ಅಂತಾರಾಷ್ಟ್ರೀಯ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದ ಬಗೆಗಿನ ತಾರತಮ್ಯ, ಭಯ, ಅಸಹ್ಯಗಳ ವಿರೋಧಿ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಒಂದೆಡೆ ಸಂಸ್ಥೆಯಿಂದ ಮೇ 16ರಂದು ಬೆಂಗಳೂರು ಹೆಬ್ಬಳದ ದಾಸರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ರೀಡಾ ಕೂಟ ಹಮ್ಮಿಕೊಳ್ಳಲಾಗಿದೆ ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಪ್ರಸ್‌ಕ್ಲಬ್ ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಪದಾಧಿಕಾರಿಗಳು, ಅಂತಾರಾಷ್ಟ್ರೀಯ ಹೋಮೋಫೋಬಿಯಾ, ಬೈಫೋಬಿಯಾ ಮತ್ತು ಟ್ರಾನ್ಸ್‌ಫೋಬಿಯಾ (ಐ.ಡಿ.ಎ.ಎಚ್.ಒ.ಬಿ.ಐ.ಟಿ.) ವಿರೋಧಿ ದಿನವನ್ನು ವಿಶ್ವದ 130 ದೇಶಗಳಲ್ಲಿ ಮೇ 17ರಂದು ಆಚರಿಸಲಾಗುತ್ತದೆ. ಈ ಪ್ರಯುಕ್ತ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸೆ, ತಾರತಮ್ಯ ಮತ್ತು ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ಸಮುದಾಯದ ಬಗ್ಗೆ ಸಮಾಜದಲ್ಲಿರುವ ಭಯ, ತಾರತಮ್ಯ, ಅಸಹ್ಯ ಭಾವನೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಸಮುದಾಯದ ಮಹಿಳೆಯರು, ಮಕ್ಕಳು, ಯುವಕರು ಮತ್ತು ಲೈಂಗಿಕ ಕಾರ್ಮಿಕರು ಕ್ರೀಡಾ ಕೂಟದಲ್ಲಿ ಭಾಗವಹಿಸಲಿದ್ದಾರೆ. ಕುಂಟೆ ಬಿಲ್ಲೆ, ಚೌಕಬಾರ, ಅಣೆಜಲ್ಲು, ಕ್ರಿಕೆಟ್ ಮತ್ತು ಕಬ್ಬಡ್ಡಿ ಮೊದಲಾದ ಆಟೋಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹಲವು ಹೋರಾಟ ಪ್ರತಿಭಟನೆ ನಡೆಸಿದರೂ ನಮ್ಮ ಸಮುದಾಯದ ಸಬಲೀಕರಣ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ಮೇ 17ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ಬೆನ್ಸನ್ ಟೌನ್ ಐಎಸ್‌ಐನಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಅಂತರ್ ಲಿಂಗಿ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಪ್ರಸ್ತುತ ಸ್ಥಿತಿಗತಿಗಳು, ಸವಾಲುಗಳು ಮತ್ತು ಪರಿಹಾರಗಳು ವಿಚಾರದಲ್ಲಿ ಚರ್ಚೆ ನಡೆಯಲಿದೆ ಎಂದರು.
ಸಾರ್ವಜನಿಕ ಸಭೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಹಿರಿಯ ಸರ್ಕಾರಿ ಅಭಿಯೋಜಕ ಭಾಗ್ಯಲಕ್ಷ್ಮೀ, ಪತ್ರಕರ್ತ ರವೀಂದ್ರ ಭಟ್ಟ, ನಿಮ್ಹಾನ್ಸ್ ಜಂಟಿ ಕಾರ್ಯದರ್ಶಿ ಡಾ. ಕಣ್ಮಣಿ, ಬಂಜಾರ ಅಕಾಡೆಮಿ ಅಧ್ಯಕ್ಷ ಅಲಿಕ್ವಾಜ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕ ಸಭೆಯ ಬಳಿಕ ಸಂಜೆ 3 ಗಂಟೆಯಿಂದ 5 ಗಂಟೆಯವರೆಗೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನಾ ಸಭೆಯಲ್ಲಿ ನಮ್ಮ ಸಮುದಾಯದ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಕ್ಷಿತಾ, ಆಬಿದಾ ಬೇಗಂ, ಮೋನಿಕಾ, ಪ್ರಕಾಶ್, ರಾಕೇಶ್ ಉಪಸ್ಥಿತರಿದ್ದರು.