ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು(ಪಿಒಕೆ) ತೆರವುಗೊಳಿಸುವಂತೆ 1994 ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ನಿರ್ಣಯವನ್ನು ಕಾಂಗ್ರೆಸ್ ಭಾನುವಾರ ಪುನರುಚ್ಚರಿಸಿದೆ. ಜಮ್ಮು ಕಾಶ್ಮೀರ ಸಮಸ್ಯೆಯನ್ನು ‘ಅಂತಾರಾಷ್ಟ್ರೀಕರಣ’ ಮಾಡುವುದು ಸರಿಯಲ್ಲ. ಪಿಒಕೆ ಭಾರತದ ಅವಿಭಾಜ್ಯ ಅಂಗ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಜಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕೋರಿ ಪತ್ರ ಬರೆದಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶವನ್ನು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಕದನ ವಿರಾಮ | ಇಂದಿರಾ ಗಾಂಧಿಯನ್ನು ನೆನೆದ ವಿಪಕ್ಷಗಳು; ಸರ್ವಪಕ್ಷ ಸಭೆ, ತುರ್ತು ಅಧಿವೇಶನ ನಡೆಸಲು ಆಗ್ರಹ
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದವನ್ನು ಘೋಷಿಸಿದ ಅಮೆರಿಕವನ್ನು ಕಾಂಗ್ರೆಸ್ ಟೀಕಿಸಿದೆ. “ಹಲವು ವರ್ಷಗಳ ನಂತರ, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಒಂದು ನಿರ್ಣಯಕ್ಕೆ ತಲುಪಬಹುದೇ ಎಂದು ನೋಡಲು (ಭಾರತ ಮತ್ತು ಪಾಕಿಸ್ತಾನ) ಎರಡೂ ದೇಶಗಳೊಂದಿಗೆ ಕಾರ್ಯನಿರ್ವಹಿಸುತ್ತೇನೆ” ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಹೇಳಿಕೆ ಬೆನ್ನಲ್ಲೇ ಕಾಶ್ಮೀರ ಸಮಸ್ಯೆಯನ್ನು ‘ಅಂತಾರಾಷ್ಟ್ರೀಕರಣ’ ಮಾಡುವುದನ್ನು ಕಾಂಗ್ರೆಸ್ ವಿರೋಧಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. “ಅಮೆರಿಕ ಅಧ್ಯಕ್ಷರು ಮತ್ತು ಇತರ ಅಮೆರಿಕದ ಅಧಿಕಾರಿಗಳ ಹೇಳಿಕೆಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ನವದೆಹಲಿ(ಭಾರತ) ಇಸ್ಲಾಮಾಬಾದ್‌ನಿಂದ(ಪಾಕಿಸ್ತಾನ) ಯಾವ ಬದ್ಧತೆಗಳನ್ನು ಬಯಸಿದೆ ಮತ್ತು ಪಾಕಿಸ್ತಾನಕ್ಕೆ ಯಾವ ಬದ್ಧತೆಯಿದೆ ಎಂಬ ವಿವರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಟ್ರಂಪ್ ಕದನ ವಿರಾಮ ಘೋಷಿಸಿದ್ದು ನಮಗೆ ಆಶ್ಚರ್ಯ ತಂದಿದೆ. ಇಂತಹ ಘಟನೆ ಇದೇ ಮೊದಲ ಬಾರಿಗೆ ಸಂಭವಿಸಿದೆ. ಕಾಂಗ್ರೆಸ್ ಸರ್ವಪಕ್ಷ ಸಭೆ ಮತ್ತು ವಿಶೇಷ ಅಧಿವೇಶನವನ್ನು ಕರೆಯುವಂತೆ ಒತ್ತಾಯಿಸುತ್ತಿದೆ. 1994ರಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದೆ. ನಾವು ಪಿಒಕೆಯನ್ನು ಹಿಂಪಡೆದುಕೊಳ್ಳುವುದಾಗಿ ಸರ್ವಾನುಮತದಿಂದ ಅಂಗೀಕರಿಸಲಾದ ನಿರ್ಣಯವನ್ನು ನಾವು ಪುನರುಚ್ಚರಿಸಬೇಕು” ಎಂದು ಸಚಿನ್ ಪೈಲಟ್ ಹೇಳಿದರು.
ಪಾಕಿಸ್ತಾನವು ಆಕ್ರಮಣಕಾರಿಯಾಗಿ ಜಮ್ಮು ಮತ್ತು ಕಾಶ್ಮೀರದ ಪ್ರದೇಶಗಳನ್ನು ಆಕ್ರಮಣ ಮಾಡಿಕೊಂಡಿದ್ದು ಆ ಸ್ಥಳವನ್ನು ತೆರವುಗೊಳಿಸಬೇಕು. ನಿರ್ಣಯವನ್ನು ಪುನರುಚ್ಚರಿಸುವ ಸಮಯವಿದು. ನಿಲುವಿನಲ್ಲಿ ಬದಲಾವಣೆಯಾದರೆ, ಅದನ್ನು ಮೊದಲು ಚರ್ಚಿಸಬೇಕು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ನಾವು ನಮ್ಮ ನಿಲುವನ್ನು ಬದಲಾಯಿಸಿಲ್ಲ” ಎಂದು ಪೈಲಟ್ ಹೇಳಿದರು.
