ಒಳಮೀಸಲಾತಿ ಜಾರಿಗಾಗಿ ಹತ್ತು ದಿನಗಳ ಹಿಂದೆ ಆರಂಭವಾದ ಬಹು ನಿರೀಕ್ಷಿತ ‘ಪರಿಶಿಷ್ಟ ಜಾತಿ’ ಸಮೀಕ್ಷೆಗೆ ತಾಂತ್ರಿಕ ದೋಷಗಳು ಅಡ್ಡಿಯುಂಟುಮಾಡುತ್ತಿವೆ. ಸರ್ವರ್ ಸಮಸ್ಯೆ ಮತ್ತು ಅಗತ್ಯ ಮಾನವಶಕ್ತಿಯ ಕೊರತೆಯನ್ನು ಸಮೀಕ್ಷೆ ಪ್ರಕ್ರಿಯೆಯು ಎದುರಿಸುತ್ತಿದೆ. ಇದು ನಾಗರಿಕರು ಕೋಪಗೊಳ್ಳುವಂತೆ ಮಾಡಿದೆ. ಗಣತಿದಾರರನ್ನು ಚಿಂತೆಗೀಡು ಮಾಡಿದೆ.
ಪರಿಶಿಷ್ಟ ಜಾತಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಈ ಸಮೀಕ್ಷೆಯು ನಿರ್ಣಾಯಕವಾಗಿದೆ. ಆದರೆ, ಸಮೀಕ್ಷೆ ಈಗ ಸರ್ವರ್ ಕ್ರ್ಯಾಶ್‌ಗಳು ಮತ್ತು ಸಾಫ್ಟ್‌ವೇರ್ ನಿಧಾನಗತಿಯಂತಹ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಡೇಟಾ ಸಂಗ್ರಹಣೆಯಲ್ಲಿ ಭಾರೀ ವಿಳಂಬವಾಗಲಿದೆ ಎಂದು ಹೇಳಲಾಗಿದೆ.
ರಾಜ್ಯದ ನಾನಾ ಭಾಗಗಳಲ್ಲಿ ಸಮೀಕ್ಷೆಗೆ ಒಳಪಡುತ್ತಿರುವ ಜನರು ಸರ್ವರ್ ನಿಧಾನವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಗೆ ಹೆಚ್ಚು ಸಮಯ ವ್ಯಯವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಣತಿದಾರರು ಅಸಹಾಯಕರಾಗಿದ್ದಾರೆ. ದೋಷವುಳ್ಳ ಅಪ್ಲಿಕೇಶನ್‌ಗಳು ಮತ್ತು ಓವರ್‌ಲೋಡ್ ಸರ್ವರ್‌ಗಳಿಂದಾಗಿ ಸಮೀಕ್ಷೆಗೆ ಒಳಪಡಿಸುವ ನಿವಾಸಿಗಳನ್ನು ಕೋಪಗೊಳ್ಳುವಂತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
“ಸರ್ಕಾರವು ಇಷ್ಟು ಮುಖ್ಯವಾದ ಸಮೀಕ್ಷೆಯನ್ನು ಈ ರೀತಿ ನಡೆಸಿದರೆ, ಸಮೀಕ್ಷೆಯ ಫಲಿತಾಂಶವನ್ನು ನಾವು ಹೇಗೆ ನಂಬಲು ಸಾಧ್ಯ” ಎಂದು ಸಮೀಕ್ಷೆಗೆ ಒಳಪಟ್ಟ ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
“ಸಮೀಕ್ಷೆಯ ಅಪ್ಲಿಕೇಷನ್‌ನಲ್ಲಿ ತಾಂತ್ರಿಕ ಸಮಸ್ಯೆಯಿತ್ತು. ಈ ಬಗ್ಗೆ ಸರ್ವೇಯರ್‌ಗಳಿಂದ ಅನೇಕ ಕರೆಗಳು ಬಂದಿವೆ. ಆ ಸಮಸ್ಯೆಯನ್ನು ಈಗ ಪರಿಹರಿಸಲಾಗಿದೆ” ಎಂದು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಶುಕ್ರವಾರ ಮತ್ತು ಶನಿವಾರ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಆಗ ಗಣತಿದಾರರಿಂದ ನಮಗೆ ಅನೇಕ ದೂರುಗಳು ಬಂದಿದ್ದವು. ಈ ಸಮಸ್ಯೆ ಬಗೆಹರಿದಿದೆ. ದೂರುಗಳ ಸಂಖ್ಯೆ ಕಡಿಮೆಯಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ” ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೂ, ಸಮೀಕ್ಷೆಯ ನಿಖರತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಅನೇಕರು ಇನ್ನೂ ಸಂಶಯ ವ್ಯಕ್ತಪಡಿಸಿದ್ದಾರೆ.