ಶುಶ್ರೂಷಕರ ವೈದ್ಯಕೀಯ ಸೇವೆ ಶ್ರೇಷ್ಠವಾದದ್ದು ಎಂದು ಶೈನಿ ಪ್ರದೀಪ್ ಗುಂಟಿ ಹೇಳಿದರು.
ಬೀದರ್ ನಗರದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು ಹಾಗೂ ಬ್ರಿಮ್ಸ್ ಶುಶ್ರೂಷಾ ಕಾಲೇಜು ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ರೋಗಿ ಆಸ್ಪತ್ರೆಗೆ ಬರುವುದರಿಂದ ಹಿಡಿದು ಗುಣಮುಖನಾಗಿ ಬಿಡುಗಡೆ ಹೊಂದುವವರೆಗೂ ಶುಶ್ರೂಷಕರು ಮಹತ್ವದ ಪಾತ್ರ ವಹಿಸುತ್ತಾರೆ.ನರ್ಸಿಂಗ್ ಶಾಲೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಾನವೀಯ ಸೇವೆ ಮೂಲಕ ಉತ್ತಮ ಶುಶ್ರೂಷಕರಾಗಲು ಪ್ರಯತ್ನಿಸಬೇಕು’ ಎಂದು ಹೇಳಿದರು.
‘ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ಅಂತರರಾಷ್ಟ್ರೀಯ ಶುಶ್ರೂಷಕರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನರ್ಸಿಂಗ್ ಸ್ಕೂಲ್ ಹಾಗೂ ಶುಶ್ರೂಷಾ ಕಾಲೇಜು ಪ್ರಾಚಾರ್ಯ ರಾಜಕುಮಾರ ಮಾಳಗೆ ಹೇಳಿದರು.
‘ಇಟಲಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಉನ್ನತ ಹುದ್ದೆಗೆ ಹೋಗಬಹುದಿತ್ತು. ಆದರೆ, ಬಡ ಜನರ ವೈದ್ಯಕೀಯ ಸೇವೆಗೆ ನೆರವಾಗಲು ಶುಶ್ರೂಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. 1854 ರ ಮಹಾ ಯುದ್ಧದ ಸಂದರ್ಭದಲ್ಲಿ ಶುಶ್ರೂಷಕರ ತಂಡದೊಂದಿಗೆ ಗಾಯಾಳು ಸೈನಿಕರ ಶುಶ್ರೂಷೆ ಮಾಡಿದರು’ ಎಂದು ತಿಳಿಸಿದರು.
ಇದಕ್ಕೂ ಮೊದಲು ಸರ್ಕಾರಿ ನರ್ಸಿಂಗ್ ಸ್ಕೂಲ್ ಹಾಗೂ ಬ್ರಿಮ್ಸ್ ಶುಶ್ರೂಷಾ ಕಾಲೇಜು ವತಿಯಿಂದ ನಗರದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಬಳಿಕ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಪ್ರಯುಕ್ತ ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು.
ಇದನ್ನೂ ಓದಿ : ಬೀದರ್ | ಕಾನೂನು ಬಾಹಿರ ಚಟುವಟಿಕೆ : ಏಪ್ರಿಲ್ ತಿಂಗಳಲ್ಲಿ 184 ಪ್ರಕರಣ; ₹30.32 ಲಕ್ಷ ಮೌಲ್ಯದ ವಸ್ತು ಜಪ್ತಿ
ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ, ಬ್ರಿಮ್ಸ್ ಮುಖ್ಯ ಆಡಳಿತಾಧಿಕಾರಿ ಸುರೇಖಾ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ. ಸಂಜೀವಕುಮಾರ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹಮ್ಮದ್ ಅಹಮ್ಮದೊದ್ದೀನ್, ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ, ಖಜಾಂಚಿ ದೇವಪ್ಪ ಚಾಂಬೋಳೆ, ಲಿಂಗಾಯತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ್ ಡೊಂಗರಗಿ ಉಪಸ್ಥಿತರಿದ್ದರು. ಪ್ರಕಾಶ ಮಹಿಮಾಕರ್ ನಿರೂಪಿಸಿದರು.