ಆಪರೇಷನ್ ಸಿಂಧೂರ ಸಮಯದಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನಿ ಸರ್ಕಾರಿ ಅಧಿಕಾರಿಗಳ ಭಾಗಿಯಾಗಿದ್ದಾರೆ. ಇದರಿಂದಾಗಿ ಭಯೋತ್ಪಾದಕರೊಂದಿಗೆ ಪಾಕಿಸ್ತಾನ ಶಾಮೀಲಾಗಿರುವುದು ಬಹಿರಂಗವಾಗಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬ ಪಾಕಿಸ್ತಾನದ ನಿರಾಕರಣೆ ಸುಳ್ಳೆಂಬುದು ಸಾಬೀತಾಗಿದೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಮತ್ತು ಶಿಕ್ಷಣತಜ್ಞ ಭೌರಾವ್ ಪಾಟೀಲ್ ಅವರ 66ನೇ ಪುಣ್ಯತಿಥಿಯನ್ನು ಸ್ಮರಿಸಿ ರಾಯತ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶರದ್ ಪವಾರ್, “ದೇಶವು ತನ್ನ ರಕ್ಷಣಾ ಪಡೆಗಳ ಬಲದಿಂದ ಭಯೋತ್ಪಾದನೆ ವಿರುದ್ಧ ಪ್ರತಿಕ್ರಿಯಿಸಲು ಸಂಪೂರ್ಣವಾಗಿ ಸಮರ್ಥವಾಗಿದೆ” ಎಂದು ಪವಾರ್ ಭರವಸೆ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಕಾಶ್ಮೀರ ಬುಕಿಂಗ್ ರದ್ದು ಮಾಡಿ ಹಿಮಾಚಲಕ್ಕೆ ತಿರುಗಿದ ಪ್ರವಾಸಿಗರು
“ಭಾರತ ಎಂದಿಗೂ ಭಯೋತ್ಪಾದಕರನ್ನು ಬೆಂಬಲಿಸಿಲ್ಲ. ಸದ್ಯ ನಡೆಯುತ್ತಿರುವ ಘಟನೆಗಳು ಪಹಲ್ಗಾಮ್ ಭಯೋತ್ಪಾದಕ ಚಟುವಟಿಕೆಯ ಪರಿಣಾಮವಾಗಿದೆ. ಪಾಕಿಸ್ತಾನ ಎಷ್ಟು ನಿರಾಕರಿಸಿದರೂ, ಅದರ ಸಹಭಾಗಿತ್ವವು ಸ್ಪಷ್ಟವಾಗಿದೆ” ಎಂದು ತಿಳಿಸಿದರು.
“ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಾರತೀಯ ದಾಳಿಗಳಲ್ಲಿ ಕೊಲೆಯಾದ ಭಯೋತ್ಪಾದಕರ ಅಂತ್ಯಕ್ರಿಯೆಯ ಸಮಯದಲ್ಲಿ ಅವರ ಸರ್ಕಾರದ ಪ್ರತಿನಿಧಿಗಳು ಹಾಜರಿದ್ದರು. ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದಾದರೆ ಅವರ ಅಧಿಕಾರಿಗಳು ಈ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸಿದ್ದೇಕೆ” ಎಂದು ಶರದ್ ಪವಾರ್ ಪ್ರಶ್ನಿಸಿದ್ದಾರೆ.
“ಭಾರತ ಯಾವಾಗಲೂ ಶಾಂತಿಯನ್ನು ಪ್ರತಿಪಾದಿಸುತ್ತದೆ. ಆದರೆ ನಾಗರಿಕರ ಸುರಕ್ಷತೆ ಅಪಾಯದಲ್ಲಿರುವಾಗ ಪ್ರಸ್ತುತ ತೆಗೆದುಕೊಳ್ಳಲಾಗುತ್ತಿರುವ ಪೂರ್ವಭಾವಿ ಕ್ರಮಗಳು ಅಗತ್ಯವಾಗುತ್ತವೆ” ಎಂದು ಹೇಳಿದರು. ಈ ನಿಲುವನ್ನು ಪ್ರಧಾನಿ ಮತ್ತು ಇತರ ನಾಯಕರು ಪದೇ ಪದೇ ಒತ್ತಿ ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಆಪರೇಷನ್ ಸಿಂಧೂರ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರನ್ನೂ ಉಲ್ಲೇಖಿಸಿದರು. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿರುವುದನ್ನು ಶ್ಲಾಘಿಸಿದರು.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ | ಸಿಎಂ ಸಿದ್ದರಾಮಯ್ಯ ಸೇರಿ ರಾಜಕೀಯ ನಾಯಕರಿಂದ ದಾಳಿ ಕುರಿತು ಪ್ರಶಂಸೆ
“ನಾನು ರಕ್ಷಣಾ ಸಚಿವನಾಗಿದ್ದಾಗ, (ಸಶಸ್ತ್ರ) ಪಡೆಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುವ ವಿಷಯವನ್ನು ಎತ್ತಿದ್ದೆ. ಆರಂಭದಲ್ಲಿ, ಮೂರೂ ಸೇನಾ ಮುಖ್ಯಸ್ಥರು ಈ ವಿಚಾರವನ್ನು ತಿರಸ್ಕರಿಸಿದರು. ಆದರೆ ನಾಲ್ಕನೇ ಸಭೆಯಲ್ಲಿ, ಸಶಸ್ತ್ರ ಪಡೆಗಳಲ್ಲಿ ಕನಿಷ್ಠ ಶೇಕಡ ಒಂಬತ್ತು ಮಹಿಳೆಯರ ಪ್ರಾತಿನಿಧ್ಯ ಇರಬೇಕು ಎಂದು ನಾನು ಪ್ರತಿಪಾದಿಸಿದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶರದ್ ಪವಾರ್ ಪುತ್ರಿ ಮತ್ತು ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಮತ್ತು ಎನ್‌ಸಿಪಿಯ ಮುಖ್ಯಸ್ಥ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಹ ಉಪಸ್ಥಿತರಿದ್ದರು.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಲ್ಲಿ ಜೈಶ್-ಎ-ಮೊಹಮ್ಮದ್ ಭದ್ರಕೋಟೆಯಾದ ಬಹಾವಲ್ಪುರ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ನೆಲೆ ಸೇರಿವೆ. ಇದಾದ ಬಳಿಕ ಭಾರತ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.
