ಬೀದರ್ ಗಾಂಧಿ ಗಂಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆ ಹಚ್ಚಿರುವ 8 ಕಳ್ಳತನ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಬೆಲೆ ಬಾಳುವ ಚಿನ್ನಾಭರಣ ಸ್ವತ್ತುಗಳನ್ನು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
8 ಪ್ರಕರಣಗಳಲ್ಲಿ 5 ಆರೋಪಿಗಳನ್ನು ಬಂಧಿಸಲಾಗಿದೆ. ಕಳ್ಳತನವಾದ ಸ್ವತ್ತುಗಳಲ್ಲಿನ 307 ಗ್ರಾಂ ಚಿನ್ನ, 980 ಗ್ರಾಂ ಬೆಳ್ಳಿ, ಎರಡು ದ್ವಿಚಕ್ರ, ಒಂದು ಕಾರು ಹಾಗೂ ನಕಲಿ ಪಿಸ್ತೂಲ್ ಸೇರಿ ಒಟ್ಟು ₹30.80 ಲಕ್ಷ ಮೌಲ್ಯದ ಸ್ವತ್ತು ಪತ್ತೆಯಾಗಿದೆ. ಕಳ್ಳತನವಾದ ಚಿನ್ನಾಭರಣ ಮರಳಿ ಪಡೆದುಕೊಂಡ ವಾರಸುದಾರರು ಸಂತಸದಿಂದ ಮರಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘8 ಮನೆಗಳ್ಳತನ ಪ್ರಕರಣಗಳಲ್ಲಿ 5 ಆರೋಪಿಗಳನ್ನು ಬಂಧಿಸಲಾಗಿದ್ದು , ಇನ್ನೂ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ವೈಜ್ಞಾನಿಕ ಸಾಕ್ಷಿಗಳು ಸಾಕಷ್ಟು ನೆರವಾಗಿವೆ’ ಎಂದು ತಿಳಿಸಿದರು.
ಸರಗಳ್ಳತನ ಪ್ರಕರಣದಲ್ಲಿ ಖಾಸಗಿ ಶಾಲೆ ಶಿಕ್ಷಕ :
‘ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಇಬ್ಬರೂ ಈ ಹಿಂದೆ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಓರ್ವ ಆರೋಪಿ ಬೀದರ್ ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಇನ್ನೋರ್ವ ಬೀದರ್‌ನಲ್ಲಿ ಆಟೋ ಚಾಲಕನಾಗಿದ್ದಾನೆ’ ಎಂದು ಮಾಹಿತಿ ನೀಡಿದರು.
‘ಕಳ್ಳತನ, ದರೋಡೆ ಪ್ರಕರಣಗಳ ತಡೆಗೆ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು. ಕಳ್ಳತನ ಪ್ರಕರಣ ತಡೆಗಟ್ಟುವ ಉದ್ದೇಶದಿಂದ ನಗರದ ಚಿದ್ರಿ, ನೌಬಾದ್ ಹಾಗೂ ಶಹಾಪುರ ಗೇಟ್ ಬಳಿ ಚೆಕ್ ಪೋಸ್ಟ್‌ಗಳು ತೆರೆಯಲಾಗಿದ್ದು, ನಗರಕ್ಕೆ ಪ್ರವೇಶಿಸುವವರನ್ನು ತಪಾಸಣೆ ನಡೆಸಿ ಕಟ್ಟೆಚ್ಚರ ವಹಿಸಲಾಗುತ್ತಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಬೀದರ್ ಗ್ರಾಮೀಣ ಸಿಪಿಐ ಜಿ.ಎಸ್.ಬಿರಾದರ್, ಗಾಂಧಿ ಗಂಜ ಪೊಲೀಸ್ ಠಾಣೆ ಪಿಎಸ್ಐ ಆನಂದರಾವ್ ಎಸ್.ಎನ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಕಾನೂನು ಬಾಹಿರ ಚಟುವಟಿಕೆ : ಏಪ್ರಿಲ್ ತಿಂಗಳಲ್ಲಿ 184 ಪ್ರಕರಣ; ₹30.32 ಲಕ್ಷ ಮೌಲ್ಯದ ವಸ್ತು ಜಪ್ತಿ
ಕಾರ್ಯಾಚರಣೆಯಲ್ಲಿ ಗಾಂಧಿ ಗಂಜ ಪೊಲೀಸ್ ಠಾಣೆ ಸಿಬ್ಬಂದಿಗಳಾದ ನವೀನ್, ಅನೀಲ್, ಆರೀಫ್, ಇರ್ಫಾನ್, ಗಂಗಾಧರ, ಸುಧಾಕರ್, ಇಮ್ರಾನ್, ಪ್ರಶಾಂತ, ಮಲ್ಲಿಕಾರ್ಜುನ, ನಿಂಗಪ್ಪ, ರಾಹುಲ್ ಹಿಬ್ಬಾರೆ, ವಿಜಯಕುಮಾರ್ ಬಾಳೂರೆ, ಅಶೋಕ್ ಕೋಟೆ ಮತ್ತು ತಾಂತ್ರಿಕ ಅಧಿಕಾರಿಗಳಾದ ಹರ್ಷಾ, ವಿ.ಎಸ್.ಮಂಕಣಿ ಭಾಗವಹಿಸಿದ್ದರು.