ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಂಜೇಪಲ್ಲಿ ಗ್ರಾಮಸ್ಥರಿಗೆ ಖಾಯಂ ಹುದ್ದೆ ನೀಡುತ್ತೇವೆಂದು ಭರವಸೆ ನೀಡಿ ಮೋಸ ಮಾಡಿದ ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆ ವಿರುದ್ಧ ಇಂಜೇಪಲ್ಲಿ ನಿರಾಶ್ರಿತರ ಸಂಘ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದೆ.
“ಕಳೆದ 18 ವರ್ಷಗಳಿಂದ ಇಂಜೇಪಲ್ಲಿ ಗ್ರಾಮಸ್ಥರಿಂದ ವಾಸವದತ್ತಾ ಸಿಮೆಂಟ್ ಕಾರ್ಖಾನೆ ಮನೆಗೊಂದು ಖಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. 2007ರ ಡಿಸೆಂಬರ್‌ನಲ್ಲಿ ಅಂದಿನ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸುಮಾರು 51 ಕುಟುಂಬಸ್ಥರಿಂದ ಮನೆಗಳನ್ನು ಖರೀದಿ ಮಾಡಿ ನೊಂದಣಿ ಮಾಡಿಕೊಂಡ ನಂತರ ಇಲ್ಲಿಯವರೆಗೂ ಇಂದು ನಾಳೆ ಎಂದು ದಿನಗಳನ್ನು ಮುಂದೂಡುತ್ತಾ ಸದರಿ ಕಂಪನಿಯವರು ನಮಗೆ ಯಾರಿಗೂ ಉದ್ಯೋಗವನ್ನು ನೀಡಿರುವುದಿಲ್ಲವೆಂದು” ಸಂಘದ ಮುಖಂಡರು ಆರೋಪಿಸಿದರು.
2023ರ ಸೆಪ್ಟೆಂಬರ್ನಲ್ಲಿ ಸೇಡಂನ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಇಂಜೇನಲ್ಲಿ ಗ್ರಾಮದವರಿಗೆ ಪುನರ್ವಸತಿ ಕಲ್ಪಿಸುವ ಹಾಗೂ 51 ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಕುರಿತು ಸಭೆ ಮಾಡಲಾಗಿತ್ತು.
ಸಭೆಯಲ್ಲಿ ವಾಸವದತ್ತಾ ಸಿಮೆಂಟ್ ಕಂಪನಿ ಆಡಳಿತದ ಅಧಿಕಾರಿಗಳಿಗೆ ಮನೆ ಕಳೆದುಕೊಂಡ 51 ಕುಟುಂಬಗಳಿಗೆ 60 ದಿನಗಳ ಒಳಗಾಗಿ ಉದ್ಯೋಗ ನೀಡಬೇಕು, ಇಲ್ಲವಾದರೆ ಕಂಪನಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಬ್ಲಾಸ್ಟಿಂಗ್ ಬಂದ್ ಮಾಡಿಸಿ ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಆದರೆ, ಸಹಾಯಕ ಆಯುಕ್ತರು ಕೊಟ್ಟ 60 ದಿವಸಗಳ ಅವಧಿ ಮುಗಿಯಿತು. 3 ತಿಂಗಳ ಅವಧಿಯಾದರೂ ಕೂಡ ವಾಸವದತ್ತಾ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ಕಲಬುರಗಿ | ಸಿಡಿಲು ಬಡಿದು ಯುವಕ ಸಾವು
“ಉದ್ಯೋಗ ನೀಡುವವರೆಗೆ ಅನಿರ್ಧಿಷ್ಟಾವಧಿ ವರೆಗೆ ಉಪವಾಸ ಸತ್ಯಾಗ್ರಹ ಕೈಕೊಳ್ಳಲಾಗುವುದು. ಸತ್ಯಾಗ್ರಹದ ಸಮಯದಲ್ಲಿ ಏನಾದರು ಸಾವು ನೋವುಗಳಾದಲ್ಲಿ ಅದಕ್ಕೆ ನೇರ ಹೊಣೆಗಾರರು ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ಮತ್ತು ಸಂಬಂಧಿತ ಸರಕಾರಿ ಅಧಿಕಾರಿಗಳಾಗುತ್ತಾರೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಸತೀಶರೆಡ್ಡಿ ಪಾಟೀಲ್, ಅಧ್ಯಕ್ಷ ವಿಠಲ್ ಬಿ ಇಂಜಳ್ಳಿಕರ್, ಸಂತ್ರಸ್ತ ಕುಟುಂಬದವರು ಉಪಸ್ಥಿತರಿದ್ದರು.