ಭಾರತದೊಂದಿಗೆ ಕದನ ವಿರಾಮದ ನಂತರ ಪಾಕಿಸ್ತಾನದಲ್ಲಿ ಏನಾಗುತ್ತಿದೆ?

Date:

Advertisements
ಹಣದುಬ್ಬರವು ಗಗನಕ್ಕೇರಿದೆ, ವಿದೇಶಿ ವಿನಿಮಯ ಸಂಗ್ರಹ ಪಾತಾಳ ಮುಟ್ಟಿದೆ. ನಿರುದ್ಯೋಗ, ಬೆಲೆ ಏರಿಕೆಯಂತಹ ಹಲವು ಸಮಸ್ಯೆಗಳಿಂದ ಸಾಮಾನ್ಯ ಜನರು ನಿತ್ಯ ಸಂಕಷ್ಟಕ್ಕೊಳಗಾಗಿದ್ದಾರೆ. ಆಗಾಗ ಸಂಭವಿಸುವ ಭೀಕರ ಪ್ರವಾಹ ಕೂಡ ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ನೀಡುತ್ತಿದೆ. ಅಲ್ಲದೆ ಸೇನೆ, ಐಎಸ್‌ಐ, ಭಯೋತ್ಪಾದಕ ಸಂಘಟನೆಗಳ ಪ್ರಭಾವ ಕಡಿಮೆಯಾಗದೆ, ಪ್ರಜಾಪ್ರಭುತ್ವಕ್ಕೆ ನಿಜವಾದ ಬಲ ಸಿಗದಿದ್ದರೆ ಪಾಕ್‌ ಚೇತರಿಸಿಕೊಳ್ಳುವುದು ಸಾಧ್ಯವಿಲ್ಲ

ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯ ನಂತರ ಕದನ ವಿರಾಮ ಘೋಷಿಸಲಾಗಿದ್ದು ಜಮ್ಮು ಕಾಶ್ಮೀರ, ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಭಾರತ ಹಾಗೂ ಪಾಕಿಸ್ತಾನದ ಗಡಿ ಪ್ರದೇಶಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಉಭಯ ದೇಶಗಳಲ್ಲಿ ಕವಿದಿದ್ದ ಅಣ್ವಸ್ತ್ರ ಯುದ್ಧದ ಕಾರ್ಮೋಡ ಕೂಡ ದೂರವಾಗಿದೆ. ಕದನ ವಿರಾಮದ ನಂತರ ಭಾರತದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಪ್ರತಿಯೊಬ್ಬರು ಗಮನಿಸುತ್ತಿದ್ದಾರೆ. ಹಾಗೆಯೇ ಪಾಕಿಸ್ತಾನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲವಿದ್ದೆ ಇರುತ್ತದೆ.

ಕೇಂದ್ರ ಸರ್ಕಾರವು ಅಲ್ಲಿನ ಒಂದಷ್ಟು ಸಾಮಾಜಿಕ ಮಾಧ್ಯಮಗಳು ಹಾಗೂ ಸಂವಹನದ ಬಾಗಿಲುಗಳನ್ನು ಬಂದ್‌ ಮಾಡಿದೆ. ಪಾಕಿಸ್ತಾನದ ಬಗ್ಗೆ ಹೇಳುವುದಾದರೆ ಅದು ಕೂಡ ಪ್ರಜಾಪ್ರಭುತ್ವ ರಾಷ್ಟ್ರವಾದರೂ ಅಲ್ಲಿ ಹೆಸರಿಗಷ್ಟೆ ಜನತಾ ಸರ್ಕಾರವಿದೆ. ಅಧಿಕಾರವೆಲ್ಲವೂ ಸೇನೆ ಹಾಗೂ ಐಎಸ್‌ಐಗಳ ಕಪಿಮುಷ್ಟಿಯಲ್ಲಿದೆ. ದೇಶಕ್ಕೆ ಕಂಟಕವಾಗಿರುವ ಉಗ್ರವಾದವನ್ನು ಸೇನೆಯೆ ಸಾಕಿ ಸಲಹುತ್ತಿದೆ. ಕೆಲವು ದಶಕಗಳಿಂದ ಆಡಳಿತ ನಡೆಸಿದ ಅಲ್ಲಿನ ರಾಜಕಾರಣಿಗಳು ಭ್ರಷ್ಟಾಚಾರದ ಮೂಲಕ ದೇಶವನ್ನು ಕೊಳ್ಳೆಹೊಡೆದು ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಲುಪಿಸಿದ್ದಾರೆ. ಇವೆಲ್ಲ ಅವ್ಯವಸ್ಥೆಗಳಿಂದ ಅಲ್ಲಿನ ಸಾಮಾನ್ಯ ಜನತೆ ನಲುಗುತ್ತಿದ್ದಾರೆ.

ಆಂತರಿಕ ಸಮಸ್ಯೆಯಿಂದಲೂ ಬಳಲುತ್ತಿರುವ ಪಾಕಿಸ್ತಾನದಲ್ಲಿ ಬಲೂಚಿಸ್ತಾನ ಸೇರಿದಂತೆ ಕೆಲವು ಕಡೆ ಪ್ರತ್ಯೇಕತಾವಾದದ ಕೂಗು ಕೇಳಿ ಬರುತ್ತಿದೆ. ಇದರಿಂದ ಪಾಕ್‌ನ ಆಂತರಿಕ ಭದ್ರತೆಯ ಪರಿಸ್ಥಿತಿ ಸಹ ದಿನದಿಂದ ದಿನಕ್ಕೆ ಆತಂಕಕಾರಿಯಾಗುತ್ತಿದೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಖೊರಾಸನ್‌ದಂತಹ ಭಯೋತ್ಪಾದಕ ಸಂಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿವೆ. ಬಲೂಚಿಸ್ತಾನ್ ಮತ್ತು ಖೈಬರ್ ಪಕ್ತೂನ್ವಾದಂತಹ ಗಡಿ ಪ್ರದೇಶಗಳಲ್ಲಿ ಈ ಸಂಘಟನೆಗಳು ಆಗಾಗ ದಾಳಿಗಳನ್ನು ನಡೆಸುತ್ತಿದ್ದು, ಸರ್ಕಾರಕ್ಕೆ ಸವಾಲೊಡ್ಡುತ್ತಿವೆ.

Advertisements

ಇತ್ತೀಚಿನ ವರ್ಷಗಳಲ್ಲಿ ಖೈಬರ್-ಪಕ್ತೂನ್ವಾ ಮತ್ತು ಬಲೂಚಿಸ್ತಾನ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿ, ಪೊಲೀಸರ ಹಾಗೂ ಸೇನಾಧಿಕಾರಿಗಳ ಹತ್ಯೆ, ಬಾಂಬ್ ಸ್ಪೋಟಗಳ ಘಟನೆಗಳು ಹೆಚ್ಚಾಗಿವೆ. ಭದ್ರತಾ ಪಡೆಗಳು ಈ ಸಂಘಟನೆಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ, ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಸರ್ಕಾರ ಕಾನೂನು ಸುವ್ಯವಸ್ಥೆ ತಹಬದಿಗೆ ಬರುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ಸ್ಥಳೀಯರು ಅಸಮಾಧಾನಗೊಂಡಿರುವುದು ಕೂಡ ಉಗ್ರಗಾಮಿ ಸಂಘಟನೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಕಾರಣವಾಗುತ್ತಿದೆ.  

ರಾಜಕೀಯ ಅಸ್ಥಿರತೆಗೆ ಪ್ರಮುಖ ಕಾರಣವೆಂದರೆ ಸೇನೆಯ ಪಾತ್ರ. ಪಾಕಿಸ್ತಾನದ ಇತಿಹಾಸದಲ್ಲಿ ಸೇನೆಯು ಆಗಾಗ್ಗೆ ರಾಜಕೀಯದಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಹಸ್ತಕ್ಷೇಪ ಮಾಡುತ್ತದೆ. 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರ, ಪಾಕಿಸ್ತಾನವು ಮೊಹಮ್ಮದ್ ಅಲಿ ಜಿನ್ನಾ ಅವರಂತಹ ದೂರದೃಷ್ಟಿಯ ನಾಯಕರನ್ನು ಕೇವಲ ಒಂದು ವರ್ಷದಲ್ಲಿಯೇ ಕಳೆದುಕೊಂಡಿತು. ಜಿನ್ನಾ ಅವರ ಅಕಾಲಿಕ ಮರಣದ ನಂತರ, ದೇಶವನ್ನು ಒಗ್ಗೂಡಿಸುವ ಮತ್ತು ದಿಕ್ಕು ತೋರುವ ಶಕ್ತಿಶಾಲಿ ನಾಯಕತ್ವದ ಕೊರತೆ ಎದುರಾಯಿತು. ಸ್ವಾತಂತ್ರ್ಯದ ನಂತರ, ಪಾಕಿಸ್ತಾನವು 1956ರವರೆಗೆ ತನ್ನದೇ ಆದ ಸಂವಿಧಾನವನ್ನು ರೂಪಿಸಲಿಲ್ಲ. ಇದರ ನಂತರ 1962ರಲ್ಲಿ ಸೇನಾಧಿಕಾರದ ಸಂವಿಧಾನ ರಚನೆಯಾಯಿತು. ಮತ್ತೆ ಮೂರನೇ ಬಾರಿಗೆ 1973ರಲ್ಲಿ ಪ್ರಜಾಪ್ರಭುತ್ವದ ಆಧಾರಿತ ಸಂವಿಧಾನವನ್ನು ಜಾರಿಗೊಳಿಸಲಾಯಿತು.

ಭಾರತದಲ್ಲಿರುವಂತಹ ಶ್ರೇಷ್ಠ ಸಂವಿಧಾನ ಇಲ್ಲದ ಕಾರಣ ಪಾಕ್‌ನ ಆಡಳಿತ ವ್ಯವಸ್ಥೆ ಅಧೋಗತಿಗೆ ಇಳಿಯಲು ಕಾರಣ ಎನ್ನಲಾಗುತ್ತಿದೆ. ಪಂಜಾಬ್, ಸಿಂಧ್, ಬಲೂಚಿಸ್ತಾನ ಮತ್ತು ಖೈಬರ್ ಪಕ್ತೂನ್ವಾದಂತಹ ಪ್ರಾಂತ್ಯಗಳು ತಮ್ಮದೇ ಆದ ಗುರುತುಗಳನ್ನು ಹೊಂದಿದ್ದವು. ಇದು ಕೇಂದ್ರೀಕೃತ ಆಡಳಿತಕ್ಕೆ ಅಡ್ಡಿಯಾಯಿತು. ಪಾಕಿಸ್ತಾನವು ಜನರಲ್ ಅಯೂಬ್ ಖಾನ್, ಜಿಯಾ-ಉಲ್-ಹಕ್ ಮತ್ತು ಪರ್ವೇಜ್ ಮುಷರಫ್ ಅವರಂತಹ ಸೈನಿಕ ಆಡಳಿತಗಾರರ ದೀರ್ಘಕಾಲದ ಆಳ್ವಿಕೆಯನ್ನು ಕಂಡಿದೆ. ಈ ಆಡಳಿತಗಳು ರಾಜಕೀಯ ಸಂಸ್ಥೆಗಳನ್ನು ದುರ್ಬಲಗೊಳಿಸಿ ಹಲವು ವರ್ಷ ಜನಾಧಿಕಾರಕ್ಕೆ ತಡೆಯೊಡ್ಡಿದವು. ಪಾಕಿಸ್ತಾನದ ಸೇನೆಯು ರಾಜಕೀಯದಲ್ಲಿ ಯಾವಾಗಲು ಪ್ರಭಾವಿ ಪಾತ್ರವನ್ನು ವಹಿಸುತ್ತಿರುತ್ತದೆ. ಇದು ರಾಜಕೀಯ ಪಕ್ಷಗಳ ನಡುವೆ ಸಂಘರ್ಷವನ್ನು ಉಂಟುಮಾಡಿ, ಸರ್ಕಾರಗಳನ್ನು ರಚಿಸುವ ಮತ್ತು ಬೀಳಿಸುವ ಕಾರ್ಯದಲ್ಲಿ ಆಗಾಗ ತೊಡಗುತ್ತಲೇ ಇರುತ್ತದೆ. ಇವೆಲ್ಲವೂ ದೇಶದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಅಡ್ಡಿಯುಂಟುಮಾಡುತ್ತಲೇ ಇದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಳಮೀಸಲಾತಿಯಲ್ಲಿ ‘ದಲಿತ ಕ್ರಿಶ್ಚಿಯನ್’ ಪ್ರಶ್ನೆಗೆ ‘ತಾಯ್ಗಣ್ಣು’ ಅಗತ್ಯ

ರಾಜಕೀಯ ಬಿಕ್ಕಟ್ಟಿನ ಹೊರತಾಗಿ ದೇಶದ ಆರ್ಥಿಕತೆಯು ತೀವ್ರ ಸಂಕಷ್ಟದಲ್ಲಿದೆ. ಭ್ರಷ್ಟಾಚಾರ ಮತ್ತು ಅದಕ್ಷ ಆಡಳಿತವು ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸಿದೆ. ಪಾಕಿಸ್ತಾನವು ಐಎಂಎಫ್‌ನಿಂದ 23 ಬಾರಿ ಸಾಲವನ್ನು ಪಡೆದಿದೆ. ಆದರೆ ಈ ಹಣವನ್ನು ದೇಶದ ಅಭಿವೃದ್ಧಿಗಿಂತ ಹಿಂದಿನ ಸಾಲಗಳನ್ನು ತೀರಿಸಲು ಬಳಸಲಾಗಿದೆ. ಇದು ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ತೀವ್ರಗೊಳಿಸಿದೆ. ಅತಿಯಾದ ವಿದೇಶಿ ಸಾಲ ಮತ್ತು ವ್ಯಾಪಾರ ಚಟುವಟಿಕೆಗಳು ಏಳಿಗೆ ಹೊಂದದಿರುವ ಕಾರಣ ದೇಶದ ಹಣಕಾಸು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಹಣದುಬ್ಬರವು ಗಗನಕ್ಕೇರಿದೆ, ವಿದೇಶಿ ವಿನಿಮಯ ಸಂಗ್ರಹ ಪಾತಾಳ ಮುಟ್ಟಿದೆ. ನಿರುದ್ಯೋಗ, ಬೆಲೆ ಏರಿಕೆಯಂತಹ ಹಲವು ಸಮಸ್ಯೆಗಳಿಂದ ಸಾಮಾನ್ಯ ಜನರು ನಿತ್ಯ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಆಗಾಗ ಸಂಭವಿಸುವ ಭೀಕರ ಪ್ರವಾಹ ಕೂಡ ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ನೀಡುತ್ತಿದೆ. ಇದೇ ರೀತಿಯ ಸಮಸ್ಯೆಗಳು ಮುಂದುವರಿಯುತ್ತಾ ಹೋದರೆ ದೇಶವು ಮತ್ತಷ್ಟು ಅಪಾಯಕ್ಕೆ ಸಿಲುಕಲಿದೆ. ಅಲ್ಲದೆ ಸೇನೆ, ಐಎಸ್‌ಐ, ಭಯೋತ್ಪಾದಕ ಸಂಘಟನೆಗಳ ಪ್ರಭಾವ ಕಡಿಮೆಯಾಗದೆ, ಪ್ರಜಾಪ್ರಭುತ್ವಕ್ಕೆ ನಿಜವಾದ ಬಲ ಸಿಗದಿದ್ದರೆ ಪಾಕ್‌ ಚೇತರಿಸಿಕೊಳ್ಳುವುದು ಸಾಧ್ಯವಿಲ್ಲ.

ಪಾಕಿಸ್ತಾನದ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಧರ್ಮದ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಇತ್ಯಾದಿಗಳನ್ನು ಕಾನೂನಿನಲ್ಲಿ ಒದಗಿಸಲಾಗಿದೆ. ಆದರೆ ಇವೆಲ್ಲವೂ ತೀರಾ ದುರ್ಬಲವಾಗಿವೆ. ಮಾಧ್ಯಮ ಸಂಸ್ಥೆಗಳಿಗೆ ಕಿರುಕುಳ, ಪತ್ರಕರ್ತರ ಹತ್ಯೆ ಹಾಗೂ ಬಂಧನ ಸಾಮಾನ್ಯವಾಗಿದೆ. ಇಷ್ಟೆಲ್ಲದರ ನಡುವೆ, ನಾಗರಿಕ ಸಮಾಜವನ್ನು ಕೂಡ ಮೂಲಭೂತ ಹಕ್ಕುಗಳಿಂದ ವಂಚಿಸಲಾಗಿದೆ. ಸೇನೆ ಅಧಿಕಾರ ವಹಿಸಿಕೊಂಡಾಗಲೆಲ್ಲ ಸಂವಿಧಾನವನ್ನು ಅಮಾನತುಗೊಳಿಸಲಾಗಿದೆ.

ಲಷ್ಕರ್-ಇ-ತೈಯ್ಬಾ, ಜೈಷ್-ಇ-ಮೊಹಮ್ಮದ್, ತಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್, ಹರಕತ್ ಉಲ್ ಮುಜಾಹಿದೀನ್, ಅಹ್ಲ್-ಇ-ಸುನ್ನತ್ ವಲ್ ಜಮಾತ್, ಅಲ್-ಬೈದಾ, ಹಿಜ್ಬುಲ್ ಮುಜಾಹಿದೀನ್‌ನಂತಹ ಮೂಲಭೂತ ಸಂಘಟನೆಗಳು ಬಡತನ ಹಾಗೂ ನಿರುದ್ಯೋಗಿ ಯುವಕರನ್ನು ದುರ್ಬಳಕೆ ಮಾಡಿಕೊಂಡು, ಯುವಕರಿಗೆ ಆರ್ಥಿಕ ಸಹಾಯ ಒದಗಿಸುವ ಭರವಸೆ ನೀಡುತ್ತವೆ. ಆದರೆ ಅಂತಿಮವಾಗಿ ಅವರನ್ನು ಹಿಂಸಾಚಾರದ ಮಾರ್ಗಕ್ಕೆ ಎಳೆಯುತ್ತವೆ. ದೇಶದ ಅಭಿವೃದ್ಧಿಯನ್ನು ಮರೆತ ಈ ಸಂಘಟನೆಗಳು ತಮ್ಮ ಧಾರ್ಮಿಕ ಹಿತಾಸಕ್ತಿಗಾಗಿ ಅಮಾಯಕರನ್ನು ಪಾಪದ ಕೃತ್ಯಗಳಿಗೆ ಬಳಸಿ ದೇಶಕ್ಕೆ ಮಾರಕವಾಗುತ್ತಿವೆ.

ಈ ಸಂಘಟನೆಗಳು ಯಾರ ಹಿಡಿತದಲ್ಲಿಯೂ ಇಲ್ಲದಿರುವುದರಿಂದ, ಈ ಸಂಘಟನೆಗಳು ಸೃಷ್ಟಿಸುವ ಅರಾಜಕತೆ, ಸರ್ಕಾರಕ್ಕೆ ತೊಂದರೆ ನೀಡುತ್ತದೆ. ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಜನಸಾಮಾನ್ಯರ ನಿತ್ಯದ ಬದುಕಿಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಈ ಸಂಘಟನೆಗಳನ್ನು ನಿಯಂತ್ರಿಸಲಾಗದ ಸರ್ಕಾರ ಅಥವಾ ಈ ಸಂಘಟನೆಗಳ ಹಿಡಿತದಲ್ಲಿರುವ ಸರ್ಕಾರ, ಇದ್ದೂ ಇಲ್ಲದಂತಿದೆ. ಹಾಗಾಗಿಯೇ ಇಲ್ಲಿ ಗಟ್ಟಿಯಾದ ನಿಲುವು ತಾಳುವ ರಾಜಕೀಯ ನಾಯಕನಿಲ್ಲದಿರುವುದು, ಅಂತಹ ನಾಯಕ ಬೆಳೆಯಲು ಪೂರಕ ವಾತಾವರಣವಿಲ್ಲದಿರುವುದು ಕೂಡ ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ.

ವ್ಯವಸ್ಥೆಯನ್ನು ಪ್ರಶ್ನಿಸುವ ಹೋರಾಟಕ್ಕೆ ಸಾರ್ವಜನಿಕರು ಮುಂದಾದರೆ ಅವರನ್ನು ವಿವಿಧ ರೀತಿಯಲ್ಲಿ ಹತ್ತಿಕ್ಕುವ ಪ್ರಯತ್ನ ಸೇನಾಡಳಿತದಿಂದ ನಿರಂತರವಾಗಿ ನಡೆಯುತ್ತಿದೆ. ದುರ್ಬಲ ಸಂವಿಧಾನ, ಸೈನಿಕ ಪ್ರಾಬಲ್ಯ, ಆರ್ಥಿಕ ಸಂಕಷ್ಟ, ಭಯೋತ್ಪಾದನೆ, ಪ್ರಾದೇಶಿಕ ಒಡಕು, ಧಾರ್ಮಿಕ ಉಗ್ರವಾದದಿಂದ ಪಾಕಿಸ್ತಾನದ ಸಾಮಾನ್ಯ ಜನತೆ ನಿತ್ಯವು ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ಆಶಯಗಳಿಗೆ ಪ್ರಾಧಾನ್ಯತೆ ಸಿಗಬೇಕಾದರೆ ಸೇನಾ ಪ್ರಭುತ್ವ ಕೊನೆಗೊಂಡು ಗಟ್ಟಿಯಾದ ಪ್ರಜಾಪ್ರಭುತ್ವ ನಿರ್ಮಾಣವಾಗಬೇಕಿದೆ. ಆಗ ಪಾಕಿಸ್ತಾನಕ್ಕೆ ಮಾತ್ರವಲ್ಲ, ಭಾರತ ಕೂಡ ನೆಮ್ಮದಿಯಿಂದ ಇರಬಹುದು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X