ಭೂಮಿ ಮತ್ತು ವಸತಿ ಹಕ್ಕು ಪತ್ರ ವಿತರಣೆಗೆ ಒತ್ತಾಯಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಶಾಂತಿಯುತ ಧರಣಿಯನ್ನು ಪೊಲೀಸ್ ಬಲ ಬಳಸಿ ಹತ್ತಿಕ್ಕಿದ ಜಿಲ್ಲಾಡಳಿತ ಕ್ರಮಕ್ಕೆ ನೀರು ಮನೆ ಕೊಡಲು ಆಗದಿದ್ದರೆ ಇವರು ಎಂತಹ ಜಿಲ್ಲಾಧಿಕಾರಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಸತಿ ಮತ್ತು ಭೂಮಿ ನೀಡುವಂತೆ ಒತ್ತಾಯಿಸಿ ಕಳೆದ ಹದಿನೈದು ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಪೊಲೀಸ್ ಬಲ ಬಳಸಿ ಹತ್ತಿಕ್ಕಿದ ಜಿಲ್ಲಾಡಳಿತದ ಕ್ರಮದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಸತಿ ಮತ್ತು ಭೂಮಿ ವಂಚಿತರಿಗೆ ಸಲವತ್ತುಗಳನ್ನು ದೊರಕಿಸಿಕೊಡಬೇಕೆಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಕಳೆದ 15 ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ಗಳು ಹೋಗಿ ಮನವೊಲಿಸುವ ಪ್ರಯತ್ನ ಮಾಡಿದ್ದರು ಸಹ ಪ್ರತಿಭಟನಾಕಾರರು ಅಧಿಕಾರಿಗಳ ಮಾತಿಗೆ ಮನ್ನಣೆಯನ್ನು ನೀಡದೇ ಸವಲತ್ತು ಸಿಗದೇ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕಳೆದ ಐದಾರು ದಿನಗಳಿಂದ ಪ್ರತಿಭಟನಾಕಾರರೊಂದಿಗೆ ಅಧಿಕಾರಿಗಳು ಸಂಧಾನ ನಡೆಸಿದರು, ಫಲಕಾರಿಯಾಗದ ಹಿನ್ನೆಲೆಯಲ್ಲಿ ಬುಧವಾರ 5.30 ರ ಸುಮಾರಿಗೆ ಮಲಗಿದ್ದ ಪ್ರತಿಭಟನಾಕಾರರನ್ನು ಏಕಾಏಕಿ ಹೊತ್ತೊಯ್ದು ಊರ್ಡಿಗೆರೆ ಪೊಲೀಸ್ ಉಠಾಣೆಯಲ್ಲಿ ಇಟ್ಟುಕೊಂಡ ಜಿಲ್ಲಾಡಳಿತ, ಸಂಜೆ ವೇಳೆಗೆ ಪ್ರತಿಭಟನಾಕಾರರನ್ನು ಬಿಟ್ಟು ಕಳುಹಿಸಿದೆ.

ವಸತಿ ಮತ್ತು ಭೂಮಿ ವಂಚಿತರು ಜಿಲ್ಲಾಡಳಿತ ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ ಕಾರಣದಿಂದಾಗಿ ಮತ್ತೊಮ್ಮೆ ಅಹೋರಾತ್ರಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಕಳೆದ ಬಾರಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದಾಗ ನೀಡಿದ್ದ ಭರವಸೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಈ ಬಾರಿ ಅಧಿಕಾರಿಗಳು ಯಾವುದೇ ರೀತಿ ಭರವಸೆಗಳನ್ನು, ಆಶ್ವಾಸನೆಗಳನ್ನು ನೀಡಿದರು ಸಹ ಒಪ್ಪದೇ ಬೇಡಿಕೆಗಳು ಈಡೇರುವವರೆಗೆ ಅಹೋರಾತ್ರಿ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದ್ದರು.
ಪ್ರತಿಭಟನೆಯಲ್ಲಿ ಮಕ್ಕಳಾದಿಯಾಗಿ ವಯೋವೃದ್ಧರಾಗಿ ಭಾಗಿಯಾಗಿದ್ದರಿಂದ ಜಿಲ್ಲಾಡಳಿತದ ಮೇಲೆ ಸಾಕಷ್ಟು ಒತ್ತಡ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೇ ಮುಂದಿನ ವಾರದಲ್ಲಿ ಮುಖ್ಯಮಂತ್ರಿಗಳು ತುಮಕೂರು ನಗರಕ್ಕೆ ಭೇಟಿ ನೀಡುತ್ತಿರುವುದರಿಂದ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಜಿಲ್ಲಾಡಳಿತ ಸಂಧಾನದ ಮೊರೆ ಹೋಗಿತ್ತು. ಸಂಧಾನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪೊಲೀಸ್ ಬಲ ಬಳಸಿ ಪ್ರತಿಭಟನೆಯನ್ನು ಹತ್ತಿಕ್ಕಿದೆ. ಪೊಲಿಸ್ ಠಾಣೆ ಆವರಣದಲ್ಲೇ ಡಿಸಿ ಹಾಗೂ ಎಸ್ ಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಾಗದೇ, ಅವರನ್ನು ಅಲ್ಲಿಂದ ಚದುರಿಸಲೂ ಆಗದೇ ಅಸಹಾಯಕ ಪರಿಸ್ಥಿತಿಗೆ ಪೊಲೀಸ್ ಆಧಿಕಾರಿಗಳು ತಲುಪಿದರು.ಬುಧವಾರ ಸಂಜೆಯವರೆಗೂ ಪ್ರತಿಭಟನೆ ಮುಂದುವರೆಸಿದ ಪ್ರತಿಭಟನಾಕಾರರು ಯಾವುದೇ ಭರವಸೆ ಇಲ್ಲದೆ ಅನಿವಾರ್ಯವಾಗಿ ಪ್ರತಿಭಟನೆ ಮೊಟಕುಗೊಳಿಸಿ ತಮ್ಮ ಊರುಗಳಿಗೆ ತೆರಳಿದರು. ಮುಖ್ಯಮಂತ್ರಿಗಳ ಮುಂದೆ ತಮ್ಮ ಘನತೆ ಉಳಿಸಿಕೊಳ್ಳಲು ಜಿಲ್ಲಾಡಳಿತ ಮತ್ತು ಪೊಲೀಸರು ಇಷ್ಟು ತಳಮಟ್ಟಕ್ಕೆ ಇಳಿದಿದ್ದು ಮಾತ್ರ ವಿಪರ್ಯಾಸವೇ ಸರಿ.

ಪೊಲೀಸರ ಸರ್ಪಗಾವಲು: ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ಪೊಲೀಸರ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಸಂಜೆ ಏಳಾದರೂ ಪೊಲೀಸರು ಅಲ್ಲಿಂದ ಹೋಗದೇ ಕಾದು ಕುಳಿತಿದ್ದರು
ಏಕಾಏಕಿ ಆದೇಶ..?
ಇಷ್ಟು ದಿನ ಜಿಲ್ಲಾಧಿಕಾರಿಗಳ ಕಚೇರಿ ಪ್ರತಿಭಟನೆ, ಅಹೋರಾತ್ರಿ ಧರಣಿ ನಡೆಸುವ ಸಂದರ್ಭದಲ್ಲಿ ಕೂಗಳತೆ ದೂರದಲ್ಲಿ ಇರುವ ಡಿವೈಎಸ್ಪಿ ಕಚೇರಿಯಿಂದ ಅನುಮತಿ ಪಡೆದು ನಾಗರೀಕರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಜಿಲ್ಲಾಧಿಕಾರಿಗಳು ದಿನಾಂಕ:6/05/2025ರಂದು ಹೊರಡಿಸಿರುವ ಆದೇಶದ ಪ್ರಕಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಿರಂತರ ಪ್ರತಿಭಟನೆ ನಡೆಸುವ ವೇಳೆ ಧ್ವನಿವರ್ಧಕ ಬಳಕೆಯಿಂದ ಸರ್ಕಾರಿ ಕಚೇರಿಗಳ ದೈನಂದಿನ ನಿರ್ವಹಣೆಗೆ ಅಡ್ಡಿಯಾಗದಂತೆ ಧ್ವನಿವರ್ಧಕ ಹಾಗೂ ವಿದ್ಯುತ್ ಬಳಕೆ ಮಾಡುವುದಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವಂತೆ ಆದೇಶ ಹೊರಡಿಸಿದ್ದು, ಈ ಆದೇಶದನ್ವಯ ಪೊಲೀಸರು ಪ್ರತಿಭಟನಾಕಾರರನ್ನು ನಗರದಿಂದ ಹೊರಹಾಕಿದ್ದಾರೆ.