ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸರ್ಕಾರದ ಮೊದಲ ಬಜೆಟ್ನಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ.
ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಕರ್ನಾಟಕದ ಅಗ್ರಸ್ಥಾನವನ್ನು ಮುಂದುವರೆಸಲು ಪೂರಕವಾಗಿ ರಾಜ್ಯದಲ್ಲಿ ಸೆಮಿಕಂಡಕ್ಟರ್ ವಲಯದ ಅಭಿವೃದ್ಧಿಗೆ ಉತ್ತೇಜನ ನೀಡಲು ಬೆಂಗಳೂರಿನ ಕಾಡುಗೋಡಿಯಲ್ಲಿ 100 ಎಕರೆ ಪ್ರದೇಶದಲ್ಲಿ ತಂತ್ರಜ್ಞಾನ ಆವಿಷ್ಕಾರ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪುರಾವೆಯಿದ್ದೂ ಬಹಿರಂಗಗೊಳಿಸದೆ ಇರುವವರ ಆರೋಪಗಳು ಅನೈತಿಕ
ಆವಿಷ್ಕಾರ ಪಾರ್ಕ್ನಲ್ಲಿ ತಾಂತ್ರಿಕ ಸಂಶೋಧನಾ ಸಂಸ್ಥೆಯ ಸ್ಥಾಪನೆ ಜೊತೆಗೆ ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ವಿನ್ಯಾಸ ಇತ್ಯಾದಿಗಳಿಗೆ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು.
ಇನ್ನುಳಿದಂತೆ ಕೈಗಾರಿಕಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಇಂತಿವೆ
- ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರದ ಸ್ವಾಧೀನದಲ್ಲಿರುವ ಬಿಇಎಂಎಲ್ ಜಮೀನಿನಲ್ಲಿ ಬೃಹತ್ ʻಕೈಗಾರಿಕಾ ಟೌನ್ಷಿಪ್ʼ ಅಭಿವೃದ್ಧಿ.
- ವಿಜಯಪುರ ಜಿಲ್ಲೆಯಲ್ಲಿ ಉತ್ಪಾದನಾ ಕ್ಲಸ್ಟರ್ ಮತ್ತು ದಕ್ಷಿಣ ಕನ್ನಡದಲ್ಲಿ ರಫ್ತು ಆಧಾರಿತ ಕೈಗಾರಿಕೆಗಳ ಕ್ಲಸ್ಟರ್ಗಳ ಅಭಿವೃದ್ಧಿ.
- ಏರೋಸ್ಪೇಸ್ ವಲಯದಲ್ಲಿ ರಾಜ್ಯದ ಬಲವನ್ನು ಮತ್ತಷ್ಟು ವೃದ್ಧಿಸಲು ಮತ್ತು ವಿಶೇಷವಾಗಿ ಎಂಎಸ್ಎಂಇಗಳ ಮೇಲೆ ಕೇಂದ್ರಿಕರಿಸಲು, ಅತ್ಯಾಧುನಿಕ ಕರ್ನಾಟಕ ಏರೋಸ್ಪೇಸ್ ತಂತ್ರಜ್ಞಾನ ಕೇಂದ್ರವನ್ನು ಬೆಂಗಳೂರಿನ ದೇವನಹಳ್ಳಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ನಲ್ಲಿ ಸ್ಥಾಪನೆ.
- ರಾಜ್ಯದಲ್ಲಿ ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಿದ್ದು, ಇದರಿಂದ ಯಂತ್ರೋಪಕರಣಗಳು, ಉಪಕರಣಗಳು ಮತ್ತು ಸಾಮೂಹಿಕ ಮೂಲಸೌಲಭ್ಯಗಳನ್ನು ಎಂಎಸ್ಎಂಇಗಳು ಉಪಯೋಗಿಸಿಕೊಳ್ಳಬಹುದಾಗಿದೆ.
- ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ರಾಜ್ಯದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಹುಬ್ಬಳ್ಳಿ, ಕಲಬುರಗಿಯ ಚಿತ್ತಾಪುರ, ಉತ್ತರ ಕನ್ನಡದ ಕೋಡ್ಕಣಿ, ಬೆಳಗಾವಿಯ ಕಣಗಲಾ, ಚಾಮರಾಜನಗರದ ಬದನಗುಪ್ಪೆ, ವಿಜಯಪುರದ ಇಂಡಿ ಮತ್ತು ಯಾದಗಿರಿಯ ಶಹಪೂರ ಹೀಗೆ ಏಳು ಸ್ಥಳಗಳಲ್ಲಿ ಹೊಸದಾಗಿ ಕೈಗಾರಿಕಾ ವಸಾಹತುಗಳನ್ನು ಹಂತ ಹಂತವಾಗಿ ಸ್ಥಾಪನೆ.
- ಪರಿಸರ ಸ್ನೇಹಿ ಹಾಗೂ ನೈಸರ್ಗಿಕ ಕೈಮಗ್ಗದ ವಸ್ತ್ರಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಕೈಮಗ್ಗ ವಲಯದಲ್ಲಿ ಸುಸ್ಥಿರ ಉದ್ಯೋಗ ಒದಗಿಸಲು ಸಾಕಷ್ಟು ಅವಕಾಶವಿದೆ. ಈ ಅವಕಾಶದ ಸದ್ಬಳಕೆಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಮಹಾತ್ಮಾ ಗಾಂಧಿ ವಸ್ತ್ರೋದ್ಯಮ ಕೋಶ ಸ್ಥಾಪನೆ. ಈ ಕೋಶವು ವಿನ್ಯಾಸಕಾರರು, ನೇಕಾರರು, ನೂಲು ಬಿಚ್ಚಾಣಿಕೆದಾರರು, ಮತ್ತಿತರ ಭಾಗೀದಾರರನ್ನು ಒಂದೇ ವೇದಿಕೆಯಡಿ ತರುವುದರೊಂದಿಗೆ ಮಾರುಕಟ್ಟೆಯೊಂದಿಗೆ ಸಮನ್ವಯಗೊಳಿಸಲಿದೆ. ಅಲ್ಲದೇ, ಕುಸಿತ ಕಾಣುತ್ತಿರುವ ಕೈಮಗ್ಗ ಉದ್ಯಮದ ಪುನಃಶ್ಚೇತನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ.
- 10 ಹೆಚ್.ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ, ಮಾಸಿಕ ಗರಿಷ್ಠ 250 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ ನೇಕಾರರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಕ್ರಮ.
- ರಾಜ್ಯದಲ್ಲಿ ಅಪರೂಪದ ಭೂ ಖನಿಜಾಂಶಗಳಲ್ಲಿ ಒಂದಾದ ಲೀಥಿಯಂ ಖನಿಜಾನ್ವೇಷಣೆಯನ್ನು ಕೈಗೊಂಡು ಹೊಸ ಖನಿಜ ನಿಕ್ಷೇಪಗಳನ್ನು ಪತ್ತೆಹಚ್ಚಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕ್ರಮ.