ಗುಲಬರ್ಗಾ ವಿಶ್ವವಿದ್ಯಾಲಯ ಉಳಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆಯ (ಎಐಡಿಎಸ್‌ಒ) ಜಿಲ್ಲಾ ಸಮಿತಿ ಮುಖಂಡರು ಮತ್ತು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷ ಹಣಮಂತ ಎಸ್.ಎಚ್. ಮಾತನಾಡಿ, ‘ಗುಲಬರ್ಗಾ ವಿಶ್ವವಿದ್ಯಾಲಯವು 45 ವರ್ಷಗಳಿಂದ ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ರೂಪಿಸಿದೆ. ಆಳುವ ಸರ್ಕಾರಗಳು ಉನ್ನತ ಶಿಕ್ಷಣವನ್ನು ಬಲಪಡಿಸಿ ಉಳಿಸಲು ಮುಂದಾಗಬೇಕಿತ್ತು. ಆದರೆ, ಅಂತಹ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ’ ಎಂದರು.
‘ವಿ.ವಿಯ ಜಾಗವನ್ನು ಶಿಕ್ಷಣೇತರ ವಿವಿಧ ಇಲಾಖೆಗಳಿಗೆ ನೀಡಲು ಮುಂದಾಗಿರುವುದು ದುರಂತ. ವಿ.ವಿ ಅಭಿವೃದ್ಧಿಗೆ ಯಾವುದೇ ಕ್ರಮ ತೆಗೆದುಕೊಳ್ಳದೆ, ವಿದ್ಯಾರ್ಥಿ ವಿರೋಧಿ ನಿಲುವುಗಳು ತೆಗೆದುಕೊಳ್ಳಲಾಗುತ್ತಿದೆ. ವಿ.ವಿಯ ಬೆಳವಣಿಗೆಗೆ ಆಸಕ್ತಿ ಇಲ್ಲದೆ ಇರುವುದು ಎದ್ದು ತೋರುತ್ತದೆ’ ಎಂದು ಹೇಳಿದರು.
ಎಐಡಿಎಸ್ಒ ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ ಮಾತನಾಡಿ, ‘ಅನ್ಯ ಕಾರ್ಯಗಳಿಗೆ ವಿ.ವಿ ಜಾಗವನ್ನು ಕೊಡುವುದರಿಂದ ಶೈಕ್ಷಣಿಕ ವಾತಾವರಣ ಹಾಳಾಗುತ್ತದೆ’ ಎಂದರು.‘ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಸರಿಯಾದ ಕ್ರಮಗಳನ್ನು ಕೈಗೊಂಡು ಮೂಲಸೌಕರ್ಯ ಒದಗಿಸಬೇಕು. ವಿಶ್ವವಿದ್ಯಾಲಯದ ಜಾಗ ಸಂಪೂರ್ಣವಾಗಿ ವಿದ್ಯಾರ್ಥಿಗಳ ಸಂಶೋಧನೆ ಮತ್ತು ಉನ್ನತೀಕರಣಕ್ಕೆ ಬಳಸಬೇಕು’ ಎಂದು ಆಗ್ರಹಿಸಿದರು.
ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷರಾದ ಪ್ರೀತಿ ದೊಡ್ಡಮನಿ, ಗೋವಿಂದ ಯಳವರ, ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ, ಸದಸ್ಯರಾದ ಯುವರಾಜ್, ರಾಹುಲ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.