ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂದೂ ಮುಸ್ಲಿಮರ ನಡುವಿನ ಪ್ರತೀಕಾರದ ಹತ್ಯೆಗಳಿಗೆ ಕಾಲು ಶತಮಾನದ ಇತಿಹಾಸವಿದೆ. ಒಂದು ಕಾಲದಲ್ಲಿ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್‌ನ ಶಾಸಕರೇ ಆಯ್ಕೆಯಾಗುತ್ತಿದ್ದ ಅವಿಭಜಿತ ದಕ್ಷಿಣ ಕನ್ನಡ ಒಂದು ದಶಕದಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಕಳೆದ ಕೆಲ ವರ್ಷಗಳಿಂದ ಪ್ರತೀಕಾರದ ಕೊಲೆಗಳ ಮೂಲಕವೇ ಈ ಜಿಲ್ಲೆ ಹೆಚ್ಚು ಸುದ್ದಿಯಾಗುತ್ತಿದೆ.
ಈ ಕಾಲು ಶತಮಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ಮತ್ತು ಕೋಮುದ್ವೇಷದ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ರಾಜಕೀಯ ಪಕ್ಷಗಳ ಮುಖಂಡರು, ಧಾರ್ಮಿಕ ಮುಖಂಡರು ಕೋಮುದ್ವೇಷದ ಜ್ವಾಲೆಯಿಂದ ಜಿಲ್ಲೆಯನ್ನು ಪಾರು ಮಾಡುವ ಬದಲಿಗೆ ಅದಕ್ಕೆ ಇನ್ನಷ್ಟು ತುಪ್ಪ ಸುರಿಯುತ್ತಿದ್ದಾರೆ. ಈ ಮಧ್ಯೆ ಎರಡೂ ಧರ್ಮಗಳ ಅಮಾಯಕ, ಬಡ ಕುಟುಂಬದ ಯುವಕರೇ ಬೀದಿ ಹೆಣವಾಗುತ್ತಿದ್ದಾರೆ. ಅಂತಹ ಸುಮಾರು 24 ಹತ್ಯೆಗಳ ಮಾಹಿತಿ ಇಲ್ಲಿದೆ.
2003ರ ಮೇ 13 ಎಂ.ಡಿ.ಜಬ್ಬಾರ್ ಹತ್ಯೆ: ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಎಂ.ಡಿ.ಜಬ್ಬಾರ್ ಅವರನ್ನು ಮಂಗಳೂರು ನಗರದ ಹೃದಯ ಭಾಗದಲ್ಲಿರುವ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಹೆಂಡತಿ, ಮಗಳ ಎದುರಲ್ಲೇ ದುಷ್ಕರ್ಮಿಗಳು ಹತ್ಯೆ ನಡೆಸಿದ್ದರು. ರೌಡಿ ಶೀಟರ್ ಪೊಳಲಿ ಅನಂತ್ ಗ್ಯಾಂಗ್ ಈ ಕೃತ್ಯ ಎಸಗಿತ್ತು.
2003ರ ಡಿಸೆಂಬರ್ 26, ನರಸಿಂಹ ಶೆಟ್ಟಿಗಾರ್ ಹತ್ಯೆ: ಉಳ್ಳಾಲ ರಿಕ್ಷಾ ಚಾಲಕ ನರಸಿಂಹ ಶೆಟ್ಟಿಗಾರ್‌ನನ್ನು 2003ರ ಡಿಸೆಂಬರ್ 26ರಂದು ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿದ್ದರು. ಸಂಘ ಪರಿವಾರದಲ್ಲಿ ಗುರುತಿಸಿಕೊಂಡ ನರಸಿಂಹ ಶೆಟ್ಟಿಗಾರ್ ಹತ್ಯೆಯು ಮಂಗಳೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿತ್ತು. ಸಾಮಾಜಿಕ ಜಾಲತಾಣದ ಪ್ರಭಾವ ಇಲ್ಲದ ಆ ಕಾಲದಲ್ಲಿಯೂ ಈ ಹತ್ಯೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಆರೋಪಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು.
2003ರ ಡಿಸೆಂಬರ್ 28, ಫಾರೂಕ್ ನ್ಯೂಪಡ್ಪು: ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ ಮಂಗಳೂರು ತಾಲೂಕಿನ ಪಾವೂರು ಗ್ರಾಮದ ನ್ಯೂಪಡ್ಪು ಎಂಬಲ್ಲಿನ ನಿವಾಸಿ ಫಾರೂಕ್ ಎಂಬಾತನನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ್ದರು. ಉಳ್ಳಾಲದಲ್ಲಿ ನಡೆದ ರಿಕ್ಷಾ ಚಾಲಕ ನರಸಿಂಹ ಶೆಟ್ಟಿಗಾರ್ ಹತ್ಯೆಗೆ ಪ್ರತೀಕಾರವಾಗಿ ಸಂಘಪರಿವಾರದ ಕಾರ್ಯಕರ್ತರು ಫಾರೂಕ್‌ನನ್ನು ಹತ್ಯೆ ಮಾಡಿದ್ದರು. ಕುಟುಂಬದ ಆಧಾರ ಸ್ತಂಭವಾಗಿದ್ದ ಫಾರೂಕ್ ನ ಹತ್ಯೆ ಕೂಡಾ ಭಾರೀ ಚರ್ಚೆಗೆ ಒಳಗಾಗಿತ್ತು.
2005ರ ಜೂನ್ 7, ಪೊಳಲಿ ಅನಂತು: ಮಂಗಳೂರು ಹೊರ ವಲಯದ ಗುರುಪುರ ನಿವಾಸಿಯಾದ ಪೊಳಲಿ ಅನಂತುನನ್ನು ಪೊಳಲಿ ದ್ವಾರದ ಬಳಿ ನಡು ರಸ್ತೆಯಲ್ಲೇ ಕೊಲೆ ಮಾಡಲಾಗಿತ್ತು. ಮಂಗಳೂರು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಎಂ.ಡಿ. ಜಬ್ಬಾರ್ ಕೊಲೆ ಸಹಿತ ಎರಡು ಕೊಲೆ ಹಾಗೂ ಹಲವು ಪ್ರಕರಣಗಳ ಆರೋಪಿಯಾಗಿದ್ದ.
2006ರ ಡಿಸೆಂಬರ್ 1, ಸುಖಾನಂದ ಶೆಟ್ಟಿ: ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಸುಖಾನಂದ ಶೆಟ್ಟಿಯನ್ನು ಮಂಗಳೂರು ಸುರತ್ಕಲ್ ಸಮೀಪದ ಕುಳಾಯಿ ಹೊನ್ನಕಟ್ಟೆ ಜಂಕ್ಷನ್ ಬಳಿ ಕೊಲೆ ಮಾಡಲಾಗಿತ್ತು. ಮಾರ್ಬಲ್ ವ್ಯಾಪಾರಿಯಾದ ಸುಖಾನಂದ ಶೆಟ್ಟಿ ಕಾರಿನಿಂದ ಇಳಿದು ಅಂಗಡಿಯೊಳಗೆ ಹೋಗುವಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಹತ್ಯೆ ಮಾಡಿತ್ತು. ಈ ಪ್ರಕರಣದಲ್ಲಿ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಮುಲ್ಕಿ ರಫೀಕ್ ತಂಡ ಈ ಕೊಲೆ ಮಾಡಿತ್ತು.
2009ರ ಫೆಬ್ರವರಿ 18, ಕ್ಯಾಂಡಲ್ ಸಂತು: ತನ್ನ ಮನೆ ಸಮೀಪದಲ್ಲಿ ಕುಳಿತುಕೊಂಡಿದ್ದ ಕ್ಯಾಂಡಲ್ ಸಂತು ಅಲಿಯಾಸ್ ಸಂತೋಷ್ ನನ್ನು ಎರಡು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಬೆನ್ನಟ್ಟಿ ಕೊಲೆ ಮಾಡಿತ್ತು. ಈತ ಪೊಳಲಿ ಅನಂತು ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದು ಕೊಲೆ ಸಹಿತ ಹಲವು ಪ್ರಕರಣ ಆರೋಪಿಯಾಗಿದ್ದ. ಮುಸ್ಲಿಂ ಹಂತಕರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು.
2011ರ ಫೆಬ್ರವರಿ 26, ಅಕ್ಬರ್ ಕಬೀರ್ ಗುರುಪುರ: ಮಂಗಳೂರು ಹೊರ ವಲಯದ ಗುರುಪುರ ಸಮೀಪದ ನಿವಾಸಿಯಾದ ಅಕ್ಬರ್ ಕಬೀರ್ ನನ್ನು ಕೊಲೆ ಮಾಡಲಾಗಿತ್ತು. ಶುಕ್ರವಾರ ಮಧ್ಯಾಹ್ನ 12:3೦ರ ಸುಮಾರಿಗೆ ತನ್ನ ಇಬ್ಬರು ಸಹಚರರ ಜತೆ ಮಸೀದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಗುರುಪುರ ಸೇತುವೆ ಕಡೆಯಿಂದ ಬಂದ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರನ್ನು ಬೈಕಿಗೆ ಢಿಕ್ಕಿ ಹೊಡೆಸಿ ಬಳಿಕ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಕಬೀರ್ ಸುಖಾನಂದ ಶೆಟ್ಟಿ, ಕ್ಯಾಂಡಲ್ ಸಂತು ಕೊಲೆ ಸಹಿತ ಹಲವು ಪ್ರಕರಣದ ಆರೋಪಿಯಾಗಿದ್ದ. ಅದಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆದಿತ್ತು.
2014ರ ಮಾರ್ಚ್ 21, ರಾಜೇಶ್ ಪೂಜಾರಿ: ಮೂಲತಃ ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ ರಾಜೇಶ್ ಪೂಜಾರಿಯನ್ನು ಬೆಂಜನಪದವಿನ ಆಟೋ ರಿಕ್ಷಾ ನಿಲ್ದಾಣದ ಬಳಿ ಕಡಿದು ಹತ್ಯೆ ಮಾಡಲಾಗಿತ್ತು. ಮುಂಜಾನೆ ವೇಳೆ ಈ ಕೊಲೆ ನಡೆದಿತ್ತು. ರಾಜೇಶ್ ಪೂಜಾರಿ ಬಂಟ್ವಾಳ ಕೆಳಗಿನ ಪೇಟೆ ನಿವಾಸಿ ರಿಕ್ಷಾ ಚಾಲಕ ಇಕ್ಬಾಲ್ ಕೊಲೆ ಆರೋಪಿಯಾಗಿದ್ದ.
2015ರ ಸೆಪ್ಟೆಂಬರ್ 7, ನಾಸಿರ್ ಸಜೀಪ ಕೊಲೆ: ಗಾರೆ ಕೆಲಸ ಮಾಡುತ್ತ ಕುಟುಂಬದ ಆಧಾರ ಸ್ತಂಭವಾಗಿದ್ದ ಮುಹಮ್ಮದ್ ನಾಸೀರ್ 2015ರ ಸಪ್ಟೆಂಬರ್ 7ರಂದು ರಾತ್ರಿ ಕೆಲಸ ಬಿಟ್ಟು ತನ್ನ ಊರಿನ ಮುಹಮ್ಮದ್ ಮುಸ್ತಫಾ ಎಂಬವರ ಆಟೋ ರಿಕ್ಷಾದ ಮನೆಗೆ ತೆರಳುತ್ತಿದ್ದಾಗ ಪಣೋಲಿಬೈಲ್ ಸಮೀಪ ದಾರಿ ಕೇಳುವ ನೆಪದಲ್ಲಿ ರಿಕ್ಷಾ ನಿಲ್ಲಿಸಿದ ನಾಲ್ವರು ನಾಸೀರ್ ಮತ್ತು ಮುಸ್ತಫಾರವರನ್ನು ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡ ನಾಸಿರ್ ಸ್ಥಳದಲ್ಲೇ ಮೃತಪಟ್ಟರೆ, ಮುಹಮ್ಮದ್ ಮುಸ್ತಫಾ ತೀವ್ರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಯಾವುದೇ ಕಾರಣವಿಲ್ಲದೆ ಈ ಹತ್ಯೆ ನಡೆದಿತ್ತು.
2015 ನವೆಂಬರ್ 12, ಹರೀಶ್ ಪೂಜಾರಿ: ರಾತ್ರಿ 7.30ಕ್ಕೆ ತನ್ನ ಸ್ನೇಹಿತ ಸಮೀವುಲ್ಲಾ ಜೊತೆ ಹೋಗುತ್ತಿದ್ದ ಹರೀಶ್ ಪೂಜಾರಿಯನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು ಕೊಲೆ ಮಾಡಿತ್ತು. ಟಿಪ್ಪು ಜಯಂತಿ ದಿನ ರಾಜ್ಯದಲ್ಲಿ ನಡೆದ ಅಹಿತಕರ ಘಟನೆಯನ್ನು ವಿರೋಧಿಸಿ ಬಜರಂಗದಳ ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ಕರೆ ನೀಡಿತ್ತು. ಈ ಬಂದ್ ಯಶಸ್ವಿಯಾಗುವ ಉದ್ದೇಶದಿಂದ ಮುಸ್ಲಿಮ್ ವ್ಯಕ್ತಿ ಎಂದು ಹರೀಶ್ ಪೂಜಾರಿಯನ್ನು ಬಜರಂಗದಳ ಕಾರ್ಯಕರ್ತರು ಕೊಲೆ ಮಾಡಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿತ್ತು.
2015ರ ಅಕ್ಟೋಬರ್ 9, ಪ್ರಶಾಂತ್ ಪೂಜಾರಿ: ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಪೂಜಾರಿಯನ್ನು ದುಷ್ಕರ್ಮಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಹತ್ಯೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನ ಅರೋಪಿಗಳನ್ನು ಬಂಧನ ಮಾಡಲಾಗಿತ್ತು. ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ಆರೋಪ ಬಂದಿತ್ತು.
2016ರ ಏಪ್ರಿಲ್ 12, ರಾಜೇಶ್ ಕೋಟ್ಯಾನ್: ಉಳ್ಳಾಲ ಮೊಗವೀರಪಟ್ನದ ನಿವಾಸಿ ರಾಜೇಶ್ ಕೋಟ್ಯಾನ್ ನನ್ನು 2016ರ ಏಪ್ರಿಲ್ 12ರಂದು ಮುಂಜಾನೆ ಉಳ್ಳಾಲದ ಕೋಟೆಪುರ ರಸ್ತೆಯಲ್ಲಿ ಕೊಲೆ ಮಾಡಲಾಗಿತ್ತು. ಈ ಕೊಲೆ ಬಳಿಕ ಜಿಲ್ಲೆಯಲ್ಲಿ ಕೋಮು ಘರ್ಷಣೆಗೆ ಕಾರಣವಾಯಿತು.
2016 ಏಪ್ರಿಲ್ 26, ಸಫ್ವಾನ್ ಹತ್ಯೆ: ಮಂಗಳೂರು ತೊಕ್ಕೊಟ್ಟು ರೈಲ್ವೆ ಮೇಲ್ಸೇತುವೆ ಬಳಿ ಮುಹಮ್ಮದ್ ಸಫ್ವಾನ್ ಎಂಬ ಯುವಕನನ್ನು ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿ ಹತ್ಯೆ ಮಾಡಿತ್ತು. ತನ್ನ ಸ್ನೇಹಿತರಾದ ಮುಹಮ್ಮದ್ ಸಲೀಂ ಮತ್ತು ನಿಝಾಮುದ್ದೀನ್ ಜೊತೆ ಕ್ಯಾಟರಿಂಗ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಹತ್ಯೆ ನಡೆದಿತ್ತು. ದುಷ್ಕರ್ಮಿಗಳ ದಾಳಿಯಿಂದ ಸಲೀಂ ಮತ್ತು ನಿಝಾಮುದ್ದೀನ್ ಪಾರಾಗಿದ್ದಾರೆ. ಈ ಹತ್ಯೆ ಉಳ್ಳಾಲ ಮೊಗವೀರಪಟ್ನದಲ್ಲಿ ನಡೆದ ರಾಜೇಶ್ ಕೋಟ್ಯಾನ್ ಹತ್ಯೆಗೆ ಪ್ರತೀಕಾರ ಎನ್ನಲಾಗಿದೆ.
2017 ಏಪ್ರಿಲ್ 20, ಜಲೀಲ್ ಕರೋಪಾಡಿ: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಜಲೀಲ್ ಕರೋಪಾಡಿಯನ್ನು ದುಷ್ಕರ್ಮಿಗಳ ತಂಡ ಗ್ರಾಮ ಪಂಚಾಯತ್ ಕಚೇರಿಗೆ ನುಗ್ಗಿ ಹತ್ಯೆ ಮಾಡಿತ್ತು. ಈ ಪ್ರಕರಣದಲ್ಲಿ 11 ಮಂದಿ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಿದ್ದರು. ಈ ಹತ್ಯೆ ಸಂಘಪರಿವಾರದ ಕಾರ್ಯಕರ್ತರು ನಡೆಸಿದ್ದರೂ ಹತ್ಯೆ ಹಿಂದೆ ಕಾಂಗ್ರೆಸ್ ನಾಯಕರು ಇದ್ದಾರೆ ಎಂಬ ಆರೋಪ ಬಂದಿತ್ತು. ಗ್ರಾಮ ಪಂಚಾಯತ್ ಅಧಿಕಾರದ ವೈಷಮ್ಯದಿಂದ ಈ ಹತ್ಯೆ ನಡೆದಿದೆ ಎನ್ನಲಾಗಿದೆ.
2017ರ ಜೂನ್ 21 ಅಶ್ರಫ್ ಕಲಾಯಿ: ಎಸ್.ಡಿ.ಪಿ.ಐ. ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಂಟ್ವಾಳ ತಾಲೂಕಿನ ಕಲಾಯಿ ನಿವಾಸಿ ಅಶ್ರಫ್ ಕಲಾಯಿ ನನ್ನು 2017ರ ಜೂನ್ 21ರಂದು ಹತ್ಯೆ ಮಾಡಲಾಗಿತ್ತು. ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಈ ಹತ್ಯೆ ನಡೆದಿತ್ತು. ಬಜರಂಗ ದಳದ ಕಾರ್ಯಕರ್ತರು ಕೇವಲ ಮುಸ್ಲಿಂ ದ್ವೇಷದಿಂದ ಈ ಅಮಾಯಕನನ್ನು ಕೊಲೆ ಮಾಡಿದ್ದರು.
2017ರ ಜುಲೈ 4, ಶರತ್ ಮಡಿವಾಳ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿ ಲಾಂಡ್ರಿ ನಡೆಸುತ್ತಿದ್ದ ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಮೇಲೆ ಜುಲೈ 4ರಂದು ರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಜುಲೈ 7ರಂದು ಮೃತಪಟ್ಟಿದ್ದರು. ಅಶ್ರಫ್ ಕಲಾಯಿ ಕೊಲೆಗೆ ಪ್ರತೀಕಾರ ಎಂಬಂತೆ ಈ ಹತ್ಯೆ ನಡೆದಿತ್ತು. ಎಸ್‌ಡಿಪಿಐ ಕಾರ್ಯಕರ್ತರು ಆರೋಪಿಗಳು.
2018ರ ಜನವರಿ 3, ದೀಪಕ್ ರಾವ್ ಹತ್ಯೆ: ಸುರತ್ಕಲ್ ನಲ್ಲಿ ಬಜರಂಗದಳದ ಕಾರ್ಯಕರ್ತ ದೀಪಕ್ ರಾವ್‌ನನ್ನು 2018ರ ಜನವರಿ 3ರಂದು ಹಾಡಹಗಲೇ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ನಂತರ ಪೊಲೀಸರು ನೌಶಾದ್, ಇರ್ಫಾನ್, ಪಿಂಕಿ ನವಾಜ್ ಮತ್ತು ರಿಝ್ವಾನ್ ಎಂಬ ಆರೋಪಿಗಳನ್ನು ಬಂಧಿಸಿದ್ದರು.
2018 ಜನವರಿ 3, ಬಶೀರ್: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಬಶೀರ್ ನನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿ ರಾತ್ರಿ ಹತ್ಯೆ ಮಾಡಲಾಗಿತ್ತು. ಬಜರಂಗದಳದ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆದಿತ್ತು. ಪ್ರಕರಣ ಸಂಬಂಧ ಶ್ರೀಜಿತ್ ಪಿ ಕೆ, ಕಿಷನ್ ಪೂಜಾರಿ, ಧನುಷ್ ಪೂಜಾರಿ ಹಾಗೂ ಸಂದೇಶ್ ಕೋಟ್ಯಾನ್ ಎಂಬುವರನ್ನು ಬಂಧಿಸಲಾಗಿತ್ತು.
2022ರ ಜುಲೈ 19, ಮಸೂದ್ ಬೆಳ್ಳಾರೆ: ಸುಳ್ಳ ತಾಲ್ಲೂಕಿನ ಬೆಳ್ಳಾರೆಯಲ್ಲಿ ಮಸೂದ್ ಎಂಬ 19 ವರ್ಷದ ಯುವಕನನ್ನು 2022ರ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ದುಷ್ಕರ್ಮಿಗಳು ಹತ್ಯೆ ನಡೆಸಿದ್ದರು. ಆರೋಪಿಗಳೆಲ್ಲರೂ ಬಜರಂಗದಳದ ಕಾರ್ಯಕರ್ತರು.
2022ರ ಜುಲೈ 26, ಪ್ರವೀಣ್ ನೆಟ್ಟಾರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ಬಿಜೆಪಿ ಯುವ ಮೋರ್ಚಾದ ನಾಯಕನಾಗಿದ್ದ ಪ್ರವೀಣ್ ನೆಟ್ಟಾರುನನ್ನು ಹತ್ಯೆ ಮಾಡಲಾಗಿತ್ತು. ಮಸೂದ್ ಕೊಲೆಗೆ ಪ್ರತೀಕಾರ ಎಂಬಂತೆ ಈ ಹತ್ಯೆ ನಡೆಯಿತು. ಹತ್ಯೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಲಾಯಿತು. ಈ ಪ್ರಕರಣದಲ್ಲಿ ಎನ್‌ಐಎ 30ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದೆ.
2022ರ ಜುಲೈ 28, ಫಾಝಿಲ್ ಸುರತ್ಕಲ್: ಮಂಗಳೂರಿನ ಹೊರವಲಯದ ಕೃಷ್ಣಾಪುರ ನಿವಾಸಿ ಫಾಝಿಲ್ ಎಂಬ ಯುವಕನನ್ನು 2022ರ ಜುಲೈ 28ರಂದು ದುಷ್ಕರ್ಮಿಗಳ ತಂಡ ಹತ್ಯೆ ಮಾಡಿತ್ತು. ಪ್ರವೀಣ್ ನೆಟ್ಟಾರು ಕೊಲೆ ಪ್ರತಿಕಾರವಾಗಿ ಈ ಹತ್ಯೆ ನಡೆದಿದೆ. ಸುರತ್ಕಲ್ ನಲ್ಲಿ ತನ್ನ ಸ್ನೇಹಿತನ ಅಂಗಡಿ ಎದುರು ನಿಂತಿದ್ದ ಫಾಝಿಲ್ ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಕೊಚ್ಚಿ ಕೊಲೆ ಮಾಡಿತ್ತು.
ಇದನ್ನೂ ಓದಿ ಧರ್ಮಸ್ಥಳದ ಸೌಜನ್ಯ ಹಿಂದೂ ಅಲ್ಲವೇ ಶೋಭಾ ಮೇಡಂ? ; ಈ ಪ್ರಕರಣವನ್ನು ಮರು ತನಿಖೆಗೆ ಯಾಕೆ ಒತ್ತಾಯಿಸುತ್ತಿಲ್ಲ?
2022 ಡಿಸೆಂಬರ್ 24, ಅಬ್ದುಲ್ ಜಲೀಲ್: ಮಂಗಳೂರು ಸುರತ್ಕಲ್ ಸಮೀಪದ ಕೃಷ್ಣಾಪುರದ ನೈತಂಗಡಿ ಎಂಬಲ್ಲಿನ ಅಂಗಡಿ ಮಾಲಕ ಅಬ್ದುಲ್ ಜಲೀಲ್ ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಜಲೀಲ್ ಕೊಲೆ ಪ್ರಕರಣದಲ್ಲಿ ಲಕ್ಷ್ಮೀಶ್, ಶೈಲೇಶ್, ಸವೀನ್ ಕಾಂಚನ್ ಮತ್ತು ಪವನ್ ಎಂಬವರನ್ನು ಬಂಧಿಸಲಾಗಿತ್ತು.
2025ರ ಏಪ್ರಿಲ್ 27, ಅಶ್ರಫ್ ಕೊಲೆ: ಕೇರಳದ ವಯನಾಡ್ ಜಿಲ್ಲೆಯ ನಿವಾಸಿ ಅಶ್ರಫ್ ಎಂಬಾತನನ್ನು ಮಂಗಳೂರಿನ ಕುಡುಪು ಎಂಬಲ್ಲಿ 2025ರ ಏಪ್ರಿಲ್ 27ರಂದು 30 ಜನರ ಗುಂಪು ಹತ್ಯೆ ಮಾಡಿತ್ತು. ಕ್ರಿಕೆಟ್ ಆಟ ನೋಡಲು ಬಂದಿದ್ದ ಅಶ್ರಫ್ ನನ್ನು ಯಾವುದೇ ಕಾರಣ ಇಲ್ಲದೆ ಗುಂಪು ಹತ್ಯೆ ಮಾಡಲಾಗಿತ್ತು. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಅಮಾಯಕ ಅಶ್ರಫ್‌ನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪದಲ್ಲಿ 23 ಮಂದಿಯನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಪಿಸ್ತೂಲ್ ರವಿ ಇನ್ನೂ ಪತ್ತೆಯಾಗಿಲ್ಲ.
2025ರ ಮೇ 1, ಸುಹಾಸ್ ಶೆಟ್ಟಿ: ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ಮಂಗಳೂರು ಬಜಪೆ ಕಿನ್ನಿ ಪದವು ಎಂಬಲ್ಲಿ ದುಷ್ಕರ್ಮಿಗಳ ತಂಡ ಹತ್ಯೆ ಮಾಡಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಈತ ಕೀರ್ತಿ ಎಂಬ ಯುವಕ ಮತ್ತು ಸುರತ್ಕಲ್‌ನ ಫಾಝಿಲ್ ಹತ್ಯೆ ಆರೋಪಿಯಾಗಿದ್ದ.
ಇದನ್ನೂ ಓದಿ ಮಂಗಳೂರು ಜೈಲು ಕ್ರಿಮಿನಲ್‌ಗಳ ಸ್ವರ್ಗ!; ಇಲ್ಲಿದೆ ಸಣ್ಣ ಅಪರಾಧಿಗೆ ದೊಡ್ಡ ಅಪರಾಧಿಯಾಗುವ ಅವಕಾಶ