ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಫೊಸ್ಟ್ ಶೇರ್ ಮಾಡಿರುವ ಆರೋಪದಲ್ಲಿ ಯುವಕನೋರ್ವನನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಜಾವೀದ್ ಬಂಧಿತ ಆರೋಪಿ.
ಆರೋಪಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕಾಲಿಗೆ, ಪ್ರಧಾನಿ ನರೇಂದ್ರ ಮೋದಿ ಶೂ ತೊಡಿಸುತ್ತಿರುವ ಫೋಟೊವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಕಾರ್ಯಕರ್ತರ ದೂರಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ವಿವಾದಕ್ಕೆ ಕಾರಣವಾದ ವಿದ್ಯಾರ್ಥಿನಿಯ ಪೋಸ್ಟ್
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಮಂಗಳೂರಿನ ವಿದ್ಯಾರ್ಥಿನಿಯೊಬ್ಬಳು ಹಾಕಿದ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಕೂಡಾ ವಿವಾದಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗ ಎಂಬ ವಿದ್ಯಾರ್ಥಿನಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹ್ಯಾಷ್ ಟ್ಯಾಗ್ “ಧಿಕ್ಕಾರ ಆಪರೇಷನ್ ಸಿಂಧೂರ್” ಎಂದು ಮೇ 8ರಂದು ಪೋಸ್ಟ್ ಹಾಕಿದ್ದರು. ವಿರೋಧ ವ್ಯಕ್ತವಾಗುತ್ತಿದ್ದಂತೆ ಯುವತಿ ಪೋಸ್ಟ್ ಡಿಲೀಟ್ ಮಾಡಿದ್ದಾಳೆ ಎನ್ನಲಾಗಿದೆ.
ರೇಷ್ಮಾ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. “ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ. ಅಲ್ಲಿ ನಂದಿ ಹೋಯಿತು ಬೆಳಕು” “ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ… ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದು ಕತಲು… ಎಲ್ಲೆಲ್ಲೂ ಕತ್ತಲು…!” #dikkaraoperationsindura ಹ್ಯಾಷ್ ಟ್ಯಾಗ್ ಮಾಡಿ ಪೋಸ್ಟ್ ಹಾಕಿದ್ದಾಳೆ.
ಪೋಸ್ಟ್ ವೈರಲ್ ಆದ ಬೆನ್ನಲ್ಲೇ ರೇಷ್ಮಾ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ. “ಭಾರತ ದೇಶದ ಮೇಲೆ ಅಪಾರ ಪ್ರೀತಿ, ಗೌರವ ನನಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ. ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ಹೆಮ್ಮೆ ಇದೆ, ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ. ಈ ದೇಶದ ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ.
ಯಾವುದೇ ಯುದ್ಧ ಆದಾಗ ಮಡಿಯುವವರು ಒಂದೆಡೆಯಾದರೆ ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸುವಂತಾಗುತ್ತದೆ. ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ, ಸೌಹಾರ್ದ ನೆಲೆಸಲಿ. ಭಯೋತ್ಪಾದನೆ ನಿರ್ಮೂಲನೆಯಾಗಲಿ. ಸಾವು ನೋವು ಇಲ್ಲದಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ ಎಂದು ರೇಷ್ಮಾ ಹೊಸದಾಗಿ ಪೋಸ್ಟ್ ಮಾಡಿದ್ದಾರೆ.