ಗುಲಬರ್ಗಾ ವಿವಿ ಕರ್ಮಕಾಂಡ-1: ಅಂಕಗಳನ್ನೇ ತಿದ್ದಿದ ಭೂಪರು; ಭಾರೀ ಅಕ್ರಮ ಬಯಲು

Date:

Advertisements
ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕರು ಕೊಟ್ಟಿರುವ ಅಂಕಕ್ಕೂ ಮಾರ್ಕ್ಸ್‌ ಲಿಸ್ಟ್‌ನಲ್ಲಿ ತೋರಿಸಿರುವ ಅಂಕಕ್ಕೂ ವ್ಯತ್ಯಾಸಗಳಿರುವುದನ್ನು ಗುಲಬರ್ಗಾ ವಿವಿ ಪರೀಕ್ಷಾ ಸುಧಾರಣಾ ಸಮಿತಿ ಗುರುತಿಸಿದೆ.

ಗುಲಬರ್ಗಾ ವಿಶ್ವವಿದ್ಯಾಲಯ ಹಳಿಗೆ ಬರುವ ಯಾವ ಸೂಚನೆಯೂ ಕಾಣುತ್ತಿಲ್ಲ.‌ ಸಾಲು ಸಾಲು ಹಗರಣಗಳು ತೆರೆದುಕೊಳ್ಳುತ್ತಲೇ ಇವೆ. ಪರೀಕ್ಷಾ ಫಲಿತಾಂಶ ನೀಡುವಲ್ಲಿ ಭಾರೀ ವಿಳಂಬ ಅನುಸರಿಸಿ ವಿವಾದಕ್ಕೆ ಗುರಿಯಾಗಿದ್ದ ವಿವಿ ಈಗ, ಮತ್ತೆ ತನ್ನ ಅಧ್ವಾನಗಳಿಂದಾಗಿ ಟೀಕೆಗೆ ಗುರಿಯಾಗಿದೆ.

ಈ ಹಿಂದೆ ಹನ್ನೆರಡು ಸಾವಿರ ವಿದ್ಯಾರ್ಥಿಗಳ ಫಲಿತಾಂಶ ಬಾಕಿ ಉಳಿದಿತ್ತು. ಈಗಲೂ ಆರು ಸಾವಿರ ಮಕ್ಕಳ ಫಲಿತಾಂಶ ಬರಬೇಕಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಗಾಯದ ಮೇಲೆ ಉಪ್ಪು ಸವರಿದಂತೆ ಮತ್ತೊಂದು ಪರೀಕ್ಷಾ ಅಕ್ರಮ ಬೆಳಕಿಗೆ ಬಂದಿದೆ.

‘ಈದಿನ ಡಾಟ್‌ ಕಾಮ್‌’ಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಪರೀಕ್ಷಾ ಅಂಕಗಳನ್ನೇ ಭಾರೀ ದೊಡ್ಡ ಮಟ್ಟದಲ್ಲಿ ತಿರುಚಿರುವುದು ಕಣ್ಣಿಗೆ ರಾಚಿದೆ. 2023-24ನೇ ಸಾಲಿನ ಬಿ.ಎಡ್ ಪರೀಕ್ಷಾರ್ಥಿಗಳ ಅಂಕಗಳನ್ನೇ ತಿದ್ದುಪಡಿ ಮಾಡಿ, ವಿಶ್ವವಿದ್ಯಾಲಯ ಪೇಚಿಗೆ ಸಿಲುಕಿದೆ.

Advertisements

ಉತ್ತರ ಪತ್ರಿಕೆಯ ಮೌಲ್ಯಮಾಪನದ ಬಳಿಕ, ಮಾರ್ಕ್ಸ್ ಲಿಸ್ಟ್ ಮಾಡುವಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿದೆ. ಮಾರ್ಕ್ಸ್‌ ಲಿಸ್ಟ್ ಆಧಾರದಲ್ಲಿ ಗಣಕೀಕರಣ ಮಾಡಲಾಗುತ್ತದೆ. ಆದರೆ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕರು ಕೊಟ್ಟಿರುವ ಅಂಕಕ್ಕೂ ಮಾರ್ಕ್ಸ್‌ ಲಿಸ್ಟ್‌ನಲ್ಲಿ ತೋರಿಸಿರುವ ಅಂಕಕ್ಕೂ ವ್ಯತ್ಯಾಸಗಳಿರುವುದನ್ನು ಗುಲಬರ್ಗಾ ವಿವಿ ಪರೀಕ್ಷಾ ಸುಧಾರಣಾ ಸಮಿತಿ ಗುರುತಿಸಿದೆ. 3,000 ಬಿ.ಎಡ್ ಪರೀಕ್ಷಾರ್ಥಿಗಳ ಪೈಕಿ ಅನೇಕರ ಅಂಕಗಳನ್ನು ತಿದ್ದಿರುವ ಆರೋಪ ಬಂದಿದೆ.

“ಉತ್ತರ ಪತ್ರಿಕೆಯಲ್ಲಿ 53 ಅಂಕಗಳಿರುವುದು ಮಾರ್ಕ್ಸ್‌ಲಿಸ್ಟ್‌ನಲ್ಲಿ 70 ಆಗಿರುವುದು, 90 ಇರುವುದು 30 ಆಗಿರುವುದು ಕಂಡು ಬಂದಿದೆ. ಉತ್ತರ ಪತ್ರಿಕೆಯಲ್ಲಿ ಇರುವುದೇ ಒಂದಾದರೆ ಅಂಕ ನಮೂದನೆ ಪಟ್ಟಿಯಲ್ಲಿ ದಾಖಲಾಗಿರುವುದೇ ಬೇರೊಂದಾಗಿದೆ” ಎಂದು ಮೂಲಗಳು ಖಚಿತಪಡಿಸಿವೆ.

WhatsApp Image 2025 05 16 at 11.41.34 1
ಮಾರ್ಕ್ಸ್‌ ಲಿಸ್ಟ್‌ನಲ್ಲಿ ಅಂಕಗಳನ್ನು ತಿದ್ದಿರುವುದು
WhatsApp Image 2025 05 16 at 11.41.28 1
ಮಾರ್ಕ್ಸ್‌ ಲಿಸ್ಟ್‌ನಲ್ಲಿ ಅಂಕಗಳನ್ನು ತಿದ್ದಿರುವುದು

ಮೌಲ್ಯಮಾಪಕರು ಉತ್ತರ ಪತ್ರಿಕೆಗಳನ್ನು ಕೊಟ್ಟು ಹೋದ ಬಳಿಕ, ಈ ಬದಲಾವಣೆ ಆಗಿರುವುದು ಸ್ಪಷ್ಟವಾಗುತ್ತಿದೆ. ಇಲ್ಲಿ ಭಾರೀ ಹಗರಣ ನಡೆದಿರುವ ಶಂಕೆಯನ್ನು ವಿವಿಯ ಪರೀಕ್ಷಾ ಸುಧಾರಣಾ ಸಮಿತಿ ಗುರುತಿಸಿದೆ.

ಮಾರ್ಕ್ಸ್‌ ಲಿಸ್ಟ್‌ನಲ್ಲಿ ತಿದ್ದುಪಡಿ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈಗಾಗಲೇ ನಮೂದಾಗಿರುವ ಅಂಕಿಗಳನ್ನು ಒಡೆದು ಹಾಕಿ, ಹೊಸದಾಗಿ ಬರೆಯಲಾಗಿದೆ.

‘ಈದಿನ ಡಾಟ್ ಕಾಮ್’ ಜೊತೆಯಲ್ಲಿ ಮಾತನಾಡಿದ ಪರೀಕ್ಷಾ ಸುಧಾರಣಾ ಸಮಿತಿಯ ಅಧ್ಯಕ್ಷ ಸಿದ್ದಪ್ಪ ಮೂಲಗೆ ಅವರು, “ನಾವು ಸಭೆಯನ್ನು ನಡೆಸಿದ್ದೇವೆ. ಮಧ್ಯಂತರ ವರದಿಯನ್ನು ಸಲ್ಲಿಸಿದ್ದೇವೆ. ಈ ಹಗರಣವನ್ನು ಸಿಒಡಿ ತನಿಖೆಗೆ ವಹಿಸಬೇಕೆಂದು ಸೂಚಿಸಿದ್ದೇವೆ. ಹಲವಾರು ಮಕ್ಕಳ ಅಂಕಗಳು ತಿರುಚಲ್ಪಟ್ಟಿರುವುದು ನಮ್ಮ ಗಮನಕ್ಕೆ ಬಂದಿದೆ. 2023-2024ನೇ ಸಾಲಿನ ಬಿ.ಎಡ್ ದ್ವಿತೀಯ ಸೆಮಿಸ್ಟರ್ ಮತ್ತು ನಾಲ್ಕನೇ ಸೆಮಿಸ್ಟರ್‌ನಲ್ಲಿ ಈ ಹಗರಣ ನಡೆದಿರುವುದು ಕಂಡು ಬಂದಿದೆ” ಎಂದರು.

ಸಮಿತಿ ಸಲ್ಲಿಸಿರುವ ವರದಿಯ ಮತ್ತೆರಡು ನಿರ್ಧಾರಗಳನ್ನು ತಿಳಿಸಿದ ಅವರು, “ಪರೀಕ್ಷಾ ವಿಭಾಗದ ಬಿ.ಎಡ್ ವಿಭಾಗಕ್ಕೆ ಸಂಬಂಧಿಸಿದ ಎಲ್ಲ ಸಿಬ್ಬಂದಿಗಳನ್ನು ತಕ್ಷಣವೇ ವರ್ಗಾವಣೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು; ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್‌ನ ಮೂಲ ಮೌಲ್ಯಮಾಪನದ ಅಂಕಗಳನ್ನು ಪರಿಗಣಿಸಲು ಹಾಗೂ ವಸ್ತುನಿಷ್ಠತೆಯನ್ನು ಪರಿಶೀಲಿಸಲು ನಾಲ್ಕು ಜನ ಬಾಹ್ಯ ಪರೀಕ್ಷಕರನ್ನು ನೇಮಿಸಿಕೊಂಡು ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ” ಎಂದು ವಿವರಿಸಿದರು.

image 55
ಗುಲಬರ್ಗಾ ವಿವಿ ಪರೀಕ್ಷಾ ಸುಧಾರಣಾ ಸಮಿತಿ ಅಧ್ಯಕ್ಷರಾದ ಸಿದ್ದಪ್ಪ ಮೂಲಗೆ

‘ಈದಿನ’ದ ಜೊತೆ ಪರೀಕ್ಷಾ ವಿಭಾಗದ ರಿಜಿಸ್ಟಾರ್ ಎನ್.ಜಿ.ಕಣ್ಣೂರ ಮಾತನಾಡಿ, “ಮಾರ್ಕ್ಸ್‌ ಲಿಸ್ಟ್‌ನಲ್ಲಿ ಗೊಂದಲಗಳಾಗಿರುವ ಸಂಬಂಧ ತನಿಖೆ ನಡೆಸಲು ಡೀನ್‌ ಫ್ಯಾಕಲ್ಟಿ ಆಫ್ ಎಜುಕೇಷನ್ ಆಗಿರುವ ಪ್ರೊ.ಬಾಬಣ್ಣ ಹೂವಿನಬಾವಿಯ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಎಷ್ಟು ಪತ್ರಿಕೆಗಳನ್ನು ಟ್ಯಾಂಪರಿಂಗ್ ಮಾಡಲಾಗಿದೆ ಎಂಬುದನ್ನು ನಾವು ಎಣಿಸಲು ಹೋಗಿಲ್ಲ. ತನಿಖಾ ಸಮಿತಿ ಎಲ್ಲವನ್ನೂ ಪರಿಶೀಲಿಸಿ ಮುಂದಿನ ಕ್ರಮಗಳ ಕುರಿತು ತಿಳಿಸಲಿದೆ. ಟ್ಯಾಂಪರಿಂಗ್ ಆಗಿರುವ ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದ ಫಲಿತಾಂಶ ಪ್ರಕಟವಾಗಿಲ್ಲ. ಗಣಕೀಕರಣ ಮಾಡುವಾಗ ಹಗರಣ ಗಮನಕ್ಕೆ ಬಂದಿದೆ. ತನಿಖಾ ಸಮಿತಿ ನೀಡುವ ವರದಿ ಆಧರಿಸಿ, ಮುಂದಿನ ಕ್ರಮ ಜರುಗಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿರಿ: ಆತಂಕದಲ್ಲಿದ್ದ ಗುಲಬರ್ಗಾ ವಿವಿ ವಿದ್ಯಾರ್ಥಿಗಳಿಗೆ ಕೊನೆಗೂ ಸಿಕ್ಕಿತು ‘ಫಲಿತಾಂಶ ಭಾಗ್ಯ’

ಗುಲಬರ್ಗಾ ವಿವಿ ಸಿಂಡಿಕೇಟ್ ಸದಸ್ಯರಾದ ಸಿದ್ದಪ್ಪ ಸುಳ್ಳದ ಮಾತನಾಡಿ, “ಯೂನಿವರ್ಸಿಟಿಯ ಪೂರ್ಣ ಹೆಸರನ್ನು ಪರೀಕ್ಷಾ ವಿಭಾಗದವರು ಹಾಳು ಮಾಡುತ್ತಿದ್ದಾರೆ. ಬಿ.ಎಡ್ ಕಾಲೇಜಿನ ಫಲಿತಾಂಶವೂ ತಡವಾಗಿ ಬರುತ್ತಿದೆ. ತನಿಖೆಯಾದರೆ ಮಾತ್ರ ಯಾರು ಪ್ರಮಾದ ಎಸಗಿದ್ದಾರೆಂದು ತಿಳಿಯುತ್ತದೆ” ಎಂದು ತಿಳಿಸಿದರು.

ಒಟ್ಟಾರೆಯಾಗಿ ಗುಲಬರ್ಗಾ ವಿಶ್ವವಿದ್ಯಾನಿಲಯವು ಹಗರಣಗಳ ಕೊಂಪೆಯಾಗಿರುವುದು ಕಂಡುಬರುತ್ತಿದೆ. ಮತ್ತಷ್ಟು ಪರೀಕ್ಷಾ ಅಕ್ರಮಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಗೆ ದೂಡುತ್ತಿವೆ. ಈಗಾಗಲೇ ಪರೀಕ್ಷಾ ಫಲಿತಾಂಶಗಳ ವಿಳಂಬದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ವಿವಿಯ ವಿದ್ಯಾರ್ಥಿಗಳಿಗೆ ಮತ್ತೊಂದು ಸವಾಲು ಎದುರಾಗಿದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X