ಕೀಳುಮಟ್ಟದ ಸಂಭಾಷಣೆ ಬರೆದು ಟೀಕೆಗೆ ಗುರಿಯಾಗಿದ್ದ ಮನೋಜ್ ಮುಂತಾಶಿರ್
ಆದಿಪುರುಷ್ ಸಿನಿಮಾ ಸೋತ ನಂತರ ಬೇಷರತ್ ಕ್ಷಮೆ ಯಾಚಿಸಿದ ಸಂಭಾಷಣೆಕಾರ
ಪ್ರಭಾಸ್ ನಟನೆಯ ʼಆದಿಪುರುಷ್ʼ ಸಿನಿಮಾ ಚಿತ್ರಮಂದಿರಗಳಲ್ಲಿ ಹೀನಾಯವಾಗಿ ಸೋತಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಈ ಚಿತ್ರವನ್ನು ನಿಷೇಧಿಸುವಂತೆ ಹಲವು ಬಲಪಂಥೀಯ ಸಂಘಟನೆಗಳು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದವು. ಈ ಚಿತ್ರಕ್ಕೆ ವಿವಾದಾತ್ಮಕ ಸಂಭಾಷಣೆ ಬರೆದಿದ್ದ ಚಿತ್ರ ಸಾಹಿತಿ ಮನೋಜ್ ಮುಂತಾಶಿರ್ ಮತ್ತು ನಿರ್ದೇಶಕ ಓಂ ರಾವತ್ಗೆ ಜೀವ ಬೆದರಿಕೆ ಕೂಡ ಎದುರಾಗಿತ್ತು. ಟೀಕೆಗಳು ಕೇಳಿಬಂದಾಗ ತಾವು ಬರೆದ ಸಂಭಾಷಣೆಗಳನ್ನು ಸಮರ್ಥಿಸಿಕೊಂಡಿದ್ದ ಅದೇ ಮನೋಜ್ ಮುಂತಾಶಿರ್ ಇದೀಗ ಪ್ರೇಕ್ಷಕರ ಬಳಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
“ಕಪಡಾ ತೇರೆ ಬಾಪ್ ಕಾ, ತೇಲ್ ತೇರೆ ಬಾಪ್ ಕಾ, ಜಲೇಗಿ ಭೀ ತೆರೆ ಬಾಪ್ ಕಿ” ಸೇರಿದಂತೆ ಆದಿಪುರುಷ್ ಚಿತ್ರದಲ್ಲಿ ಮನೋಜ್ ಮುಂತಾಶಿರ್ ಬರೆದ ಹಲವು ಸಂಭಾಷಣೆಗಳು ಟೀಕೆಗೆ ಗುರಿಯಾಗಿದ್ದವು. ಹನುಮಂತನ ಪಾತ್ರಕ್ಕೆ ಕೀಳು ಮಟ್ಟದ ಸಂಭಾಷಣೆಗಳನ್ನು ಬರೆದ ಮನೋಜ್ ಮುಂತಾಶಿರ್ನನ್ನು ಕೊಲೆ ಮಾಡುವುದಾಗಿ ಬಲ ಪಂಥೀಯ ಸಂಘಟನೆಯ ಮುಖಂಡರು ಬೆದರಿಕೆ ಹಾಕಿದ್ದರು. ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ವಿವಾದಕ್ಕೆ ಕಾರಣವಾಗಿದ್ದ ಸಂಭಾಷಣೆಗಳನ್ನು ಚಿತ್ರತಂಡ ಬದಲು ಮಾಡಿತ್ತು. ಆದರೆ, ಮನೋಜ್ ಮುಂತಾಶಿರ್ ಮಾತ್ರ ಕ್ಷಮೆ ಕೇಳಿರಲಿಲ್ಲ.
ಸದ್ಯ ʼಆದಿಪುರುಷ್ʼ ಸಿನಿಮಾ ಬಹುತೇಕ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿದೆ. ಇಡೀ ವಿವಾದ ತಣ್ಣಗಾದ ಬಳಿಕ ಮರೆಯಲ್ಲೇ ಕುಳಿತು ಟ್ವೀಟ್ ಮಾಡಿರುವ ಮನೋಜ್, “ಆದಿಪುರುಷ್ ಸಿನಿಮಾದಿಂದ ಜನರ ಭಾವನೆಗಳಿಗೆ ನೋವುಂಟಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಅದಕ್ಕಾಗಿ ಎರಡೂ ಕೈಗಳನ್ನು ಜೋಡಿಸಿ, ಜನರ ಬಳಿ ಬೇಷರತ್ ಕ್ಷಮೆ ಯಾಚಿಸುತ್ತೇನೆ. ಹನುಮಂತ ದೇವರು ನಮ್ಮೆನ್ನೆಲ್ಲ ಒಗ್ಗೂಡಿಸುವಂತಾಗಲಿ” ಎಂದಿದ್ದಾರೆ.
ʼಆದಿಪುರುಷ್ʼ ಸಿನಿಮಾ ಸೆಟ್ಟೇರಿದ ದಿನದಿಂದಲೂ ಇಡೀ ಚಿತ್ರತಂಡ ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಚಿತ್ರದ ಪ್ರಚಾರ ಮಾಡಿತ್ತು. ಅಂದಾಜು 700 ಕೋಟಿ ರೂಪಾಯಿ ಬಂಡವಾಳದಲ್ಲಿ ʼ3ಡಿʼ ಎಫೆಕ್ಟ್ನಲ್ಲಿ ರಾಮಾಯಣದ ಕಥೆ ತೆರೆಗೆ ಬರಲಿದೆ ಎಂದು ಬಿಂಬಿಸಲಾಗಿತ್ತು. ಅಬ್ಬರ ಮತ್ತು ಅತಿರೇಕದ ಪ್ರಚಾರವನ್ನು ನಂಬಿಕೊಂಡು ಭಾರೀ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರು ಚಿತ್ರವನ್ನು ನೋಡಿದ ಮರುಕ್ಷಣವೇ ನಿಷೇಧಿಸುವಂತೆ ಅಭಿಯಾನ ಶುರುವಿಟ್ಟುಕೊಂಡಿದ್ದರು.