ದಾಳಿಯ ನಂತರ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಿದೆ. ಆದರೆ ವಿಶ್ವಸಂಸ್ಥೆ, ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಉಭಯ ದೇಶಗಳು ಶಾಂತಿಯನ್ನು ಕಾಯ್ದುಕೊಳ್ಳುವಂತೆ ಒತ್ತಾಯಿಸುತ್ತಿವೆ. ಒಂದು ಸಣ್ಣ ಘಟನೆಯೂ ಅಣ್ವಸ್ತ್ರಯುದ್ಧಕ್ಕೆ ನಾಂದಿಯಾಗಬಾರದೆಂಬುದೆ ಎಲ್ಲರ ಪ್ರಮುಖ ಉದ್ದೇಶವಾಗಿದೆ. ಒಂದು ವೇಳೆ ಅಣ್ವಸ್ತ್ರ ಯುದ್ಧ ಸಂಭವಿಸಿದರೆ ಭಾರತ ಮತ್ತು ಪಾಕಿಸ್ತಾನ ನಾಶವಾಗುವುದಲ್ಲದೆ ಜಾಗತಿಕ ಸಮುದಾಯಕ್ಕೂ ಭಾರಿ ಪೆಟ್ಟು ಬೀಳುತ್ತದೆ.
ಎರಡನೇ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವು 1945ರ ಆಗಸ್ಟ್ 6 ಮತ್ತು 9 ರಂದು ಜಪಾನ್‌ನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣ್ವಸ್ತ್ರ ದಾಳಿಗಳನ್ನು ನಡೆಸಿದಾಗ ಜಪಾನ್ ಅಪಾರ ಸಾವುನೋವಿನ ನಷ್ಟದ ಜೊತೆಗೆ ದೀರ್ಘಕಾಲೀನ ಪರಿಣಾಮಗಳನ್ನು ಅನುಭವಿಸಿತು. ಈ ದಾಳಿಯಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ತಕ್ಷಣವೇ ಮೃತಪಟ್ಟರು. ನಗರ ಪ್ರದೇಶದ ಸುಮಾರು 5 ಚದರ ಮೈಲಿ ಪ್ರದೇಶ ಭಸ್ಮವಾಯಿತು ಮತ್ತು ಪಟ್ಟಣಗಳ ಬಹುತೇಕ ಕಟ್ಟಡಗಳು ನಾಶವಾದವು. ವಿಕಿರಣದ ಪರಿಣಾಮದಿಂದಾಗಿ ಬದುಕುಳಿದ ಬಹುತೇಕರು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡರು. ಆಸ್ಪತ್ರೆಗಳು, ವೈದ್ಯರು ಮತ್ತು ಔಷಧಿಗಳ ಕೊರತೆಯಿಂದಾಗಿ ಹೆಚ್ಚಿನ ಬಾಧಿತರಿಗೆ ಯಾವುದೇ ಸೂಕ್ತ ಚಿಕಿತ್ಸೆ ಲಭಿಸಲಿಲ್ಲ. ಹಿರೋಶಿಮಾದಲ್ಲಿ ಶೇ 90 ವೈದ್ಯರು ಮತ್ತು ದಾದಿಯರು ಮೃತಪಟ್ಟಿದ್ದರು ಅಥವಾ ಗಾಯಗೊಂಡಿದ್ದರು. ಅರ್ಧದಷ್ಟು ಆಸ್ಪತ್ರೆಗಳು ನಾಶವಾಗಿದ್ದವು. ಬದುಕುಳಿದವರು ಕೂಡ ಕ್ಯಾನ್ಸರ್‌ನಂತಹ ರೋಗಗಳು ದಶಕಗಳವರೆಗೆ ಕಾಡಿದವು. ಹತ್ತಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಜಪಾನ್‌ನ ಆರ್ಥಿಕ ಪರಿಸ್ಥಿತಿ ಕೂಡ ಸಂಪೂರ್ಣ ನೆಲಕಚ್ಚಿತ್ತು.
ಇಷ್ಟೆಲ್ಲ ಕಷ್ಟಗಳನ್ನು ಎದುರಿಸಿದರೂ 50 ವರ್ಷಗಳ ನಂತರ ಜಪಾನ್ ಮತ್ತೆ ಸುಧಾರಿಸಿಕೊಂಡು ಆರ್ಥಿಕವಾಗಿ ಸದೃಢವಾಯಿತು. ಆದರೆ ಈಗಿನ ಸನ್ನಿವೇಶ ಭಿನ್ನವಾಗಿದೆ. ಅಂದಿನ ಕಾಲಕ್ಕಿಂತ ಪ್ರಸ್ತುತ ಅಭಿವೃದ್ಧಿಪಡಿಸಿರುವ ಅಣ್ವಸ್ತ್ರಗಳು ಬಹಳ ಶಕ್ತಿಶಾಲಿಯಾಗಿವೆ. ಒಮ್ಮೆ ಇವುಗಳನ್ನು ಪ್ರಯೋಗಿಸಿದರೆ ಮನುಕುಲದ ನಾಶದ ಜೊತೆ ಆ ಪ್ರದೇಶ ಹಲವು ದಶಕಗಳವರೆಗೆ ಚೇತರಿಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಲಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಭಾರತ ಹಾಗೂ ಪಾಕಿಸ್ತಾನ ಅಣ್ವಸ್ತ್ರಗಳನ್ನು ಪ್ರಯೋಗಿಸಿದರೆ ಕೋಟ್ಯಂತರ ಜನರು ಸಾವಿಗೀಡಾಗಿ ಸಹಜಸ್ಥಿತಿಗೆ ಮರಳಲು ಒಂದೆರಡು ಶತಮಾನಗಳೆ ಬೇಕಾಗಬಹುದು. ನೂರಾರು ಸಮಸ್ಯೆಗಳು ಎರಡು ರಾಷ್ಟ್ರಗಳಲ್ಲಿ ಸೃಷ್ಟಿಯಾಗಬಹುದು. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಯುದ್ಧಕ್ಕೆ ಮುಂದಾಗದೆ ರಾಜತಾಂತ್ರಿಕ ಸೇರಿದಂತೆ ಬೇರೆ ಮಾರ್ಗಗಳಲ್ಲಿ ಬಗೆಹರಿಸಿಕೊಳ್ಳುವುದೊಳಿತು.