ನಾವು ಪಾಕಿಸ್ತಾನಿಯರಲ್ಲ ಎಂದ ಬಲೂಚಿಗಳು; ಏನಿದು ನೆರೆಯ ದೇಶದ ಬಲೂಚಿಸ್ತಾನ ಹೋರಾಟ?

Date:

Advertisements
ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶದ ಇತರ ಭಾಗಗಳಿಗಿಂತ ಗಮನಾರ್ಹವಾಗಿ ಹಿಂದುಳಿದಿದೆ. ನೈಸರ್ಗಿಕ ಸಂಪನ್ಮೂಲಗಳಲ್ಲಿ ಈ ಪ್ರದೇಶ ಸಮೃದ್ಧವಾಗಿದೆ. ಗ್ವಾದರ್ ಬಂದರು, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನಂತಹ ವಾಣಿಜ್ಯ ಕ್ಷೇತ್ರಗಳು ಇದೇ ಪ್ರದೇಶದಲ್ಲಿವೆ. ಇಷ್ಟೆಲ್ಲ ಸಂಪನ್ಮೂಲವಿದ್ದರೂ ಇದರ ಲಾಭ ಸ್ಥಳೀಯರಿಗಿಲ್ಲವಾಗಿದೆ...

ನೆರೆಯ ದೇಶ ಪಾಕಿಸ್ತಾನ ಭಾರತದ ಜೊತೆ ಮಾತ್ರವಲ್ಲದೆ ತನ್ನ ದೇಶದಲ್ಲಿಯೇ ಆಂತರಿಕವಾಗಿ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗ ತಾವು ಪಾಕಿಸ್ತಾನದ ಭಾಗವಲ್ಲ, ಸ್ವತಂತ್ರ ದೇಶ ಎಂದು ಬಲೂಚಿಸ್ತಾನದ ಹೋರಾಟಗಾರರು ಘೋಷಣೆ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಬಲೂಚಿಸ್ತಾನದ ಬಂಡಾಯಗಾರರು ಪಾಕ್‌ನ ಸೈನಿಕರನ್ನು ಹತ್ಯೆ ಮಾಡಿದ್ದರು. ಅದಕ್ಕೂ ಮುಂಚೆ ರೈಲನ್ನೇ ಹೈಜಾಕ್‌ ಮಾಡಿ ಅದರಲ್ಲಿದ್ದ ಜನರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ಆನಂತರದಲ್ಲಿ ಪಾಕ್‌ ಸೇನೆ ಬಂಡುಕೋರರನ್ನು ಕೊಂದು ಸಮಸ್ಯೆಯನ್ನು ಬಗೆಹರಿಸಿತ್ತು. ಈ ಸುದ್ದಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಚ್ಚು ವೈರಲ್‌ ಆಗಿತ್ತು. 

ಅಂದಹಾಗೆ ಬಲೂಚಿಸ್ತಾನದ ಹೋರಾಟ ಇಂದು ನಿನ್ನೆಯದಲ್ಲ, ಪಾಕ್‌ 1947ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡಾಗಿನಿಂದಲೂ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿದೆ.

ಬಲೂಚಿಸ್ತಾನ ಪ್ರಾಂತ್ಯವು ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಗಳಲ್ಲಿ ಹರಡಿಕೊಂಡಿದ್ದು, ಬಲೂಚ್ ಜನರು ಸ್ವಾತಂತ್ರ್ಯ, ಸ್ವಾಯತ್ತತೆ ಮತ್ತು ತಮ್ಮ ಸಂಪನ್ಮೂಲಗಳ ಮೇಲಿನ ಹಕ್ಕುಗಳಿಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟವು ಐತಿಹಾಸಿಕ, ಆರ್ಥಿಕ ಮತ್ತು ಜನಾಂಗೀಯ ಕಾರಣಗಳಿಂದ ರೂಪುಗೊಂಡಿದೆ. ಬಲೂಚಿಸ್ತಾನವು ಐತಿಹಾಸಿಕವಾಗಿ ಬಲೂಚ್ ಜನಾಂಗದ ತಾಯ್ನಾಡಾಗಿದ್ದು, ವಿಶಾಲವಾದ ಮರುಭೂಮಿಗಳು, ಪರ್ವತಗಳು ಮತ್ತು ಅರೇಬಿಯನ್ ಸಮುದ್ರದ ಕರಾವಳಿಯನ್ನು ಒಳಗೊಂಡಿದೆ. ಈ ಪ್ರಾಂತ್ಯದಲ್ಲಿ ಉರ್ದು ಭಾಷೆಯ ಪ್ರಾಧಾನ್ಯತೆ ಕಡಿಮೆಯಿದೆ. ಬಹುತೇಕರ ಮಾತೃಭಾಷೆ  ಬಲೂಚಿ, ಪಾಸ್ತಿ, ಸಿಂಧಿ, ಪಂಜಾಬಿ ಒಳಗೊಂಡ ಸ್ಥಳೀಯ ತಾಯ್ನುಡಿಗಳಾಗಿವೆ. ತಮ್ಮದೆ ಆದ ಸಾಂಸ್ಕೃತಿಕ ಹಿನ್ನಲೆಯನ್ನು ಇಲ್ಲಿನ ಜನರು ಹೊಂದಿದ್ದಾರೆ.

Advertisements

19ನೇ ಶತಮಾನದವರೆಗೆ ಬಲೂಚ್ ಜನರು ಸ್ಥಳೀಯ ರಾಜರು ಮತ್ತು ಖಾನ್‌ಗಳ ಆಡಳಿತದಲ್ಲಿ ಅಧೀನದಲ್ಲಿದ್ದರು. ಈ ಅವಧಿಯಲ್ಲಿ, ಬಲೂಚ್ ಸಮುದಾಯಗಳು ತಮ್ಮ ಬುಡಕಟ್ಟು ವ್ಯವಸ್ಥೆಯ ಮೂಲಕ ಸಾಂಸ್ಕೃತಿಕ ಮತ್ತು ರಾಜಕೀಯ ಗುರುತನ್ನು ಕಾಪಾಡಿಕೊಂಡಿದ್ದವು. ಆದರೆ, 19ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿತನದ ಆಗಮನದೊಂದಿಗೆ ಬಲೂಚಿಸ್ತಾನದ ರಾಜಕೀಯ ಚಿತ್ರಣ ಬದಲಾಯಿತು. ಆಂಗ್ಲರು ಈ ಪ್ರದೇಶವನ್ನು ತಮ್ಮ ಭಾರತೀಯ ಸಾಮ್ರಾಜ್ಯದ ಭಾಗವಾಗಿ ಒಳಪಡಿಸಿದರು. ಆದರೆ ಸ್ಥಳೀಯ ಕಲಾತ್‌ ರಾಜ್ಯದ ಖಾನ್‌ ಆಡಳಿತಗಾರರಿಗೆ ಬಲೂಚಿ ಪ್ರಾಂತ್ಯದ ಅಧಿಕಾರವನ್ನು ನೀಡಿದರು.

BLA Fighters

ಪಾಕಿಸ್ತಾನ ಸೇರ್ಪಡೆಗೆ 1947ರಲ್ಲೇ ವಿರೋಧ

1947ರಲ್ಲಿ ಭಾರತದ ವಿಭಜನೆಯ ಸಂದರ್ಭದಲ್ಲಿ, ಬಲೂಚಿಸ್ತಾನ ಪ್ರಾಂತ್ಯ ಪಾಕಿಸ್ತಾನದ ಭಾಗವಾಯಿತು. ಆದರೆ, ಕಲಾತ್ ರಾಜ್ಯದ ಖಾನ್‌ಗಳು ಸ್ವತಂತ್ರ ರಾಷ್ಟ್ರವಾಗಿರಲು ಒಲವು ತೋರಿದರು. 1948ರಲ್ಲಿ, ಪಾಕಿಸ್ತಾನದ ಸೇನೆಯು ಕಲಾತ್‌ನ್ನು ಬಲವಂತವಾಗಿ ಸೇರಿಸಿಕೊಂಡಿತು. ಇದು ಬಲೂಚ್ ಜನರಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿತು. ಈ ಸೇರ್ಪಡೆಯನ್ನು ಬಲೂಚ್‌ ಹೋರಾಟಗಾರರು “ಬಲವಂತದ ವಿಲೀನ” ಎಂದು ಆಕ್ರೊಶ ವ್ಯಕ್ತಪಡಿಸಿದರು. ತಮ್ಮ ಗುರುತು, ಸಂಸ್ಕೃತಿ ಮತ್ತು ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ಕಾಪಾಡಲು ಹೋರಾಟವನ್ನು ಆರಂಭಿಸಿದರು. ಇಲ್ಲಿಂದಲೇ ಪ್ರತ್ಯೇಕ ರಾಷ್ಟ್ರದ ಮೊಳಕೆ ಚಿಗುರೊಡೆಯತೊಡಗಿತು. ಕಲಾತ್‌ನ ರಾಜ ಅಹಮದ್‌ ಯಾರ್‌ ಖಾನ್ ಸಹೋದರ ಅಬ್ದುಲ್ ಕರೀಂ ಖಾನ್‌ನ ನೇತೃತ್ವದಲ್ಲಿ ಮೊದಲ ದಂಗೆ ಸಂಭವಿಸಿತು. ಆದರೆ ಹೋರಾಟ ಸಣ್ಣ ಪ್ರಮಾಣದಲ್ಲಿ ರೂಪುಗೊಂಡ ಕಾರಣ ಪಾಕಿಸ್ತಾನದ ಸೇನೆಯು ಇದನ್ನು ತ್ವರಿತವಾಗಿ ನಿಗ್ರಹಿಸಿತು. ಆದರೆ, ಈ ಸಂಘರ್ಷ ಬಲೂಚ್ ಜನರಲ್ಲಿ ಪ್ರತ್ಯೇಕ ಅಸ್ತಿತ್ವದ ಭಾವನೆಯನ್ನು ಜಾಗೃತಗೊಳಿಸಿತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತಿರಂಗಾ ಯಾತ್ರೆ, ಸೈನಿಕರ ನಿಂದನೆ ಮತ್ತು ದೇಶಭಕ್ತಿ

ಬಲೂಚಿಯ ನೈಸರ್ಗಿಕ ಸಂಪನ್ಮೂಲಗಳನ್ನು ಪಾಕಿಸ್ತಾನದ ಇತರೆ ಭಾಗಕ್ಕೆ ತೆಗೆದುಕೊಂಡು ಹೋದ ಕಾರಣ 1958ರಲ್ಲಿ, ನವಾಬ ನೌರೋಜ್ ಖಾನ್‌ನ ನೇತೃತ್ವದಲ್ಲಿ ಎರಡನೇ ದಂಗೆ ಸಂಭವಿಸಿತು. ಈ ಹೋರಾಟವು ಅಲ್ಲಿನ ಗಿರಿಜನ ಸಮುದಾಯಗಳನ್ನು ಒಗ್ಗೂಡಿಸಿತು. ಆದರೆ ಪಾಕಿಸ್ತಾನದ ಸೇನೆಯು ತನ್ನ ಭಾರೀ ಶಕ್ತಿಯಿಂದ ಇದನ್ನು ದಮನ ಮಾಡಿತು. ನೌರೋಜ್ ಖಾನ್‌ ಅವರನ್ನು ಬಂಧಿಸಿ, ಅವರನ್ನು ಮತ್ತು ಅವರ ಅನುಯಾಯಿಗಳನ್ನು ಗಲ್ಲಿಗೇರಿಸಲಾಯಿತು. ಇದು ಬಲೂಚ್ ಜನರಲ್ಲಿ ಪಾಕಿಸ್ತಾನ ಜನರ ಬಗ್ಗೆ ಮತ್ತಷ್ಟು ಅಸಹನೆ ಉಂಟುಮಾಡಿತು. 1970ರ ದಶಕವು ಬಲೂಚ್ ಹೋರಾಟದಲ್ಲಿ ನಿರ್ಣಾಯಕ ಅವಧಿಯಾಗಿತ್ತು. 1973ರಲ್ಲಿ, ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್‌ ಅಲಿ ಭುಟ್ಟೋ ಸರ್ಕಾರವು ಬಲೂಚಿಸ್ತಾನದ ಸ್ಥಳೀಯ ಸರ್ಕಾರವನ್ನು ವಜಾಗೊಳಿಸಿತು. ಇದು ಬಲೂಚ್ ರಾಷ್ಟ್ರೀಯವಾದಿಗಳಿಗೆ ದೊಡ್ಡ ಆಘಾತವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಬಲೂಚ್ ಲಿಬರೇಶನ್ ಫ್ರಂಟ್ ಮತ್ತು ಇತರ ಗುಂಪುಗಳು 1973-1977ರವರೆಗೆ ಸಶಸ್ತ್ರ ದಂಗೆಯನ್ನು ಕೈಗೊಂಡವು. ಈ ದಂಗೆಯನ್ನು ಮೂರನೇ ದಂಗೆ ಎಂದು ಕರೆಯಲಾಗುತ್ತದೆ.

ಬಲೂಚ್ ಹೋರಾಟಗಾರರು ಸರ್ಕಾರಿ ಕಚೇರಿಗಳು, ಸೇನಾ ತಾಣಗಳು ಸೇರಿದಂತೆ ಹಲವು ಕಡೆ ದಾಳಿ ನಡೆಸಿದರು. ಆಗಲೂ ಕೂಡ ಪಾಕಿಸ್ತಾನದ ಸೇನೆಯು ಈ ದಂಗೆಯನ್ನು ಹತ್ತಿಕ್ಕಲು ವಾಯುಪಡೆ ಒಳಗೊಂಡಂತೆ ಭಾರೀ ಸೈನ್ಯವನ್ನು ನಿಯೋಜಿಸಿತು. ಈ ಘರ್ಷಣೆಯಲ್ಲಿ ಸಾಮಾನ್ಯ ಜನರು ಸೇರಿದಂತೆ ಸಾವಿರಾರು ಜನರು ಹತರಾದರು. ಈ ಅಮಾನವೀಯ ಕೃತ್ಯವು ಬಲೂಚ್ ಜನರಲ್ಲಿ ಪಾಕ್‌ ಸರ್ಕಾರದ ವಿರುದ್ಧ ಅಸಹನೆ ದ್ವೇಷವಾಗಿ ರೂಪುಗೊಂಡಿತ್ತಲ್ಲದೆ, ರಾಷ್ಟ್ರೀಯವಾದದ ಭಾವನೆಯನ್ನು ಇತ್ತಷ್ಟು ಬಲಪಡಿಸಿತು. 2000 ಮತ್ತು 2010ರ ದಶಕದಲ್ಲಿ, ಬಲೂಚ್ ಹೋರಾಟವು ಮತ್ತಷ್ಟು ತೀವ್ರತೆಯನ್ನು ಪಡೆಯಿತು. ಬಲೂಚ್ ಲಿಬರೇಶನ್ ಆರ್ಮಿ ಮತ್ತು ಇತರ ಸಶಸ್ತ್ರ ಗುಂಪುಗಳು ಸರ್ಕಾರಿ ಸ್ವತ್ತುಗಳು ಹಾಗೂ ಸೇನೆಯ ಮೇಲೆ ದಾಳಿಯನ್ನು ತೀವ್ರಗೊಳಿಸಿದವು.

ಈ ನಡುವೆ ಬಲೂಚ್‌ನ ಪ್ರಮುಖ ನಾಯಕ ನವಾಬ್ ಅಕ್ಬರ್ ಬುಗ್ಟಿಯನ್ನು ಪಾಕಿಸ್ತಾನದ ಸೇನೆ ತನ್ನ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿತು. ಇದು ಕೂಡ ದಂಗೆ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಸಂಘಟನೆಗಳು ಮತ್ತಷ್ಟು ಶಕ್ತಿ ಪಡೆದವು. ಈಗ ಬಲೂಚ್ ಹೋರಾಟಗಾರರು ಕಲಾತ್ ಜಿಲ್ಲೆಯ ಮಂಗೋಚಾರ್ ನಗರವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಠಾಣೆಗಳಿಗೆ ದಾಳಿಯಿಟ್ಟಿದ್ದು, ಹಲವು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಬಂಧಿಸಿ ತಾವು ಪ್ರತ್ಯೇಕ ರಾಷ್ಟ್ರ ಎಂದು ಘೋಷಿಸಿಕೊಂಡಿದ್ದಾರೆ.

ಭಾರತದ ಕೈವಾಡ ಆರೋಪ

ಬಲೂಚಿಸ್ತಾನ ಹೋರಾಟಕ್ಕೆ ನೇರವಾಗಿ ಯಾವ ದೇಶಗಳು ಬೆಂಬಲಿಸದಿದ್ದರೂ ಭಾರತ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಪಾಕಿಸ್ತಾನ ಹಿಂದಿನಿಂದಲೂ ಆರೋಪಿಸುತ್ತಿದೆ. ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿಎಲ್‌ಎ)ನಂತಹ ಪ್ರತ್ಯೇಕತವಾದಿ ಗುಂಪುಗಳಿಗೆ ಬೆಂಬಲ ನೀಡುತ್ತಿದೆ ಎಂದು ಪಾಕ್‌ನ ಆರೋಪವಾಗಿದೆ. 2016ರಲ್ಲಿ ಕ್ವೆಟ್ಟಾದಲ್ಲಿ ನಡೆದ ದಾಳಿಯ ನಂತರ ಪಾಕಿಸ್ತಾನವು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದಾಳಿಯ ಸೂತ್ರಧಾರ ಎಂದು ಪಾಕ್‌ ಆರೋಪಿಸಿತು. ಆದರೆ ಬಲೂಚಿ ಹೋರಾಟವು ಪಾಕ್‌ನ ಆಂತರಿಕ ಸಮಸ್ಯೆಯಾಗಿದ್ದು ತಾನು ಯಾವುದೇ ಬೆಂಬಲ ಸೂಚಿಸಿಲ್ಲ ಎಂದು ಆರೋಪವನ್ನು ಭಾರತ ಅಲ್ಲಗಳೆದಿದೆ.

ನೈಸರ್ಗಿಕ ಸಂಪನ್ಮೂಲವಿದ್ದರೂ ಅಭಿವೃದ್ಧಿ ಕಾಣದ ಬಲೂಚಿಸ್ತಾನ

ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶದ ಇತರ ಭಾಗಗಳಿಗಿಂತ ಗಮನಾರ್ಹವಾಗಿ ಹಿಂದುಳಿದಿದೆ. ನೈಸರ್ಗಿಕ ಸಂಪನ್ಮೂಲಗಳಲ್ಲಿ ಈ ಪ್ರದೇಶ ಸಮೃದ್ಧವಾಗಿದೆ. ದೇಶದ ಗಣನೀಯ ಭಾಗಕ್ಕೆ ಅನಿಲ ಬೇಡಿಕೆಯನ್ನು ಪೂರೈಸುವ ಸುಯಿ ಗ್ಯಾಸ್ ಘಟಕ ಬಲೂಚಿಸ್ತಾನ ಪ್ರಾಂತ್ಯದಲ್ಲಿದೆ. ಜೊತೆಗೆ ಸಂಪದ್ಭರಿತವಾದ ರೇಕೊ ಡಿಕ್‌ನಂತಹ ಚಿನ್ನದ ಗಣಿ ಹಾಗೂ ತಾಮ್ರದ ಗಣಿಗಳು ದೇಶದ ಆರ್ಥಿಕತೆಗೆ ಕೊಡುಗೆ ನೀಡಿವೆ. ಗ್ವಾದರ್ ಬಂದರು, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನಂತಹ ವಾಣಿಜ್ಯ ಕ್ಷೇತ್ರಗಳು ಇದೇ ಪ್ರದೇಶದಲ್ಲಿವೆ. ಇಷ್ಟೆಲ್ಲ ಸಂಪನ್ಮೂಲವಿದ್ದರೂ ಇದರ ಲಾಭ ಸ್ಥಳೀಯರಿಗೆ ಕಡಿಮೆ ತಲುಪಿದೆ. ಇಲ್ಲಿನ ಬಹುತೇಕ ಸಂಪತ್ತನ್ನೆಲ್ಲ ದೇಶದ ಇತರೆಡೆಗೆ ಕೊಂಡೊಯ್ಯಲಾಗುತ್ತಿರುವುದು ಸ್ಥಳೀಯರಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ.

ಇಲ್ಲಿನ ಕೃಷಿ ಕ್ಷೇತ್ರ ಕೂಡ ತೀರ ಹಿಂದುಳಿದಿದೆ. ಪಂಜಾಬ್‌ನಂತಹ ಪಾಕಿಸ್ತಾನದ ಇತರ ಪ್ರಾಂತ್ಯಗಳು ಉತ್ತಮ ಕಾಲುವೆ ವ್ಯವಸ್ಥೆಯಿಂದ ಕೃಷಿಯಲ್ಲಿ ಅಭಿವೃದ್ಧಿಯನ್ನು ಕಂಡಿವೆ. ಒಣಗಾಡಿನ ವಾತಾವರಣ ಮತ್ತು ನೀರಿನ ಕೊರತೆಯಿಂದಾಗಿ ಇಲ್ಲಿನ ಬೇಸಾಯ ಏಳಿಗೆ ಕಂಡಿಲ್ಲ. ರಸ್ತೆಗಳು, ವಿದ್ಯುತ್ ಮತ್ತು ಕೈಗಾರಿಕೆಗಳು ಸೀಮಿತ ಪ್ರಮಾಣದಲ್ಲಿವೆ. ನಿರುದ್ಯೋಗ ದರವು ರಾಷ್ಟ್ರೀಯ ಸರಾಸರಿಗಿಂತ ಇಲ್ಲಿ ಹೆಚ್ಚಾಗಿದೆ. ಶೇ.70ಕ್ಕಿಂತ ಹೆಚ್ಚು ಜನಸಂಖ್ಯೆ ಬಡತನದ ರೇಖೆಗಿಂತ ಕೆಳಗೆ ಜೀವನ ನಡೆಸುತ್ತಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬಲೂಚಿಸ್ತಾನವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಸಾಕ್ಷರತೆ ದರವು ಶೇ. 40 ರಷ್ಟಿದ್ದು, ರಾಷ್ಟ್ರೀಯ ಸರಾಸರಿಗಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆಯಿದೆ.

6795943299694

ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳು ಮತ್ತು ಶಿಕ್ಷಕರ ಕೊರತೆಯಿಂದ ಶಿಕ್ಷಣದ ಗುಣಮಟ್ಟ ಕಳಪೆಯಾಗಿದೆ. ಆರೋಗ್ಯ ಸೌಕರ್ಯಗಳು ಸೀಮಿತವಾಗಿದ್ದು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿಂದ ಜನರು ಮೂಲಭೂತ ಆರೋಗ್ಯ ಸೇವೆಗಳಿಂದ ವಂಚಿತರಾಗಿದ್ದಾರೆ. ಬಲೂಚಿಸ್ತಾನದಲ್ಲಿ ಮಾನವ ಹಕ್ಕು ಉಲ್ಲಂಘನೆಯ ಆರೋಪಗಳು, ನರಮೇಧ, ಕೊಲೆಗಳು, ಅಪಹರಣ ಪ್ರಕರಣಗಳು ವ್ಯಾಪಕವಾಗಿವೆ. ಇದು ಸಾಮಾಜಿಕ ಭದ್ರತೆಯನ್ನು ಕುಗ್ಗಿಸಿದ್ದು, ಜನರಲ್ಲಿ ಭಯ ಮತ್ತು ಅವಿಶ್ವಾಸವನ್ನು ಹುಟ್ಟುಹಾಕಿದೆ. ಇವೆಲ್ಲ ಸಮಸ್ಯೆಗಳು ಸ್ಥಳೀಯರಲ್ಲಿ ಪ್ರತ್ಯೇಕ ರಾಷ್ಟ್ರದ ಪರಿಕಲ್ಪನೆಯನ್ನು ದಿನದಿಂದ ದಿನಕ್ಕೆ ತೀವ್ರಗೊಳಿಸುತ್ತಿದೆ.

ಸೇನಾಡಳಿತ, ಭಯೋತ್ಪಾದನೆ, ಭ್ರಷ್ಟಾಚಾರ, ನಿರುದ್ಯೋಗ, ಬೆಲೆಯೇರಿಕೆ ಸೇರಿದಂತೆ ಹಲವು ಸಮಸ್ಯೆಗಳ ಸುಳಿಯಲ್ಲಿ ಒದ್ದಾಡುತ್ತಿದ್ದ ಪಾಕಿಸ್ತಾನಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಇವೆಲ್ಲ ಸಮಸ್ಯೆಗಳಿಗೆ ಸುಭದ್ರವಾದ ಆಡಳಿತ ಪರಿಹಾರವಾಗಿದ್ದು, ಇದು ದೊರಕಿದರೆ ಪಾಕಿಸ್ತಾನದ ಜನ ತಮ್ಮೆಲ್ಲ ಕಷ್ಟಗಳ ಸರಮಾಲೆಯಿಂದ ಕಳಚಿಕೊಂಡು ನೆಮ್ಮದಿಯ ಜೀವನ ನಡೆಸಬಹುದು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

Download Eedina App Android / iOS

X