ಈ ದಿನ ಸ್ಪೆಷಲ್ | ಇದು ಅಮೆರಿಕ-ಚೀನಾಗಳ ಷಡ್ಯಂತ್ರ; ಭಾರತ-ಪಾಕ್ ಬಲಿಯಾಗದಿರಲಿ

Date:

Advertisements
ಯುದ್ಧ- ಪರಿಹಾರವಲ್ಲ, ಸಮಸ್ಯೆ ಎನ್ನುವುದು ಅಮೆರಿಕ ಮತ್ತು ಚೀನಾ ದೇಶಗಳ ನಿಲುವಾಗಿದೆ. ಈ ನಿಲುವು ಈ ಕ್ಷಣಕ್ಕೆ ಸರಿಯಾಗಿದೆ. ಆದರೆ, ಈ ನಿಲುವಿನ ಹಿಂದೆ ಭಾರತ-ಪಾಕ್ ನಡೆಯನ್ನು ಕಾದು ನೋಡುವ ತಂತ್ರವಿದೆ, ಸ್ವಾರ್ಥವಿದೆ ಮತ್ತು ದೂರಾಲೋಚನೆಯೂ ಅಡಗಿದೆ.

‘ಶಸ್ತ್ರಾಸ್ತ್ರ ತ್ಯಜಿಸುವಂತೆ ಭಾರತಕ್ಕಾಗಲೀ ಪಾಕಿಸ್ತಾನಕ್ಕಾಗಲೀ ಅಮೆರಿಕ ಹೇಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನಾವು ರಾಜತಾಂತ್ರಿಕ ಮಾರ್ಗವಾಗಿ ಮುಂದುವರಿಯುತ್ತೇವೆ. ಭಾರತ ಮತ್ತು ಪಾಕಿಸ್ತಾನದ ಮುಖ್ಯಸ್ಥರು ಇದು ಪ‍ರಮಾಣು ಯುದ್ಧವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಪರಮಾಣು ಯುದ್ಧವಾದಲ್ಲಿ ದೊಡ್ಡ ಹಾನಿಯುಂಟಾಗುತ್ತದೆ’ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ಹಾಗೆಯೇ ನೆರೆಯ ಚೀನಾ ಕೂಡ ‘ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಉಭಯ ರಾಷ್ಟ್ರಗಳು ಸಂಯಮದಿಂದ ವರ್ತಿಸಬೇಕು. ಯಾವುದೇ ಪ್ರತೀಕಾರದ ಕ್ರಮವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಅಪಾಯವಿದೆ’ ಎಂದು ಸದ್ಯದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಒಟ್ಟಿನಲ್ಲಿ, ಯುದ್ಧ- ಪರಿಹಾರವಲ್ಲ, ಸಮಸ್ಯೆ ಎನ್ನುವುದು ಅಮೆರಿಕ ಮತ್ತು ಚೀನಾ ದೇಶಗಳ ನಿಲುವಾಗಿದೆ. ಈ ನಿಲುವು ಈ ಕ್ಷಣಕ್ಕೆ ಸರಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗೂ ಪಾತ್ರವಾಗಿವೆ. ಆದರೆ, ಈ ನಿಲುವಿನ ಹಿಂದೆ ಭಾರತ-ಪಾಕ್ ನಡೆಯನ್ನು ಕಾದು ನೋಡುವ ತಂತ್ರವಿದೆ, ಸ್ವಾರ್ಥವಿದೆ ಮತ್ತು ದೂರಾಲೋಚನೆಯೂ ಅಡಗಿದೆ. ಅದು ಅದುಮಿಟ್ಟ ಸತ್ಯವಾಗಿದೆ. 

Advertisements

ಜಾಗತಿಕ ಮಟ್ಟದಲ್ಲಿ ಸದ್ಯಕ್ಕೆ ಬಲಿಷ್ಠ ರಾಷ್ಟ್ರಗಳೆಂದರೆ- ಅಮೆರಿಕ, ರಷ್ಯಾ ಮತ್ತು ಚೀನಾ. ಈ ಮೂರು ರಾಷ್ಟ್ರಗಳು ಯಾರ ಪರ, ಯಾರ ವಿರುದ್ಧ ನಿಲುವು ತಾಳುತ್ತವೆ ಎನ್ನುವುದು ಈ ಕ್ಷಣದ ಬಹುಮುಖ್ಯ ಜಾಗತಿಕ ಚರ್ಚೆಯಾಗಿದೆ. ಅದು ಯುದ್ಧದ ಫಲಿತಾಂಶವನ್ನು ಪರಿಗಣಿಸಲು ಸಾಧ್ಯವಾಗುತ್ತದೆ.

ಇದನ್ನು ಓದಿದ್ದೀರಾ?: ಬ್ಲ್ಯಾಕೌಟ್‌ ಮತ್ತು ಸೈರನ್‌ಗಳು: ಪಂಜಾಬ್ ಗಡಿ ಜಿಲ್ಲೆಗಳ ಜನರಿಗೆ ಕರಾಳ ರಾತ್ರಿ

ಇದೇ ಸಂದರ್ಭದಲ್ಲಿ, ರಷ್ಯಾ ಪಕ್ಕದ ಉಕ್ರೇನ್ ಜೊತೆ ಕಾದಾಟಕ್ಕೆ ಬಿದ್ದು, ಜಾಗತಿಕ ಬಲಿಷ್ಠರ ರೇಸ್‌ನಿಂದ ಕೊಂಚ ದೂರ ಸರಿದಿದೆ. ಆದರೆ 2ನೇ ವಿಶ್ವ ಯುದ್ಧದಲ್ಲಿ ಸೋವಿಯತ್ ಒಕ್ಕೂಟದ ಗೆಲುವಿನ 80ನೇ ವರ್ಷಾಚರಣೆಯ ನೆಪದಲ್ಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಭೇಟಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಈ ಇಬ್ಬರು ಬಲಾಢ್ಯರ ಭೇಟಿ ಅಮೆರಿಕವನ್ನು ಚಿಂತೆಗೀಡುಮಾಡಿದೆ.

ಅಮೆರಿಕದ ಆತಂಕಕ್ಕೆ ಕಾರಣವೆಂದರೆ, ಚೀನಾ ದಿನದಿಂದ ದಿನಕ್ಕೆ ಆರ್ಥಿಕವಾಗಿ ಸದೃಢವಾಗುತ್ತಿರುವುದು; ಸಣ್ಣಪುಟ್ಟ ರಾಷ್ಟ್ರಗಳಿಗೆ ಹಣಕಾಸಿನ ನೆರವು ನೀಡುತ್ತ, ಮಾರುಕಟ್ಟೆ ವಿಸ್ತರಿಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿರುವುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೆರೆಯುತ್ತಿದ್ದ ಅಮೆರಿಕಕ್ಕೆ, ಚಿಪ್ ತಯಾರಿಕೆ, ಎಐ ಬಳಕೆ, ಡೀಪ್ ಸೀಕ್ ಆವಿಷ್ಕಾರಗಳ ಮೂಲಕ ತೀವ್ರ ಪೈಪೋಟಿ ಒಡ್ಡಿರುವುದು.

ಚೀನಾದ ಈ ದಾಪುಗಾಲು ಅಮೆರಿಕದ ದೊಡ್ಡಣ್ಣನ ಸ್ಥಾನಕ್ಕೆ ಸಂಚಕಾರ ತಂದಿದೆ. ಜಾಗತಿಕ ಮಟ್ಟದಲ್ಲಿ ಇರುಸು ಮುರುಸುಂಟುಮಾಡುತ್ತಿದೆ. ಹಾಗಾಗಿ ಯಾವುದಾದರೂ ಮಾರ್ಗದಲ್ಲಿ ಚೀನಾವನ್ನು ಹಿಂದಿಕ್ಕಲು, ಹತ್ತಿಕ್ಕಲು ಅಮೆರಿಕ ಗಂಭೀರ ಚಿಂತನೆಗಿಳಿದಿದೆ. ಇದೇನು ಹೊಸದಲ್ಲ. ಈ ಮೊದಲು ಕೂಡ ಅಮೆರಿಕದಿಂದ ಈ ರೀತಿಯ ಪ್ರಯತ್ನಗಳಾಗಿದ್ದವು. ಹಿಂದಿನ ಅಧ್ಯಕ್ಷರಾದ ಒಬಾಮಾ ಮತ್ತು ಬೈಡನ್, ಚೀನಾವನ್ನು ಹತ್ತಿಕ್ಕಲು ‘ಲುಕ್ ಈಸ್ಟ್ ಪಾಲಿಸಿ’ ಮೂಲಕ ಪರೋಕ್ಷವಾಗಿ ಪ್ರಯತ್ನಿಸಿದ್ದರು.

ಆದರೆ, ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಮೇಲೆ ‘ಟ್ರೇಡ್ ಅಂಡ್ ಟ್ಯಾರಿಫ್’ಗಳ ಮೂಲಕ ನೇರವಾಗಿಯೇ ಕದನಕ್ಕಿಳಿದಿದ್ದಾರೆ. ಅದು ಚೀನಾದ ಆರ್ಥಿಕಾಭಿವೃದ್ಧಿಗೆ ತೊಡಕುಂಟುಮಾಡಿದೆ. ಜಾಗತಿಕ ಮಟ್ಟದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಅಮೆರಿಕಕ್ಕೆ ಬೇಕಾಗಿರುವುದು ಇಷ್ಟೇ. ಮತ್ತೊಂದು ದೇಶ ಬಲಿಷ್ಠವಾಗುವುದನ್ನು, ಇತರ ರಾಷ್ಟ್ರಗಳ ಮೇಲೆ ಅಧಿಪತ್ಯ ಸಾಧಿಸುವುದನ್ನು ಅಮೆರಿಕ ಎಂದಿಗೂ ಸಹಿಸುವುದಿಲ್ಲ.

ಆ ಕಾರಣದಿಂದಾಗಿಯೇ ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಭಾರತಕ್ಕೆ ಅಮೆರಿಕ ಹತ್ತಿರವಾಗುತ್ತಿದೆ. ದಿನದಿಂದ ದಿನಕ್ಕೆ ಮೋದಿ-ಟ್ರಂಪ್‌ಗಳ ಸ್ನೇಹ ಗಟ್ಟಿಗೊಳ್ಳತೊಡಗಿದೆ. ಅಷ್ಟೇ ಅಲ್ಲ, ಭಾರತ-ಪಾಕಿಸ್ತಾನದ ಸದ್ಯದ ಕಾದಾಟದಲ್ಲಿ ತಮ್ಮ ಪಾತ್ರವಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದರೂ; ಒಳಗೊಳಗೇ ಭಾರತಕ್ಕೆ ಅಮೆರಿಕ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದೆ. ಈಗ ಪಾಕಿಸ್ತಾನದ ಗಡಿಗಳಲ್ಲಿ ಹಾರಾಡುತ್ತಿರುವ ಡ್ರೋನ್‌ಗಳಲ್ಲಿ ಹೆಚ್ಚಿನವು, ಇಸ್ರೇಲ್‌ ದೇಶದ ಅತ್ಯಾಧುನಿಕ ಡ್ರೋನ್‌ಗಳಾಗಿವೆ.

ಭಾರತ ಈ ಮೊದಲು ಯುದ್ಧ ವಿಮಾನಗಳು, ಶಸ್ತ್ರಾಸ್ತ್ರಗಳು ಎಂದಾಕ್ಷಣ ರಷ್ಯಾದತ್ತ ನೋಡುತ್ತಿತ್ತು. ಜಾಗತಿಕ ಮಟ್ಟದಲ್ಲಿ ಅತ್ಯಂತ ಬಲಿಷ್ಠ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ಹೆಸರಾದ ರಷ್ಯಾದಿಂದ ಖರೀದಿಸುತ್ತಿತ್ತು. ಈಗ ಭಾರತ, ರಷ್ಯಾವನ್ನು ಬಿಟ್ಟು ಇಸ್ರೇಲ್‌ನತ್ತ ಹೊರಳಿದೆ. ಕುತೂಹಲಕರ ಸಂಗತಿ ಎಂದರೆ, ಅಮೆರಿಕ ಇಸ್ರೇಲಿಗೆ ಸರಬರಾಜು ಮಾಡುತ್ತದೆ, ಭಾರತ ಇಸ್ರೇಲಿನಿಂದ ತೆಗೆದುಕೊಳ್ಳುತ್ತದೆ.

ಈ ಬೆಳವಣಿಗೆ ಪರೋಕ್ಷವಾಗಿ ಪಾಕಿಸ್ತಾನ ಚೀನಾವನ್ನು ಆಶ್ರಯಿಸುವಂತೆ; ಚೀನಾ ಭಾರತವನ್ನು ಅನುಮಾನದಿಂದ ನೋಡುವಂತೆ ಮಾಡುತ್ತದೆ. ಇವುಗಳ ನಡುವೆಯೇ ಭಾರತ-ಪಾಕಿಸ್ತಾನಗಳಿಂದ ಸಮಾನ ಅಂತರದಲ್ಲಿದ್ದುಕೊಂಡೇ, ಚೀನಾವನ್ನು ಬಗ್ಗುಬಡಿಯಲು ಎರಡೂ ರಾಷ್ಟ್ರಗಳನ್ನು ಬಳಸಿಕೊಳ್ಳಲು ಅಮೆರಿಕ ಹವಣಿಸುತ್ತಿದೆ. ಈ ಹವಣಿಕೆಯ ಹಿಂದೆ ಭಾರತದ ಮುಕುಟವೆಂದೆ ಹೆಸರಾದ ಕಾಶ್ಮೀರದ ಮೇಲೆ ಕಣ್ಣಿದೆ. ಕಾಶ್ಮೀರವನ್ನು ಭವಿಷ್ಯದ ಭದ್ರ ಸೇನಾ ನೆಲೆಯನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ಅಮೆರಿಕದ್ದಾಗಿದೆ. ಏಕೆಂದರೆ ಕಾಶ್ಮೀರ ಜಗತ್ತಿನ ಅತಿ ಎತ್ತರದ ಪ್ರದೇಶವಾಗಿದೆ.

ಇದನ್ನು ಓದಿದ್ದೀರಾ?: ಪಾಕ್‌ ಮೇಲೆ ಜಲ ದಾಳಿ; ಸಲಾಲ್, ಬಹ್ಲಿಹಾರ್ ಡ್ಯಾಮ್‌ನಿಂದ ನೀರು ಬಿಡುಗಡೆ

ಹಾಗೆಯೇ ಚೀನಾ ಕೂಡ 16 ರಾಷ್ಟ್ರಗಳೊಂದಿಗೆ ಗಡಿ ಹಂಚಿಕೊಂಡಿದೆ. ಆ 16 ರಾಷ್ಟ್ರಗಳಲ್ಲಿ ಅದಕ್ಕೆ ಸಮಸ್ಯೆ ಎದುರಾಗಿರುವುದು ಭಾರತದಿಂದ ಮಾತ್ರ. ಚೀನಾ ಕೂಡ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಈಗಾಗಲೇ ಕಾರಕೋರಮ್ ಪರ್ವತಶ್ರೇಣಿಗಳಲ್ಲಿ ಸುಸಜ್ಜಿತ ಹೆದ್ದಾರಿಯೊಂದನ್ನು ನಿರ್ಮಿಸಿದೆ. ಆ ಹೆದ್ದಾರಿಯನ್ನು ಅರಬ್ಬಿ ಸಮುದ್ರಕ್ಕೆ ಹೋಗುವ ದಾರಿಯನ್ನಾಗಿ ಮಾಡಿಕೊಂಡು, ಆ ಮೂಲಕ ತನ್ನ ವ್ಯಾಪಾರ-ವಹಿವಾಟಿಗೆ ಬಳಸಿಕೊಳ್ಳುತ್ತಿದೆ.

IMG iStock 1364446012 2 1 KKA9QSS8
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ನಿರ್ಮಿಸಿರುವ ಕಾರಕೋರಮ್ ಹೆದ್ದಾರಿ

ಆ ಕಾರಣಕ್ಕಾಗಿ ಚೀನಾ ಪಾಕಿಸ್ತಾನದ ಪರ ವಕಾಲತ್ತು ವಹಿಸಿದೆ. ಸಹಾಯ ಮಾಡಲು ಮುಂದಾಗಿದೆ. ಬೆಂಬಲಕ್ಕೂ ನಿಂತಿದೆ. ಭಾರತ-ಪಾಕಿಸ್ತಾನಕ್ಕೂ ಕಾಶ್ಮೀರವೇ ಸಮಸ್ಯೆಯಾಗಿದೆ. ಅಸಲಿಗೆ, ಈ ಕಾಶ್ಮೀರ ಸಮಸ್ಯೆಯ ಸೃಷ್ಟಿಕರ್ತರು ಬ್ರಿಟಿಷರು. ಕಾಶ್ಮೀರವನ್ನು ವಸಾಹತು ಪ್ರಾಂತ್ಯವನ್ನಾಗಿ ಮಾರ್ಪಡಿಸಲು ಚೀನಾ ಮತ್ತು ಅಮೆರಿಕ ತೀವ್ರ ಪ್ರಯತ್ನದಲ್ಲಿವೆ.

ಹಾಗಂತ ಭಾರತ-ಪಾಕಿಸ್ತಾನ ದೇಶಗಳೆರಡೂ ಕಾಶ್ಮೀರವನ್ನು ಅವರಿಗೆ ಬಿಟ್ಟುಕೊಟ್ಟಿಲ್ಲ. ಬಿಟ್ಟುಕೊಡುವ ಮನಸ್ಸು ಕೂಡ ಮಾಡಿಲ್ಲ. ಆದರೆ ಎರಡೂ ದೇಶಗಳ ಸದ್ಯದ ಪರಿಸ್ಥಿತಿ, ಆ ದೇಶಗಳ ನಾಯಕರನ್ನು ಆ ಒತ್ತಡಕ್ಕೆ ನೂಕಿದೆ. ಅನಿವಾರ್ಯತೆಯನ್ನು ಸೃಷ್ಟಿಸಿದೆ. ಈಗ ಆರಂಭವಾಗಿರುವ ಯುದ್ಧ, ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.  

ಅಸಲಿಗೆ, ಕಾಶ್ಮೀರವನ್ನು ಭವಿಷ್ಯದ ಭದ್ರ ಸೇನಾ ನೆಲೆಯನ್ನಾಗಿ ಮಾಡಿಕೊಳ್ಳಬೇಕೆಂಬ ಅಮೆರಿಕದ ಹಿಡನ್ ಅಜೆಂಡಾ ಇವತ್ತಿನದಲ್ಲ. 2000ದಿಂದಲೇ ಅಮೆರಿಕ, ಭಾರತ ಮತ್ತು ಪಾಕಿಸ್ತಾನ ದೇಶಗಳೆರಡರ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಕಾಶ್ಮೀರದ ವಿಷಯವನ್ನು ಮುಂದು ಮಾಡುತ್ತಲೇ ಬಂದಿದೆ. ತನ್ನ ಅನುಕೂಲಕ್ಕೆ ತಕ್ಕಂತೆ ಪಾತ್ರ ನಿರ್ವಹಿಸಿದೆ. ಪಾಕಿಸ್ತಾನ ಸೇನೆಯ ಕೈವಶವಾದರೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿರುವ ಭಾರತ ಹಾಗೂ ಹೀಗೂ ಮುಂದೂಡುತ್ತಲೇ ಬಂದಿದೆ.

ಆದರೆ, 2014ರ ನಂತರ, ಮೋದಿ ಪ್ರಧಾನಿಯಾದ ಮೇಲೆ ಅಮೆರಿಕದೊಂದಿಗೆ ಕಾಲಕಾಲಕ್ಕೆ ಮಾಡಿಕೊಂಡ ಸೇನೆಗೆ ಸಂಬಂಧಿಸಿದ ಒಪ್ಪಂದಗಳು, ನಿಧಾನವಾಗಿ ದೇಶವನ್ನು ಅಮೆರಿಕದ ಹಿಡಿತಕ್ಕೊಳಪಡಿಸುವ ಅನುಮಾನಕ್ಕೆ ಪುಷ್ಟಿ ನೀಡುತ್ತವೆ. ಆ ನಿಟ್ಟಿನಲ್ಲಿ ಭಾರತ, ಅಮೆರಿಕದೊಂದಿಗೆ 5 ಸೇನಾ ಒಪ್ಪಂದಗಳನ್ನು ಮಾಡಿಕೊಂಡಿದೆ.

ಅವು ಹೀಗಿವೆ: 1. Logistics Exchange Memorandum of Agreement (LEMOA), 2. Communications, Compatibility and Security Agreement (COMCASA), 3. Industrial Security Agreement (ISA), 4. Memorandum of International Defence Innovation(MIDI), 5. Basic Exchange and Cooperation Agreement (BECA).

ಮೊದಲನೆಯ ಒಪ್ಪಂದವನ್ನು ಮೋದಿಯವರು 2016ರಲ್ಲಿ ಅಮೆರಿಕದೊಂದಿಗೆ ಮಾಡಿಕೊಂಡರು. ಅದು, ಭಾರತ-ಅಮೆರಿಕ ದೇಶಗಳೆರಡೂ ಯುದ್ಧದ ಸಮಯದಲ್ಲಿ ಸೇನಾ ನೆಲೆಗಳನ್ನು ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದೆ.

ಎರಡನೆಯ ಒಪ್ಪಂದವನ್ನು 2018ರಲ್ಲಿ ಮಾಡಿಕೊಳ್ಳಲಾಗಿದೆ. ಅದು ದೇಶದ ಬೇಹುಗಾರಿಕೆಗೆ ಸಂಬಂಧಪಟ್ಟದ್ದಾಗಿದ್ದು, ಎರಡೂ ದೇಶಗಳು ಅವುಗಳಿಗೆ ಅಗತ್ಯವಿದ್ದಾಗ, ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಮೂರನೆಯ ಒಪ್ಪಂದವನ್ನು 2019ರಲ್ಲಿ ಮಾಡಿಕೊಳ್ಳಲಾಗಿದೆ. ಅದು ಸೇನಾ ಕೈಗಾರಿಕೆಗಳಿಗೆ ಸಂಬಂಧಿಸಿದ್ದಾಗಿದ್ದು, ಈಗಾಗಲೇ ಚೀನಾದಲ್ಲಿರುವ ಸೇನಾ ಸಾಮಗ್ರಿ ಉತ್ಪಾದಿಸುವ ಉದ್ದಿಮೆಗಳನ್ನು ಭಾರತಕ್ಕೆ ಸ್ಥಳಾಂತರಿಸುವ ಒಪ್ಪಂದವಾಗಿದೆ.

ನಾಲ್ಕನೆಯ ಒಪ್ಪಂದವನ್ನು 2018ರಲ್ಲಿ ಮಾಡಿಕೊಳ್ಳಲಾಗಿದೆ. ಅದು ಸೇನಾ ಭದ್ರತೆಗೆ ಸಂಬಂಧಿಸಿದ್ದಾಗಿದ್ದು, ಎರಡೂ ದೇಶಗಳು ಅಗತ್ಯವಿದ್ದಾಗ ಹಂಚಿಕೊಳ್ಳಬಹುದಾಗಿದೆ.

ಐದನೆಯ ಒಪ್ಪಂದವನ್ನು 2020ರಲ್ಲಿ ಮಾಡಿಕೊಳ್ಳಲಾಗಿದೆ. ಅದು ಸಹಕಾರ ತತ್ವದಡಿ, ಎರಡೂ ದೇಶಗಳು ಪರಸ್ಪರ ಸಹಕಾರದಿಂದ ಮುಂದುವರೆಯುವುದಾಗಿದೆ.

ಇಲ್ಲಿ ಪ್ರಶ್ನೆ ಇರುವುದು- ಈ ಐದು ಒಪ್ಪಂದಗಳಿಂದ ಹೆಚ್ಚು ಅನುಕೂಲವಾಗುವುದು ಅಮೆರಿಕಕ್ಕೆ ಹೊರತು ಭಾರತಕ್ಕಲ್ಲ. 2016ರಿಂದ ಇಲ್ಲಿಯವರೆಗೆ ನೋಡಿದರೆ, ಈ ಒಪ್ಪಂದಗಳಿಂದ ಭಾರತ ಯಾವ ಅನುಕೂಲವನ್ನೂ ಪಡೆದಿಲ್ಲ. ಬಡ ಭಾರತ, ಬಲಿಷ್ಠ ಅಮೆರಿಕ ಹೇಳಿದ್ದಕ್ಕೆಲ್ಲ ಒಪ್ಪಿ ಸಹಿ ಹಾಕಿದೆ. ಆದರೆ ದೂರಗಾಮಿ ಯೋಚನೆಗೆ ಬಿದ್ದಿರುವ ಅಮೆರಿಕಕ್ಕೆ, ಇವತ್ತಲ್ಲ ನಾಳೆ ಕಾಶ್ಮೀರದ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ; ಚೀನಾವನ್ನು ಬಗ್ಗಬಡಿಯಲು ಭಾರತದ ನೆರವನ್ನು ಪಡೆಯುವುದಕ್ಕೆ- ಈ ಒಪ್ಪಂದಗಳು ಸಹಕರಿಸಲಿವೆ.

ಈಗಾಗಲೇ ಅಮೆರಿಕ, ಉಕ್ರೇನ್ ಬೆಂಬಲಕ್ಕೆ ನಿಂತು ರಷ್ಯಾದಿಂದ ಅಂತರ ಕಾಯ್ದುಕೊಂಡಿದೆ. ಹಾಗೆಯೇ ಮಧ್ಯಪ್ರಾಚ್ಯ ದೇಶಗಳಲ್ಲಿನ ಮುಸ್ಲಿಂ ರಾಷ್ಟ್ರಗಳನ್ನು ಒಂದೊಂದಾಗಿ ಧ್ವಂಸ ಮಾಡುತ್ತಾ ಬಂದಿದೆ. ಇಸ್ರೇಲ್‌ಗೆ ನೆರವು ನೀಡಿ ಪ್ಯಾಲೆಸ್ತೀನ್ ಅನ್ನು ಬೂದಿ ಮಾಡಿದೆ. ಈ ನಡುವೆ, ಮಧ್ಯಪ್ರಾಚ್ಯ ದೇಶಗಳಲ್ಲಿ ಧ್ವಂಸವಾಗದೆ ಉಳಿದಿರುವುದು ಇರಾನ್ ಮಾತ್ರ. ಈಗ ಇದೆ ಇರಾನ್, ಇಸ್ರೇಲ್‌ ವಿರುದ್ಧ ತೊಡೆ ತಟ್ಟಿ ನಿಂತು ತಲೆನೋವಾಗಿದೆ. ಇಸ್ರೇಲ್‌ಗೆ ಅಮೆರಿಕ ಸಹಾಯಹಸ್ತ ಚಾಚಿದೆ.

WhatsApp Image 2025 05 09 at 19.00.02

ಇದರಿಂದ ಎಚ್ಚೆತ್ತುಕೊಂಡಿರುವ ಇರಾನ್, ಒಳಗೊಳಗೆ ಚೀನಾ ಮತ್ತು ರಷ್ಯಾ ಮೊರೆ ಹೋಗಿದೆ. ಪಕ್ಕದಲ್ಲಿರುವ ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳ ನೆರವಿಗೆ ನಿಲ್ಲಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ. ಹಾಗೇನಾದರೂ ಆದರೆ, ಜಾಗತಿಕ ಮಟ್ಟದಲ್ಲಿ ರಷ್ಯಾ, ಚೀನಾ, ಇರಾನ್‌ಗಳ ಜೊತೆಗೆ ಪಾಕಿಸ್ತಾನ ಗುರುತಿಸಿಕೊಳ್ಳಲಿದೆ. ಅಮೆರಿಕಕ್ಕೆ ಬೇಕಾಗಿರುವುದೂ ಇದೆ. ಪಾಕಿಸ್ತಾನ, ಚೀನಾದೊಂದಿಗೆ ಗುರುತಿಸಿಕೊಳ್ಳಬೇಕು, ಆಗ ಭಾರತ ಅನಿವಾರ್ಯವಾಗಿ ಅಮೆರಿಕವನ್ನು ಅವಲಂಬಿಸಬೇಕಾಗುತ್ತದೆ. ಪರಿಸ್ಥಿತಿಯ ಲಾಭ ಪಡೆದ ಅಮೆರಿಕ, ಚೀನಾವನ್ನು ಬಗ್ಗುಬಡಿದು, ಕಾಶ್ಮೀರದ ಕನಸನ್ನು ನನಸು ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಇದರ ವಾಸನೆ ಹಿಡಿದಿರುವ ಚೀನಾ ಸುಮ್ಮನೆ ಕೂತಿಲ್ಲ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹನ್ನೊಂದು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಬಲಪಡಿಸಿಕೊಳ್ಳುವ ಒಪ್ಪಂದಕ್ಕೆ ಬಂದು ಬ್ರಿಕ್ಸ್(BRICS- Brazil, Russia, India, China, South Africa) ಎಂಬ ಅಂತಾರಾಷ್ಟ್ರೀಯ ಒಕ್ಕೂಟ ರಚಿಸಿಕೊಳ್ಳಲಾಗಿದೆ. ಆ ಒಕ್ಕೂಟದಲ್ಲಿ ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌತ್ ಆಫ್ರಿಕಾ ಅಗ್ರಪಂಕ್ತಿಯ ದೇಶಗಳಾಗಿವೆ.

ಮೊನ್ನೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾದ ಅಧ್ಯಕ್ಷ ಪುಟಿನ್‌ರನ್ನು ಭೇಟಿ ಮಾಡಿದ್ದಾರೆ. ಅದೇ ಸಮಯದಲ್ಲಿ ಭಾರತ, ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದೆ. ದಾಳಿಯ ನೆಪದಲ್ಲಿ ಜಾಗತಿಕ ಮಟ್ಟದಲ್ಲಿ ಅಮೆರಿಕದ ನಿಲುವು ಪ್ರಸ್ತಾಪವಾಗಿದೆ. ಭಾರತದ ಒಲವು, ಬ್ರಿಕ್ಸ್‌ನಲ್ಲಿ ಭಾರತವನ್ನು ಉಳಿಸಿಕೊಳ್ಳಬೇಕಾ-ಬೇಡವಾ ಎಂಬ ಚರ್ಚೆಯೂ ಬಂದುಹೋಗಿದೆ.

ಈಗ ಭಾರತ-ಪಾಕಿಸ್ತಾನಗಳ ನಡುವಿನ ಯುದ್ಧ, ಜಾಗತಿಕ ಮಟ್ಟದಲ್ಲಿ ಅಮೆರಿಕ-ಚೀನಾ ಯುದ್ಧವಾಗಿ ಮಾರ್ಪಟ್ಟಿದೆ. ಅಮೆರಿಕ ಷಡ್ಯಂತ್ರಕ್ಕೆ ಭಾರತ ಮತ್ತು ಪಾಕಿಸ್ತಾನಗಳು ಬಲಿಯಾದರೆ, ಎರಡೂ ದೇಶಗಳಿಗಾಗುವ ನಷ್ಟ ಊಹೆಗೂ ಮೀರಿದ್ದಾಗಲಿದೆ.

ಹಾಗಾಗಿ… ಏನೇ ಆಗಲಿ, ಭಾರತ-ಪಾಕಿಸ್ತಾನ, ಒಬ್ಬರನೊಬ್ಬರು ದ್ವೇಷಾಸೂಯೆಗಳಿಗೆ ಬಲಿಯಾಗಿ, ಬಡಿದಾಡಿಕೊಂಡು ಹಾಳಾಗಬಾರದು. ಹಾಗೆಯೇ ಅಮೆರಿಕ-ಚೀನಾಗಳು ಆಡಿಸಿದಂತೆ ಆಡುವ ದಾಳಗಳೂ ಆಗಬಾರದು. ಬಲಾಢ್ಯರ ಷಡ್ಯಂತ್ರಕ್ಕೂ ಬಲಿಯಾಗಬಾರದು.

WhatsApp Image 2025 05 10 at 10.04.26
Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X