ರಾಯಭಾರ | ಪಹಲ್ಗಾಮ್‌ ಭಯೋತ್ಪಾದನಾ ದಾಳಿಯಿಂದ ಪಾಕ್ ಜೊತೆಗಿನ ಕದನ ವಿರಾಮದವರೆಗೆ, ಭಾರತ ಸಾಧಿಸಿದ್ದು ಏನು?

Date:

Advertisements

ಹೊರ ಜಗತ್ತಿನ ವಿಷಯವಿರಲಿ, ಬಿಜೆಪಿಯ ಕಟ್ಟರ್‌ ಬೆಂಬಲಿಗರು, ಬಲಪಂಥೀಯ ಹಿಂದುತ್ವದ ಉಗ್ರ ಆರಾಧಕರು, ಸಮರೋತ್ಸಾಹಿಗಳಾರಿಗೂ ಭಾರತ ಅಷ್ಟು ಸಲೀಸಾಗಿ ಕದನ ವಿರಾಮ/ಸಂಘರ್ಷ ಶಮನಕ್ಕೆ ಮುಂದಾದದ್ದು ಅಂತರಂಗದಲ್ಲಿ ಸುತಾರಾಂ ಹಿಡಿಸಿಲ್ಲ. ಇಸ್ರೇ‌ಲ್‌ನ ಆಕ್ರಮಣಶೀಲತೆ, ಮೊಸ್ಸಾದ್‌‌ನ ತಂತ್ರಗಾರಿಕೆಯನ್ನ ಸದಾಕಾಲ ಕೊಂಡಾಡುವ ಈ ಮಂದಿಗೆ,  ಪಾಕಿಸ್ತಾನವನ್ನು ಭೂಪಟದಿಂದ ನಾಮವಶೇಷ ಮಾಡುತ್ತೇವೆ, ತುಂಡು ತುಂಡಾಗಿ ಕತ್ತರಿಸುತ್ತೇವೆ ಎನ್ನುತ್ತಿದ್ದ ತಮ್ಮ ಉಗ್ರ ಪ್ರತಾಪಿ ಬಿಜೆಪಿ ನಾಯಕರು ಹೀಗೇಕೆ ಮಾಡಿದರು ಎನ್ನುವ ಬೇಸರ ನೀಗುತ್ತಿಲ್ಲ.

ಸ್ವಸ್ಥ ಆಲೋಚನೆ ಎನ್ನುವುದೇ ನಾಶವಾಗಿ ಆತ್ಮರತಿ, ಸೈದ್ಧಾಂತಿಕ ವಿಜೃಂಭಣೆಗಳೇ ತುಂಬಿಹೋಗಿರುವ ಕಾಲಮಾನವಿದು. ಆಲೋಚನಾಪರತೆ, ಆತ್ಮಾವಲೋಕನಕ್ಕೆ ಅಗತ್ಯವಾದ ಸಂಯಮವೇ ವಿನಾಶವಾಗಿರುವ ಸಮಯವಿದು. ಹೀಗಾಗಿ, ಸಂಕಥನಗಳ ವಿಜೃಂಭಣೆಯ ತೇರಿನ ನಡುವೆ ಕಣ್ಣಿಗೆ ಕಾಣುವ ವಾಸ್ತವನ್ನು ವಿವರಿಸುವುದು ಸಹ ಕಷ್ಟಸಾಧ್ಯವಾಗಿದೆ.

ಪಹಲ್ಗಾಮ್‌ ಭಯೋತ್ಪಾದಕ ಕೃತ್ಯದ ನಂತರ ಉದ್ಭವಿಸಿದ ಪರಿಸ್ಥಿತಿಯಿಂದ ಹಿಡಿದು ಭಾರತ-ಪಾಕ್‌ ಗಡಿಯಲ್ಲಿನ ಉದ್ವಿಗ್ನ ಶಮನವಾಗುವವರೆಗಿನ ಕಳೆದ 20 ದಿನಗಳ ಬೆಳವಣಿಗೆಗಳನ್ನು ಗಮನಿಸಿದರೆ ಕೆಲವೊಂದು ಸಮಾಧಾನಗಳನ್ನು ಹೊರತಪಡಿಸಿದರೆ ಭಾರತದ ಮಟ್ಟಿಗೆ ಯಾವುದೇ ನಿರ್ದಿಷ್ಟ ಉದ್ದೇಶ ಸಾಧನೆಯಾದಂತೆ ಕಾಣುತ್ತಿಲ್ಲ.

Advertisements

ಪಹಲ್ಗಾಮ್‌ಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿರುವ ಭಾರತದ ವಿರೋಧಿ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡಿರುವುದು, ಪಾಕಿಸ್ತಾನದ ಕೆಲ ಮಿಲಿಟರಿ ನೆಲೆಗಳು, ವೈಮಾನಿಕ ಕಾರ್ಯಾಚರಣಾ ನೆಲೆಗಳು, ಏರ್‌ಸ್ಟ್ರಿಪ್‌ಗಳನ್ನು ಧ್ವಂಸಗೊಳಿಸಿರುವುದು ನಮ್ಮ ಮುಂದಿರುವ ಲೆಕ್ಕ. ಉಳಿದಂತೆ ಇದಾಗಲೇ ಸಿಂಧೂನದಿ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಪಾಕಿಸ್ತಾನ ಭವಿಷ್ಯದಲ್ಲಿ ಜಲಕ್ಷಾಮ ಎದುರಿಸಬೇಕಾದ ಪರಿಸ್ಥಿತಿ ಉಂಟುಮಾಡಲಾಗಿದೆ. ಈ ಕ್ರಮಗಳೆಲ್ಲವೂ ಪ್ರತಿಕ್ರಿಯಾತ್ಮಕವೂ, ಪ್ರತೀಕಾರದ ಮನೋಭಾವದಿಂದ ಹೆಚ್ಚು ಕೂಡಿರುವಂಥದ್ದಾಗಿದ್ದು, ತಾತ್ಕಾಲಿಕ ಸಮಾಧಾನವನ್ನಷ್ಟೇ ನೀಡಬಲ್ಲವು. ಆದರೆ, ನೈಜ ಸಮಸ್ಯೆಯಾದ ಪಾಕ್‌ ಪ್ರಾಯೋಜಿತ ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಯಾವುದೇ ಸ್ಪಷ್ಟ ಗುರಿ ಸಾಧನೆ ಮಾಡಿರುವುದು ಕಾಣುತ್ತಿಲ್ಲ.

ಅಮೆರಿಕದ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್‌ ಭಾರತಕ್ಕೆ ಭೇಟಿ ನೀಡಿದ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಕಾಶ್ಮೀರದಲ್ಲಿ ಹೇಯ ಭಯೋತ್ಪಾದಕ ಕೃತ್ಯವನ್ನು ನಡೆಸಿದ ಭಯೋತ್ಪಾದಕರಿಗೆ, ಅವರ ಭಯೋತ್ಪಾದಕ ಸಂಘಟನೆ ‘ದ ರೆಸಿಸ್ಟೆನ್ಸ್‌ ಫೋರ್ಸ್‌’ಗೆ ಹಾಗೂ ಅದರ ಮಾತೃ ಸಂಘಟನೆ ಲಷ್ಕರ್‌-ಎ-ತಯ್ಯಬಾಗೆ ತಮ್ಮ ದಾಳಿ ಈಡೇರಿಸಬೇಕಾದ ಉದ್ದೇಶಗಳ ಬಗ್ಗೆ ಸ್ಪಷ್ಟತೆ ಇತ್ತು. ಅವುಗಳಲ್ಲಿ ಪ್ರಮುಖವಾದದ್ದು ಜಾಗತಿಕ ಸುದ್ದಿ ತಲೆಬರಹಗಳಿಂದ ಕಳೆದ ಕೆಲ ವರ್ಷಗಳಲ್ಲಿ ಕಾಣೆಯಾಗಿದ್ದ ಕಾಶ್ಮೀರದ ವಿಷಯವನ್ನು ಮತ್ತೆ ಸುದ್ದಿಯ ಮುನ್ನೆಲೆಗೆ ತರುವುದು, ಕಾಶ್ಮೀರವನ್ನು ‘ಅಂತಾರಾಷ್ಟ್ರೀಯ ವಿವಾದ’ವಾಗಿ ಜೀವಂತ ಇರಿಸುವುದಾಗಿತ್ತು. ಅದೇ ರೀತಿ, ಶಾಂತಿಯುತ ಜೀವನ, ಪ್ರಗತಿಯ ಹಾದಿಯೆಡೆಗೆ ಮುಖಮಾಡಿದ್ದ ಕಾಶ್ಮೀರದ ಜನತೆಯ ಜೀವನದಲ್ಲಿ ಮತ್ತೆ ಅನಿಶ್ಚಿತತೆ, ಭೀತಿಯನ್ನು ತುಂಬುವುದು, ಕಾಶ್ಮೀರದ ಪ್ರಗತಿಯ ಚಕ್ರ ಮತ್ತೊಮ್ಮೆ ಹಿಮ್ಮುಖವಾಗಿ ಚಲಿಸುವಂತೆ ಮಾಡುವುದು ಸಹ ಅವರ ಉದ್ದೇಶವಾಗಿತ್ತು. ಇದರೊಟ್ಟಿಗೆ, ಕಾಶ್ಮೀರದ ಬಹುಸಂಖ್ಯಾತ ಮುಸಲ್ಮಾನ ಸಮುದಾಯದ ಬಗ್ಗೆ ದೇಶದ ಬಹುಸಂಖ್ಯಾತ ಹಿಂದೂ ಸಮುದಾಯದಲ್ಲಿ ಅಪನಂಬಿಕೆ, ಅವಿಶ್ವಾಸವನ್ನು ಬಿತ್ತುವ ಹಾಗೂ ಅದನ್ನು ದೇಶಾದ್ಯಂತ ಕೋಮು ವೈಷಮ್ಯವಾಗಿ ವಿಸ್ತರಿಸುವ ಹುನ್ನಾರವೂ ಇತ್ತು. ಇದರಲ್ಲಿ ಎಷ್ಟು ಸಫಲರಾಗಿದ್ದಾರೆ ಎನ್ನುವುದು ಚರ್ಚಾರ್ಹ ವಿಷಯ. ಆದರೆ, ಒಂದು ಭಯೋತ್ಪಾದನಾ ಕೃತ್ಯದ ಮೂಲಕ ರಾಜಕೀಯ, ಆರ್ಥಿಕ, ಸಾಮಾಜಿಕ ದುಷ್ಪರಿಣಾಮಗಳನ್ನು ಬೀರುವ ಪ್ರಯತ್ನವನ್ನು ಉಗ್ರ ಸಂಘಟನೆಗಳು ಹಾಗೂ ಅವರನ್ನು ಪೋಷಿಸುತ್ತಾ ಬಂದಿರುವ ಪಾಕಿಸ್ತಾನ ಕೈಗೊಂಡಿತು.

ಕಾಶ್ಮೀರವನ್ನು ಅಂತಾರಾಷ್ಟ್ರೀಯ ವಿವಾದವಾಗಿ ಜೀವಂತ ಇರಿಸುವುದು ಪಾಕಿಸ್ತಾನದ ವಿದೇಶಾಂಗ ನೀತಿಯ ಭಾಗವೇ ಆಗಿದೆ. ಹಾಗಾಗಿ, ವ್ಯಾನ್ಸ್‌ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದ ಹಿಡಿದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು  ಟ್ವೀಟ್‌ ಮೂಲಕ ತಾವೇ ಮೊದಲಿಗರಾಗಿ ಜಗತ್ತಿನ ಮುಂದೆ ಭಾರತ ಮತ್ತು ಪಾಕ್‌ ನಡುವಿನ ಸಂಘರ್ಷವು ಶಮನಗೊಂಡಿರುವ ಮಾಹಿತಿಯನ್ನು ನೀಡುವವರೆಗಿನ ಬೆಳವಣಿಗೆಗಳನ್ನು ಅವಲೋಕಿಸಿದರೆ ಭಾರತ ತಾನು ಯಾವ ಜಾಗದಲ್ಲಿ ನಿಲ್ಲಲು ಬಯಸಿರಲಿಲ್ಲವೋ ಆ ಜಾಗದ ಬಳಿಗೆ ತಾನೇ ಸಾಗಿ ನಿಲ್ಲುವಂತೆ ಮಾಡುವಲ್ಲಿ ಉಗ್ರರು ಮತ್ತು ಪಾಕಿಸ್ತಾನದ ಸೇನೆ ಹೂಡಿದ ತಂತ್ರ ಭಾಗಶಃ ಸಫಲವಾದಂತೆ ಕಾಣುತ್ತಿದೆ.

ಸೇನಾ ಕಾರ್ಯಾಚರಣೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ನಿರ್ವಿವಾದವಾಗಿ ಮೇಲುಗೈ ಸಾಧಿಸಿದೆ. ಭಾರತದ ಸೇನೆಯು ಪಾಕಿಸ್ತಾನದ ಮೇಲಿನ ದಾಳಿಗಳ ವೇಳೆ ತೋರಿದ ನಿಖರತೆ, ದಿಟ್ಟತೆಗಳು ಹಾಗೂ ಭೂಸೇನೆ, ವಾಯುಸೇನೆ, ನೌಕಾಸೇನೆಗಳು ತೋರಿದ ಅಪೂರ್ವ ಸಮನ್ವಯ ಇವೆಲ್ಲವೂ ಅತ್ಯಂತ ಶ್ಲಾಘನಾರ್ಹ. ಭಾರತೀಯರಷ್ಟೇ ಅಲ್ಲದೆ, ಈ ಇಡೀ ಸಂಘರ್ಷವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಜಾಗತಿಕ ನಾಯಕರು, ಸೇನಾ ಮುಖ್ಯಸ್ಥರು, ರಕ್ಷಣಾ ತಜ್ಞರು, ವಿದೇಶಾಂಗ ಪರಿಣತರು ಎಲ್ಲರೂ ಭಾರತೀಯ ಸೇನೆ ತೋರಿದ ದಕ್ಷತೆ, ತೀಕ್ಷ್ಣ, ನಿಖರ ಪ್ರತಿಕ್ರಿಯೆ ಹಾಗೂ ಸಂಯಮಗಳ ಬಗ್ಗೆ ಮೆಚ್ಚುಗೆ ಹೊಂದಿದ್ದಾರೆ. ಅದರೆ, ಎದುರಾಳಿ ದೇಶದ ನಾಗರಿಕರಿಗೆ ತೊಂದರೆಯಾಗದಂತೆಯೇ ಅಲ್ಲಿನ ಸೇನೆ, ಸರ್ಕಾರದ ಹೆಡೆಮುರಿ ಕಟ್ಟಿ, ಭಯೋತ್ಪಾದನೆ ಹಾಗೂ ಕಾಶ್ಮೀರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅನುಮಾನಕ್ಕೆ ಆಸ್ಪದವಿಲ್ಲದಂತೆ ಏಕಪಕ್ಷೀಯವಾಗಿ ಮೇಲುಗೈ ಸಾಧಿಸಬಹುದಾಗಿದ್ದ ಸನ್ನಿವೇಶವನ್ನು ಭಾರತ ತಾನಾಗಿಯೇ ಬಿಟ್ಟುಕೊಟ್ಟಿತೇ ಎನ್ನುವ ಪ್ರಶ್ನೆಗಳು ಸಹ ಬಲವಾಗಿ ಮೂಡಿವೆ.

ಹೊರ ಜಗತ್ತಿನ ವಿಷಯವಿರಲಿ, ಬಿಜೆಪಿಯ ಕಟ್ಟರ್‌ ಬೆಂಬಲಿಗರು, ಬಲಪಂಥೀಯ ಹಿಂದುತ್ವದ ಉಗ್ರ ಆರಾಧಕರು, ಸಮರೋತ್ಸಾಹಿಗಳಾರಿಗೂ ಭಾರತ ಅಷ್ಟು ಸಲೀಸಾಗಿ ಕದನ ವಿರಾಮ/ಸಂಘರ್ಷ ಶಮನಕ್ಕೆ ಮುಂದಾದದ್ದು ಅಂತರಂಗದಲ್ಲಿ ಸುತಾರಾಂ ಹಿಡಿಸಿಲ್ಲ. ಇಸ್ರೇ‌ಲ್‌ನ ಆಕ್ರಮಣಶೀಲತೆ, ಮೊಸ್ಸಾದ್‌‌ನ ತಂತ್ರಗಾರಿಕೆಯನ್ನ ಸದಾಕಾಲ ಕೊಂಡಾಡುವ ಈ ಮಂದಿಗೆ,  ಪಾಕಿಸ್ತಾನವನ್ನು ಭೂಪಟದಿಂದ ನಾಮವಶೇಷ ಮಾಡುತ್ತೇವೆ, ತುಂಡು ತುಂಡಾಗಿ ಕತ್ತರಿಸುತ್ತೇವೆ ಎನ್ನುತ್ತಿದ್ದ ತಮ್ಮ ಉಗ್ರ ಪ್ರತಾಪಿ ಬಿಜೆಪಿ ನಾಯಕರು ಹೀಗೇಕೆ ಮಾಡಿದರು ಎನ್ನುವ ಬೇಸರ ನೀಗುತ್ತಿಲ್ಲ. ‘ಗಾಂಧಿ ಮನೆಗೆ ಹೋದರು, ಸಾವರ್ಕರ್‌ ಹೊರಗೆ ಬಂದರು’ ಎಂದೆಲ್ಲಾ ಕೇಕೆ ಹಾಕಿದ್ದ ಬಲಪಂಥೀಯ ಪಡೆಗಳಿಗೆ, ಅವರ ಐಟಿ ಸೆಲ್‌ಗಳಿಗೆ ಕದನ ವಿರಾಮಕ್ಕೆ ಮುಂದಾದ ತಮ್ಮ ನಾಯಕರ ನಿರ್ಧಾರ ಆಘಾತ ತಂದಿದೆ! ಈ ನಿರ್ಧಾರವನ್ನು ಸಮರ್ಥಿಸುವ ಹಾದಿಗಳು ಗೋಚರವಾಗದೆ, ಸೇನೆಯ ಪರಾಕ್ರಮದ ಕವಚದಡಿ ತನ್ನ ನಾಯಕರ ನೀತಿ-ನಿರ್ಣಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿವೆ.

ಶತಕ ಬಾರಿಸಲು ಸಜ್ಜಾಗಿದ್ದ ಸೇನೆಯನ್ನು ರನೌಟ್‌ ಮಾಡಿಸಿ, ತಾನು ಸಹ ಹಿಟ್‌ ವಿಕೆಟ್‌ ಮಾಡಿಕೊಂಡಿರುವ ಸ್ಥಿತಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಪರಿಸ್ಥಿತಿ ಇದೆ. ಪಹಲ್ಗಾಮ್‌ ಕೃತ್ಯದ ನಂತರ ನಡೆದಿರುವ ಸರ್ವಪಕ್ಷಗಳ ಸಭೆಗೆ ತಲೆಹಾಕದೆ ಪ್ರತಿಪಕ್ಷಗಳ ಪ್ರಶ್ನೆಗಳನ್ನು ನಗಣ್ಯವಾಗಿಸುವ ತಮ್ಮ ಎಂದಿನ ಹುಂಬತನ ತೋರಿಸುತ್ತಿದ್ದ ಪ್ರಧಾನಿ ಮೋದಿಯವರ ಪಾಲಿಗೆ ಇನ್ನು ಪರಿಸ್ಥಿತಿ ಮತ್ತಷ್ಟು ವಿಷಮವಾಗಲಿದೆ. ಯುದ್ಧಕಾಲದಲ್ಲಿ ಐಕ್ಯತೆಯ ಮಂತ್ರ ಜಪಿಸಬೇಕೆನ್ನುವ ಏಕೈಕ ಕಾರಣದಿಂದ ಬಾಯಿಮುಚ್ಚಿ ಕೂತಿದ್ದ ವಿಪಕ್ಷಗಳು ಮುಂದಿನ ದಿನಗಳಲ್ಲಿ ಒಂದೊಂದಾಗಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ದೇಶದ ಜನರ ಮುಂದೆ ಬಿಚ್ಚಿಡಲಿವೆ. ‘ತಾನು ಮಾಡುವುದೆಲ್ಲವೂ ಪರಾಕ್ರಮ, ವಿಪಕ್ಷಗಳು ಮಾಡುವುದೆಲ್ಲವೂ ಹೇಡಿತನ’ ಎನ್ನುವ ಸಂಕಥನವನ್ನೇ ಸದಾ ನೇಯ್ದುಕೊಂಡು ಬಂದಿರುವ ಪ್ರಧಾನಿ ಮೋದಿಯವರಿಗೆ ಇದೀಗ ಅದೇ ಸಂಕಥನ ಹೆಬ್ಬಾವಿನ ಬಿಗಿತವಾಗಿ ಪರಿಣಮಿಸುತ್ತಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಾಂಗ್ಲಾ ವಿಮೋಚನೆಯ ವೇಳೆ ತೋರಿದ್ದ ದಿಟ್ಟತೆ, ಅಮೆರಿಕದ ಮಧ್ಯಪ್ರವೇಶಕ್ಕೆ ಆಸ್ಪದ ನೀಡದ ಅವರ ಸ್ಪಷ್ಟತೆಗಳು ಮೋದಿಯವರ ಪಾಲಿಗೆ ದುಸ್ವಪ್ನವಾದಂತಿವೆ.

ಯಥಾಪ್ರಕಾರ ತಮ್ಮ ಮೇಲೆ ಬರುತ್ತಿರುವ ಟೀಕೆಗಳಿಗೆ ಉತ್ತರಗಳನ್ನು ಮೋದಿಯವರು ಖುದ್ದು ನೀಡುತ್ತಿಲ್ಲ, ಬದಲಿಗೆ ಅವರ ಪರವಾಗಿ ಗೋದಿಗಳು (ಗೋದಿ ಮಾಧ್ಯಮಗಳು) ‘ಮೋದಿ ಮಾಸ್ಟರ್‌ಸ್ಟ್ರೋಕ್’‌  ಲೀಲೆಗಳ ಮೂಲಕ ಯಥಾಶಕ್ತಿ ದಿನಂಪ್ರತಿ ನೀಡಲಿವೆ.    

ಕದನ ವಿರಾಮದ ವಿಚಾರ ತನ್ನ ಪಾಲಿಗೆ ವ್ಯತಿರಿಕ್ತವಾಗಿ ಪರಿಣಮಿಸಿರುವುದನ್ನು ಬಿಜೆಪಿ ಅರಿತಂತೆ ಕಾಣುತ್ತಿದೆ. ವಿರಾಮ ಘೋಷಣೆಯಾದ ಮಾರನೇ ದಿನವೇ ಟಿವಿ ಮಾಧ್ಯಮಗಳು ಉತ್ತರ ಪ್ರದೇಶದಲ್ಲಿ ಬ್ರಹ್ಮೋಸ್‌ ಕ್ಷಿಪಣಿಯ ತಯಾರಿಕಾ ಘಟಕದ ಉದ್ಘಾಟನೆಯ ಕುರಿತಾದ ಕಾರ್ಯಕ್ರಮವನ್ನು ನಿರಂತರವಾಗಿ ಲೈವ್ ಮಾಡುವಂತೆ ನೋಡಿಕೊಳ್ಳಲಾಯಿತು. ಬ್ರಹ್ಮೋಸ್‌ ಕ್ಷಿಪಣಿಯ ಬೆನ್ನಿಗೆ ನಿಂತು ಸೇನೆಯ ಶೌರ್ಯ, ಸಾಹಸ, ಪರಾಕ್ರಮದ ಪಾಲಿನಲ್ಲಿ ತನ್ನ ರಾಜಕೀಯ ಇಚ್ಛಾಶಕ್ತಿಯ ದೊಡ್ಡ ಪಾತ್ರವಿದೆ ಎಂದು ಇನ್ನಿಲ್ಲದಂತೆ ಬಿಂಬಿಸುವ ಪ್ರಯತ್ನವನ್ನೂ ನಡೆಸಲಾಯಿತು. ಚುನಾವಣೆಗೆ ಹೋಗಲು ಸಜ್ಜಾಗುತ್ತಿರುವ, ಹಿಂದುತ್ವವಾದವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ದುಡಿಮೆ ಮಾಡುತ್ತಿರುವ ಉತ್ತರ ಪ್ರದೇಶ ಸರ್ಕಾರಕ್ಕೂ. ಅದರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೂ ಇದರ ಅವಶ್ಯಕತೆ ಇದ್ದೇಇದೆ. ಯುದ್ಧ ಅಥವಾ ಉದ್ವಿಗ್ನ ಪರಿಸ್ಥಿತಿಗಳನ್ನು ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳುವ ವಿದ್ಯಮಾನ ಜಾಗತಿಕ ಪ್ರವೃತ್ತಿಯಾಗಿರುವ ಈ ದಿನಗಳಲ್ಲಿ ಇದೆಲ್ಲವೂ ಸಹಜ ಎನ್ನುವಂತಾಗಿದೆ.

ಲೇಖನದ ಮೊದಲ ಭಾಗದಲ್ಲಿ ಪ್ರಸ್ತಾಪಿಸಿದ ವಿಚಾರಕ್ಕೆ ಮತ್ತೆ ಮರಳುವುದಾದರೆ, ಭಾರತವು, ಕದನ ವಿರಾಮದ ನಂತರ ಉದ್ಭವಿಸುವ ಯಾವುದೇ ಭಯೋತ್ಪಾದಕ ಕೃತ್ಯವನ್ನು ಯುದ್ಧಕ್ಕೆ ಸರಿಸಮನಾದ ಕೃತ್ಯ ಎಂದು ಪರಿಗಣಿಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದಾಗಿ ಹೇಳಿದೆ. ವಿಪರ್ಯಾಸವೆಂದರೆ, ಭಾರತವೂ ಸೇರಿದಂತೆ ಯಾವುದೇ ಜಾಗತಿಕ ಶಕ್ತಿಗಳಿಗೆ ಪಾಕಿಸ್ತಾನದ ಕಡೆಯಿಂದ ಭಯೋತ್ಪಾದನಾ ಕೃತ್ಯವು ಸಂಪೂರ್ಣವಾಗಿ ನಿಲ್ಲಲಿದೆ ಎನ್ನುವ ಭರವಸೆ, ವಿಶ್ವಾಸ ಇಲ್ಲ. ಇನ್ನು ಉಗ್ರರ ಕೆಲ ಸಕ್ರಿಯ ನೆಲೆಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ, ಹಾಗೆಂದು ಪಾಕಿಸ್ತಾನದಿಂದ ಉಗ್ರರ ನೆಲೆಗಳ ಮೂಲೋತ್ಪಾಟನೆಯೇನೂ ಆಗಿಲ್ಲ. ಪಾಕಿಸ್ತಾನದ ಸೇನೆ, ಅಲ್ಲಿನ ಬೇಹುಗಾರಿಕಾ ಸಂಸ್ಥೆಗಳು ಹಾಗೂ ಕಾಶ್ಮೀರದಲ್ಲಿ ಶಾಂತಿ ಕದಡುವ ನಿರಂತರ ಪ್ರಯತ್ನವನ್ನು ಮಾಡುತ್ತಲೇ ಬಂದಿರುವ ಉಗ್ರ ಸಂಘಟನೆಗಳು ಇವಾವುದಕ್ಕೂ ಭಾರತದ ಜೊತೆ ಶಾಂತಿಯ ಹಾದಿಯನ್ನು ಅನ್ವೇಷಿಸುವುದು ಬೇಕಿಲ್ಲ. ಹಾಗೆ ಮಾಡುವುದು ಅಂತಿಮವಾಗಿ ಅವುಗಳ ಅಸ್ತಿತ್ವ, ಪ್ರಾಶಸ್ತ್ಯಕ್ಕೆ ಧಕ್ಕೆ ತರುತ್ತದೆ. ಹಾಗಾಗಿ, ಭಾರತದಲ್ಲಿ ಭಯೋತ್ಪಾದನೆಯನ್ನು ಪಸರಿಸುವ ವಿವಿಧ ವಿಧಾನಗಳ ಅನ್ವೇಷಣೆಯಲ್ಲಿಯೇ ಅವುಗಳ ಅಸ್ತಿತ್ವ ಅಡಗಿರಲಿದೆ.

ಹೀಗಿರುವಾಗ, ಪಾಕಿಸ್ತಾನವನ್ನು ಯಥಾಸ್ಥಿತಿಯಲ್ಲಿರಿಸಿ ಕೈಗೊಳ್ಳುವ ಯಾವುದೇ ಬಗೆಯ ಕದನ ವಿರಾಮ ಪ್ರಯೋಜನಕಾರಿಯಾಗದು. ಪಾಕಿಸ್ತಾನದಲ್ಲಿ ಜನತಂತ್ರ ವ್ಯವಸ್ಥೆ ನಿಜ ಅರ್ಥದಲ್ಲಿ ಬಲಗೊಳ್ಳದೆ, ಅಲ್ಲಿನ ಸರ್ಕಾರಗಳು ಸೇನೆಯ ಕೈಗೊಂಬೆಯಾಗದೆ ಇದ್ದರೆ ಮಾತ್ರ ಏನಾದರೂ ಸಕಾರಾತ್ಮಕ ಬೆಳವಣಿಗೆಗಳು ಸಂಭವಿಸಬಹುದು. ವಿಶೇಷವಾಗಿ ಪಾಕಿಸ್ತಾನದ ಜನತೆ ತಮಗೆ ಬೇಕಿರುವುದು ಭಾರತದೊಂದಿಗಿನ ಯುದ್ಧವಲ್ಲ, ಬದಲಿಗೆ ಶಾಂತಿ, ನೆಮ್ಮದಿ, ಪ್ರಗತಿಯನ್ನು ನೀಡುವ ಪ್ರಜಾಪ್ರಭುತ್ವವಾದಿ ಸರ್ಕಾರ ಎನ್ನುವುದನ್ನು ಬಲವಾಗಿ ಅರಿತು, ಆ ನಿಟ್ಟಿನಲ್ಲಿ ಬದಲಾವಣೆಗಳಿಗೆ ಪ್ರಯತ್ನ ಮಾಡದೆ ಹೋದಲ್ಲಿ ಆ ದೇಶಕ್ಕೆ ಭವಿಷ್ಯವಿಲ್ಲ.

ಆದರೆ, ಪಾಕಿಸ್ತಾನದ ಆಂತರಿಕ ಬೆಳವಣಿಗೆ, ಬದಲಾವಣೆಗಳ ಕುರಿತಾಗಿ ಯಾರು ತಾನೆ ಉತ್ಸುಕರಾಗಿದ್ದಾರೆ? ದಿವಾಳಿಯಂಚಿಗೆ ಬಂದು ನಿಂತಿರುವ ಪಾಕಿಸ್ತಾನದ ಒಳಿತಿನ ಬಗ್ಗೆ ಯಾವ ಬಾಹ್ಯಶಕ್ತಿಗಳಿಗೆ ತಾನೆ ಆಸಕ್ತಿ ಉಳಿದಿದೆ? ಪಾಕಿಸ್ತಾನದ ಬಗ್ಗೆ ಬಾಹ್ಯ ಶಕ್ತಿಗಳಿಗೆ ಇರುವ ಆಸಕ್ತಿ ಏನಿದ್ದರೂ ಅದರ ನೈಸರ್ಗಿಕ ಸಂಪನ್ಮೂಲ ಹಾಗೂ ಮಿಲಿಟರಿ ಮತ್ತು ಆರ್ಥಿಕ ದೃಷ್ಟಿಯಿಂದ ಅದು ಹೊಂದಿರುವ ಭೌಗೋಳಿಕ ಪ್ರಾಮುಖ್ಯತೆಗೆ ಸೀಮಿತವಾಗಿ ಮಾತ್ರವೇ ಇರುವಂಥದ್ದು. ಈ ಹಿಂದೆ ಅಮೆರಿಕ, ಈಗ ಚೀನಾ ಹೊಂದಿರುವ ಆಸಕ್ತಿಗಳು ಸಹ ಇದೇ ಉದ್ದೇಶದಿಂದಲೇ ಮೂಡಿರುವಂಥದ್ದು. ಹಾಗಾಗಿ, ಇವುಗಳು ಪಾಕಿಸ್ತಾನದ ಆಂತರಿಕ ಬೆಳವಣಿಗೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಇಂತಹ ಅಸ್ಥಿರ ದೇಶವೊಂದರ ಜೊತೆಗೆ ಟ್ರಂಪ್‌ನಂತಹ ವಿಕ್ಷಿಪ್ತ ನಾಯಕನ ಮಧ್ಯಸ್ಥಿಕೆಯಲ್ಲಿ ಭಾರತದ ಕದನ ವಿರಾಮಕ್ಕೆ ಮುಂದಾಗಿರುವುದೇ ಒಂದು ಕಳಪೆ ರಾಜತಾಂತ್ರಿಕತೆಯಾಗಿ ಗೋಚರಿಸುತ್ತಿದೆ. ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನದೊಂದಿಗೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆಸುವ ಚರ್ಚೆಯ ಬಗ್ಗೆಯಾಗಲಿ ಅಥವಾ ಇನ್ನಾವುದೇ ತಟಸ್ಥ ಧೋರಣೆಯ ದೇಶವೊಂದರ ಉಸ್ತುವಾರಿಯಲ್ಲಿ ಮಾತುಕತೆ ನಡೆಸುವ ವಿಚಾರವಾಗಲಿ ಭಾರತ ಈವರೆಗೆ ನಿರಾಕರಿಸಿಕೊಂಡು ಬಂದಿರುವ ನಡೆಗಳು. ಅಂತಹದ್ದರಲ್ಲಿ, ಅಸೂಕ್ಷ್ಮತೆಯೇ ಮೈವೆತ್ತಂತಿರುವ ಟ್ರಂಪ್‌ನಂತಹ ನಾಯಕ ಮಾಡುವ ಅಸೂಕ್ಷ್ಮ ಟ್ವೀಟ್‌ ಮೂಲಕ 140 ಕೋಟಿ ಭಾರತೀಯರು, ಅವರನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ವಿವಿಧ ಪಕ್ಷಗಳು ಕದನ ವಿರಾಮದ ಬಗ್ಗೆ ಕೇಳುವಂತಾಗಿದ್ದು ನಮ್ಮ ರಾಜತಾಂತ್ರಿಕತೆಗೆ ಹಿನ್ನಡೆಯಾಗುವಂಥ ಬೆಳವಣಿಗೆ.

ಇದನ್ನೂ ಓದಿ ಸಮರಕಾಲಕ್ಕೆ ಸಾದತ್ ಹಸನ್ ಮಾಂಟೋ ಕಿರುಗತೆಗಳು

ಆದರೆ, ಈ ಎಲ್ಲ ಬೆಳವಣಿಗೆಗಳನ್ನು ನಿರಾಕರಿಸುವ ರೀತಿಯಲ್ಲಿ ಪ್ರಧಾನಿ ಮೋದಿ ಸೋಮವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಪಾಕಿಸ್ತಾನದೊಂದಿಗೆ ಚರ್ಚಿಸುವುದೇ ಆದಲ್ಲಿ ಭಯೋತ್ಪಾದನೆ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರವೇ ಎಂದು ಹೇಳಿದ್ದಾರೆ. ಅತ್ತ, ಟ್ರಂಪ್‌ ಎರಡು ದೇಶಗಳ ನಡುವಿನ ಪರಮಾಣು ಯುದ್ಧವನ್ನು ತಡೆದದ್ದು ತಾನೇ ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದಾರೆ. ನೀವು ಯುದ್ಧ ನಿಲ್ಲಿಸದಿದ್ದರೆ ನಾವು ನಿಮ್ಮೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ಬೆದರಿಸಿ, ಇಬ್ಬರನ್ನೂ ಬಗ್ಗಿಸಿದ ಧೀರ ತಾನು ಎಂದು ಬೀಗಿದ್ದಾರೆ.

ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿದ ಬಳಿಕವೂ ಕದನ ವಿರಾಮವನ್ನು ಇಷ್ಟು ತ್ವರಿತವಾಗಿ ಏಕೆ ಘೋಷಿಸಲಾಯಿತು ಎನ್ನುವುದಕ್ಕೆ ತೃಪ್ತಿ ನೀಡುವಂತಹ ಉತ್ತರ ದೊರೆತಿಲ್ಲ. ಕದನ ವಿರಾಮದ ಚರ್ಚೆಯನ್ನು ಕೆಲ ದಿನಗಳ ಕಾಲ ಮುಂದೂಡಿ ಪಾಕ್‌ನಲ್ಲಿದ್ದ ಮತ್ತಷ್ಟು ಉಗ್ರ ನೆಲೆಗಳ ಮೇಲೆ ದಾಳಿ ಕೈಗೊಳ್ಳುವ ಅವಕಾಶವನ್ನು ಕೇಂದ್ರ ಸರ್ಕಾರ ಸೇನೆಗೆ ಏಕೆ ನೀಡಲಿಲ್ಲ ಎನ್ನುವ ಪ್ರಶ್ನೆ ಹಾಗೇ ಉಳಿದಿದೆ.

?s=150&d=mp&r=g
ನಿಶಾನ್‌ ರಾಜ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X