ಹನ್ನೊಂದು ವರ್ಷಗಳ ಹಿಂದೆ ನಡೆದ ಸೌಜನ್ಯಳ ಭೀಕರ ಅತ್ಯಾಚಾರ ಮತ್ತು ಕೊಲೆಯ ಅಪರಾಧಿಗಳು ಯಾರೆಂದು ಪತ್ತೆಯಾಗದೇ ಇರಬಹುದು. ಅಮಾಯಕ ಆರೋಪಿಯ ಬಿಡುಗಡೆ ಆಗಿರುವುದರಿಂದ ಮತ್ತೊಂದು ಸುತ್ತಿನ ಹೋರಾಟಕ್ಕೆ ಕುಟುಂಬ ಸಜ್ಜಾಗಿದೆ. ಆ ಕುಟುಂಬ ಹೋರಾಟದಿಂದ ದಣಿದಿಲ್ಲ. ಸೌಜನ್ಯಳೇ ಒಂದು ಶಕ್ತಿಯಾಗಿ ಹೋರಾಟವನ್ನು ಮುನ್ನಡೆಸುತ್ತಿದ್ದಾಳೆ ಎಂದೇ ಆ ಕುಟುಂಬ ಭಾವಿಸಿದೆ
ಧರ್ಮಸ್ಥಳ ಮತ್ತು ಸೌಜನ್ಯ ಈ ಎರಡು ಹೆಸರನ್ನು ಪ್ರತ್ಯೇಕ ಮಾಡಲಾಗದು. ಧರ್ಮಸ್ಥಳ ಎಂದಾಗ ಸೌಜನ್ಯ, ಸೌಜನ್ಯ ಎಂದಾಗ ಧರ್ಮಸ್ಥಳ ನೆನಪಾಗುತ್ತದೆ. ಅದರ ಜೊತೆಗೆ ಒಬ್ಬ ದೊಡ್ಡ ವ್ಯಕ್ತಿಯ ಹೆಸರೂ ನೆನಪಾಗುತ್ತದೆ. ಮನೆ ಮಗಳ ಕೊಲೆಗೆ ನ್ಯಾಯ ಕೇಳುತ್ತಾ ಒಂದು ದಶಕಗಳ ಕಾಲ ನಿರಂತರವಾಗಿ ಹೋರಾಟ ಮಾಡುತ್ತಿರುವ ಕುಟುಂಬ ಈ ಹೆಸರುಗಳನ್ನು ಯಾರೂ ಮರೆಯದಂತೆ ಮಾಡಿದೆ.
ಒಕ್ಕಲಿಗ ಸಮುದಾಯದ ಸೌಜನ್ಯ ಕುಟುಂಬ ಮತ್ತು ಬಂಟರ ಸಮುದಾಯದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಛಲ ಬಿಡದ ಹೋರಾಟದ ಫಲವಾಗಿ, ಏನೇ ಮಾಡಿದರೂ ನಡೆಯುತ್ತದೆ ಎಂಬ ಅಹಂಕಾರದಿಂದ ಮೆರೆಯುತ್ತಿದ್ದವರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಹನ್ನೊಂದು ವರ್ಷಗಳ ಹಿಂದೆ ನಡೆದ ಸೌಜನ್ಯಳ ಭೀಕರ ಅತ್ಯಾಚಾರ ಮತ್ತು ಕೊಲೆಯ ಅಪರಾಧಿಗಳು ಯಾರೆಂದು ಪತ್ತೆಯಾಗದೇ ಇರಬಹುದು. ಅಮಾಯಕ ಆರೋಪಿಯ ಬಿಡುಗಡೆ ಆಗಿರುವುದರಿಂದ ಮತ್ತೊಂದು ಸುತ್ತಿನ ಹೋರಾಟಕ್ಕೆ ಕುಟುಂಬ ಸಜ್ಜಾಗಿದೆ. ಆ ಕುಟುಂಬ ಹೋರಾಟದಿಂದ ದಣಿದಿಲ್ಲ. ಸೌಜನ್ಯಳೇ ಒಂದು ಶಕ್ತಿಯಾಗಿ ಹೋರಾಟವನ್ನು ಮುನ್ನಡೆಸುತ್ತಿದ್ದಾಳೆ ಎಂದೇ ಆ ಕುಟುಂಬ ಭಾವಿಸಿದೆ. ಮನೆಯ ತುಂಬೆಲ್ಲ ಆಕೆಯೇ ಕಾಣಸಿಗುತ್ತಾಳೆ.
ಧರ್ಮಸ್ಥಳದ ಪಾಂಗಳದಲ್ಲಿರುವ ಸೌಜನ್ಯ ಕುಟುಂಬ ತಮ್ಮ ದೈನಂದಿನ ಬದುಕಿನಲ್ಲಿ ಹೆಜ್ಜೆ ಹೆಜ್ಜೆಗೂ ಸೌಜನ್ಯಳನ್ನು ಜೊತೆಗೊಯ್ಯುತ್ತಿದ್ದಾರೆ. ಇತ್ತೀಚೆಗೆ ಕಟ್ಟಿಸಿದ ಹೊಸ ಮನೆಗೆ ʼಸೌಜನ್ಯ ನಿಲಯʼ ಎಂದು ಹೆಸರಿಡಲಾಗಿದೆ. ಒಳಮನೆಗೆ ಹೋಗುವ ಬಾಗಿಲ ಬಳಿ ಆಕೆಯ ಕುರಿತ ಕವಿತೆಯಿರುವ ದೊಡ್ಡದೊಂದು ಬೋರ್ಡ್ ಕಾಣಸಿಗುತ್ತದೆ. ಗೋಡೆಯ ಮೇಲೆ ಆಕೆ ಸೀರೆಯುಟ್ಟು ಕಳಸ ಹಿಡಿದು ನಿಂತಿರುವ ಫೋಟೋಗೆ ದೇವಿಯ ರೀತಿಯಲ್ಲಿ ಪ್ರಭಾವಳಿ ಮಾಡಿ ಫ್ರೇಮ್ ಹಾಕಿಡಲಾಗಿದೆ. ಆ ಫೋಟೋ ಸೌಜನ್ಯ ಕೊನೆಯುಸಿರೆಳೆಯುವ ಮೂರು ತಿಂಗಳ ಹಿಂದೆಯಷ್ಟೇ ಅಕ್ಕನ ಮದುವೆಯಲ್ಲಿ ಕಳಸ ಹಿಡಿದಿರುವಾಗ ತೆಗೆದಿರುವ ಫೋಟೋ.
ದೇವರ ಮನೆಯ ಬಳಿ ಗೋಡೆಯ ಮೇಲೆ ಆಕೆಗೊಂದು ಮಂಟಪ ಮಾಡಿ ಫೋಟೋ ಇಡಲಾಗಿದೆ. ಅದಕ್ಕೆ ದಿನವೂ ದೀಪ ಬೆಳಗಲಾಗುತ್ತಿದೆ. ಪ್ರತಿ ಶುಕ್ರವಾರ ರಾತ್ರಿ ಎಂಟುಗಂಟೆಗೆ ಮನೆಯವರೆಲ್ಲ ಕೂಡಿ ಭಜನೆ ಮಾಡುತ್ತಾರೆ. ದೇವರಿಗೆ ಅಲಂಕಾರ ಮಾಡಿದಂತೆ ಸೌಜನ್ಯಳ ಫೋಟೋಗೂ ಹೂ ಹಾರ ಹಾಕುತ್ತಾರೆ. ಅಲ್ಲೇ ಕೆಳಗೆ ನೆಲದ ಮೇಲೆ ಬಾಳೆ ಎಲೆಯಲ್ಲಿ ಅವಲಕ್ಕಿಯ ಪಂಚಕಜ್ಜಾಯ ಬಡಿಸುತ್ತಾರೆ. ದೇವರ ಕೋಣೆಯೊಳಗೂ, ಸೌಜನ್ಯಳ ಫೋಟೋದ ಮುಂದೆಯೂ ಪ್ರಸಾದ ಇಟ್ಟು ಭಜನೆ ಮಾಡಿದ ನಂತರ ದೇವರಿಗೆ ಕೈ ಮುಗಿದು, ಸೌಜನ್ಯಳಿಗೂ ಕೈ ಮುಗಿದು ಪ್ರಸಾದ ಸೇವಿಸುತ್ತಾರೆ. ಇದು ಮನುಷ್ಯನ ಕ್ರೂರತ್ವಕ್ಕೆ ಬಲಿಯಾದ ಮನೆ ಮಗಳನ್ನು ತಮ್ಮ ಎದೆಯಲ್ಲಿ ಜೋಪಾನವಾಗಿಟ್ಟವರ ಕತೆ.
ಹೊಸ ಮನೆಯ ಗೃಹ ಪ್ರವೇಶದ ದಿನ ತೆಗೆದ ಕುಟುಂಬದ ಫೋಟೋದಲ್ಲೂ ಸೌಜನ್ಯಳನ್ನು ಕೊಲಾಜ್ ಮಾಡಿ ಕೂರಿಸಿಕೊಂಡಿದ್ದಾರೆ. ಅವಳೇ ಶಕ್ತಿಯಾಗಿ ಕಾಯುತ್ತಿದ್ದಾಳೆ, ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾಳೆ ಎಂಬುದು ಅವರ ನಂಬಿಕೆ. “ಆಕೆ ಇಷ್ಟಕ್ಕೇ ಬಿಡಲ್ಲ, ಆ ದೊಡ್ಡವರ ಅನ್ಯಾಯದ ಸಾಮ್ರಾಜ್ಯ ಪಥನಗೊಳ್ಳಲು ನಮ್ಮ ಮಗಳೇ ಕಾರಣವಾಗುತ್ತಾಳೆ” ಎಂದು ನಂಬಿದ್ದಾರೆ.
ಇದನ್ನು ಓದಿ ಸೌಜನ್ಯ ಸಾವಿನ ನಂತರ ಧರ್ಮಸ್ಥಳದಲ್ಲಿ ಅನುಮಾನಾಸ್ಪದ ಸಾವು ಕಡಿಮೆಯಾದವು ಯಾಕೆ: ಮಹೇಶ್ ತಿಮರೋಡಿ ಪ್ರಶ್ನೆ
ಸೌಜನ್ಯಳ ಸೋದರ ಮಾವ ವಿಠಲ ಅವರಂತೂ ತಮ್ಮ ಜೀಪಿನ ಹಿಂಭಾಗದಲ್ಲಿರುವ ಸ್ಟೆಪ್ನಿಗೆ ಸೌಜನ್ಯಳ ಫೋಟೋ ಹಾಕಿಸಿದ್ದಾರೆ. ಅವರು ಎಲ್ಲೇ ಹೋದರೂ ಕಂಡವರಿಗೆಲ್ಲ ಸೌಜನ್ಯಳ ಮೇಲೆ ನಡೆದ ಕ್ರೌರ್ಯ ನೆನಪಾಗುವಂತೆ ಮಾಡುತ್ತಿದ್ದಾರೆ. ಅವರ ಹೋಟೆಲ್, ಫ್ಯಾನ್ಸಿ ಸ್ಟೋರ್‌ಗೆ ಸೌಜನ್ಯಳ ಹೆಸರಿಡಲಾಗಿದೆ. ಹೊಸ ಮನೆ ಕಟ್ಟುವ ತಯಾರಿ ನಡೆಸುತ್ತಿರುವ ಅವರು ತಮ್ಮ ಮನೆಯ ಮುಂದೆ ಸೌಜನ್ಯಳ ಪ್ರತಿಮೆ ಇಡುವ ಯೋಚನೆಯಲ್ಲಿದ್ದಾರೆ. ಇನ್ನು ಆಕೆಯ ಮೃತದೇಹ ಸಿಕ್ಕ ಸರ್ಕಾರಿ ಜಾಗದಲ್ಲಿ 25 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವ ಬಗ್ಗೆ ಸೌಜನ್ಯ ಕುಟುಂಬದ ಪರ ನಿಂತು ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಈಗಾಗಲೇ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ ಸೌಜನ್ಯ ಪ್ರಕರಣ | ʼಗೋಲ್ಡನ್ ಅವರ್ʼ ನಲ್ಲಿ ಸಂಪೂರ್ಣ ಸಾಕ್ಷ್ಯ ನಾಶ ಮಾಡಲಾಗಿದೆ; ಸಿಬಿಐ ವರದಿ
ಹೋರಾಟದ ಕಿಚ್ಚು: ಧರ್ಮಸ್ಥಳದಲ್ಲಿ ಸುತ್ತಾಡುವಾಗ ಸೌಜನ್ಯ ಪರ ಹೋರಾಟದಲ್ಲಿರುವ ಯುವಕರ ಕಾರುಗಳ ಹಿಂಭಾಗದ ಗಾಜಿನ ಮೇಲೆ ಸೌಜನ್ಯಳ ಫೋಟೋ ಕಾಣಸಿಗುತ್ತದೆ! ಒಟ್ಟಿನಲ್ಲಿ ಸೌಜನ್ಯ ಒಂದು ಹೋರಾಟದ ಕಿಚ್ಚಾಗಿ ಧರ್ಮಸ್ಥಳದ ತುಂಬ ಆವರಿಸಿದ್ದಾಳೆ. ಶಾಂತಿವನ ಪ್ರಕೃತಿ ಚಿಕಿತ್ಸಾ ಕೇಂದ್ರದ ಮುಂದೆ ಸಾಗುವಾಗ ಎಲ್ಲರಿಗೂ ಸೌಜನ್ಯ ನೆನಪಾಗುತ್ತಾಳೆ.
ಪದ್ಮಲತಾ, ವೇದವಲ್ಲಿ ನೆನಪು: 12 ವರ್ಷಗಳ ಹಿಂದೆ ಕೊಲೆಯಾದ ಸೌಜನ್ಯಳ ಜೊತೆಗೆ, 36 ವರ್ಷಗಳ ಹಿಂದೆ 1987ರಲ್ಲಿ ದುಷ್ಟಕೂಟದಿಂದ ಕೊಲೆಯಾದ ಕಾಲೇಜು ವಿದ್ಯಾರ್ಥಿನಿ ಪದ್ಮಲತಾ ನೆನಪಾಗುತ್ತಾಳೆ. ಮಂಡಲ ಪಂಚಾಯತ್ ಚುನಾವಣೆಗೆ ನಿಂತಿದ್ದ ಕಾಮ್ರೇಡ್ ದೇವನಂದರ ಮಗಳು ಪದ್ಮಲತಾಳನ್ನು ರಾಜಕೀಯ ದ್ವೇಷಕ್ಕಾಗಿ ಅಪಹರಣ ಮಾಡಿ 39 ದಿನಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿದ ದಿನವೂ ಅತ್ಯಾಚಾರ ನಡೆಸಿ ನಂತರ ಕೊಂದು ಮೂಟೆ ಕಟ್ಟಿ ನೇತ್ರಾವತಿಯ ಒಡಲಿಗೆಸೆದಿದ್ದರು. ಪದ್ಮಲತಾ ಸಾವನ್ನು ಧರ್ಮಸ್ಥಳದ ಜನ ಈಗಲೂ ಮರೆತಿಲ್ಲ.
1979ರಲ್ಲಿ ಅನುಮಾನಾಸ್ಪದವಾಗಿ ಸತ್ತ ಟೀಚರ್ ವೇದವಲ್ಲಿ ನೆನಪಾಗುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ, ಹಿರಿತನದ ಅರ್ಹತೆಯಿದ್ದೂ ಪ್ರೊಮೋಷನ್‌ಗೆ ಅಡ್ಡಿಯಾದವರ ವಿರುದ್ಧ ಕಾನೂನು ಹೋರಾಟ ಮಾಡಿ ಗೆದ್ದ ಕೆಲವೇ ದಿನಗಳಲ್ಲಿ ಆಕೆಯನ್ನು ಮನೆಯಲ್ಲಿದ್ದಾಗ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಆ ಘಟನೆಯನ್ನು ಊರಿನ ಜನ ಇನ್ನೂ ಮರೆತಿಲ್ಲ. ಆದರೆ ಈ ಯಾವ ಪ್ರಕರಣಗಳಲ್ಲೂ ಅಪರಾಧಿಗಳು ಪತ್ತೆಯಾಗಿಲ್ಲ. ಯಾವ ಸರ್ಕಾರವೂ, ಕೋರ್ಟೂ ಅನುಮಾನಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿಲ್ಲ. ಎಲ್ಲ ಬೆರಳುಗಳೂ ಹೆಗ್ಗಡೆಯವರ ಕುಟುಂಬದ ಕಡೆಗೇ ಬೆಟ್ಟು ಮಾಡುತ್ತಿದ್ದರೂ ಅವರ ಮೌನವೇ ವಿಪರೀತ ಅನುಮಾನಕ್ಕೆ ಕಾರಣವಾಗಿದೆ.
ಇದನ್ನು ಓದಿ Exclusive: ಹೆಗ್ಗಡೆಯವರ ಹೆಸರೆತ್ತದಂತೆ ಮಾಡಲು ಪೇಜಾವರರು ಹಣದ ಆಮಿಷ ಒಡ್ಡಿದ್ದರು; ಸೌಜನ್ಯ ತಾಯಿ ಕುಸುಮಾವತಿ ಆರೋಪ
ಹೇಮಾ ವೆಂಕಟ್
ʼಈ ದಿನʼದಲ್ಲಿ ಮುಖ್ಯ ವರದಿಗಾರ್ತಿ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳ ಪ್ರಕಟ. ನಾಲ್ಕು ಪ್ರಶಸ್ತಿಗಳು
ಹೃದಯ ಹಿಂಡುವ ದುರಂತದ ಕುರಿತು ಸಶಕ್ತವಾದ ಬಹು ಆಯಾಮದ ವರದಿ. 👏👏
😡😡😡😡😡