ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳದೇ ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವ ವಿದ್ಯಾನಿಲಯ ಹಾಗೂ ತಿಪಟೂರಿನ ಜನಸ್ಪಂದನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿರುವ ‘ಸಂವಿಧಾನ ಅರಿವು’ ಎರಡು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ಎಲ್ಲ ಸಂವಿಧಾನಗಳಿಗೂ ಬ್ರಿಟನ್ ಸಂವಿಧಾನವೇ ತಾಯಿ ಎಂದು ಹೇಳಲಾಗುತ್ತದೆ. ಆದರೆ ಬ್ರಿಟನ್ ವಿದ್ವಾಂಸರಾದ ಜಾನ್ ಆಸ್ಟನ್ ಅವರು ಭಾರತದ ಸಂವಿಧಾನವೇ ಅತ್ಯುನ್ನತವಾದ ಸಂವಿಧಾನವೆಂದು ಹೇಳಿದ್ದಾರೆ. ನಮ್ಮ ಸಂವಿಧಾನ ಎಲ್ಲ ಸ್ಥರದ ಜನರಿಗೆ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಒದಗಿಸುತ್ತದೆ. ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳದೇ ಭಾರತವನ್ನಾಗಲಿ, ಭಾರತದ ಸಂವಿಧಾನವನ್ನಾಗಲಿ ಅರ್ಥಮಾಡಿಕೊಳ್ಳುವುದು ಅಪೂರ್ಣವಾದಂತೆ” ಎಂದು ಹೇಳಿದರು.
“ನಮ್ಮ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತದೆ. ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಸಂವಿಧಾನ ಹಾಗೂ ಕಾನೂನುಗಳ ಮೂಲಕ ಒದಗಿಸಬಹುದು. ಆದರೆ, ಭ್ರಾತೃತ್ವ ಭಾವನೆಯನ್ನು ಸಂಪೂರ್ಣವಾಗಿ ಉಂಟುಮಾಡಲಾರದು. ಅದು ಭಾರತದ ಪ್ರಜೆಗಳಾದ ನಮ್ಮ ಜವಾಬ್ದಾರಿ” ಎಂದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಎಸ್‌ಎಸ್‌ಎಲ್‌ಸಿ ಫಲಿತಾಂಶ; ಕನ್ನಡದಲ್ಲಿ 13 ಅಂಕ ಪಡೆದಿದ್ದ ವಿದ್ಯಾರ್ಥಿನಿಗೆ ಮರು ಮೌಲ್ಯಮಾಪನದಲ್ಲಿ 73 ಅಂಕ
“ಇಂದು ಹಿಂದೂ ರಾಷ್ಟ್ರ ಅಥವಾ ಇನ್ನಾವುದೇ ರಾಷ್ಟ್ರದ ಕುರಿತು ಮಾತನಾಡುವವರು ಇದ್ದಾರೆ. ಆದರೆ, ನಮ್ಮ ಸಂವಿಧಾನ ಇದಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ. ನಮ್ಮ ಸಂವಿಧಾನ ಎಂದಿಗೂ ಭಾರತ ರಾಷ್ಟ್ರಕ್ಕಾಗಿ ಮಾತ್ರ ಅವಕಾಶ ನೀಡುತ್ತದೆ.
ಇದಕ್ಕಾಗಿ ನಾವು ನಮ್ಮ ಸಂವಿಧಾನವನ್ನು ಸಂರಕ್ಷಣೆ ಮಾಡಬೇಕು. ಇದು ನಮ್ಮೆಲ್ಲರ ಜವಾಬ್ದಾರಿ. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಸಂವಿಧಾನ ರಕ್ಷಣೆಗೆ ಸ್ವತಃ ಅಂಬೇಡ್ಕರ್ ಅವರೇ ನಮಗೆ ಆದರ್ಶ” ಎಂದರು.
ಗೋಷ್ಠಿಯಲ್ಲಿ ಜನ ಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ ಬಿ ಶಶಿಧರ್(ಟೂಡ) ಹಾಜರಿದ್ದರು.