ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿ ಬದಲು ಯುವ ಆಟಗಾರನಿಗೆ ನಾಯಕನ ಸ್ಥಾನ ನೀಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ. ರೋಹಿತ್ ಶರ್ಮಾ ನಿವೃತ್ತಿಯಾದ ನಂತರ ವಿರಾಟ್ ಕೊಹ್ಲಿ ಅವರನ್ನು ಭಾರತ ಟೆಸ್ಟ್ ತಂಡಕ್ಕೆ ನಾಯಕರನ್ನಾಗಿ ಮರು ಆಯ್ಕೆ ಮಾಡುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ ಶುಭ್ಮನ್ ಗಿಲ್ ಅವರನ್ನು ಭಾರತದ ದೀರ್ಘಕಾಲೀನ ನಾಯಕರನ್ನಾಗಿ ಮಾಡುವ ಸಲುವಾಗಿ ಕೊಹ್ಲಿಯನ್ನು ಹೊರಗಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಈ ಹಿಂದೆ ವಿರಾಟ್ ಕೊಹ್ಲಿ ಕೂಡ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕಾಗಿ ಪ್ರಯತ್ನ ಮಾಡಿದ್ದರು ಎಂದು ವರದಿಯಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆ ಕೊಹ್ಲಿ ಟೀಮ್ ಇಂಡಿಯಾ ಆಡಳಿತ ಮಂಡಳಿ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಇದೇ ಕಾರಣದಿಂದಾಗಿ ರೋಹಿತ್ ಶರ್ಮಾ ನಿವೃತ್ತಿ ನಂತರ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಚರ್ಚೆ ನಡೆಸಿತ್ತು. ಆದರೆ ಇದೀಗ ವಿರಾಟ್ ಕೊಹ್ಲಿ ನಿವೃತ್ತಿ ಹೊಸ್ತಿಲಲ್ಲಿರುವ ಕಾರಣ ಯುವ ಆಟಗಾರನಿಗೆ ನಾಯಕನ ಸ್ಥಾನ ನೀಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ. ಹೀಗಾಗಿ ವಿರಾಟ್ ಕೊಹ್ಲಿ ಬದಲಿಗೆ ಶುಭ್ಮನ್ ಗಿಲ್ಗೆ ನಾಯಕತ್ವ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಟಿ20 ಬಳಿಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತನ್ನನ್ನು ಆಯ್ಕೆ ಮಾಡಬೇಡಿ. ತಾನು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತನಾಗಲು ನಿರ್ಧರಿಸಿದ್ದೇನೆ ಎಂದು ವಿರಾಟ್ ಕೊಹ್ಲಿ ಬಿಸಿಸಿಐ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ವಿರಾಟ್ ಕೊಹ್ಲಿಯ ನಿವೃತ್ತಿಯನ್ನು ಬಿಸಿಸಿಐ ಅಂಗೀಕರಿಸಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಯ್ಕೆ ಸಮಿತಿ ಕೊಹ್ಲಿಯಲ್ಲಿ ಮನವಿ ಮಾಡಿದೆ. ಹೀಗಾಗಿ ಕೆಲವು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಒಂದು ವೇಳೆ ವಿರಾಟ್ ಕೊಹ್ಲಿ ತಮ್ಮ ನಿರ್ಧಾರ ಬದಲಿಸದಿದ್ದರೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ. ಆದಾಗ್ಯೂ ಬಿಸಿಸಿಐನ ವಿರಾಟ್ ಕೊಹ್ಲಿ ಅವರನ್ನು ಮನವೊಲಿಸುವ ಪ್ರಯತ್ನ ಮುಂದುವರಿಸಿದೆ.