- ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎರಡು ಪ್ರಕರಣ ದಾಖಲು
- ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳು
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರಿಗೆ ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ (ಜುಲೈ 7) ಸಮನ್ಸ್ ಜಾರಿ ಮಾಡಿದೆ.
ಆರೋಪಿ ವಿರುದ್ಧ ವಿಚಾರಣೆ ನಡೆಸಲು ಸೂಕ್ತ ದಾಖಲೆಗಳಿವೆ. ಅದಕ್ಕಾಗಿ ಬ್ರಿಜ್ ಭೂಷಣ್ ಅವರು ಜುಲೈ 18 ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ನ್ಯಾಯಾಲಯ ಸೂಚಿಸಿದೆ.
ಬ್ರಿಜ್ ಭೂಷಣ್ ಅವರ ವಿರುದ್ಧ ಮಹಿಳಾ ಕುಸ್ತಿಪಟುಗಳು ದೂರು ನೀಡಿ ಪ್ರತಿಭಟನೆ ನಡೆಸಿದ ನಂತರ ದೆಹಲಿ ಪೊಲೀಸರು ಜೂನ್ 15 ರಂದು ಲೈಂಗಿಕ ಕಿರುಕುಳ, ಕ್ರಿಮಿನಲ್ ಬೆದರಿಕೆ ಹಾಗೂ ಹಿಂಸೆಯ ಆರೋಪದಲ್ಲಿ ಬ್ರಿಜ್ ಭೂಷಣ್ ಅವರ ವಿರುದ್ಧ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಅಪ್ರಾಪ್ತ ಮಹಿಳಾ ಕುಸ್ತಿಪಟುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬ್ರಿಜ್ ಭೂಷಣ್ ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಬ್ರಿಜ್ ಭೂಷಣ್ ವಿರುದ್ಧ ಆರೋಪಿಸಿದ ಏಳು ಮಹಿಳಾ ಕುಸ್ತಿಪಟುಗಳ ಪೈಕಿ ಅಪ್ತಾಪ್ತೆಯೂ ಸೇರಿದ್ದಾರೆ.
ಆದರೆ ಬ್ರಿಜ್ ಭೂಷಣ್ ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪವನ್ನು ಅಲ್ಲಗಳೆದಿದ್ದರು. ತಮ್ಮ ವಿರುದ್ಧದ ಆರೋಪ ಸಾಬೀತಾದಲ್ಲಿ ತಾವು ಜೈಲಿಗೆ ಹೋಗಲು ಸಿದ್ಧ ಎಂದು ಬ್ರಿಜ್ ಭೂಷಣ್ ಹೇಳಿದ್ದರು.
ಬ್ರಿಜ್ ಭೂಷಣ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒಲಿಂಪಿಕ್ ಮತ್ತು ಏಷಿಯನ್ ಗೇಮ್ಸ್‌ನಲ್ಲಿ ಪದಕ ವಿಜೇತ ಪುರುಷರು ಸೇರಿ ಮಹಿಳಾ ಕುಸ್ತಿಪಟುಗಳು ಜನವರಿಯಲ್ಲಿ ಪ್ರತಿಭಟಿಸಿದ್ದರು.
ಈ ಸುದ್ದಿ ಓದಿದ್ದೀರಾ? ಜು.14ಕ್ಕೆ ಚಂದ್ರಯಾನ-3 ಉಡಾವಣೆ : ಇಸ್ರೋ
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕುಸ್ತಿಪಟುಗಳು ದೆಹಲಿ ಜಂತರ್ ಮಂತರ್‌ನಲ್ಲಿ ಏಪ್ರಿಲ್‌ನಿಂದ ಪ್ರತಿಭಟನೆ ನಡೆಸಿದ್ದರು. ಸ್ಥಳವನ್ನು ತೆರವುಗೊಳಿಸುವಂತೆ ಪೊಲೀಸರು ಕೆಲವು ಕುಸ್ತಿಪಟುಗಳನ್ನು ವಶಕ್ಕೆ ಪಡೆದಿದ್ದರು.
ಪೊಲೀಸರು ಕುಸ್ತಿಪಟುಗಳನ್ನು ಬಸ್ಸಿನಲ್ಲಿ ಕರೆದೊಯ್ಯಲು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಕಳೆದ ತಿಂಗಳು ಕುಸ್ತಿಪಟುಗಳು ಪ್ರತಿಭಟನೆ ನಿಲ್ಲಿಸಿ ಕೆಲಸಕ್ಕೆ ಹಾಜರಾಗಿದ್ದರು.