46ನೇ ವಸಂತಕ್ಕೆ ಕಾಲಿಟ್ಟ ಶ್ರೀನಗರ ಕಿಟ್ಟಿ
ಸಂಜು ವೆಡ್ಸ್ ಗೀತಾ-2 ಚಿತ್ರತಂಡದ ಭಾಗವಾದ ರಮ್ಯಾ
ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಶ್ರೀನಗರ ಕಿಟ್ಟಿ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಿಟ್ಟಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಿಟ್ಟಿ ಅವರ ಮುಂದಿನ ಸಿನಿಮಾ ಕೂಡ ಘೋಷಣೆಯಾಗಿದೆ.
ದಶಕದ ಹಿಂದೆ ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಕಾಂಬಿನೇಶನ್‌ನಲ್ಲಿ ತೆರೆಕಂಡಿದ್ದ ʼಸಂಜು ವೆಡ್ಸ್ ಗೀತಾʼ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು. ಪ್ರೇಕ್ಷಕರು ಮತ್ತು ವಿಮರ್ಶಕರಿಂದಲೂ ಈ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಚಿತ್ರತಂಡ ಮತ್ತೆ ಒಂದಾಗಿದ್ದು, ಬರೋಬ್ಬರಿ 12 ವರ್ಷಗಳ ಬಳಿಕ ʼಸಂಜು ವೆಡ್ಸ್ ಗೀತಾ-2ʼ ಸಿನಿಮಾ ಘೋಷಣೆ ಮಾಡಿದೆ.
ಈ ಹಿಂದೆ ʼಸಂಜು ವೆಡ್ಸ್ ಗೀತಾʼ ಚಿತ್ರದ ಎಲ್ಲ ಹಾಡುಗಳು ದೊಡ್ಡ ಮಟ್ಟದ ಜನಪ್ರಿಯ ಗಳಿಸಿದ್ದವು. ಈ ಹಾಡುಗಳನ್ನು ರಚಿಸಿದ್ದ ಕನ್ನಡದ ಖ್ಯಾತ ಚಿತ್ರಸಾಹಿತಿ ಕವಿರಾಜ್ ಅವರೇ ʼಸಂಜು ವೆಡ್ಸ್ ಗೀತಾ-2ʼ ಚಿತ್ರದ ಬಗ್ಗೆ ಸುಳಿವು ನೀಡಿದ್ದು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ.
ನಾಗಶೇಖರ್ ಅವರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಕಿಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದುವರಿದ ಭಾಗಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗಳು ಸದ್ಯ ಸಿನಿರಸಿಕರಲ್ಲಿ ಮನೆ ಮಾಡಿದೆ. ಮೊದಲ ಭಾಗದಲ್ಲಿ ನಾಯಕಿಯಾಗಿ ಮಿಂಚಿದ್ದ ರಮ್ಯಾ ಈ ಚಿತ್ರವನ್ನು ತಮ್ಮ ಬ್ಯಾನರ್‌ನಡಿಯಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಮುಂಬರುವ ಚಳಿಗಾಲಕ್ಕೆ ಸಿನಿಮಾದ ಶೂಟಿಂಗ್ ಪ್ರಾರಂಭಗೊಳ್ಳಲಿದ್ದು, 2024ರ ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.