ಸಮರಕಾಲಕ್ಕೆ ಸಾದತ್ ಹಸನ್ ಮಾಂಟೋ ಕಿರುಗತೆಗಳು

Date:

ಅಜ್ಞಾನದ ಪ್ರಯೋಜನಗಳು

- Advertisement -

ಟ್ರಿಗರ್ ಒತ್ತಲಾಯಿತು. ಗುಂಡು ಕಡುಗೋಪದಿಂದ ತಿರುಗುತ್ತ ಹೊರಹಾರಿತು.
ಕಿಟಕಿಗೆ ಆತುಕೊಂಡು ತಲೆ ಹೊರಹಾಕಿದ್ದ ವ್ಯಕ್ತಿಯು ಮುಂದಕ್ಕೆ ವಾಲಿ ಸದ್ದು ಮಾಡದೇ ಕೆಳಕ್ಕುರುಳಿದ.
ಟ್ರಿಗರ್ ಅನ್ನು ಇನ್ನೊಮ್ಮೆ ಒತ್ತಲಾಯಿತು. ಗುಂಡು ಸಿಳ್ಳುಹಾಕುತ್ತ ಗಾಳಿಯನ್ನು ಸೀಳುತ್ತ ಸಾಗಿ ನೀರು ಹೊತ್ತು ತರುತ್ತಿದ್ದವನ ಮೇಕೆಚರ್ಮದ ಚೀಲವನ್ನು ತೂತುಮಾಡಿತು. ಅವನು ಮಕಾಡೆ ಬಿದ್ದ. ಅವನ ನೆತ್ತರು ನೀರಿನೊಂದಿಗೆ ಬೆರೆತು ರಸ್ತೆಯುದ್ದಕ್ಕೂ ಹರಿಯತೊಡಗಿತು. ಮೂರನೆಯ ಬಾರಿ ಟ್ರಿಗರ್ ಒತ್ತಲಾಯಿತು. ಗುಂಡು ಗುರಿ ತಪ್ಪಿ ಮಣ್ಣಿನ ಗೋಡೆಯೊಂದಕ್ಕೆ ಬಡಿದು ಸಿಕ್ಕಿಕೊಂಡಿತು.
ನಾಲ್ಕನೆಯದು ಒಬ್ಬ ಮುದುಕಿಯನ್ನು ಕೆಡವಿತು. ಅವಳು ಕಿರುಚಲೂ ಇಲ್ಲ.
ಐದು ಮತ್ತು ಆರನೆಯವು ಕೇಡಾದುವು. ಯಾರೂ ಸಾಯಲಿಲ್ಲ, ಯಾರಿಗೆ ಗಾಯವೂ ಆಗಲಿಲ್ಲ.
ಗುರಿಕಾರನು ಹತಾಶನಾದಂತೆ ತೋರುತ್ತಿದ್ದ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಓಡಿಬರುತ್ತಿದ್ದ ಮಗುವೊಂದು ರಸ್ತೆಯಲ್ಲಿ ಕಾಣಿಸಿಕೊಂಡಿತು. ಅವನು ಬಂದೂಕನ್ನೆತ್ತಿ ಗುರಿಯಿಟ್ಟ.
‘ಏನು ಮಾಡ್ತಾ ಇದ್ದೀಯೋ?’ ಅವನ ಜೊತೆಗಾರ ಕೇಳಿದ.
‘ಯಾಕೆ? ಏನಾಯ್ತು?’
‘ನಿನ್ನ ಗುಂಡುಗಳೆಲ್ಲ ಮುಗಿದಿವೆ.’
‘ನೀನು ತೆಪ್ಪಗಿರೋ. ಪಾಪ, ಚಿಕ್ಕ ಮಗು, ಅದಕ್ಕೇನು ಗೊತ್ತಾಗತ್ತೆ?’

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಅಗತ್ಯ ಕ್ರಮ

ಅಲ್ಲಿ ದಾಳಿ ನಡೆದಾಗ ಆ ಸುತ್ತುಬಳಸಿನಲ್ಲಿದ್ದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಕೆಲವರು ಕೊಲ್ಲಲ್ಪಟ್ಟರು. ಬದುಕುಳಿದವರಾದರೋ ದೂರ ಓಡಿಹೋದರು. ಆದರೆ, ಒಬ್ಬಾತ ಮತ್ತು ಅವನ ಹೆಂಡತಿ ತಮ್ಮ ಮನೆಯ ನೆಲಮಾಳಿಗೆಯಲ್ಲಿ ಅಡಗಿಕೊಂಡರು.
ಎರಡು ರಾತ್ರಿಗಳ ಕಾಲ ಅವರು ಅಲ್ಲಿಯೇ ಇರುಕಿಕೊಂಡಿದ್ದರು. ಯಾವುದೇ ಗಳಿಗೆಯಲ್ಲಿ ಪತ್ತೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದರು.
ಇನ್ನೂ ಎರಡು ರಾತ್ರಿಗಳು ಕಳೆದುವು. ಸಾವಿನ ಹೆದರಿಕೆ ಹಿಂದೆ ಸರಿಯುತ್ತ, ಆ ಜಾಗದಲ್ಲಿ ಹಸಿವಿನ ಯಾತನೆ ಬೇರೂರುತ್ತಿತ್ತು.
ಇನ್ನೂ ನಾಲ್ಕು ರಾತ್ರಿಗಳು ಕಳೆದವು. ಅವರೀಗ ಬದುಕಿದರೂ ಅಷ್ಟೇ ಸತ್ತರೂ ಅಷ್ಟೇ ಎಂಬ ಹಂತವನ್ನು ತಲುಪಿದ್ದರು. ತಮ್ಮ ಅಡಗುತಾಣದಿಂದ ಹೊರಬಿದ್ದರು.
ಕೇಳಿಯೂ ಕೇಳದಂಥ ದನಿಯಲ್ಲಿ ಆ ವ್ಯಕ್ತಿಯು, ‘ನಾವು ಹೊರಬರ್ತಿದೀವಿ, ನಮ್ಮನ್ನ ನಿಮ್ಮ ಕೈಗೆ ಒಪ್ಪಿಸ್ಕೋತಿದೀವಿ. ದಯವಿಟ್ಟು ನಮ್ಮನ್ನ ಕೊಂದುಬಿಡಿ,’ ಎಂದು ತನ್ನ ಮನೆಯ ಹೊಸ ನೆಲಸಿಗರಿಗೆ ಹೇಳಿದನು.
‘ಕೊಲ್ಲೋದಕ್ಕಾಗೋದಿಲ್ಲ, ನಮ್ಮ ಧರ್ಮ ಅದನ್ನ ಆಗಗೊಡೋದಿಲ್ಲ,’ ಎಂದು ಅವರು ಉತ್ತರಿಸಿದರು.
ಅವರು ಎಲ್ಲ ಜೀವರೂಪಗಳೂ ಪವಿತ್ರವೆಂಬ ಕಟ್ಟಳೆ ವಿಧಿಸಿರುವ ಜೈನಮತದ ಪಾಲಕರು.
ಪರಸ್ಪರ ಸಮಾಲೋಚನೆಯ ಬಳಿಕ, ಅದುವರೆಗೂ ತಲೆತಪ್ಪಿಸಿಕೊಂಡಿದ್ದ ಆ ದಂಪತಿಗಳನ್ನು ನೆರೆಯ ಪ್ರದೇಶದ ಜೈನರಲ್ಲದ ನಿವಾಸಿಗಳಿಗೆ ಹಸ್ತಾಂತರಿಸಲಾಯಿತು: ‘ಅಗತ್ಯ ಕ್ರಮ ಕೈಗೊಳ್ಳುವುದಕ್ಕಾಗಿ’.

ಪವಾಡಪುರುಷ

ಲೂಟಿಯಾದ ವಸ್ತುಗಳನ್ನು ಮರಳಿಪಡೆಯಲು ಪೋಲೀಸರು ಮನೆಮನೆಯ ಮೇಲೆ ದಾಳಿ ನಡೆಸುತ್ತಿದ್ದರು.
ಭಯಕ್ಕೀಡಾದ ಜನರು ತಾವು ಹೊತ್ತುತಂದಿದ್ದ ‘ಬಿಸಿಬಿಸಿ ಮಾಲು’ ಇಳಿಸಂಜೆಯ ನಂತರ ಮನೆಯ ಕಿಟಕಿಗಳಿಂದ ಹೊರಗೆಸೆಯತೊಡಗಿದರು. ಕೆಲವರಂತೂ ಕಾನೂನಿನ ಕಿಡಿಗೇಡಿತನಕ್ಕೆ ಎರವಾಗಬಾರದೆಂಬ ತವಕದಲ್ಲಿ ತಾವು ನ್ಯಾಯಯುತವಾಗಿ ಸಂಪಾದಿಸಿದ್ದ ಸರಕನ್ನೂ ಬಿಸಾಕಿದರು.
ಒಬ್ಬಾತನಿಗೆ ಒಂದು ತೊಡಕುಂಟಾಗಿತ್ತು. ಅವನ ಮನೆಯಲ್ಲಿ ಎರಡು ದೊಡ್ಡ ಸಕ್ಕರೆ ಚೀಲಗಳಿದ್ದುವು. ಪಕ್ಕದ ದಿನಸಿ ಅಂಗಡಿಯನ್ನು ಜನರು ದೋಚಿದಾಗ ತನ್ನದೂ ಒಂದು ಪಾಲು ಇರಲೆಂದು ಅವನ್ನು ಹೊತ್ತುತಂದಿದ್ದನು. ಒಂದು ರಾತ್ರಿ, ಅವನು ಅವುಗಳನ್ನು ಹತ್ತಿರದ ಬಾವಿಯವರೆಗೆ ಹೇಗೋ ಎಳೆದುಕೊಂಡಂತೂ ಹೋದನು. ಒಂದು ಚೀಲವನ್ನೇನೋ ಸುಲಭವಾಗಿ ಒಳಗೆ ತಳ್ಳಿದನು. ಆದರೆ ಎರಡನೆಯದರೊಟ್ಟಿಗೆ ತಾನೂ ಬಿದ್ದನು.
ಅವನ ಕಿರುಚಾಟವು ಎಲ್ಲರನ್ನೂ ಎಚ್ಚರಗೊಳಿಸಿತು. ಹಗ್ಗಗಳನ್ನು ಕೆಳಗಿಳಿಸಲಾಯಿತು ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಇಬ್ಬರು ಯುವಕರು ಬಾವಿಯಲ್ಲಿಳಿದು ಅವನನ್ನು ಹೊರಗೆಳೆದುತಂದರು. ಆದರೆ, ಕೆಲವೇ ಗಂಟೆಗಳ ನಂತರ ಅವನು ಸತ್ತುಹೋದನು.
ಮರುದಿನ ಬೆಳಿಗ್ಗೆ ಜನರು ಬಾವಿಯಿಂದ ನೀರು ಸೇದಿದಾಗ ಅದು ಬಹಳೇ ಸವಿಯಾಗಿದೆಯಿಂದು ಕಂಡುಕೊಂಡರು.
ಆ ರಾತ್ರಿ, ಪ್ರಾರ್ಥನೆಯ ದೀಪಗಳು ಆ ಪವಾಡಪುರುಷನ ಗೋರಿಯನ್ನು ಬೆಳಗುತ್ತಿದ್ದುವು.

ತಪ್ಪನ್ನು ತೊಡೆದುಹಾಕಲಾಯಿತು

‘ಯಾರು ನೀನು?’
‘ನೀನು ಯಾರು?’
‘ಹರ್ ಹರ್ ಮಹಾದೇವ್! ಹರ್ ಹರ್ ಮಹಾದೇವ್!’
‘ಹರ್ ಹರ್ ಮಹಾದೇವ್!’
‘ನೀನು ಯಾರು ಅಂತ ಹೇಳ್ತಿದೀಯಲ್ಲ ಅದೇ ಅನ್ನೋದಕ್ಕೆ ಪುರಾವೆ ಏನು?’
‘ಪುರಾವೆ? ನನ್ನ ಹೆಸರು ಧರಮ್ ಚಂದ್ — ಹಿಂದೂ ಹೆಸರು ಅದು.’
‘ಅದೆಂಥಾ ಪುರಾವೆ? ಅಲ್ಲವೇ ಅಲ್ಲ.’
‘ಒಳ್ಳೇದು. ಪೂಜ್ಯವಾದ ವೇದಗಳೆಲ್ಲ ನನಗೆ ಕಂಠಸ್ಥವಾಗಿವೆ, ಬೇಕಿದ್ದರೆ ಪರೀಕ್ಷೆ ಮಾಡಿ.’
‘ನಮಗೆ ವೇದಗೀದ ಎಲ್ಲಾ ಗೊತ್ತಿಲ್ಲ. ನಮಗೆ ಬೇಕಾಗಿರೋದು ಪುರಾವೆ.’
‘ಏನು ಹಾಗಂದ್ರೆ?’
‘ಪ್ಯಾಂಟ್ ಕೆಳಗಿಳಿಸು.’
ಅವನ ಪ್ಯಾಂಟ್ ಕೆಳಗಿಳಿಸಿದಾಗ ಅಲ್ಲಿ ಹುಯಿಲೆದ್ದಿತು. ‘ಕೊಲ್ಲಿ ಅವನನ್ನ, ಕೊಲ್ಲಿ ಅವನನ್ನ.’
‘ತಡೆಯಿರಿ, ದಯವಿಟ್ಟು ತಡೆಯಿರಿ … ನಾನು ನಿಮ್ಮ ಸಹೋದರ … ಭಗವಂತನಾಣೆ, ನಾನು ನಿಮ್ಮವನೇ, ನಿಮ್ಮ ಬಂಧು.’
‘ಹಾಗಿದ್ದರೆ ಸುನತಿ ಆಗಿರೋದು ಯಾಕೆ?’
‘ನಾನು ದಾಟಿಬಂದ ಪ್ರದೇಶದಲ್ಲಿ ನಮ್ಮ ವೈರಿಗಳ ಹಿಡಿತದಲ್ಲಿತ್ತು. ಅದಕ್ಕೆ, ನಾನು ಈ ಮುಂಜಾಗ್ರತೆ ತೆಗೆದುಕೊಳ್ಳುವ ಅನಿವಾರ್ಯತೆ ಬಂತು … ನನ್ನ ಜೀವ ಉಳಿಸಿಕೊಳ್ಳುವ ಸಲುವಾಗಿ … ಇದೊಂದೇ ತಪ್ಪಾಗಿದೆ, ಉಳಿದಂತೆ ನಾನು ಸರಿಯಾಗಿಯೇ ಇದ್ದೀನಿ.’
‘ತಪ್ಪನ್ನ ತೆಗೆದುಹಾಕಿ.’
ತಪ್ಪನ್ನು ತೊಡೆದುಹಾಕಲಾಯಿತು … ಅದರ ಜೊತೆಗೇ ಧರಮ್ ಚಂದ್‌ನನ್ನೂ.

ಸೌಜನ್ಯ- ಕೊನರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18 ಕೋಟಿಗೆ ಹರಾಜಾಯಿತು ಆತನ ಕಲಾಕೃತಿ!

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ ಮಾದರಿ

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ,...