ಜಮೀನೊಂದರ ದಾರಿಯ ವಿವಾದವೊಂದಕ್ಕೆ ಸಂಬಂಧಿಸಿ ಮಹಿಳೆಯೋರ್ವರಿಗೆ ತನ್ನ ಗುಪ್ತಾಂಗವನ್ನು ತೋರಿಸಿ ಬಿಜೆಪಿ ಮುಖಂಡ, ಗ್ರಾಮ ಪಂಚಾಯತ್ ಉಪಾಧ್ಯಕ್ಷನೋರ್ವ ಅಸಭ್ಯವಾಗಿ ವರ್ತಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಇಡ್ಕಿದು ಎಂಬಲ್ಲಿ ನಡೆದಿದೆ.
ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಬಿಜೆಪಿ ಸದಸ್ಯ ಪದ್ಮನಾಭ ಸಪಲ್ಯ ಎಂದು ಗುರುತಿಸಲಾಗಿದೆ.
ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪಳ ಎಂಬಲ್ಲಿ ಪುಷ್ಪಾವತಿ ಎಂಬವರ ಮನೆಗೆ ಹೋಗುವ ಸಂಪರ್ಕ ರಸ್ತೆಗೆ, ಸ್ಥಳೀಯ ನಿವಾಸಿಯೂ ಆಗಿರುವ ಪದ್ಮನಾಭ ಸಪಲ್ಯ ಗೇಟಿಗೆ ಹಾಕಿ ಬೀಗ ಜಡಿದು ಕಿರುಕುಳ ನೀಡಿದ್ದಾನೆ. ಈ ಬಗ್ಗೆ ವಿಚಾರಿಸಲು ಬಂದ ಪುಷ್ಪಾವತಿಯವರ ಮುಂದೆಯೇ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ತನ್ನ ಚಡ್ಡಿಯನ್ನು ಜಾರಿಸಿದ್ದಲ್ಲದೇ, ಗುಪ್ತಾಂಗವನ್ನು ತೋರಿಸುವ ಮೂಲಕ ವಿಕೃತಿ ಮೆರೆದಿದ್ದಾನೆ. ಘಟನೆಯನ್ನು ಸಂತ್ರಸ್ತ ಮಹಿಳೆಯು ಮೊಬೈಲ್‌ನಲ್ಲಿ ಸೆರೆ ಹಿಡಿದ್ದಿದ್ದಲ್ಲದೇ, ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ಮೇ 3ರಂದು ನಡೆದಿದ್ದು, ಅಂದೇ ಸಂತ್ರಸ್ತ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರೂ, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲೂ ಹರಿದಾಡಿದ್ದು, ವೈರಲಾಗಿದೆ.
ಸೆರೆಯಾಗಿರುವ ವಿಡಿಯೋದಲ್ಲಿ ಆರೋಪಿ ಪದ್ಮನಾಭ ಸಪಲ್ಯನ ಪಕ್ಕದಲ್ಲೇ ಅಪ್ರಾಪ್ತ ಪುಟ್ಟ ಬಾಲಕಿ ಕೂಡ ಇರುವುದು ಕಂಡು ಬಂದಿದೆ. ಆ ಬಾಲಕಿ ಪದ್ಮನಾಭ ಸಪಲ್ಯನ ಕುಟುಂಬ ಸದಸ್ಯೆ ಎಂದು ತಿಳಿದುಬಂದಿದೆ.
ವಿಕೃತ ಬುದ್ದಿಯ ಪದ್ಮನಾಭ ಸಪಲ್ಯ ವಿರುದ್ಧ ಪುಷ್ಪಾವತಿ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಆರೋಪಿ ಪದ್ಮನಾಭ ಸಪಲ್ಯನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 79ರಂತೆ ಎಫ್‌ಐಆರ್ ದಾಖಲಾಗಿದೆ. ಆದರೆ, ಆರೋಪಿಯನ್ನು ವಿಟ್ಲ ಪೊಲೀಸರು ಈವರೆಗೂ ಬಂಧಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿರುವ ಸಂತ್ರಸ್ತ ಮಹಿಳೆಯ ಮಗ ಕಿಶೋರ್, “ಜಮೀನದ ದಾರಿಯ ವಿಚಾರವಾಗಿ ಆರೋಪಿ ಪದ್ಮನಾಭ ಸಪಲ್ಯ ಹಾಗೂ ನಮ್ಮ ನಡುವೆ ತಕರಾರಿದೆ. ಸದ್ಯ ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಆದರೆ, ಮೇ.3ರಂದು ನಾವು ಓಡಾಡಬಾರದೆಂಬ ಉದ್ದೇಶದಿಂದ ತಡೆಬೇಲಿ ಹಾಕುವುದು ನನ್ನ ಅಮ್ಮನ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳಕ್ಕೆ ವಿಡಿಯೋ ರೆಕಾರ್ಡಿಂಗ್ ಆನ್ ಮಾಡಬೇಕೆಂದು ನನ್ನ ತಾಯಿ ಹೋದಾಗ ಈ ರೀತಿ ಅಸಭ್ಯವಾಗಿ ವರ್ತಿಸಿದ್ದಾನೆ. ಪೊಲೀಸರು ಈವರೆಗೂ ಆರೋಪಿಯ ವಿರುದ್ಧ ಕ್ರಮ ಕೂಡ ಕೈಗೊಂಡಿಲ್ಲ ಹಾಗೂ ಬಂಧಿಸಿಯೂ ಇಲ್ಲ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಯುದ್ಧದ ಭೀಕರತೆಯೂ.. ಕುವೆಂಪು ನೀಡಿರುವ ಎಚ್ಚರಿಕೆಯೂ..
ಮಾತೆತ್ತಿದರೆ ಮಹಿಳೆಯರ ಬಗ್ಗೆ ಘನತೆ, ಗೌರವ, ದೇಶಪ್ರೇಮ, ಮಾತೆಯರ ರಕ್ಷಣೆ ಎಂದು ಬಾಯಿ ಬಡಿದುಕೊಳ್ಳುವ ಬಿಜೆಪಿ ಪಕ್ಷದ ಪದ್ಮನಾಭ ಸಪಲ್ಯನ ವಿಕೃತ ಚೇಷ್ಟೆ ಸಭ್ಯ ನಾಗರಿಕರನ್ನು ತಲೆತಗ್ಗಿಸುವಂತೆ ಮಾಡಿದೆ. ವಿಟ್ಲ ಪೊಲೀಸರು ಕೂಡಲೇ, ಆರೋಪಿ ಪದ್ಮನಾಭ ಸಪಲ್ಯನನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.