ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
“ನಾನು ಟೆಸ್ಟ್ ಕ್ರಿಕೆಟ್ ಸಮವಸ್ತ್ರ ತೊಟ್ಟು ಆಡಿ 14 ವರ್ಷಗಳಾಗಿವೆ. ನಿಜವಾಗಿ ಹೇಳಬೇಕಾದರೆ ನಾನು ಇಷ್ಟು ದೂರ ಸಾಗುವೆ ಎಂದು ಊಹಿಸಿರಲಿಲ್ಲ. ಈ ದಾರಿಯು ನನ್ನನ್ನು ಪರೀಕ್ಷಿಸಿದೆ, ನನ್ನನ್ನು ರೂಪಿಸಿದೆ ಮತ್ತು ನಾನು ಜೀವನಪರ್ಯಂತವಾಗಿ ನೆನಪಿಟ್ಟುಕೊಳ್ಳಬಹುದಾದ ಪಾಠವನ್ನು ಕಲಿಸಿದೆ” ಎಂದು ಕೊಹ್ಲಿ ತನ್ನ ಇನ್‌ಸ್ಟಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇದನ್ನು ಓದಿದ್ದೀರಾ? ಪಿಂಕ್ ಬಾಲ್ ಟೆಸ್ಟ್: ಸ್ಟಾರ್ಕ್ ಮಾರಕ ಬೌಲಿಂಗ್, ಭಾರತ 180ಕ್ಕೆ ಆಲೌಟ್
“ಬಿಳಿಯ ಉಡುಪು ಧರಿಸಿ ಆಡುವುದರಲ್ಲಿ ಆಳವಾದ ವೈಯಕ್ತಿಕ ಭಾವನೆಯಿದೆ. ಶಾಂತಿಯಿಂದ ಕೂಡಿದ ಜಂಜಾಟ, ದೀರ್ಘ ದಿನಗಳು, ಯಾರೂ ಕಾಣದ ಸಣ್ಣ ಸಣ್ಣ ಕ್ಷಣಗಳು. ಆದರೆ ಅವೆಲ್ಲವೂ ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ” ಎಂದು ವಿರಾಟ್ ಕೊಹ್ಲಿ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.
“ನಾನು ಈಗ ಈ ಸ್ವರೂಪದ ಆಟದಿಂದ ದೂರ ಸರಿಯುತ್ತಿದ್ದೇನೆ. ಆದರೆ ಅದು ಅಷ್ಟು ಸುಲಭವಲ್ಲ. ಆದರೆ ಆ ನಿರ್ಧಾರ ಸರಿ ಎಂದು ಅನಿಸುತ್ತದೆ. ನಾನು ನನ್ನಿಂದ ಸಾಧ್ಯವಾದ ಎಲ್ಲವನ್ನೂ ನೀಡಿದ್ದೇನೆ ಮತ್ತು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಅದು (ಟೆಸ್ಟ್ ಕ್ರಿಕೆಟ್) ನನಗೆ ಹಿಂದಿರುಗುರಿಸಿದೆ” ಎಂದಿದ್ದಾರೆ.
“ಈ ಆಟಕ್ಕೆ, ನಾನು ಆಡಲು ಮೈದಾದಕ್ಕೆ ಇಳಿದಾಗ ನನ್ನೊಂದಿಗೆ ಇದ್ದವರಿಗೆ, ಪ್ರತಿಯೊಬ್ಬರಿಗೆ ನಾನು ತುಂಬಿದ ಹೃದಯದಿಮದ ಕೃತಜ್ಞತೆ ತಿಳಿಸಿ ವಿದಾಯ ಹೇಳುತ್ತೇನೆ. ನಾನು ಟೆಸ್ಟ್ ಕ್ರಿಕೆಟ್ ಆಡಿದ ಕ್ಷಣಗಳನ್ನು ನಾನು ಮುಂದೆಯೂ ಹಿಂದಿರುಗಿ ನೋಡುತ್ತೇನೆ, ನಗು ಮುಖದೊಂದಿಗೆ ಮೆಲುಕು ಹಾಕುತ್ತೇನೆ” ಎಂದಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ನಿವೃತ್ತಿ ಪಡೆಯುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಇಂದು ವಿರಾಟ್ ಕೊಹ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
