ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಕೊನೆಯ ಹಂತದಲ್ಲಿ ಎಡವಿದ್ದ ಇಂಗ್ಲೆಂಡ್ ತಂಡ ಆ್ಯಷಸ್ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಅಂತಹ ತಪ್ಪುಗಳನ್ನು ಮಾಡಲಿಲ್ಲ. ಹ್ಯಾರಿ ಬ್ರೂಕ್ ಹಾಗೂ ಕ್ರಿಸ್ ವೋಕ್ಸ್ ಅವರು 7ನೇ ವಿಕೆಟ್‌ಗೆ 59 ರನ್‌ಗಳ ಜೊತೆಯಾಟದ ನೆರವಿನಿಂದ ಮೂರು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
ಆ್ಯಷಸ್ ಸರಣಿಯ ಮೂರನೇ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 250 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್, ನಾಲ್ಕನೇ ದಿನದಲ್ಲಿಯೇ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಜಯ ದಾಖಲಿಸಿತು. ಮಧ್ಯಮ ಕ್ರಮಾಂಕದ ಆಟಗಾರ ಹ್ಯಾರಿ ಬ್ರೂಕ್ 93 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ ಸಮಯೋಚಿತ 75 ರನ್ ಹಾಗೂ ಆಲ್‌ರೌಂಡರ್ ಕ್ರಿಸ್ ವೋಕ್ಸ್ 47 ಚೆಂಡುಗಳಲ್ಲಿ 4 ಬೌಂಡರಿಗಳೊಂದಿಗೆ ಅಜೇಯ 32 ರನ್ ಗಳಿಸಿ ಗೆಲುವಿನ ರೂವಾರಿಯಾದರು.
ಆಸ್ಟ್ರೇಲಿಯ ಪರ ವೇಗದ ಬೌಲರ್ ಮಿಷಲ್ ಸ್ಟಾರ್ಕ್ 78/5 ವಿಕೆಟ್ ಪಡೆದರೂ ಜಯವನ್ನು ಕಿತ್ತುಕೊಳ್ಳಲು ಸಾಧ್ಯವಾಗಲಿಲ್ಲ. ಇದರೊಂದಿಗೆ 5 ಟೆಸ್ಟ್‌ಗಳ ಸರಣಿಯಲ್ಲಿ ಇಂಗ್ಲೆಂಡ್ 2-1 ರೊಂದಿಗೆ ಕೊಂಚ ಹಿನ್ನಡೆಯನ್ನು ತಪ್ಪಿಸಿಕೊಂಡು ಸರಣಿಯ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಲೀಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನಾಲ್ಕನೇ ದಿನವಾದ ಇಂದು (ಜುಲೈ 9) ಇಂಗ್ಲೆಂಡ್ 250 ರನ್‌ಗಳ ಗುರಿ ಪಡೆದರೂ 93 ರನ್‌ಗಳಾಗುವಷ್ಟರಲ್ಲಿ 3 ವಿಕೆಟ್ ಪಡೆದ ಆಸೀಸ್ ಬೌಲರ್‌ಗಳು ಆರಂಭಿಕ ಮುನ್ನಡೆ ಪಡೆದರು.
ಈ ಸುದ್ದಿ ಓದಿದ್ದೀರಾ? ಆ್ಯಷಸ್ ಸರಣಿ | ಬೆನ್ ಸ್ಟೋಕ್ಸ್ ಸ್ಫೋಟಕ ಆಟ ವ್ಯರ್ಥ; ಎರಡನೇ ಗೆಲುವು ದಾಖಲಿಸಿದ ಆಸ್ಟ್ರೇಲಿಯ
ಝಾಕ್ ಕ್ರಾಲಿ 44, ಬೆನ್ ಡಕೆಟ್ 23,ಜೋ ರೂಟ್ 21, ಹ್ಯಾರಿ ಬ್ರೂಕ್ 75, ಕ್ರಿಸ್ ವೋಕ್ಸ್ ಅಜೇಯ 32 ಹಾಗೂ ಅಂತಿಮವಾಗಿ ಮಾರ್ಕ್ ವುಡ್ ಅಜೇಯ 16 ರನ್ ಗಳಿಸುವುದರೊಂದಿಗೆ ಇಂಗ್ಲೆಂಡ್‌ಗೆ ಸರಣಿಯ ಮೊದಲ ಗೆಲುವು ತಂದುಕೊಟ್ಟರು.
ಆಸ್ಟ್ರೇಲಿಯ 263 ರನ್‌ಗಳ ಮೊದಲ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ಇಂಗ್ಲೆಂಡ್ 237 ರನ್ ಗಳಿಸಿ 26 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಇನ್ನಿಂಗ್ಸ್ ಆಡಿದ್ದ ಆಸ್ಟ್ರೇಲಿಯ 224 ರನ್ ಗಳಿಸಿ ಅತಿಥೇಯ ತಂಡದ ಗೆಲುವಿಗೆ 250 ರನ್‌ಗಳ ಗುರಿ ನೀಡಿತ್ತು. ಜುಲೈ 19 ರಂದು ಇಂಗ್ಲೆಂಡ್‌ನ ಮ್ಯಾಂಚಿಸ್ಟರ್‌ನಲ್ಲಿ ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್ ಆರಂಭವಾಗಲಿದೆ.
ಇಂಗ್ಲೆಂಡ್ ಸರಣಿ ಆಸೆ ಜೀವಂತ
5 ಪಂದ್ಯಗಳ ಆ್ಯಷಸ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವು ಜಯ ಸಾಧಿಸಿದೆ. ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 2 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಲಾರ್ಡ್ಸ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 43 ರನ್ಗಳಿಂದ ಜಯ ಸಾಧಿಸಿತ್ತು. ಲೀಡ್ಸ್ ಮೈದಾನದಲ್ಲಿ ಜಯ ಸಾಧಿಸುವ ಮೂಲಕ ಇಂಗ್ಲೆಂಡ್ ತಂಡವು ಸರಣಿಯನ್ನು 2-1 ಅಂತರಕ್ಕೆ ಇಳಿಸಿದ್ದಾರೆ. ಈ ಮೂಲಕ ಸರಣಿ ಗೆಲ್ಲುವ ಆಸೆಯನ್ನು ಜೀವಂತವಿರಿಸಿಕೊಂಡಿದೆ.