ಭಾರತದ ಬ್ಯಾಟ್ಸ್‌ಮನ್, ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಮುಂದಾಗಿದ್ದಾರೆ. ಈ ಕುರಿತು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಜೂನ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ವಿದಾಯ ಹೇಳಲು ಮುಂದಾಗಿದ್ದಾರೆ. ಆದರೆ, ತಮ್ಮ ನಿರ್ಧಾರವನ್ನು ಮತ್ತೊಮ್ಮೆ ವಿಮರ್ಶಿಸಿಕೊಳ್ಳುವಂತೆ ಬಿಸಿಸಿಐ ಸಲಹೆ ನೀಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ತಂಡದ ನಾಯಕರಾಗಿದ್ದ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೂಡ ಕೆಲ ದಿನಗಳ ಹಿಂದಷ್ಟೇ ಈ ಮಾದರಿಗೆ ವಿದಾಯ ಹೇಳಿದ್ದಾರೆ. ಇದೀಗ ಕೊಹ್ಲಿ ಟೆಸ್ಟ್‌ನಿಂದ ಹಿಂದೆ ಸರಿಯಲು ಇಚ್ಛಿಸಿದ್ದಾರೆ. ಅವರ ನಿರ್ಧಾರದ ಕುರಿತು ಅಂತಿಮ ತೀರ್ಮಾನ ಇನ್ನಷ್ಟೇ ಬರಬೇಕಿದೆ. ಒಂದು ವೇಳೆ ಅವರು ನಿವೃತ್ತಿ ನಿರ್ಧಾರಕ್ಕೆ ಬದ್ಧರಾದರೆ, ಭಾರತೀಯ ತಂಡದಲ್ಲಿ ನಾಯಕತ್ವ ಹಾಗೂ ಅನುಭವದ ಕೊರತೆಯ ಸಮಸ್ಯೆ ಉಂಟಾಗಬಹುದು.
ಕೊಹ್ಲಿ ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2024ರ ಜೂನ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತ ಗೆದ್ದ ನಂತರ, ಕೊಹ್ಲಿ ತಮ್ಮ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದರು. ಆ ಫೈನಲ್ ಪಂದ್ಯದಲ್ಲಿ ಅವರು 59 ಎಸೆತಗಳಲ್ಲಿ 76 ರನ್ ಗಳಿಸಿ ಪಂದ್ಯಶ್ರೇಷ್ಠರಾಗಿದ್ದರು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ನಂತರ ರೋಹಿತ್, ವಿರಾಟ್, ರವೀಂದ್ರ ಜಡೇಜಾ ಬಿಸಿಸಿಐನ ಎ+ ಗುತ್ತಿಗೆ ರದ್ದತಿಯ ಭೀತಿಯಲ್ಲಿದ್ದಾರೆಯೆ ?
ವಿರಾಟ್ 2014 ರಿಂದ 2022 ರವರೆಗೆ ಟೆಸ್ಟ್ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ ಅವರು 68 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ, 40 ಗೆಲುವು ದಾಖಲಿಸಿದ್ದಾರೆ. ಇದು ಭಾರತೀಯ ಟೆಸ್ಟ್ ನಾಯಕನಾಗಿ ಅತ್ಯುತ್ತಮ ಸಾಧನೆಯಾಗಿದ್ದು, ಎಂ ಎಸ್ ಧೋನಿ ಅವರ 60 ಪಂದ್ಯಗಳ ನಾಯಕತ್ವದ ದಾಖಲೆ ಮುರಿದಿದೆ.