ಜಮ್ಮು ಕಾಶ್ಮೀರದಲ್ಲಿ ಕಳೆದ ರಾತ್ರಿ ಶಾಂತಿ ನೆಲೆಸಿತ್ತು. ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿಗಳ ನಡುವೆ ಯಾವುದೇ ದಾಳಿ, ಪ್ರತಿದಾಳಿ ನಡೆದಿಲ್ಲ ಎಂದು ಭಾರತೀಯ ಸೇನೆ ಸೋಮವಾರ ಬೆಳಿಗ್ಗೆ ತಿಳಿಸಿದೆ.
ಸುಮಾರು 26 ಭಾರತೀಯರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಹೆಸರಲ್ಲಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಇದನ್ನು ಓದಿದ್ದೀರಾ? ಭಾರತ- ಪಾಕ್ ಸಂಘರ್ಷ ಉಲ್ಬಣ: ಶಮನಕ್ಕೆ ಅಮೆರಿಕ ಪ್ರಯತ್ನ
ಇದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿತ್ತು. ಆದರೆ ಪಾಕಿಸ್ತಾನ ಈ ಕದನ ವಿರಾಮವನ್ನು ಕೆಲವೇ ಗಂಟೆಗಳಲ್ಲಿ ಉಲ್ಲಂಘಿಸಿತ್ತು. ಈ ದಾಳಿಗೆ ಪ್ರತಿದಾಳಿ ನಡೆಸುವುದಾಗಿ ಭಾರತ ಎಚ್ಚರಿಕೆ ನೀಡಿದೆ. ಅದಾದ ಬಳಿಕ ದಾಳಿ ನಿಂತಿದೆ. ಭಾನುವಾರ ಕದನ ವಿರಾಮ ಉಲ್ಲಂಘನೆಯ ಯಾವುದೇ ಘಟನೆಗಳು ವರದಿಯಾಗಿಲ್ಲ.
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದಕ್ಕೆ ಬಂದ ಎರಡು ದಿನಗಳ ನಂತರ ಜಮ್ಮು ಕಾಶ್ಮೀರ ಮತ್ತು ಅಂತಾರಾರಾಷ್ಟ್ರೀಯ ಗಡಿಯಾದ್ಯಂತ ರಾತ್ರಿ ಬಹುತೇಕ ಶಾಂತಿ ನೆಲೆಸಿತ್ತು. ಇತ್ತೀಚಿನ ದಿನಗಳಲ್ಲಿ ಮೊದಲ ಶಾಂತಿಯುತ ರಾತ್ರಿ ಇದಾಗಿದೆ ಎಂದು ಸೇನೆಯು ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಮೇ 7ರಂದು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರದಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಇದರಲ್ಲಿ ಐವರು ಮೋಸ್ಟ್ ವಾಂಟೆಂಡ್ ಭಯೋತ್ಪಾದಕರೂ ಸೇರಿದ್ದರು.
