ಪಂಜಾಬ್‌ನ ಗಡಿಯ ಬಳಿ ಗಡಿ ನುಸುಳಲು ಪ್ರಯತ್ನಿಸುತ್ತಿದ್ದ ಪಾಕ್ ಪ್ರಜೆಯೊಬ್ಬ ಗಡಿ ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾನೆ. ಸೇನೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಗಡಿ ದಾಟುತ್ತಿದ್ದಾಗ ಯೋಧರು ಗುಂಡು ಹಾರಿಸಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ಉಭಯ ದೇಶಗಳಲ್ಲಿ ಬಿಗುವಿನ ವಾತಾವರಣ ಮತ್ತಷ್ಟು ಹೆಚ್ಚಾಗಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದ ನಿಯಂತ್ರಣ ರೇಖೆ ಉದ್ದಕ್ಕೂ ಪಾಕಿಸ್ತಾನ ಸೇನೆ ನಡೆಸಿದ ಭಾರೀ ಶೆಲ್ ದಾಳಿಯಲ್ಲಿ 5ನೇ ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಗುರುವಾರ ಮೃತಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆಯು ಭಾರತದ ಅಡಿಯಲ್ಲಿರುವ ಪೂಂಚ್ ಪ್ರದೇಶದಲ್ಲಿ ಜನ ವಾಸವಾಗಿರುವ ಪ್ರದೇಶಗಳು, ರಸ್ತೆಗಳ ಮೇಲೆ ದಾಳಿ ನಡೆಸಿದೆ. ಈ ಶೆಲ್ ದಾಳಿಯಿಂದ 15 ಮಂದಿ ನಾಗರಿಕರು ಮೃತಪಟ್ಟಿದ್ದು, 43 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಪರೇಷನ್ ಸಿಂಧೂರ – ಪಾಕ್ ಭಯೋತ್ಪಾದನೆಗೆ ತಕ್ಕ ಶಾಸ್ತಿ!
ಎಲ್‌ಒಸಿಯ ಪ್ರದೇಶವಾಗಿರುವ ಪೂಂಚ್ ಮತ್ತು ರಾಜೌರಿ, ತಂಗ್ದಾರ್ ಪ್ರದೇಶಗಳಲ್ಲಿನ ಜನವಸತಿಯ ಪ್ರದೇಶಗಳ ಹಲವೆಡೆ ಶೆಲ್ ದಾಳಿ ನಡೆಸಿರುವ ಪಾಕಿಸ್ತಾನವು, ನಾಗರಿಕರನ್ನು ಗುರಿಯಾಗಿಸಿರುವುದಾಗಿ ವರದಿಯಾಗಿದೆ.
ಬುಧವಾರ ತಡರಾತ್ರಿ ಆರಂಭವಾದ ಶೆಲ್ ದಾಳಿಯು ಭಾರತದ ಮುಂಚೂಣಿ ಠಾಣೆಗಳು ಮತ್ತು ಹತ್ತಿರದ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದಿದೆ. ಮೋರ್ಟರ್ ಗುಂಡುಗಳು ಮತ್ತು ಫಿರಂಗಿ ಗುಂಡಿನ ದಾಳಿಗಳು ಹಳ್ಳಿಗಳ ಬಳಿ ಅಪಾಯಕಾರಿಯಾಗಿ ಬಿದ್ದವು. ಭಾರತದ ಇತ್ತೀಚಿನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯೆಯಾಗಿ ಈ ಕೃತ್ಯವನ್ನು ಸ್ಪಷ್ಟ ಕದನ ವಿರಾಮ ಉಲ್ಲಂಘನೆ ಮತ್ತು ಉದ್ದೇಶಪೂರ್ವಕ ಪ್ರಚೋದನೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.