ಪಾಕಿಸ್ತಾನದೊಂದಿಗೆ ಕದನ ವಿರಾಮ ಒಪ್ಪಂದ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದೊಂದಿಗೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳುವ ಮೂಲಕ ಪ್ರಧಾನಿ ಮೋದಿ ವಿಶ್ವಾಸ ದ್ರೋಹ ಎಸಗಿದ್ದಾರೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.
ಭಾರತ ಪಾಕಿಸ್ತಾನ ಕದನ ವಿರಾಮದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಪಾಕಿಸ್ತಾನ 78 ವರ್ಷಗಳಿಂದ ಹಿಂದೂಗಳ ರಕ್ತ ಹರಿಸಿದೆ. ಪಾಕ್ ಅನ್ನು ನಾಶಗೊಳಿಸುವವರೆಗೂ ಭಾರತ ಕದನ ವಿರಾಮ ಘೋಸಿಬಾರದಿತ್ತು. ಪ್ರಧಾನಿ ಮೋದಿ ತಪ್ಪು ನಿರ್ಧಾರ ಮಾಡಿ ನೂರು ಕೋಟಿ ಹಿಂದೂಗಳ ವಿಶ್ವಾಸಕ್ಕೆ ದ್ರೋಹ ಎಸಗಿದ್ದಾರೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? BREAKING NEWS | ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ: ಶ್ರೀನಗರದ ಮೇಲೆ ಶೆಲ್ ದಾಳಿ
“ಇಷ್ಟು ವರ್ಷ ಕ್ರೌರ್ಯ , ಭಯೋತ್ಪಾದನೆ ನಡೆಸಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇಬೇಕಿತ್ತು. ಭಾರತದ ಕದನ ವಿರಾಮ ನಿರ್ಧಾರವನ್ನು ನಾವಂತೂ ಒಪ್ಪಲ್ಲ. ಪ್ರಧಾನಿ ಮೋದಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದು ದೂರಿದರು.
“ಈ ಹಿಂದೆಯೂ ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡಿದೆ. ಆದರೆ ಅದೆಷ್ಟೋ ಭಾರತೀಯರನ್ನು ಕೊಂದಿದೆ. ಈಗ ಮೋದಿ ಎಷ್ಟು ಭಾರತೀಯರನ್ನು ಸಾಯಿಸುವ ನಿರ್ಧಾರ ಮಾಡಿದ್ದಾರೆ. ಅಷ್ಟಕ್ಕೂ ದೇಶದ ಆಂತರಿಕ ವಿಷಯದಲ್ಲಿ ತಲೆ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾರು” ಎಂದು ಮುತಾಲಿಕ್ ಪ್ರಶ್ನಿಸಿದರು.
“ಅಂತಾರಾಷ್ಟ್ರೀಯ ಮಟ್ಟದಲ್ಲಿ, ಆಂತರಿಕವಾಗಿ ಸಾಕಷ್ಟು ಒತ್ತಡ ಇರಬಹುದು. ಆದರೆ ದೇಶದ ಸುರಕ್ಷತೆಯ ದೃಷ್ಟಿಯಿಂದ ಮೋದಿ ಕದನ ವಿರಾಮವನ್ನು ಈ ಕೂಡಲೇ ವಾಪಸ್ ಪಡೆಯಬೇಕು. ನಾವು ನಿಮ್ಮನ್ನು ಒಬ್ಬನೇ ಒಬ್ಬ ಹಿಂದೂ ಸಾಯಬಾರದು ಎಂದು ಪ್ರಧಾನಿ ಸ್ಥಾನ ನೀಡಿ ಕೂರಿಸಿರುವುದು. ನಿಮ್ಮ ಕದನ ವಿರಾಮ ನಿರ್ಧಾರದ ವಿರುದ್ಧ ನಾವು ಹೋರಾಡುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
