ಅಕ್ರಮ ಗಣಿಗಾರಿಕೆ ಮತ್ತು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಬೆನ್ನಲ್ಲೇ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ರೆಡ್ಡಿ ಪ್ರತಿನಿಧಿಸುತ್ತಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಗಂಗಾವತಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
2008-2012ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜನಾರ್ದನ ರೆಡ್ಡಿ ಸಚಿವರಾಗಿದ್ದರು. ಬಳ್ಳಾರಿ ಜಿಲ್ಲೆಯನ್ನು ರೆಡ್ಡಿ ಸಹೋದರರು ತಮ್ಮ ಕೋಟೆಯನ್ನಾಗಿ ಮಾಡಿಕೊಂಡಿದ್ದರು. ಹೆಗ್ಗಿಲ್ಲದೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರು. ರೆಡ್ಡಿ ವಿರುದ್ಧ 2013ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಾದ ಬಳಿಕ, ಅವರ ರಾಜಕೀಯ ಭವಿಷ್ಯ ಅಂತ್ಯಗೊಂಡಿತ್ತು. ಬಳ್ಳಾರಿ ಪ್ರವೇಶಿಸದಂತೆ ನ್ಯಾಯಾಲಯ ನಿರ್ಬಂಧವನ್ನೂ ಹೇರಿತ್ತು. ಬಳ್ಳಾರಿಯಿಂದ ಹೊರಹಾಕಲ್ಪಟ್ಟಿದ್ದ ರೆಡ್ಡಿಗೆ 10 ವರ್ಷಗಳ ಬಳಿಕ ಮತ್ತೆ ರಾಜಕೀಯ ನೆಲೆ ಕೊಟ್ಟಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ.
2023ರ ವಿಧಾನಸಭಾ ಚುನಾವಣೆಯಲ್ಲಿ ಕೆಆರ್‌ಪಿ ಪಕ್ಷ ಕಟ್ಟಿ, ಗಂಗಾವತಿಯಲ್ಲಿ ಸ್ಪರ್ಧಿಸಿ ಗೆದ್ದರು. ಬಳಿಕ, ಮರಳಿ ಬಿಜೆಪಿ ಸೇರಿದರು. ಇದೀಗ, ಶಾಸಕತ್ವದಿಂದ ರೆಡ್ಡಿಯನ್ನು ಅನರ್ಹಗೊಳಿಸಲಾಗಿದೆ. ಗಂಗಾವತಿ ಶಾಸಕ ಸ್ಥಾನ ಖಾಲಿಯಾಗಿದೆ.
ರೆಡ್ಡಿ ಅನರ್ಹತೆ ಬೆನ್ನಲ್ಲೇ ಗಂಗಾವತಿಯಲ್ಲಿ ರಾಜಕೀಯ ಚಟುವಟಿಕೆಗಳು ಮುನ್ನೆಲೆಗೆ ಬಂದಿವೆ. ಉಪಚುನಾವಣೆಯಲ್ಲಿ ಬಿಜೆಪಿಯಿಂದ ರೆಡ್ಡಿ ಅವರ ಪತ್ನಿ ಅರುಣಾ ಅವರು ಕಣಕ್ಕಿಳಿಯಬಹುದು ಎಂವ ಅಭಿಪ್ರಾಯಗಳು ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿವೆ. ಇನ್ನು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದ ಆರೋಪಗಳು, ಬಿಜೆಪಿಯ ಜನಾಕ್ರೋಶ ಯಾತ್ರೆಯು ಜನರ ಅಭಿಪ್ರಾಯವನ್ನು ಸರ್ಕಾರದ ವಿರುದ್ಧ ರೂಪಿಸಿವೆಯೇ ಅಥವಾ ಜನರು ಸರ್ಕಾರದ ಪರವಾಗಿ ಒಲವು ಹೊಂದಿದ್ದಾರೆ ಎಂಬುದನ್ನು ಈ ಉಪಚುನಾವಣೆ ಸೂಚಿಸುತ್ತದೆ ಎಂದೂ ಹೇಳಲಾಗುತ್ತಿದೆ.
ಆಡಳಿತಾರೂಢ ಕಾಂಗ್ರೆಸ್‌ಗೆ ಉಪಚುನಾವಣೆಯು ಪ್ರತಿಷ್ಠೆಯ ಕಣವಾಗಿರುತ್ತದಾದ್ದರಿಂದ, ಗಂಗಾವತಿಯಲ್ಲಿ ಗೆಲ್ಲಲೇಬೇಕೆಂಬ ಹಂಬಲವಿದೆ. ಬಿಜೆಪಿಗೆ ತನ್ನ ನೆಲೆ ಉಳಿಸಿಕೊಳ್ಳುವ ಧಾವಂತವಿದೆ. ಸದ್ಯ ಎರಡೂ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಸಕ್ರಿಯವಾಗಿದ್ದು, ಟಿಕೆಟ್‌ಗಾಗಿ ಬೇಡಿಕೆ ಇಡುತ್ತಿದ್ದಾರೆ.
ಬಿಜೆಪಿಯಲ್ಲಿ ರೆಡ್ಡಿ ಅವರ ಪತ್ನಿ ಅರುಣಾ ಅವರು ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದ ಅವರು ಹೀನಾಯವಾಗಿ ಸೋತಿದ್ದರು. ಆ ಸೋಲು ಮತ್ತು ಹೆಚ್ಚಿನ ರಾಜಕೀಯ ಅನುಭವ, ಪಾಲ್ಗೊಳ್ಳುವಿಕೆ ಇಲ್ಲ ಎಂಬ ಕಾರಣ ನೀಡಿ ಅವರಿಗೆ ಟಿಕೆಟ್ ನಿರಾಕರಿಸಲೂ ಬಹುದು ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಅರುಣಾ ಅವರಿಗೆ ಮಾಜಿ ಸಂಸದ ಕರಡಿ ಸಂಗಣ್ಣ, ಬಿಜೆಪಿ ನಾಯಕ ಪರಣ್ಣ ಮುನವಳ್ಳಿ ಮತ್ತು ಮಾಜಿ ಎಂಎಲ್‌ಸಿ ಎಚ್‌ಆರ್ ಶ್ರೀನಾಥ್ ಅವರ ಬೆಂಬಲವಿದೆ. ಅವರೆಲ್ಲರೂ ಅರುಣಾ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುವ ಸಾಧ್ಯತೆಗಳಿವೆ.
ಇನ್ನು, ಕಾಂಗ್ರೆಸ್‌ನಿಂದ ಬಸವರಾಜ್ ಹಿಟ್ನಾಳ್ ಕುಟಂಬ, 2023ರಲ್ಲಿ ರೆಡ್ಡಿ ವಿರುದ್ಧ ಸೋತಿದ್ದ ಇಕ್ಬಾಲ್ ಅನ್ಸಾರಿ ಸೇರಿದಂತೆ ಪ್ರಮುಖರು ಟಿಕೆಟ್ ಆಕಾಂಕ್ಷಿಗಳ ರೇಸ್‌ನಲ್ಲಿದ್ದಾರೆ.
ಸದ್ಯ, ಚುನಾವಣಾ ಆಯೋಗ ಚುನಾವಣೆಯನ್ನು ಘೋಷಿಸಿಲ್ಲ. ಚುನಾವಣೆ ಘೋಷಣೆಯಾದ ಬಳಿಕ, ಯಾರಿಗೆ ಟಿಕೆಟ್ ಸಿಗಲಿದೆ. ಯಾರು ಬಂಡಾಯ ಏಳಲಿದ್ದಾರೆ ಎಂಬುದು ಗೊತ್ತಾಗಲಿದೆ.