“ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಸುಶಿಕ್ಷಿತರಾಗಿಸಿ, ಭೇಟಿ ಬಚಾವ್ ಭೇಟಿ ಪಡಾವ್ ಎಂದು ಕಾನೂನು ಇದೆ ಅದನ್ನು ಪಾಲಿಸಿ” ಎಂದು ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕ ದಿನಕರ್ ಕರೆ ನೀಡಿದರು.
ಚಿತ್ರದುರ್ಗದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆ, ಧಮ್ಮ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ‘ಹದಿ ಹರೆಯದ ಬಾಲಕಿಯರ ಜಾಗೃತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು “ಹದಿಹರೆಯದ ಮಕ್ಕಳಿಗೆ ಯಾರಾದರೂ ಕಿರುಕುಳ, ದೌರ್ಜನ್ಯ, ಮತ್ತು ಬಾಲ್ಯ ವಿವಾಹ ಮಾಡಿದ್ದಾದರೆ ಸಂಬಂಧ ಪಟ್ಟವರೂ, ಅದಕ್ಕೆ ಸಹಾಯ ಮಾಡಿದವರೂ ಪ್ರಕರಣಕ್ಕೆ ಗುರಿಯಾಗುತ್ತಾರೆ. ಭೇಟಿ ಬಚಾವ್ ಭೇಟಿ ಪಡಾವ್, ಹೆಣ್ಣು ಮಕ್ಕಳನ್ನು ಉಳಿಸಿ ಹೆಣ್ಣು ಮಕ್ಕಳನ್ನು ಓದಿಸಿ ಎಂದು ಕಾನೂನಿದೆ, ಅದನ್ನು ಪಾಲಿಸಬೇಕು. ಹೆಣ್ಣುಮಕ್ಕಳು ಏನಾದರು ಸಮಸ್ಯೆ ಕಂಡು ಬಂದರೆ ಸಹಾಯವಾಣಿ ಸಂಖ್ಯೆ 1098, 112 ದೂರವಾಣಿಗಳಿಗೆ ಕರೆ ಮಾಡಿ” ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರದುರ್ಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಶೀಲಾ ಪಿ, “ಸಮಾಜದಲ್ಲಿ ಬಾಲ್ಯ ವಿವಾಹ ತಡೆಗಟ್ಟಬೇಕಿದೆ. ಎಲ್ಲಿಯಾದರೂ ಬಾಲ್ಯ ವಿವಾಹವಾಗುತ್ತಿದ್ದರೆ ತಡೆಯಬೇಕು. ಅಲ್ಲದೇ ಪೊಲೀಸ್ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಕೊಡಿ. ಮಕ್ಕಳಿಗೆ ಬಾಲ್ಯ ವಿವಾಹ ಮತ್ತು ಇತರೆ ಸಮಸ್ಯೆ ಇದ್ದಲ್ಲಿ ಸಂಬಂಧಪಟ್ಟ ಇಲಾಖೆಗೆ ದೂರು ಕೊಡಿ” ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿಯ ಪುಷ್ಪ ಎಸ್. ಡಿ. ಮಾತನಾಡಿ,”ಹದಿ ಹರೆಯದ ಮಕ್ಕಳು ಸಮಾಜಕ್ಕೆ ಮಾದರಿಯಾಗಿರಬೇಕು. ಯಾವುದೇ ಆಕರ್ಷಣೆಗೆ ಒಳಗಾಗದೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ” ಎಂದು ತಿಳಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಭಾರತ ಪಾಕಿಸ್ತಾನ ಮಧ್ಯೆ ಪ್ರಕ್ಷುಬ್ಧ ವಾತಾವರಣ, ವಾಣಿ ವಿಲಾಸ ಜಲಾಶಯಕ್ಕೆ ಪ್ರವೇಶ ನಿರ್ಬಂಧ.
ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ವಿಶ್ವ ಸಾಗರ್ ಮಕ್ಕಳ ಕಲ್ಯಾಣ ಸಮಿತಿಗೆ ಮನವಿ ಸಲ್ಲಿಸಿ,” ಸಾವಿರಾರು ಅಂಗವಿಕಲ ಮಕ್ಕಳ ಸಮಸ್ಯೆ ಬಗ್ಗೆ ಗಮನಹರಿಸಬೇಕು. ಪ್ರತಿಯೊಂದು ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಸಾನಿಟೇಸರ್, ಪ್ಯಾಡ್ ಇರಬೇಕು, ಹಳ್ಳಿಗಳಲ್ಲಿ ಹದಿಹರೆಯ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ನೆಡಸಬೇಕು” ಎಂದು ಮಕ್ಕಳ ಸಮಸ್ಯೆಗಳ ಕುರಿತು ಕೇಳಿಕೊಂಡರು.
ಇದನ್ನೂ ಓದಿ ; ಚಿತ್ರದುರ್ಗ | ಸಾಣೇಹಳ್ಳಿ ತರಳಬಾಳು ಮಠದಲ್ಲಿ ಬಸವಾದಿ ಶರಣರ ವಚನಗಳ ರಾಜ್ಯ ಮಟ್ಟದ ಸ್ಪರ್ಧೆ.
ಕಾರ್ಯಕ್ರಮದಲ್ಲಿ ವಿಮುಕ್ತಿ ಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ ಸಂಸ್ಥೆಯಲ್ಲಿ ಮಕ್ಕಳ ಮತ್ತು ಮಹಿಳೆಯರ ಬೆಳವಣಿಗೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಬಿಬಿಜಾನ್, ನಾಗರತ್ನ ಸೇರಿದಂತೆ ವಿಧ್ಯಾರ್ಥಿಗಳು, ಮಕ್ಕಳು ಪಾಲ್ಗೊಂಡಿದ್ದರು.