ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

Date:

Advertisements
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ನಿದ್ರೆಯೆಂಬ ಕಾಳೋರಗ
ರಾತ್ರಿಯೆಂಬ ಹುತ್ತಿನೊಳಗೆ ನಿದ್ರೆಯೆಂಬ ಕಾಳೋರಗ, ಹೆಡೆಯನೆತ್ತಿ ಆಡಿ ಕಚ್ಚಲೊಡನೆ ಅಂಜನಸಿದ್ಧರ ಅಂಜನ ಕರಗಿತ್ತು, ಘುಟಿಕಾಸಿದ್ಧರ ಘುಟಿಕೆ ಉರುಳಿತ್ತು. ಯಂತ್ರಿಗಳ ಯಂತ್ರ ಅದ್ದಿ ಹೋಯಿತ್ತು, ಮಂತ್ರಿಗಳ ಮಂತ್ರ ಮರೆತು ಹೋಯಿತ್ತು. ಔಷಧಿಕರ ಔಷಧವ ಆಳಿಗೊಂಡಿತ್ತು, ಸರ್ವ ವಿದ್ಯಾಮುಖದ ಜ್ಯೋತಿ ನಂದಿತ್ತು, ಇದರ ವಿಷವ ಪರಿಹರಿಸುವರನಾರನೂ ಕಾಣೆ. ಈ ರಾಹುವಿನ ವಿಷಯದಲ್ಲಿ ತ್ರಿಭುವನವೆಲ್ಲ ಮೂರ್ಛಿತವಾಗುತ್ತಿಹುದು ಗುಹೇಶ್ವರಾ.

ಪದಾರ್ಥ:
ಕಾಳೋರಗ = ಕಪ್ಪು ಸರ್ಪ
ಘುಟಿಕೆ = ಗುಳಿಗೆ
ಯಂತ್ರಿ = ಮಾಟಗಾರ
ಔಷಧಿಕ = ಔಷಧ ಪಂಡಿತ

ವಚನಾರ್ಥ:
ಹಗಲು ಬೆಳಕಿನ ಮಾನವ ಜಗತ್ತಿನಲ್ಲಿ ಎಷ್ಟೊಂದು ಕ್ರಿಯೆಗಳು! ಮಂತ್ರ ತಂತ್ರ ಯಂತ್ರ ಅಂಜನ ಘುಟಿಕೆ ಔಷಧೋಪಚಾರ ವಿದ್ಯೆ ಪಾಂಡಿತ್ಯ ಪ್ರದರ್ಶನ ಇತ್ಯಾದಿ. ಅಂಜನವನ್ನು ಸಿದ್ದಿಸಿಕೊಂಡು ಕಾಣಲಾರದ್ದನ್ನು ಕಾಣುವುದು, ಘುಟಿಕೆಯನ್ನು ನುಂಗಿ ಅಪಾರ ಶಕ್ತಿಯನ್ನು ಆವಾಹನಿಸಿಕೊಳ್ಳುವುದು, ಯಂತ್ರ ಮಂತ್ರಗಳನ್ನು ಹೂಡಿ ದೇವಾನುದೇವತೆಗಳನ್ನು ಕೈವಶಗೊಳಿಸಿಕೊಳ್ಳುವುದು, ಔಷಧವ ಪ್ರಯೋಗಿಸಿ ಆರೋಗ್ಯವ ಒಲಿಸಿಕೊಳ್ಳುವುದು, ಸರ್ವ ವಿದ್ಯಾ ಪಾರಂಗತನೆಂಬ ಪಟ್ಟ ಪಡೆದು ಸಂಭ್ರಮಿಸುವುದು. ಹೀಗೆ ಹಗಲು ಹೊತ್ತಿನಲ್ಲಿ ಎಲ್ಲರೂ ಶುಚಿ ವೀರ ಧೀರ ಸಾಧುಗಳೇ. ಹಗಲು ಕಳೆದು ಕತ್ತಲೆ ಆವರಿಸುತ್ತಿದ್ದಂತೆಯೇ ರಾತ್ರಿ ಹೊತ್ತಿನಲ್ಲಿ ಇವರೆಲ್ಲರೂ ನಿದ್ರಾವಶರು.

Advertisements

ದೇಹ ನಿದ್ರಿಸುತ್ತಿರುವಾಗ ಸರ್ವ ವಿದ್ಯಾ ಪಾರಂಗತನೂ, ಪಾಮರನೂ ಸಮಾನರು. ಮಂತ್ರ ತಂತ್ರ ಮದ್ದು ಮಾಟ ಸಿದ್ದಿಸಿಕೊಂಡ ಸಿದ್ದರೆಲ್ಲ ನಿದ್ದೆ ಆವರಿಸಿತೆಂದರೆ ರಾತ್ರಿಯೆಂಬ ಹುತ್ತಿನೊಳಗೆ ನಿದ್ರೆಯೆಂಬ ಕಾಳೋರಗದಿಂದ ಕಡಿಸಿಕೊಂಡವರೇ. ರಾತ್ರಿ ಹೊತ್ತಿನಲ್ಲಿ ನಿದ್ರೆ ಎಂಬ ಮಾಯೆ ನರ್ತಿಸಲೊಡನೆ ಮೂಲೋಕಗಳೆಲ್ಲವೂ ಮೂರ್ಛೆ ಹೋದಂತೆ!

ಪದ ಪ್ರಯೋಗಾರ್ಥ:
ನಿದ್ರೆಯೆಂಬ ಕಾಳೋರಗ. ರಾತ್ರಿ ಎಂಬ ಹುತ್ತದೊಳಗೆ ನಿದ್ರೆ ಎಂಬ ಕರಿ ಘಟಸರ್ಪ ಹೆಡೆಯನೆತ್ತಿ ಆಡುತ್ತಿದೆ ಎಂಬುದು ಅಲ್ಲಮನ ಅಂಬೋಣ. ಅಬ್ಬಾ! ನಾವೆಲ್ಲಾ ರಾತ್ರಿ ಸಮಯ ಅಂದರೆ ಮೆತ್ತನೆಯ ಹಾಸಿಗೆ ಮೇಲೆ ಮಲಗಿ ಸುಖನಿದ್ರೆ ಸವಿಯುವ ಆ ಆರೇಳು ಘಂಟೆಗಳ ಸನ್ನಿವೇಶವನ್ನು ಕಲ್ಪಿಸಿಕೊಂಡರೆ ಅಲ್ಲಮ ಅದನ್ನು ಹುತ್ತದೊಳಗಾಡುತ್ತಾ ಕಚ್ಚುವ ಹಾವಿಗೆ ಹೋಲಿಸುವುದೇ? ನಿದ್ರೆ ಎಂಬ ಕಾಳೋರಗ ಕಕ್ಕುವ ವಿಷವನುಂಡು ತ್ರಿಭುವನವೆಲ್ಲ ಮೂರ್ಛಿತವಾಗುತ್ತದೆ ಎಂದು ಅಲ್ಲಮನ ಅನಿಸಿಕೆ. ಅಲ್ಲಮನಂತೆಯೇ ನಿದ್ರೆಯ ಬಗ್ಗೆ ಆಧ್ಯಾತ್ಮಿಕ ವ್ಯಾಖ್ಯಾನ ನೀಡಿದವರಲ್ಲಿ ರಮಣ ಮಹರ್ಷಿ ಉಪದೇಶ ಸಾರ ಗಮನ ಸೆಳೆಯುತ್ತದೆ. ರಾತ್ರಿಯ ಸುದೀರ್ಘ ಸವಿನಿದ್ದೆಯಲ್ಲಿ ಮುಳುಗಿ ದೇಹದ ಅರಿವಿಲ್ಲದೆ ಮನುಷ್ಯ ಮಲಗಿ ಸುಖ ಕಾಣಬಲ್ಲ ಎಂದಾದರೆ ಸುಖ ಜೀವನವೇ ಗುರಿಯಾಗಿರುವ ಮನುಷ್ಯನಿಗೆ ದೇಹವು ಅವಶ್ಯವೇ ಎಂದು ರಮಣರು ಪ್ರಶ್ನಿಸುತ್ತಾರೆ. ನಿದ್ರೆಯಲ್ಲಿ ತ್ರಿಭುವನ ಲೋಕಗಳೆಲ್ಲ ಮೂರ್ಛೆವಸ್ಥೆ ತಲುಪಿ ನಿಶಬ್ದಗೊಂಡರೆ ಎಲ್ಲವೂ ಶಾಂತ. ನಿದ್ರೆಯೆಂಬ ಕಾಳೋರಗನ ಕಡಿತ ಅಷ್ಟೊಂದು ಪರಿಣಾಮಕಾರಿ. ಸಮಸ್ಯೆ ಶುರುವಾಗುವುದೇ ಮನುಷ್ಯ ನಿದ್ರೆಯಿಂದ ಎಚ್ಚತ್ತಾಗ! ನಿದ್ರೆಯೆಂಬ ಕಾಳೋರಗ ಎಂಬುದು ಅನನ್ಯವಾದ ವಚನ ಪದ ಪ್ರಯೋಗ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X