ಮತ್ತೊಮ್ಮೆ ಮುನ್ನೆಲೆಗೆ ಬಂದ ಮುಜರಾಯಿ ತಿದ್ದುಪಡಿ ವಿಧೇಯಕ, ಪೇಜಾವರ ಶ್ರೀಗಳ ಹೇಳಿಕೆ ವಿರುದ್ಧ ಆಕ್ರೋಶ

Date:

Advertisements
ವಿಧಾನಸಭೆಯಲ್ಲಿ ಅಂಗೀಕರಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ರಾಜಕೀಯ ಕಾರಣಗಳಿಗಾಗಿ ತಪ್ಪಾಗಿ ಜನತೆಯ ಮುಂದಿರಿಸುವ ಪ್ರಯತ್ನ ನಡೆದಿದೆ. 'ಮುಜರಾಯಿ ದೇವಸ್ಥಾನಗಳನ್ನು ಸರ್ಕಾರದಿಂದ ಮುಕ್ತ ಮಾಡಿ, ದೇವಾಲಯಗಳನ್ನು ಖಾಸಗೀಕರಣಗೊಳಿಸಬೇಕು' ಎಂದಿರುವ ಪೇಜಾವರ ಶ್ರೀಗಳ ವಿರುದ್ಧ ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಸಿಡಿದೆದ್ದಿದೆ.

ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಿಂದ ಅಂಗೀಕಾರಗೊಂಡ ಮುಜರಾಯಿ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಕೂಡಲೇ ಅಂಕಿತ ಹಾಕಿ ಅನುಷ್ಠಾನಗೊಳಿಸಬೇಕು ಎಂಬ ಆಗ್ರಹ ಒಂದು ಕಡೆ ಕೇಳಿಬಂದಿದ್ದರೆ, ಇನ್ನೊಂದು ಕಡೆ ‘ಮುಜರಾಯಿ ದೇವಸ್ಥಾನಗಳನ್ನು ಸರ್ಕಾರದಿಂದ ಮುಕ್ತ ಮಾಡಿ, ದೇವಾಲಯಗಳನ್ನು ಖಾಸಗೀಕರಣಗೊಳಿಸಬೇಕು’ ಎಂದಿರುವ ಪೇಜಾವರ ಶ್ರೀಗಳ ವಿರುದ್ಧ ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಸಿಡಿದೆದ್ದಿದೆ.

ಪೇಜಾವರ ಸ್ವಾಮೀಜಿ ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಅಧ್ಯಕ್ಷ ಕೆ.ಇ.ರಾಧಾಕೃಷ್ಣ ಅವರು, “ಸ್ವಾಮೀಜಿ ಅವರ ಹೇಳಿಕೆ ಅಜ್ಞಾನದಿಂದ ಕೂಡಿದೆ. ಉದ್ದೇಶಪೂರ್ವಕವಾಗಿ ಹೇಳುತ್ತಿದ್ದಾರೆ. ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣ ಮಾಡಬಾರದು” ಎಂದಿದ್ದಾರೆ.

“ಪೇಜಾವರ ಶ್ರೀಗೆ ರಾಜ್ಯದಲ್ಲಿರುವ 36 ಸಾವಿರ ಸಿ ದರ್ಜೆಯ ದೇವಾಲಯಗಳ ಸಂಪನ್ಮೂಲಗಳ ಬಗ್ಗೆ ಗೊತ್ತಿದೆಯೇ? ಆವೇಶದಲ್ಲಿ ಏನೋ ಮಾತನಾಡಲು ಹೋಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ವೈಯಕ್ತಿಕವಾಗಿ ಅವರ ಬಳಿ ಈ ಬಗ್ಗೆ ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ಮುಜರಾಯಿ ದೇವಾಲಯಗಳನ್ನು ಖಾಸಗೀಕರಣಗೊಳಿಸುವ ಮಾತೇ ಇಲ್ಲ. ರಾಜ ಮಹಾರಾಜರ ಕಾಲದಿಂದ, ಶತಮಾನಗಳಿಂದ ದೇವಾಲಯಗಳು ಸರಕಾರದ ಸುಪರ್ದಿಗೆ, ವ್ಯವಸ್ಥೆಗೆ ಸಂಬಂಧಪಟ್ಟಿರುವುದಾಗಿದೆ. ಹೀಗಾಗಿ ಪೇಜಾವರ ಶ್ರೀಗಳು ಈ ರೀತಿಯಾಗಿ ಹೇಳುವುದು ಸರಿಯಲ್ಲ. ಅದು ಅವರಿಗೆ ಖಂಡಿತವಾಗಿ ಮುಂದೆ ಅರಿವಾಗುತ್ತದೆ” ಎಂದು ಕಿಡಿಕಾರಿದ್ದಾರೆ.

Advertisements

ಕರ್ನಾಟಕದಲ್ಲಿ 12 ವರ್ಷಗಳ ನಂತರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ವಿಧೇಯಕದಲ್ಲಿ ತಿದ್ದುಪಡಿ ಮಾಡಲಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲರು ಈಗಾಗಲೇ ತಿರಸ್ಕರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿ, ”’ಎ’ ಮತ್ತು’ಬಿ’ ವರ್ಗದ ದೇವಸ್ಥಾನಗಳ ಹೆಚ್ಚುವರಿ ಆದಾಯದಿಂದ ಅನುಪಾತಿಕವಾಗಿ ಗ್ರಾಮೀಣ ಪ್ರದೇಶದ’ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ ಕಾನೂನನ್ನು ಸರ್ಕಾರ ತಿದ್ದುಪಡಿಗೊಳಿಸಿದೆ. ಆದರೆ ರಾಜ್ಯಪಾಲರ ಅಂಕಿತಕ್ಕಾಗಿ ಈ ತಿದ್ದುಪಡಿ ಕಾನೂನು ಕಳೆದ 10 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕೂಡಲೇ ರಾಜ್ಯಪಾಲರು ಅಂಕಿತ ಹಾಕಿ ಅನುಷ್ಠಾನಗೊಳಿಸಬೇಕು” ಎಂದು ಒಕ್ಕೂಟದ ಅಧ್ಯಕ್ಷ ಪ್ರೊ.ಕೆ.ಈ. ರಾಧಾಕೃಷ್ಣ ಆಗ್ರಹಿಸಿದ್ದಾರೆ.

ರಾಧಾ
ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಅಧ್ಯಕ್ಷ ಕೆ.ಇ.ರಾಧಾಕೃಷ್ಣ (ಮಧ್ಯ)

“ಉಭಯ ಸದನಗಳಲ್ಲಿ ಎಲ್ಲ ಪಕ್ಷಗಳು ಸರ್ವಾನುಮತದಿಂದ ಈ ಬಿಲ್‌ನ್ನು ಸ್ವಾಗತಿಸಿದ್ದು, ನೂತನ ತಿದ್ದುಪಡಿಯಾದ ಕಾಯ್ದೆಗೆ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಸರ್ಕಾರ ಕಳುಹಿಸಿದೆ. ಆದರೆ ರಾಜ್ಯಪಾಲರು ರಾಜಕೀಯ ರಹಿತವಾದ ಈ ಕಾಯ್ದೆಯನ್ನು ವಿನಾಕಾರಣ ಅನುಮೋದನೆ ನೀಡದೆ ತಮ್ಮಲ್ಲೇ ಇರಿಸಿಕೊಂಡಿದ್ದಾರೆ. ಈ ಬಗ್ಗೆ ಒಕ್ಕೂಟದ ನೇತೃತ್ವದಲ್ಲಿ ನಿಯೋಗವನ್ನು ಕೊಂಡೊಯ್ದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಕೂಡಲೇ ರಾಜ್ಯಪಾಲರು ಅಂಕಿತವನ್ನು ಹಾಕಿ ಕಾಯ್ದೆಯ ಅನುಷ್ಠಾನಕ್ಕೆ ಅನುವು ಮಾಡಿಕೊಡಬೇಕು” ಎಂದು ಪ್ರೊ.ರಾಧಾಕೃಷ್ಣ ಒತ್ತಾಯಿಸಿದ್ದಾರೆ.

“ಎ ಮತ್ತು ಬಿ ದರ್ಜೆ ದೇವಾಲಯಗಳಲ್ಲಿ ಪೂಜೆ ಮಾಡುವ ಅರ್ಚಕರಿಗೆ ಹೆಚ್ಚಿನ ಸಮಸ್ಯೆಗಳಿಲ್ಲ. ಆದರೆ ಸಿ ದರ್ಜೆ ದೇವಾಲಯಗಳಲ್ಲಿ ಸರಿಯಾಗಿ ಎರಡು ಹೊತ್ತು ಪೂಜೆ ಮಾಡುವುದಕ್ಕೂ ಅರ್ಚಕರಿಗೆ ಕಷ್ಟವಿದೆ. ಆದ್ದರಿಂದ ಇದೀಗ ತಿದ್ದುಪಡಿಯಾಗಿರುವ ಕಾಯ್ದೆಯಿಂದ ಎ ಮತ್ತು ಬಿ ದರ್ಜೆಯ ದೇವಾಲಯಗಳ ಎಲ್ಲ ಖರ್ಚು–ವೆಚ್ಚಗಳನ್ನು ಪೂರೈಸಿ ಉಳಿದ ಹಣದ ಶೇ.10ನ್ನು ಸಿ ದರ್ಜೆ ದೇವಾಲಯಗಳ ಅಭಿವೃದ್ಧಿಗೆ ಬಳಸಲು ಅವಕಾಶವಿದೆ” ಎಂದು ವಿವರಿಸಿದ್ದಾರೆ.

ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಅಧ್ಯಕ್ಷ ಕೆ.ಇ.ರಾಧಾಕೃಷ್ಣ ಅವರು ಈ ದಿನ.ಕಾಮ್‌ ಜೊತೆ ಮಾತನಾಡಿ, “ಮುಜರಾಯಿ ದೇವಸ್ಥಾನಗಳನ್ನು ಸರ್ಕಾರದಿಂದ ಮುಕ್ತ ಮಾಡಿ, ದೇವಾಲಯಗಳನ್ನು ಖಾಸಗೀಕರಣಗೊಳಿಸಬೇಕು ಎನ್ನುವ ನಿರ್ಧಾರಕ್ಕೆ ನಮ್ಮ ವಿರೋಧವಿದೆ. ಪೇಜಾವರ ಶ್ರೀಗಳ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಸುದ್ದಿಗೋಷ್ಠಿ ಮಾಡಿ ನಮ್ಮ ನಿಲುವು ತಿಳಿಸಿದ್ದೇವೆ. ಯಾವುದೇ ಸರ್ಕಾರ ಬರಲಿ ದೇವಸ್ಥಾನಗಳ ಖಾಸಗೀಕರಣ ಸಾಧ್ಯವೇ ಇಲ್ಲ” ಎಂದು ಹೇಳಿದರು.

ಮುಜರಾಯಿ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದಂತೆ ಅನುದಾನ ಬಳಕೆ, ದೇಗುಲಗಳ ಆದಾಯದ ಬಳಕೆ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ರಾಜಕೀಯವಾಗಿ ನಡೆದಿವೆ. ಹಿಂದೂ ದೇಗುಲಗಳ ಆದಾಯವನ್ನು ಇತರೆ ಧರ್ಮಗಳಿಗೆ ಬಳಸುವ ಹುನ್ನಾರ ಅಡಗಿದೆ ಎನ್ನುವುದು ಬಿಜೆಪಿ ಮತ್ತು ಜೆಡಿಎಸ್ ಟೀಕಿಸಿವೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರೂ ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ಮೊದಲು ಕಾಯಿದೆ ರೂಪ ನೀಡಿದ್ದು 1997ರಲ್ಲಿ. ಆನಂತರ 2003ರಲ್ಲಿ ತಿದ್ದುಪಡಿಯೊಂದಿಗೆ ಬಳಸಲಾಯಿತು. ಇದಾದ ನಂತರ 2012ರಲ್ಲಿ ಮತ್ತೊಮ್ಮೆ ತಿದ್ದುಪಡಿ ಮಾಡಲಾಗಿತ್ತು. ಇದಾದ ಬಳಿಕ ಸಿದ್ದರಾಮಯ್ಯ ಸರ್ಕಾರ ಕಾಯಿದೆಗೆ ನಾಲ್ಕನೇ ಬಾರಿಗೆ ತಿದ್ದುಪಡಿ ತಂದಿದೆ.

ತಿದ್ದುಪಡಿಯಲ್ಲಿ ಏನಿದೆ

1997ರಲ್ಲಿ ಕಾಯಿದೆಯನ್ನು ಜಾರಿಗೊಳಿಸಿದಾಗಿನಿಂದಲೂ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಸೃಜಿಸಬೇಕು ಎನ್ನುವ ನಿಬಂಧನೆ ಕಾಯಿದೆಯಲ್ಲಿಯೇ ಅಡಕವಾಗಿದೆ. ಆದರೆ ಅದು ಜಾರಿಯಾಗರಲಿಲ್ಲ. ಆನಂತರ 2003ರಲ್ಲಿ ಕಾಯಿದೆಯು ಜಾರಿಗೆ ಬಂದಾಗಿನಿಂದ ಧಾರ್ಮಿಕ ಕಾರ್ಯಗಳಿಗೆ ಮಾತ್ರವೇ ಬಳಕೆಯಾಗುತ್ತಿದೆ. ಅಲ್ಲಿಂದ ಈವರೆಗೂ ಎ ದರ್ಜೆ ದೇವಸ್ಥಾನಗಳ ಆದಾಯದಲ್ಲಿ ಸಾಮಾನ್ಯ ಸಂಗ್ರಹಣಾ ನಿಧಿಯಾಗಿ ಶೇ. 5ರಷ್ಟನ್ನು ಬಳಕೆ ಮಾಡಲಾಗುತ್ತಿತ್ತು. ಹೊಸ ತಿದ್ದುಪಡಿ ಪ್ರಕಾರ ಈ ಪ್ರಮಾಣ ಶೇ.10ಕ್ಕೆ ಏರಿಕೆಯಾಗಲಿದೆ. ಉದಾಹರಣೆಗೆ ಒಂದು ಕೋಟಿ ರೂ. ವಾರ್ಷಿಕ ಆದಾಯ ಬಂದರೆ ಅದರಲ್ಲಿ 10 ಲಕ್ಷ ರೂ. ಸಾಮಾನ್ಯ ಸಂಗ್ರಹಣಾ ನಿಧಿಗೆ ಹೋಗಲಿದೆ. ನೂತನ ತಿದ್ದುಪಡಿಯನ್ನು ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ ಮಾಡಲಾಗಿದೆ ಎಂದು ಅಧಿಕೃತ ಕರ್ನಾಟಕ ರಾಜ್ಯ ಪತ್ರದಲ್ಲಿ ತಿಳಿಸಲಾಗಿದೆ.

ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟಂತೆ ಮಾತ್ರವೇ ಬಳಸಲಾಗುತ್ತದೆ. ಬೇರೆ ಯಾವುದೇ ಧರ್ಮದ ಜನರ ಅನುಕೂಲಕ್ಕಾಗಿ ಈ ಹಣವನ್ನು ಬಳಸಲಾಗುವುದಿಲ್ಲ. ದೇವಸ್ಥಾನಗಳ ಹಣವನ್ನು ಕೇವಲ ಹಿಂದೂ ಸಮುದಾಯದ ಏಳಿಗೆ ಮತ್ತು ಕಲ್ಯಾಣಕ್ಕೆ ಮಾತ್ರವೇ ಬಳಸಬೇಕೆನ್ನುವ ಬಾಧ್ಯತೆಯನ್ನು ಈ ನಿಧಿಯ ನಿಬಂಧನೆಗಳಲ್ಲಿ ಒತ್ತಿ ಹೇಳಲಾಗಿದೆ.

ಸಮಿತಿಗಳ ರಚನೆ

ಇನ್ನು ದೇಗುಲಗಳ ವ್ಯವಸ್ಥಾಪಕ ಸಮಿತಿಗಳಲ್ಲಿ ಹಿಂದೂಗಳನ್ನೇ ಸದಸ್ಯರಾಗಿ ನೇಮಿಸುವ ಹಿಂದಿನಂತೆಯೇ ಇರಲಿದೆ. ಆದರೆ ಸಂಯೋಜಿತ ದೇಗುಲಗಳಾದರೆ ಅಲ್ಲಿನ ಇತರೆ ಧರ್ಮದವರಿಗೂ ಮಾನ್ಯತೆ ಸಿಗಲಿದೆ. ಉದಾಹರಣೆಗೆ ಚಿಕ್ಕಮಗಳೂರು ಜಿಲ್ಲೆಯ ದತ್ತಾತ್ರೇಯ ಬಾಬಾ ಬುಡನ್‌ಗಿರಿ ಹಾಗೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಕಟ್ಟೆಯಂತಹ ಸಂಯೋಜಿತ ದೇಗುಲಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಪ್ರತಿನಿಧಿಗಳು ವ್ಯವಸ್ಥಾಪನಾ ಸಮಿತಿಯಲ್ಲಿ ಇರಲಿದ್ದಾರೆ.

ಇನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳು ಮೊದಲಿನಂತೆಯೇ ಇರಲಿದ್ದು, ಇದಕ್ಕೆ ರಾಜ್ಯ ಮಟ್ಟದಲ್ಲಿ ಮುಜರಾಯಿ ಸಚಿವರು, ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ಇರಲಿದೆ. ವಾಸ್ತುಶಿಲ್ಪ ಸಮಿತಿಯೂ ದೇವಸ್ಥಾನಗಳಲ್ಲಿ ರಚನೆಯಾಗಿ, ದೇಗುಲಗಳ ವಾಸ್ತುಶಿಲ್ಪದ ಪುನರುತ್ಥಾನದ ಕುರಿತು ಸಲಹೆ, ಮಾರ್ಗದರ್ಶನ ನೀಡಲಿದೆ.

ಒಟ್ಟಾರೆಯಾಗಿ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ರಾಜಕೀಯ ಕಾರಣಗಳಿಗಾಗಿ ತಪ್ಪಾಗಿ ಜನತೆಯ ಮುಂದಿರಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂಬುದು ಕಾಂಗ್ರೆಸ್‌ ನಾಯಕರ ಆರೋಪ. ಹಿಂದೂಯೇತರ ಸಮುದಾಯಗಳಿಗೆ ಹಿಂದೂ ದೇವಸ್ಥಾನಗಳ ಹಣವನ್ನು ಬಳಸಲಾಗುತ್ತದೆ ಮತ್ತು ಹಿಂದೂ ದೇವಸ್ಥಾನಗಳ ಮೇಲೆ ಅನ್ಯಾಯಯುತ ತೆರಿಗೆ ಹಾಕಲಾಗುತ್ತಿದೆ ಎನ್ನುವ ಬಿಜೆಪಿ ನಾಯಕರ ಆರೋಪ ಸಂಪೂರ್ಣ ಕಪೋಲಕಲ್ಪಿತ. ಹಿಂದೂಗಳನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ದುರುದ್ದೇಶದಿಂದ ಬಿಜೆಪಿ ನಾಯಕರು ಇಂತಹ ಕ್ಷುಲಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರ ವಾದವಾಗಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X