- ಪ್ರತಿನಿತ್ಯ ಬೆಳಗ್ಗೆ 6 ರಿಂದ ಬೆಳಗ್ಗೆ 8.30 ಗಂಟೆವರೆಗೆ ನಡೆಯಲಿರುವ ಸಮೀಕ್ಷೆ
- 2019ನೇ ಸಾಲಿನಿಂದ ಇಲ್ಲಿಯವರೆಗೆ ನಿರಂತರವಾಗಿ ನಡೆಯುತ್ತಿರುವ ಸಮೀಕ್ಷೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಪಶುಪಾಲನಾ ವಿಭಾಗದಿಂದ ನಗರದಲ್ಲಿ ಜುಲೈ 11ರಿಂದ ಬೀದಿ ನಾಯಿಗಳ ಸಮೀಕ್ಷೆ ಕಾರ್ಯ ಆರಂಭವಾಗಲಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ಪ್ರಾಣಿಜನ್ಯ ರೋಗವಾದ ರೇಬೀಸ್ ರೋಗವನ್ನು ತಡೆಗಟ್ಟಲು ಬೀದಿ ನಾಯಿಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕಾ ಕಾರ್ಯಕ್ರಮವನ್ನು ಪಾಲಿಕೆಯ ಪಶುಪಾಲನಾ ವಿಭಾಗದಿಂದ ಕೈಗೊಳ್ಳಲಾಗುತ್ತಿದೆ.
“2019ನೇ ಸಾಲಿನಲ್ಲಿ ಬೀದಿ ನಾಯಿಗಳ ಸಮೀಕ್ಷೆ ಮಾಡಿದ್ದು, ಈಗ ಒಟ್ಟು 3.10 ಲಕ್ಷ ಬೀದಿ ನಾಯಿಗಳು ಇರುವುದಾಗಿ ಅಂದಾಜಿಸಲಾಗಿದೆ. ಪಾಲಿಕೆಯ 8 ವಲಯಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕಾ ಕಾರ್ಯಕ್ರಮ 2019ನೇ ಸಾಲಿನಿಂದ ಇಲ್ಲಿಯವರೆಗೆ ನಿರಂತರವಾಗಿ ನಡೆಯುತ್ತಿದೆ. ಕಾರ್ಯಕ್ರಮದ ಯಶಸ್ವಿ ಅನುಷ್ಠಾನದ ಬಗ್ಗೆ ತಿಳಿಯುವ ಸಲುವಾಗಿ ಬೀದಿನಾಯಿಗಳ ಸಮೀಕ್ಷೆಯ ಕಾರ್ಯ ಪ್ರಾರಂಭಿಸಲಾಗುತ್ತಿದೆ” ಎಂದು ಬಿಬಿಎಂಪಿ ಹೇಳಿದೆ.
“ಬೀದಿನಾಯಿಗಳ ಸಮೀಕ್ಷೆಯು ಪ್ರಧಾನ ವಿಜ್ಞಾನಿ ಡಾ. ಕೆ.ಪಿ.ಸುರೇಶ್, ಪ್ರಧಾನ ವಿಜ್ಞಾನಿ ಡಾ. ಹೇಮಾದ್ರಿ ದಿವಾಕರ್, ಡಾ. ಶ್ರೀಕೃಷ್ಣ ಇಸ್ಲೂರು, ಪ್ರಾಧ್ಯಾಪಕರು, ಸೂಕ್ಷ್ಮಾಣುಜೀವಿ ಶಾಸ್ತ ವಿಭಾಗ, ಬೆಂಗಳೂರು ವೆಟರಿನರಿ ಕಾಲೇಜು, ಡಾ. ಬಾಲಾಜಿ ಚಂದ್ರಶೇಖರ್, ಮ್ಯಾನೇಜರ್ ಆಪರೇಷನ್, ಡಬ್ಲ್ಯೂವಿಎಸ್ ಸಂಸ್ಥೆ ಮತ್ತು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ನಗರ ಜಿಲ್ಲೆಯ ಅರೆತಾಂತ್ರಿಕ ಸಿಬ್ಬಂದಿ ಸಹಯೋಗದೊಂದಿಗೆ ಈ ಸಮೀಕ್ಷೆ ನಡೆಯಲಿದೆ” ಎಂದು ಹೇಳಿದೆ.
“840 ಚಕಿಮೀ ವ್ಯಾಪ್ತಿಯುಳ್ಳ ಬಿಬಿಎಂಪಿಯನ್ನು(ವಸತಿ ಪ್ರದೇಶ, ಕೊಳಚೆ ಪ್ರದೇಶ, ವಾಣಿಜ್ಯ ಪ್ರದೇಶ ಹಾಗೂ ಕೆರೆಗಳು) 0.5 ಚಕಿಮೀ ವ್ಯಾಪ್ತಿಯ 6,850 ಮೈಕ್ರೋ ಜೋನ್ ಆಗಿ ವಿಂಗಡಿಸಲಾಗಿದ್ದು, ಅದರಲ್ಲಿ ಶೇ. 20ರಷ್ಟು ರ‍್ಯಾಂಡಮ್ ಸ್ಯಾಂಪಲ್ ಅಂದರೆ 1,360 ಮೈಕ್ರೋ ಜೋನ್‌ಗಳಲ್ಲಿ ಸಮೀಕ್ಷೆ ಮಾಡಲು ಆಯ್ಕೆ ಮಾಡಲಾಗಿದೆ. ಅದರಂತೆ, ಬೆಂಗಳೂರು ನಗರ ಜಿಲ್ಲೆಯ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ 70 ಅರೆತಾಂತ್ರಿಕ ಸಿಬ್ಬಂದಿ ಹಾಗೂ ಪಾಲಿಕೆಯ ಪಶುಪಾಲನಾ ವಿಭಾಗದ 30 ಸಿಬ್ಬಂದಿ ಸೇರಿದಂತೆ 100 ಮಂದಿಯ ಮೂಲಕ ಈ ಸಮೀಕ್ಷೆ ಮಾಡಲಾಗುತ್ತಿದೆ. ಬೀದಿ ನಾಯಿ ಸಮೀಕ್ಷೆಯನ್ನು ಕ್ರಮಬದ್ಧವಾಗಿ ವ್ಯವಸ್ಥಿತವಾಗಿ ವಾರ್ಡ್‌ವಾರು ನಿರ್ವಹಿಸಲು 1 ತಂಡದಲ್ಲಿ ಇಬ್ಬರು ಸಮೀಕ್ಷಾದಾರರಂತೆ ಒಟ್ಟು 50 ತಂಡ ರಚಿಸಲಾಗಿದ್ದು, ಇದರ ಮೇಲ್ವಿಚಾರಣೆಗಾಗಿ 15 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ” ಎಂದು ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮುಕ್ತ ಕಾಲುದಾರಿ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
“ಬೀದಿ ನಾಯಿಗಳ ಸಮೀಕ್ಷೆಯು ಒಟ್ಟು 14 ದಿನಗಳಲ್ಲಿ ನಡೆಸಲಾಗುತ್ತಿದ್ದು, ಈ ಸಮೀಕ್ಷೆಯು ಪ್ರತಿನಿತ್ಯ ಬೆಳಗ್ಗೆ 6 ರಿಂದ ಬೆಳಗ್ಗೆ 8.30 ಗಂಟೆಯೊಳಗೆ ನಡೆಯಲಿದೆ. ಮೈಕ್ರೋಜೋನ್‌ನಲ್ಲಿ ಕಂಡು ಬರುವ ಬೀದಿ ನಾಯಿಗಳ ಭಾವಚಿತ್ರದೊಂದಿಗೆ ಪ್ರತಿ ನಾಯಿಯ ಮಾಹಿತಿಯನ್ನು ಡಬ್ಲ್ಯೂವಿಎಸ್ ಡೇಟಾ ಕಲೆಕ್ಷನ್ ಆ್ಯಪ್‌ನಲ್ಲಿ ನಮೂದಿಸಬೇಕು. ಆ್ಯಪ್‌ನಲ್ಲಿ ದಾಖಲಾದ ಮಾಹಿತಿಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ವೀಕ್ಷಿಸಬಹುದಾಗಿದೆ. ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರುವುದಿಲ್ಲ. ಒಟ್ಟು 14 ದಿನಗಳ ಸಮೀಕ್ಷೆಯ ನಂತರ ಡಾ. ಕೆ.ಪಿ.ಸುರೇಶ್ ರವರು ಮಾಹಿತಿಯನ್ನು ಕ್ರೋಡೀಕರಿಸಿ ಪಾಲಿಕೆಗೆ ವರದಿ ನೀಡಲಿದ್ದಾರೆ” ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ರವಿಕುಮಾರ ಹೇಳಿದ್ದಾರೆ.
ಬೀದಿನಾಯಿಗಳ ಸಮೀಕ್ಷೆಯ ಪ್ರಮುಖ ಉದ್ದೇಶ
- ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಒಟ್ಟು ಬೀದಿನಾಯಿಗಳ ಸಂಖ್ಯೆ(ಹೆಣ್ಣು-ಗಂಡು ನಾಯಿಗಳ ಸಂಖ್ಯೆ) ಲಭ್ಯವಾಗಲಿದೆ.
- ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುವ ಶೇಕಡವಾರು ಬೀದಿನಾಯಿಗಳ ಸಂಖ್ಯೆ(ಹೆಣ್ಣು-ಗಂಡು ನಾಯಿಗಳ ಸಂಖ್ಯೆ) ಲಭ್ಯವಾಗಲಿದೆ.
- ಮಾನವ-ಬೀದಿನಾಯಿಗಳ ಅನುಪಾತ ದೊರೆಯಲಿದೆ.
- ವಾರ್ಡ್-ವಲಯವಾರು ಬೀದಿನಾಯಿಗಳ ಸಂಖ್ಯೆ ಲಭ್ಯ.