ಜೇವರ್ಗಿ ತಾಲೂಕಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಗೌತಮ ಬುದ್ಧ ಜಯಂತಿ ಆಚರಿಸದೆ ಅಗೌರವ ತೋರಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ದಲಿತ ಸೇನೆ ಒತ್ತಾಯಿಸಿದೆ.
ಈ ಸಂಬಂಧ ಜೇವರ್ಗಿ ತಾಲೂಕು ಸಮಿತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ದಲಿತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಗೋಲಾ ಮಾತನಾಡಿ, ‘ಮೇ12 2025 ರಂದು ಬುದ್ಧ ಪೂರ್ಣಿಮೆ ದಿನದಂದು ಗೌತಮ ಬುದ್ಧರ ಜಯಂತಿಯನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಆಚರಣೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಗೌತಮ ಬುದ್ಧರ ಜಯಂತಿ ಆಚರಿಸದೆ ಅಗೌರವ ತೋರಿದ್ದಾರೆ’ ಎಂದು ದೂರಿದರು.
‘ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಗ್ರಾಪಂ ಪಿಡಿಒ ವಿಜಯಕುಮಾರ್ ನವಣಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸದೇ ಕೆಳಹಂತದ ಸಿಬ್ಬಂದಿ ಮುಖಾಂತರ ಕಾಟಾಚಾರಕ್ಕೆ ಭಗವಾನ್ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ’ ಎಂದು ಆರೋಪಿಸಿದರು.
ಇದನ್ನೂ ಓದಿ : ಗುಲಬರ್ಗಾ ವಿಶ್ವವಿದ್ಯಾಲಯ ಉಳಿಸಿ : ಎಐಡಿಎಸ್ಒ ಪ್ರತಿಭಟನೆ
‘ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ, ಸರ್ಕಾರಿ ಆಸ್ಪತ್ರೆ, ಶಾಲಾ-ಕಾಲೇಜುಗಳಲ್ಲಿ ಆಚರಣೆ ಮಾಡದೆ ಸಂಪೂರ್ಣ ನಿರ್ಲಕ್ಷಿಸಿ ಶಾಂತಿಯ ಸಂದೇಶ ಸಾರಿದ ಗೌತಮ ಬುದ್ಧರಿಗೆ ಅವಮಾನಿಸಿದ್ದಾರೆ. ಗೌತಮ ಬುದ್ಧರ ಜಯಂತಿ ಆಚರಿಸಿದ ವೇಳೆ ತೆಗೆಯಲಾದ ಜಿಪಿಎಸ್, ಫೋಟೋ ಸಂಗ್ರಹಿಸಿ, ಜಯಂತಿ ಆಚರಣೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ‘ ಎಂದು ಆಗ್ರಹಿಸಿದರು.
ದಲಿತ ಸೇನೆ ಅಧ್ಯಕ್ಷ ಶಿವಶರಣಪ್ಪ ಮುಂದೇವಾಲ, ಪ್ರಕಾಶ ಕಾಂಬಳೆ, ಜಗದೀಶ್ ನಡಗಟ್ಟಿ, ಖಮರ್ ಪೀರಾನಾಬ್, ಶರಣು ರತ್ನಾಕರ್, ಅಮರನಾಥ ಬೊಮ್ಮನಹಳ್ಳಿ,ದೇವರಾಜ ಕೂಡಲಗಿ ಮತ್ತಿತರರು ಇದ್ದರು.