ಯುದ್ಧ ಬಾಲಿವುಡ್ ಸಿನಿಮಾವಲ್ಲ, ಅದು ‘ರೋಮ್ಯಾಂಟಿಕ್’ ಅಲ್ಲ ಎಂದು ಭಾರತೀಯ ಸೇನಾ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಸದ್ಯ ಕದನ ವಿರಾಮ ಘೋಷಿಸಲಾಗಿದೆ. ಈ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ನರವಾಣೆ ಟೀಕಿಸಿದ್ದಾರೆ.
ಭಾನುವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನರವಾಣೆ, “ಯುದ್ಧ ಬಾಲಿವುಡ್ ಸಿನಿಮಾವಲ್ಲ. ಆದರೆ ಯುದ್ಧದ ಆದೇಶ ಬಂದರೆ ಯುದ್ಧಕ್ಕೆ ತೆರಳುತ್ತೇನೆ. ಆದರೆ ರಾಜತಾಂತ್ರಿಕತೆ ನನ್ನ ಮೊದಲ ಆಯ್ಕೆ” ಎಂದು ಹೇಳಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರವಾಣೆ ಈ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ | ಸಿಎಂ ಸಿದ್ದರಾಮಯ್ಯ ಸೇರಿ ರಾಜಕೀಯ ನಾಯಕರಿಂದ ದಾಳಿ ಕುರಿತು ಪ್ರಶಂಸೆ
“ಶೆಲ್ ದಾಳಿಯನ್ನು ನೋಡಿದ. ರಾತ್ರಿ ವೇಳೆ ಆಶ್ರಯ ತಾಣಗಳಿಗೆ ಓಡಬೇಕಾದ ಮಕ್ಕಳು ಸೇರಿದಂತೆ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಯುದ್ಧದ ಬಗ್ಗೆ ಆಘಾತವಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ, ಆ ಆಘಾತವು ತಲೆಮಾರುಗಳವರೆಗೆ ಇರುತ್ತದೆ” ಎಂದರು.
“ಪಿಟಿಎಸ್‌ಡಿ (ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ಎಂದೂ ಇದೆ. ಭಯಾನಕ ದೃಶ್ಯಗಳನ್ನು ನೋಡಿದ ಜನರು 20 ವರ್ಷಗಳ ನಂತರವೂ ನಿದ್ದೆಯಿಂದ ಬೆವತು ಭಯದಿಂದ ಎಚ್ಚರಗೊಳ್ಳುತ್ತಾರೆ. ಅವರಿಗೆ ಎಷ್ಟು ವರ್ಷ ಕಳೆದರೂ ಮನೋವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ” ಎಂದು ಯುದ್ಧದ ಮಾನಸಿಕ ಆಘಾತಗಳ ಬಗ್ಗೆ ವಿವರಿಸಿದರು.
ಯುದ್ಧ ‘ರೋಮ್ಯಾಂಟಿಕ್’ ಅಲ್ಲ
“ಯುದ್ಧವು ರೋಮ್ಯಾಂಟಿಕ್ ಅಲ್ಲ. ಇದು ನಿಮ್ಮ ಬಾಲಿವುಡ್ ಸಿನಿಮಾ ಅಲ್ಲ. ಇದು ತುಂಬಾ ಗಂಭೀರವಾದುದ್ದು. ಯುದ್ಧ ಅಥವಾ ಹಿಂಸೆ ಎಂದಿಗೂ ನಮ್ಮ ಕೊನೆಯ ಆಯ್ಕೆಯಾಗಿರಬೇಕು. ಅದೇ ಮೊದಲಾಗಬಾರದು. ಅದಕ್ಕಾಗಿಯೇ ನಮ್ಮ ಪ್ರಧಾನಿ ಇದು ಯುದ್ಧದ ಯುಗವಲ್ಲ ಎಂದು ಹೇಳಿದರು. ಅವಿವೇಕದ ಜನರು ಯುದ್ಧವನ್ನು ನಮ್ಮ ಮೇಲೆ ಯುದ್ಧದ ಒತ್ತಡ ಹೇರುತ್ತಾರೆ. ಆದರೆ ಯುದ್ಧಕ್ಕೆ ಹುರಿದುಂಬಿಸಬಾರದು” ಎಂದರು.
STORY | War is not romantic, Bollywood movie, says ex-Army chief Naravane
— Press Trust of India (@PTI_News) May 12, 2025
READ: https://t.co/1iXHjoaYTQ
VIDEO: Speaking at an event in Pune, Former Indian Army Chief General Manoj Naravane (@ManojNaravane) said, "War or violence should be the last thing we should resort to,… pic.twitter.com/9UgyMyIyQp
“ಈಗಲೂ ನಾವು ಯಾಕೆ ಯುದ್ಧ ಘೋಷಿಸಿಲ್ಲ ಎಂದು ಜನರು ಕೇಳುತ್ತಿದ್ದಾರೆ. ಒಬ್ಬ ಮಿಲಿಟರಿ ವ್ಯಕ್ತಿಯಾಗಿ, ಯುದ್ಧದ ಆದೇಶ ಬಂದರೆ ನಾನು ಯುದ್ಧಕ್ಕೆ ಹೋಗುತ್ತೇನೆ. ಆದರೆ ಅದು ನನ್ನ ಮೊದಲ ಆಯ್ಕೆಯಾಗಿರುವುದಿಲ್ಲ. ನನ್ನ ಮೊದಲ ಆಯ್ಕೆ ರಾಜತಾಂತ್ರಿಕತೆ. ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ಪರಿಹರಿಸುವುದು ಆಗಿರುತ್ತದೆ” ಮಾಜಿ ಭಾರತೀಯ ಸೇನಾ ಮುಖ್ಯಸ್ಥ ಹೇಳಿದರು.
“ರಾಷ್ಟ್ರೀಯ ಭದ್ರತೆಯಲ್ಲಿ ನಾವೆಲ್ಲರೂ ಸಮಾನ ಪಾಲುದಾರರು. ದೇಶಗಳ ನಡುವೆ ಮಾತ್ರವಲ್ಲದೆ ನಮ್ಮ ನಡುವೆಯೂ, ಕುಟುಂಬಗಳಲ್ಲಿ ಅಥವಾ ರಾಜ್ಯಗಳು, ಪ್ರದೇಶಗಳು ಮತ್ತು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ನಾವು ಪ್ರಯತ್ನಿಸಬೇಕು. ಯಾವುದಕ್ಕೂ ಹಿಂಸಾಚಾರ ಉತ್ತರವಲ್ಲ” ಎಂದರು.
ಸುಮಾರು 26 ಭಾರತೀಯರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಹೆಸರಲ್ಲಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಸದ್ಯ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ. ಸದ್ಯ ದಾಳಿ ಪ್ರತಿದಾಳಿಗಳು ನಿಂತಿದೆ.
