ಶಿವಮೊಗ್ಗ ಪೊಲೀಸರು ಮತ್ತೊಮ್ಮೆ ಜೀವವೊಂದನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭದ್ರಾವತಿಯಲ್ಲಿ ನೇಣು ಬಿಗಿದುಕೊಳ್ಳುತ್ತಿದ್ದ ಯುವಕನನ್ನು 112 ಪೊಲೀಸರು ಕಾಪಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯಲ್ಲಿ, ಇ.ಆರ್.ಎಸ್.ಎಸ್-112 ತುರ್ತು ಸೇವೆ ಮತ್ತು ಪೊಲೀಸ್ ತಂಡ ಸಿಬ್ಬಂದಿ ಒಬ್ಬ ಯುವಕನ ಪ್ರಾಣ ಉಳಿಸಿದ್ದಾರೆ.

ಇಲ್ಲಿನ ನಿವಾಸಿ ಮಹಿಳೆಯೊಬ್ಬರು 112 ಪೊಲೀಸರಿಗೆ ಕರೆ ಮಾಡಿ, ತನ್ನ ಮಗ ಮನೆಯೊಳಗೆ ಬಾಗಿಲು ಹಾಕಿಕೊಂಡು ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ. ವಿಷಯ ತಿಳಿಯುತ್ತಲೇ ವಿನಯ್ ಕುಮಾರ್ (ಸಿಪಿಸಿ-1618), ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಂತೋಷ್ ಕುಮಾರ್ (ಎಪಿಸಿ-50) ತುರ್ತಾಗಿ ಸ್ಥಳಕ್ಕೆ ಬಂದಿದ್ದಾರೆ. ಅಲ್ಲದೆ ಮನೆಯ ಬಾಗಿಲನ್ನು ಓಪನ್ ಮಾಡಿ, ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಯುವಕನ ಹಿಂದೆ ಚಾಲಕ ವೃತ್ತಿ ಮಾಡುತ್ತಿದ್ದನಂತೆ, ಇದೀಗ ಕೆಲಸ ಇಲ್ಲದೇ ಇರುವುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಕುಡಿಯುವ ಚಟಕ್ಕೆ ಅಡಿಕ್ಟ್ ಆಗಿದ್ದ. ಈ ನಡುವೆ ಹಣಕ್ಕಾಗಿ ತಾಯಿಯ ಜೊತೆಗೆ ಜಗಳವಾಡಿ, ನೇಣು ಹಾಕಿಕೊಳ್ಳುವುದಕ್ಕೆ ಮುಂದಾಗಿದ್ದ. ತಾಯಿ ನೀಡಿದ ದೂರಿನಂತೆ ಸ್ಥಳಕ್ಕೆ ಬಂದ ಪೊಲೀಸರು ಯುವಕನಿಗೆ ಮಾನಸಿಕ ಸ್ಟೈರ್ಯ ತುಂಬಿ, ಆತನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
112 ಪೊಲೀಸರ ಈ ಕೆಲಸಕ್ಕೆ ಮಿಥುನ್ ಕುಮಾರ್ ಜಿ.ಕೆ. (ಐಪಿಎಸ್), ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು, ಪ್ರಶಂಸೆ ವ್ಯಕ್ತಪಡಿಸಿದ್ದಾರಷ್ಟೆ ಅಲ್ಲದೆ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
