ನುಡಿಯಂಗಳ | ಶಬ್ದ ಸಂಪತ್ತು ಉತ್ತಮ ಸಂಬಂಧಗಳ ಬುನಾದಿ

Date:

Advertisements

ಆಲೋಚನೆ-ಪದದ ಪರಸ್ಪರ ಬಲವಾದ ನಂಟನ್ನು ಹೊಂದಿರುವ ವ್ಯಕ್ತಿಯು ವಿಚಾರಗಳನ್ನು ಪರಿಕಲ್ಪಿಸಿಕೊಳ್ಳಲು ಮತ್ತು ತಮ್ಮ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ಪರಿಣಾಮಕಾರಿಯಗಿ ಸಂವಹನಿಸಲು ಸಮರ್ಥರಾಗಿರುತ್ತಾರೆ. ಬಲವಾದ ಆಲೋಚನೆ-ಪದದ ನಂಟು ನಮ್ಮೊಂದಿಗೆ ನಾವೇ ಮಾತಾಡಿಕೊಳ್ಳುವುದನ್ನು ಉತ್ತೇಜಿಸುತ್ತದೆ. ಇದು ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ

ಆಲೋಚನೆಗಳು ಎಂದರೆ ನಮ್ಮ ಮನಸ್ಸಿನಲ್ಲಿರುವ ಮಾಹಿತಿ, ವಿಚಾರಗಳು, ನಂಬಿಕೆಗಳು ಮತ್ತು ಗ್ರಹಿಕೆಗಳು. ಅವು ಪ್ರಜ್ಞಾಪೂರ್ವಕವಾಗಿರಬಹುದು, ಅಪ್ರಜ್ಞಾಪೂರ್ವಕವಾಗಿರಬಹುದು; ಅವು ನಮ್ಮ ಭಾವನೆಗಳು ಮತ್ತು ವರ್ತನೆಗಳನ್ನು ಆಳವಾಗಿ ಪ್ರಭಾವಿಸುತ್ತವೆ. ಇನ್ನು ಪದಗಳು ಎಂದರೆ, ನಮ್ಮ ಆಲೋಚನೆ, ಭಾವನೆಗಳ ಮೌಖಿಕ ಅಥವಾ ಲಿಖಿತ ಅಭಿವ್ಯಕ್ತಿ. ಹೀಗಾಗಿ ಆಲೋಚನೆಗಳು ಮತ್ತು ಪದಗಳು ಬಹಳ ಆಳವಾಗಿ ಪರಸ್ಪರ ನಂಟನ್ನು ಹೊಂದಿವೆ. ಆಲೋಚನೆಗಳು ನಮ್ಮನ್ನು ನಾವು ಅಭಿವ್ಯಕ್ತಿಸಲು ನಾವು ಆಯ್ಕೆ ಮಾಡಿಕೊಳ್ಳುವ ಪದಗಳನ್ನು ರೂಪಿಸುತ್ತವೆ; ಹಾಗೆಯೇ ನಾವು ಬಳಸುವ ಪದಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ.

ಭಾಷೆ ಮೊದಲೋ ಆಲೋಚನೆ ಮೊದಲೋ ಎಂದು ಕೇಳಿದರೆ, ‘ಕೋಳಿ ಮೊದಲೋ, ಮೊಟ್ಟೆ ಮೊದಲೋ’ ಎಂದು ಕೇಳಿದ ಹಾಗೆ ಅನ್ನಿಸಬಹುದು ನಿಮಗೆ. ಆದರೆ, ಹಾರ್ವರ್ಡ್‍ನ ಮನೋವಿಜ್ಞಾನಿ ಎಲಿಜಬೆತ್ ಸ್ಪೆಲ್ಕ್ ಐದು ತಿಂಗಳ ಮಕ್ಕಳೊಂದಿಗೆ ಮಾಡಿದ ಪ್ರಯೋಗಗಳ ಮೂಲಕ ಆಲೋಚನೆ ಮೊದಲು ಎಂದು ಗೊತ್ತಾಗಿದೆ. ಅವರು ಹೇಳುತ್ತಾರೆ, “ವಸ್ತುಗಳ ಬಗ್ಗೆ ಆಲೋಚಿಸಲು ಶಿಶುಗಳು ಭಾಷೆಯಿಂದ ಮುಕ್ತವಾದ ಆಲೋಚನಾ ವ್ಯವಸ್ಥೆಯೊಂದಿಗೆ ಹುಟ್ಟಿರುತ್ತವೆ, ಈ ಪರಿಕಲ್ಪನೆಗಳು ಅವರು ನಂತರ ಕಲಿಯುವ ಪದಗಳಿಗೆ ಅರ್ಥವನ್ನು ಕೊಡುತ್ತವೆ. ಮಗು ಒಮ್ಮೆ ಭಾಷೆಯನ್ನು ಕಲಿಯಲು ಆರಂಭಿಸಿದ ನಂತರ ಆಲೋಚನೆ ಮತ್ತು ಭಾಷೆ ಪರಸ್ಪರ ಪೂರಕವಾಗಿ ವರ್ತಿಸುತ್ತವೆ”.

ನಮ್ಮ ಗ್ರಹಿಕೆಗಳು, ಆಲೋಚನೆಗಳು ಮತ್ತು ಕ್ರಿಯೆಗಳನ್ನು ರೂಪಿಸುವಲ್ಲಿ ಪದಗಳು ಹೊಂದಿರುವ ಶಕ್ತಿಯನ್ನು ನಾವು ಸಾಮಾನ್ಯವಾಗಿ ಹಗುರವಾಗಿ ಕಾಣುತ್ತೇವೆ. ಆಷ್ಟ್ರಿಯಾದ ತತ್ವಜ್ಞಾನಿ ಲುದ್ವಿಗ್ ವಿಟ್ಗೆನ್‍ಸ್ಟೈನ್ ಒಮ್ಮೆ ಹೇಳಿದರು: “ನನ್ನ ಭಾಷೆಯ ಮಿತಿಗಳು ಎಂದರೆ ನನ್ನ ಪ್ರಪಂಚದ ಮಿತಿಗಳು” ಎಂದು.

01

ಆಲೋಚನೆ-ಪದದ ಪರಸ್ಪರ ಬಲವಾದ ನಂಟನ್ನು ಹೊಂದಿರುವ ವ್ಯಕ್ತಿಯು ವಿಚಾರಗಳನ್ನು ಪರಿಕಲ್ಪಿಸಿಕೊಳ್ಳಲು ಮತ್ತು ತಮ್ಮ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ಪರಿಣಾಮಕಾರಿಯಗಿ ಸಂವಹನಿಸಲು ಸಮರ್ಥರಾಗಿರುತ್ತಾರೆ. ಬಲವಾದ ಆಲೋಚನೆ-ಪದದ ನಂಟು ನಮ್ಮೊಂದಿಗೆ ನಾವೇ ಮಾತಾಡಿಕೊಳ್ಳುವುದನ್ನು ಉತ್ತೇಜಿಸುತ್ತದೆ. ಇದು ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಇದು ನಮಗೆ ಇತರರೊಂದಿಗೆ ದೃಢನಿಶ್ಚಯ ಮತ್ತು ವಿಶ್ವಾಸಾರ್ಹತೆಯೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.

ಈ ಸಂಕ್ಷಿಪ್ತ ಚರ್ಚೆಯ ಮೂಲಕ ನಾನು ಇಲ್ಲಿ ಹೇಳಲು ನೋಡುತ್ತಿರುವುದು ಎಂದರೆ, ನಮ್ಮಲ್ಲಿ ಹೆಚ್ಚು ಪದಸಂಪತ್ತು ಇದ್ದಷ್ಟು ನಾವು ಹೆಚ್ಚು ಸಮರ್ಥರಾದ ಸಂವಹನಕಾರರಾಗುತ್ತೇವೆ. ಅದರ ಮೂಲಕ ನಮ್ಮ ಸಾಮಾಜಿಕ ಸಂಬಂಧಗಳು ಹೆಚ್ಚು ಶ್ರೀಮಂತವಾಗಿರುತ್ತದೆ. ಪದಗಳ ಈ ಶ್ರೀಮಂತಿಕೆಯು ನೈಜವಾಗಿಯೂ ಬೆಳೆಯುತ್ತಾ ಹೋಗುತ್ತದೆ. ಅದು ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಕೊಂಡರೆ ನಾವು ಈ ಕ್ರಿಯೆಯನ್ನು ಹೆಚ್ಚು ತ್ವರಿತ, ಹೆಚ್ಚು ಪ್ರಯೋಜನಕಾರಿಯನ್ನಾಗಿ ಮಾಡಬಹುದು.

ಪದಕೋಶದಿಂದ ಪ್ರಯೋಜನ

ಆಲಿಸುವಿಕೆಯ ಕೌಶಲದಲ್ಲಿ ನಿಮ್ಮ ಪದಕೋಶವು ಶ್ರೀಮಂತವಾಗಿದ್ದರೆ, (ವಿಷಯವು ನಿಮಗೆ ಪರಿಚಿತವಾಗಿದ್ದರೆ) ಇನ್ನೊಬ್ಬರು ಆಡುವ ಮಾತು, ಮಾಡುವ ಭಾಷಣ, ರೇಡಿಯೋ/ಟಿವಿ ಕಾರ್ಯಕ್ರಮ, ಸಾಕ್ಷ್ಯ/ವಿಜ್ಞಾನ ಚಿತ್ರದಲ್ಲಿರುವ ಭಾಷೆ ಹೆಚ್ಚು ಸುಲಭವಾಗಿ ಪ್ರಯೋಜನಕಾರಿಯಾಗಿ ಅರ್ಥವಾಗುತ್ತದೆ. ಹಾಗೆಯೇ ಮಾತಾಡುವ ಕೌಶಲದಲ್ಲಿನ ಪದಸಂಪತ್ತು ನಿಮ್ಮ ಪರಿಣಾಮಕಾರಿ ಸಂವಹನಕ್ಕೆ ಸಹಕಾರಿಯಾಗುತ್ತದೆ. ನೀವು ಅಡೆತಡೆ ಇಲ್ಲದೇ ನಿರರ್ಗಳವಾಗಿ ಮಾತಾಡಬಹುದು.

ನೀವು ಏನನ್ನಾದರೂ ಓದಲು ನೋಡಿದಾಗ ಅದರಲ್ಲಿ ಬಳಸಲಾಗಿರುವ ಪದಗಳಲ್ಲಿ ಕನಿಷ್ಠ 98%ರಷ್ಟು ಪದಗಳಾದರೂ ನಿಮಗೆ ಗೊತ್ತಿರಬೇಕು, ಅವುಗಳ ಬಲದಿಂದ ಉಳಿದ ಪದಗಳು ಅರ್ಥವಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ವಿಷಯವೂ ಗ್ರಹಿಕೆಯಾಗುತ್ತದೆ. ಇನ್ನು, ಮನಸ್ಸಿನಲ್ಲಿರುವುದನ್ನು ಅಸ್ಖಲಿತವಾಗಿ, ಸ್ಪಷ್ಟವಾಗಿ ಬರವಣಿಗೆಯಲ್ಲಿ ಇಡಬೇಕು ಎಂದರೆ ನೀವು ಬಯಸುವ ವಿಷಯಗಳ ಕುರಿತು ಮತ್ತು ಒಟ್ಟಾರೆ ಭಾಷೆಯ ಮಟ್ಟಿಗೆ ಶ್ರೀಮಂತವಾದ ಪದಕೋಶ ಇರಬೇಕಾಗುತ್ತದೆ. ಒಟ್ಟಾರೆ ಒಂದು ಭಾಷೆಯಲ್ಲಿನ ಪದಕೋಶ ಮಟ್ಟವು ನಮ್ಮ ವೈಯಕ್ತಿಕ, ಸಾಮಾಜಿಕ ಮತ್ತು ವೃತ್ತಿಬದುಕಿನ ಯಶಸ್ಸಿನ ಸೂಚಿಯಾಗಿರುತ್ತದೆ.

ಶಬ್ದಕೋಶ ಹೇಗೆ ಬೆಳೆಯುತ್ತದೆ?

ಒಂದು ಭಾಷೆಯ ಶಬ್ದಕೋಶ ಎಂದರೆ ಆ ಭಾಷೆಯಲ್ಲಿ ಲಭ್ಯವಿರುವ ಎಲ್ಲಾ ಶಬ್ದಗಳ ಭಂಡಾರ. ಉದಾಹರಣೆಗೆ ಕನ್ನಡ ಭಾಷೆಯ ಶಬ್ದಕೋಶ. ಕನ್ನಡದಲ್ಲಿ ಎಷ್ಟು ಶಬ್ದಗಳಿಗೆ ಎಂದು ಕೇಳಿದರೆ ‘ಅಸಂಖ್ಯಾತ’ ಎಂದು ಹೇಳುವುದಷ್ಟೇ ಸರಿಯಾದ ಉತ್ತರವಾಗಬಹುದು. ನಿಗದಿತ ವರ್ಷದಲ್ಲಿ ಪ್ರಕಟವಾಗಿರುವ ನಿಘಂಟುವಿನಲ್ಲಿ ಎಷ್ಟು ಪದಗಳಿವೆ ಎಂದು ಎಣಿಸಿ ಹೇಳಬಹುದು, ಆದರೆ ಪ್ರತಿ ಕ್ಷಣವೂ ಬೆಳೆಯುತ್ತಿರುವ ಜೀವಂತ ಭಾಷೆಯಾದ ಕನ್ನಡದಲ್ಲಿ ಎಷ್ಟು ಪದಗಳಿವೆ ಎಂದು ಹೇಳಲು ಸಾಧ್ಯವೇ ಇಲ್ಲ. ಹಾಗೆಯೇ, ಕನ್ನಡ ಬಲ್ಲ ಒಬ್ಬರಿಗೆ ಎಷ್ಟು ಪದ ಗೊತ್ತಿವೆ ಎಂದು ಹೇಳುವುದೂ ಕಷ್ಟವೇ. ಆದರೆ, ಒಂದು ಮಾತು ಮಾತ್ರ ಸತ್ಯ. ಕನ್ನಡ ಬಲ್ಲ ಪ್ರತಿಯೊಬ್ಬರ ಪದಕೋಶವು ಬೇರೆ ಬೇರೆ. ಪ್ರತಿಯೊಬ್ಬರ ಪದಕೋಶ ಅವರೊಬ್ಬರಿಗೇ ಪ್ರಯೋಜನ, ಇನ್ನೊಬ್ಬರ ಪದಕೋಶದಿಂದ ನನಗೆ ಪ್ರಯೋಜನವಿಲ್ಲ. ನನಗೆ ಭಾಷೆಯಿಂದ ಪ್ರಯೋಜನವಾಗಬೇಕು ಎಂದರೆ ನಾನು ನನ್ನ ಪದಕೋಶವನ್ನು ಬೆಳೆಸಿಕೊಳ್ಳಬೇಕು. ಕನ್ನಡದ ಪರಿಸರದಲ್ಲಿದ್ದರೆ, ಸಮುದಾಯದ ಸದಸ್ಯರೊಂದಿಗೆ ಒಡನಾಡುತ್ತಿದ್ದರೆ ನನ್ನ ಕನ್ನಡದ ಶಬ್ದಕೋಶವು ಅನಾಯಾಸ, ಅಪ್ರಜ್ಞಾಪೂರ್ವಕವಾಗಿಯೂ ಬೆಳೆಯುತ್ತಿರುತ್ತದೆ. ಇದು ಹೇಗೆ ನಡೆಯುತ್ತದೆ ಎಂಬ ಕ್ರಿಯೆಯನ್ನು ಅರ್ಥ ಮಾಡಿಕೊಂಡು ಅದರ ಹಂತಗಳನ್ನು ಅನುಸರಿಸುವ ಮೂಲಕ ನಾವು ನಮ್ಮ ಪದಕೋಶವನ್ನು ಪ್ರಜ್ಞಾಪೂರ್ವಕವಾಗಿಯೂ ಬೆಳೆಸಿಕೊಳ್ಳಬಹುದು. ಅದು ಹೇಗೆ?

ಬೆಳೆಯುವ ಪ್ರಕ್ರಿಯೆ

ಪದಕೋಶಗಳನ್ನು ಅವುಗಳ ಸ್ವಭಾವದ ದೃಷ್ಟಿಯಿಂದ ಎರಡು ಗುಂಪುಗಳನ್ನಾಗಿ ವಿಂಗಡಿಸಿ ಅರ್ಥ ಮಾಡಿಕೊಳ್ಳಬಹುದು: ಅಸಕ್ರಿಯ ಮತ್ತು ಸಕ್ರಿಯ. ಇನ್ನೊಬ್ಬರು ಮಾತಾಡುವಾಗ ಆಲಿಸಿ ಅರ್ಥ ಮಾಡಿಕೊಳ್ಳಲು ಮತ್ತು ಇನ್ನೊಬ್ಬರು ಬರೆದಿದ್ದನ್ನು ಓದಿ ಅರ್ಥ ಮಾಡಿಕೊಳ್ಳಲು ಸಹಾಯಕವಾಗುವ ಪದಕೋಶ (ನಿಷ್ಕ್ರಿಯ ಅಲ್ಲ) ‘ಅಸಕ್ರಿಯ’ (ಗ್ರಹಿಕೆ/ರಿಸೆಪ್ಟಿವ್) ಪದಕೋಶ. ನಾವೇ ಸ್ವತಃ ಮಾತಾಡುವಾಗ ಮತ್ತು ಸ್ವತಃ ಬರೆಯುವಾಗ ನೆರವಿಗೆ ಬರೆಯುವ ಪದಗಳ ಸಂಗ್ರಹ ‘ಸಕ್ರಿಯ’ (ಉತ್ಪಾದಕ/ಪ್ರಡಕ್ಟಿವ್) ಪದಕೋಶ. ಸಹಜವಾಗಿಯೇ, ಅಸಕ್ತಿಯ ಪದಕೋಶಗಳ ವ್ಯಾಪ್ತಿಯು ಆಯಾ ಸಂವಾದ ಸಕ್ರಿಯ ಕೌಶಲದ ವ್ಯಾಪ್ತಿಗಿಂತ ಹೆಚ್ಚಾಗಿರುತ್ತದೆ.

ಒಂದು ಹಂತದವರೆಗೆ ನಮಗೆ ಸಂಪೂರ್ಣ ಪರಿಚಿತವಾದ ಒಂದು ಪದ, ನಾವೇ ಸ್ವತಃ ಮಾತಾಡುವಾಗ ಅಥವಾ ಬರೆಯುವಾಗ ಅನಾಯಾಸ ಪ್ರಯೋಜನಕ್ಕೆ ಬರುವಷ್ಟು ಕಲಿಕೆ ಆಗುವ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನು ಈ ಕೆಳಗಿನ ಚಿತ್ರವು ದರ್ಶಿಸುತ್ತದೆ.

Advertisements
02 1

ಕನ್ನಡದ ಭಾಷಾ ಪರಿಸರದಲ್ಲಿ ನಿಮಗೆ ಪರಿಚಯಿರುವ ಪದಗಳ ಜೊತೆಯಲ್ಲಿ ಹಲವಾರು ಅಪರಿಚಿತ ಪದಗಳೂ ಇರುತ್ತವೆ. ಬೇರೆಯವರು ಮಾತಾಡುವಾಗ ಅನಾಯಾಸ ಕಿವಿಗೆ ಬೀಳುತ್ತವೆ; ಏನೋ ಮುದ್ರಿತ ಸಾಮಗ್ರಿಯನ್ನು ನೋಡಿದಾಗ ಪದಗಳು ಕಣ್ಣಿಗೆ ಬೀಳುತ್ತವೆ. ನಿಮಗೆ ಈ ವರೆಗೆ ಪರಿಚಯವಿಲ್ಲದೇ ಇದ್ದ ಅಂಥ ಒಂದು ಪದ ‘ಸಮುಚ್ಛಿನ್ನ’ ಎಂದಿಟ್ಟುಕೊಳ್ಳಿ.
ಸ್ವಲ್ಪವೇ ಗಮನ ಕೊಟ್ಟರೂ ‘ಸಮುಚ್ಛಿನ್ನ’ ಎಂಬ ಪದ, ಬಳಕೆಯಾದ ಸಂದರ್ಭದ ದೆಸೆಯಿಂದಾಗಿ ನಿಮಗೆ (ಕೆಲವೊಮ್ಮೆ ಸ್ಥೂಲವಾಗಿ, ಕೆಲವೊಮ್ಮೆ ಹೆಚ್ಚು ನಿಖರವಾಗಿ) (ಸಂಪೂರ್ಣವಾಗಿ ನಾಶವಾದ ಎಂಬ) ಅರ್ಥವಾಗಿರುತ್ತದೆ. ಅದು ಮೊದಲು (ಆಲಿಸುವುದು ಮತ್ತು ಓದುವುದು) ಅಸಕ್ರಿಯ ಕೌಶಲದಲ್ಲಿ ಇರುತ್ತದೆ. ಆ ಹೊತ್ತಿಗೆ, ಅದು ಪ್ರತಿಸಲ ಕಿವಿಗೆ/ಕಣ್ಣಿಗೆ ಬಿದ್ದಾಗಲೂ ಅರ್ಥವಾಗುತ್ತಾ ಹೋಗಿರುತ್ತದೆ. ಆದರೂ, ಅದನ್ನು ಸಂದರ್ಭಾನುಸಾರ ನೀವೇ ನಿಮ್ಮ ಮಾತಿನಲ್ಲಿ ಅಥವಾ ಬರವಣಿಗೆಯಲ್ಲಿ (ಸಕ್ರಿಯ ಕೌಶಲದಲ್ಲಿ) ಬಳಸುವಷ್ಟು ಅದು ನಿಮ್ಮದಾಗಿರುವುದಿಲ್ಲ. ಕೇಳಿ, ಓದಿ ಗಟ್ಟಿಯಾದ ನಂತರ ಯಾವಾಗಲೋ ಒಮ್ಮೆ ಅದು ನಿಮ್ಮ ಮಾತು ಮತ್ತು ಬರಹದಲ್ಲಿಯೂ ಬಳಕೆಗೆ ಬಂದುಬಿಡುತ್ತದೆ. ಹೀಗೆ ಒಂದೆರಡು ಬಾರಿ ಆದನಂತರ ಅದು ನಿಮ್ಮ ನಾಲ್ಕೂ ಕೌಶಲಗಳಲ್ಲಿ ಅನಾಯಾಸವಾಗಿ ಬಳಸಲು ಬರುವಷ್ಟು ನಿಮ್ಮದಾಗುತ್ತದೆ. ಹೀಗೆ ಹಲವಾರು ಪದಗಳು, ನಿಮ್ಮ ಕುತೂಹಲ, ಕಲಿಯುವ ಬಯಕೆಯನ್ನು ಅನುಸರಿಸಿ ಹಲವಾರು ಪದಗಳು ‘ಅಪರಿಚಿತ’ ಎನ್ನುವ ಸ್ಥಿತಿಯಿಂದ ‘ಸುಪರಿಚಿತ’ ಎನ್ನುವ ಸ್ಥಾನವನ್ನು ಗಳಿಸಿ, ನಿಮ್ಮ ಶಬ್ದಕೋಶದ ಶ್ರೀಮಂತಿಕೆಗೆ ಇನ್ನಷ್ಟು ಕೊಡುಗೆಯನ್ನು ನೀಡುತ್ತಾ ಹೋಗುತ್ತವೆ.

ಪದಕೋಶ ಬೆಳೆಸಿಕೊಳ್ಳುವುದು ಹೇಗೆ

ಶಬ್ದಗಳು ಅನಾಯಾಸ ನಮ್ಮ ಶಬ್ದಕೋಶವನ್ನು ಸೇರಿಕೊಳ್ಳುತ್ತಾ ಹೋಗುವ ಪ್ರಕ್ರಿಯೆಯನ್ನು ನಾವು ಗಮನಿಸಿದ್ದೇವೆ. ಈ ಕ್ರಿಯೆಗಳನ್ನೇ ಕಲಿಯುವ ಅಭಿಲಾಶೆಯಿಂದ ಪ್ರಜ್ಞಾಪೂರ್ವಕವಾಗಿ ಅನುಸರಿಸಿದರೆ ನಮ್ಮ ಪದಕೋಶ ಅಭಿವೃದ್ಧಿಯು ಗಣನಾರ್ಹವಾಗಿ ತ್ವರಿತವಾಗುತ್ತದೆ. ಕೆಲವು ಉಪಾಯಗಳು ಹೀಗಿವೆ.

ಮೊದಲನೆಯದಾಗಿ ಪದಕೋಶದ ಬೆಳವಣಿಗೆ ಭಾಷೆಯ ಎಲ್ಲಾ ನಾಲ್ಕು ಕೌಶಲಗಳಲ್ಲಿ ಬೆಳೆಯಬೇಕು: ಆಲಿಸುವುದು, ಮಾತಾಡುವುದು, ಓದುವುದು ಮತ್ತು ಬರೆಯುವುದು.

03 Four Skills

ಆಲಿಸುವಿಕೆ: ನೀವು ಭಾಗವಹಿಸುವ ಪ್ರತಿಯೊಂದು ಸಂಭಾಷಣೆ, ಚರ್ಚೆ, ಸಂವಾದಗಳಲ್ಲಿಯೂ, ನೀವು ಆಲಿಸುವ ಪಾತ್ರವನ್ನು ವಹಿಸುತ್ತಿರುವಾಗ ಸಕ್ರಿಯವಾಗಿ ಆಲಿಸಿ. ಎಂದರೆ, ನೀವು ಕೇಳಿಸಿಕೊಳ್ಳುತ್ತಿರುವ ಪ್ರತಿಯೊಂದು ಪದ, ಪದಪುಂಜ, ನುಡಿಗಟ್ಟು, ಗಾದೆಮಾತು, ಸೂಕ್ತಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಷ್ಟು ಆಸಕ್ತಿಯಿಂದ ಆಲಿಸಿ. ನಿಮಗೆ ಯಾವುದಾದರೂ ಒಂದು ಪದ ಅಪರಿಚಿತ ಎನ್ನುವ ಹಾಗೆ ತೋರಿದರೆ, ಕೂಡಲೇ ಅದರ ಸನ್ನಿವೇಶವನ್ನು ಮನನ ಮಾಡಿಕೊಳ್ಳಿ, ಅದು ಸ್ಥೂಲವಾಗಿಯಾದರೂ ಅರ್ಥವಾಗುತ್ತದೆ. ಅದೇ ಅವಧಿಯಲ್ಲಿ ಆ ಪದ ಇನ್ನೊಂದೆರಡು ಸಲ ಬಳಕೆಯಾಗಿದ್ದು ನೀವು ಗಮನಿಸಿದರೆ ಬಹುಶಃ ಆ ಪದ ನಿಮಗೆ ಸರಿಯಾಗಿ ಅರ್ಥವಾಗಿ ಬಿಡುತ್ತದೆ.

ನಾನಿದನ್ನು ಹೇಳುತ್ತಿರುವಾಗ, ನಿಮಗಿದು ಬಹಳ ಯಾಂತ್ರಿಕ ಅನ್ನಿಸಬಹುದು, ಒಂದೊಂದು ಪದಕ್ಕೂ ಹೇಗೆ ಮಾಡುತ್ತಾ ಹೋದರೆ ಸಂಭಾಷಣೆ, ಭಾಷಣ ನಮಗೋಸ್ಕರ ನಿಂತಿರುತ್ತದೆಯೇ, ಮುಂದಕ್ಕೆ ಹೋಗಿಬಿಡುವುದಿಲ್ಲವೇ ಎಂದು ನೀವು ಕೇಳಬಹುದು. ಕೇಳಿ. ನಾನು ಮೇಲೆ ವಿವರಿಸಿದ (ಬೇಕಿದ್ದರೆ ಇನ್ನೊಮ್ಮೆ ಓದಿ) ಕ್ರಿಯೆ ನಾನು ವಿವರಿಸಲು ತೆಗೆದುಕೊಂಡಷ್ಟೂ ಸಮಯ ತೆಗೆದುಕೊಳ್ಳುವುದಿಲ್ಲ. ಇಂಥ ಕ್ರಿಯೆಗಳು ಮನಸ್ಸಿನಲ್ಲಿ ತ್ವರಿತವಾಗಿ ನಡೆಯುತ್ತವೆ. ಅದರ ಪ್ರಯೋಜನ ಪಡೆಯುವ ಅಭ್ಯಾಸವನ್ನು ಹಾಕಿಕೊಳ್ಳಬೇಕಷ್ಟೆ.

ಓದುವಿಕೆ: ನೀವು ದಿನ ನಿತ್ಯ ಓದುವ ಪತ್ರಿಕೆ ಅಥವಾ ನೀವೇ ಅಯ್ಕೆ ಮಾಡಿಕೊಂಡಿರುವ ಪುಸ್ತಕ – ಇಂಥ ಯಾವುದೇ ಮುದ್ರಿತ ಸಾಮಗ್ರಿಯನ್ನು ಓದುವಾಗ, ಅಪರೂಪಕ್ಕೆ ಕೆಲವು ಪದಗಳು ಸಂಪೂರ್ಣ ಅರ್ಥವಾಗದೇ ಇರಬಹುದು. ಸುದ್ದಿಯನ್ನು, ಕಥೆಯನ್ನು ಓದಿ ಪ್ರಯೋಜನ ಪಡೆಯುವವರೆಗೆ ಮೊದಲ ಓದನ್ನು ಮುಗಿಸಿದ ನಂತರ ಗ್ರಹಿಸುವಲ್ಲಿ ಕಷ್ಟವಾದ ಪದಗಳನ್ನು ನಿಮ್ಮ ಸಕ್ರಿಯ ಪದಕೋಶದಲ್ಲಿ ಸೇರಿಸಿಕೊಳ್ಳುವ ದೃಷ್ಟಿಯಿಂದ ಕೆಲವು ಭಾಗಗಳನ್ನು ಮತ್ತೊಮ್ಮೆ ಓದಬೇಕು. ಈ ಬಾರಿ ಅಂಥ ಪದಗಳು ನಿಮ್ಮ ವಿಶೇಷ ಗಮನ ಸೆಳೆಯಬೇಕು. ಬೇಕಿದ್ದರೆ ಅವುಗಳನ್ನು ಪೆನ್ಸಿಲ್ಲಿನಿಂದ ಅಡಿಗೆರೆ ಹಾಕಿ ಗುರುತಿಸಿಕೊಳ್ಳಬೇಕು. ಸಂದರ್ಭದಿಂದ ಅವುಗಳ ಅರ್ಥವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದಿದ್ದಲ್ಲಿ ಯಾವುದಾದರೂ ಒಂದು ಒಳ್ಳೆಯ ನಿಘಂಟುವಿನಲ್ಲಿ ನೋಡಬಹುದು. ಹೀಗೆ ದಿನಕ್ಕೆ ಹತ್ತು ಪದಗಳನ್ನು ಕಲಿತರೂ ನಿಮ್ಮ ಓದುವಿಕೆಯ ಪದಕೋಶ ಕ್ರಮೇಣ ಹೆಚ್ಚು ಶ್ರೀಮಂತಗೊಳ್ಳುತ್ತಾ ಹೋಗುತ್ತದೆ. (ನಾವು ನಿತ್ಯ ಓದುವ ಪತ್ರಿಕೆಯನ್ನು ಪದಕೋಶದ ವೃದ್ಧಿಗಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವ ಕುರಿತು ಮುಂದಿನ ಯಾವುದಾದರೊಂದು ನುಡಿಯಂಗಳದಲ್ಲಿ ಇನ್ನಷ್ಟು ವಿಸ್ತಾರವಾಗಿ ತಿಳಿಯೋಣವಂತೆ).

ಇದನ್ನೂ ಓದಿ ಕನ್ನಡಮ್ಮನ ಮಕ್ಕಳಿಗೆ ಕನ್ನಡವೇ ಕಬ್ಬಿಣದ ಕಡಲೆಯಾಯಿತೇ?; ಎಸ್ಸೆಸ್ಸೆಲ್ಸಿಯಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡದಲ್ಲಿ ಫೇಲ್‌!

ಮಾತಾಡುವಿಕೆ ಮತ್ತು ಬರೆಯುವಿಕೆ: ನಿಮಗೆ ಗೊತ್ತಿರುವ ವಿಷಯದ ಬಗ್ಗೆಯೇ ತಾನೆ ನೀವು ಮಾತಾಡುವುದು ಅಥವಾ ಬರೆಯುವುದು. ಅದನ್ನು ಆದಷ್ಟು ಹೆಚ್ಚು ಪರಿಣಮಕಾರಿಯಾಗಿ ಮಾತಾಡಲು ಪ್ರಯತ್ನಿಸಿ. ನೀವು ಆಲಿಸುವಾಗ, ಓದುವಾಗ ಕಲಿತಿರಬಹುದಾದ ‘ಹೊಸ’ ಪದಗಳನ್ನು ಸಂದರ್ಭಾನುಸಾರ ಬಳಸುವುದಕ್ಕೆ ಪ್ರಯತಿಸಿ. ಪ್ರಜ್ಞಾಪೂರ್ವಕವಾಗಿ ಕೆಲವು ದಿನ ಹೀಗೆ ಮಾಡಿದಾಗ ಇದು ಅನಾಯಾಸ ನಿಮ್ಮ ಅಭ್ಯಾಸದ ಒಂದು ಸಹಜ ಭಾಗವಾಗಿಬಿಡುತ್ತದೆ.

ಇತರರೊಂದಿಗೆ ಮತ್ತು ಸ್ವಯಂ ನಮ್ಮೊಂದಿಗೆ ನಾವು ಹೇಗೆ ಸಂವಹಿಸುತ್ತೇವೆ ಎಂಬುದು ನಮ್ಮ ಬದುಕಿನ ಗುಣಮಟ್ಟವನ್ನು ನಿರ್ಣಯಿಸುತ್ತದೆ. ಸಂವಹನವು ಸಮುದಾಯವನ್ನು ಕಟ್ಟುತ್ತದೆ: ಎಂದರೆ ಸೌಹಾರ್ದ, ಆತ್ಮೀಯತೆ ಮತ್ತು ಪರಸ್ಪರ ಗೌರವ. ವಿಷಯ ಗೊತ್ತಿರುವುದು ಮುಖ್ಯ, ಅದರೆ ಅದನ್ನು ಸಂವಹನಿಸಲು ಶ್ರೀಮಂತವಾದ ಪದಸಂಪತ್ತಿನ ಮಾಲೀಕರಾಗಿರುವುದು ಇನ್ನೂ ಮುಖ್ಯ.

ಪ್ರೊ ಅಬ್ದುಲ್ ರೆಹಮಾನ್ ಪಾಷಾ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X