ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ನೆರಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕದ ಹೊಳೆ ಸಮೀಪದ ಬಿಸ್ನಳ್ಳಿ ಕಿರು ಸೇತುವೆಯ ದುಸ್ಥಿತಿಯ ಕಥೆ ಇದು. ಸಂಕದ ಹೊಳೆಯಿಂದ ಜಯಪುರಕ್ಕೆ ಹೋಗುವ ಒಳ ರಸ್ತೆಯಲ್ಲಿ(ಬಿಸ್ನಳ್ಳಿ, ಸರಳ ರಸ್ತೆ) ಬರುವ ಈ ಕಿರು ಸೇತುವೆಯ ಹೆಸರು ಸರಳ ಸೇತುವೆ ಎಂದೇ. ಕಳೆದ ಮೂರು ವರ್ಷಗಳಿಂದ ಈ ದುಸ್ಥಿತಿಗೆ ತಲುಪಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಾವು ನೋವು ತಂದೊಡ್ಡಬಹುದಾದ ಸ್ಥಿತಿಗೆ ಸೇತುವೆ ತಲುಪಿದ್ದರೂ ಸ್ಥಳೀಯ ಆಡಳಿತ ಮಾತ್ರ ಮೌನ ವಹಿಸಿದೆ. ನಿರ್ವಹಣೆ ಬದಿಗೊತ್ತಿ ಕರ್ತವ್ಯ ಮರೆತಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಸ್ಥಳೀಯ ಜನಾಕ್ರೋಶ ಹೆಚ್ಚಾಗಿದೆ.

ಈ ಕುರಿತು ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಸ್ಥಳೀಯ ನಿವಾಸಿಯೊಬ್ಬರು, “ಸೇತುವೆಯ ಅಕ್ಕ ಪಕ್ಕದಲ್ಲಿ ಯಾವುದೇ ಬೀದಿ ದೀಪ ಇಲ್ಲ. ಸ್ಪೀಡ್ ಬ್ರೇಕರ್ ಸಹ ಇಲ್ಲ. ಕೆಲ ತಿಂಗಳ ಹಿಂದೆ ಸಂಜೆ ವೇಳೆ ಈ ರಸ್ತೆಯಲ್ಲಿ ನಾನು ವಾಹನ ಚಲಾಯಿಸಿಕೊಂಡು ಬರುವಾಗ ಎದುರಿಂದ ಬಂದ ವಾಹನದ ಫೋಕಸ್ ಲೈಟ್ ಒಮ್ಮೆಲೇ ನನಗೆ ಕಣ್ಣು ಚುಚ್ಚಿತ್ತು. ಹಾಗಾಗಿ ಮುಂದೆ ರಸ್ತೆ ಕಾಣದೆ ಪಕ್ಕದಲ್ಲಿ ಇದ್ದ ಸೇತುವೆಯ ಹಳೆಯದಾದ ಕಬ್ಬಿಣದ ಪೈಪ್‌ಗೆ ಗುದ್ದಿ ಗಾಡಿ ಅಚಾನಕ್ಕಾಗಿ ನಿಂತಿತು. ಸ್ವಲ್ಪದರಲ್ಲಿ ಪಾರಾದೆ. ಅಂದು ಹೆಚ್ಚು ಕಡಿಮೆ ಆಗಿದ್ದರೆ ನನ್ನ ಜೀವ ಅದೋ ಗತಿ. ಅಷ್ಟೊಂದು ಅಪಾಯಕಾರಿಯಾಗಿದೆ ಸೇತುವೆ. ಸಾಲದ್ದಕ್ಕೆ ಸೇತುವೆ ತುಂಬಾ ಹಳೆಯದು ಹಾಗೂ ಕಿರಿದಾಗಿದೆ” ಎಂದರು.

ಮತ್ತೊಬ್ಬ ಬೈಕ್ ಸವಾರ ಮಾತನಾಡಿ, “ಇದನ್ನು ಸರಿಪಡಿಸದೆ ವರ್ಷಗಳಿಂದ ಹೀಗೇ ಬಿದ್ದಿದೆ. ಯಾವ ಜೀವ ಹಾನಿಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಯುತ್ತಿದ್ದಾರೋ ತಿಳಿಯುತ್ತಿಲ್ಲ. ಸೇತುವೆಯ ಎರಡೂ ಬದಿಗೆ ಅಳವಡಿಸಿರುವ ಸಣ್ಣ ಕಬ್ಬಿಣದ ರಾಡು ಒಂದು ಬದಿ ಪೂರ್ತಿ ಕಿತ್ತು ಬಂದಿದೆ. ಸ್ವಲ್ಪ ವೇಗವಾಗಿ ಬಂದು ಗಾಡಿ ನಿಯಂತ್ರಣ ತಪ್ಪಿದರೆ ಸಾಕು.. ಸೀದಾ ಹಳ್ಳಕ್ಕೆ ಬೀಳಬೇಕಾಗುತ್ತದೆ. ದಿನನಿತ್ಯ ಬಹಳಷ್ಟು ವಾಹನ ಸಂಚಾರರು ಈ ರಸ್ತೆಯಲ್ಲಿ ಓಡಾಡುತ್ತಾರೆ. ಇದರಿಂದ ಒಂದಲ್ಲ ಒಂದು ದಿನ ದೊಡ್ಡ ಪ್ರಮಾಣದ ಅಪಾಯ ಕಟ್ಟಿಟ್ಟ ಬುತ್ತಿ” ಎಂದರು.

ನೆರಟೂರಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರ ರಾಮನಾಯ್ಕ್ ಈದಿನದೊಂದಿಗೆ ಮಾತನಾಡಿ, “ನಾನು ಕೂಡ ಸ್ಥಳ ಪರಿಶೀಲನೆ ಮಾಡಿದ್ದೇನೆ. ಹಾಗೆಯೇ ಈ ಸೇತುವೆ ಸರಿಯಾಗಬೇಕು. ಇದು ಅಪಾಯಕಾರಿ ಆಗಿದೆ. ಸೇತುವೆ ಸರಿಪಡಿಸಿಕೊಡಲು ನಮ್ಮ ಗ್ರಾಮ ಪಂಚಾಯತಿಗೆ ಕಳೆದ ಎರಡು ವರ್ಷದಿಂದ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. ಸದ್ಯದ ಮಟ್ಟಿಗೆ ಸುತ್ತಮುತ್ತಲಿನ ತಡೆಗೋಡೆಗೆ ಪೈಪ್ ಹಾಕಬೇಕು ಅಂದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಕೂಡ ಭೇಟಿಯಾಗಿ ನೆರವು ಕೇಳಲಿದ್ದೇವೆ. ಹಾಗೆ ಕಳೆದ 4 ವರ್ಷದಿಂದ ಯಾವುದೇ ಸ್ಥಳೀಯ ಚುನಾವಣೆಗಳು ನಡೆಯದ ಕಾರಣ ಎಲ್ಲವೂ ಕೂಡ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳು ಹಾಗೂ ಶಾಸಕರು ಇದರ ಕುರಿತಾಗಿ ಗಮನಹರಿಸಿ ತ್ವರಿತಗತಿಯಲ್ಲಿ ಸಮಸ್ಯೆ ಬಗೆಹರಿಸಿಕೊಡಬೇಕು. ಜನಪ್ರತಿನಿಧಿಗಳು ಯಾವುದೇ ಅಪಾಯಗಳು ಸಂಭವಿಸುವ ಮುನ್ನ ಜಾಗೃತರಾಗಬೇಕು” ಎಂದರು.

ಪಿಡಿಒ ಶ್ರೀಲಕ್ಷೀ ಮಾತನಾಡಿ, “ಇದು ತೀರ ಹಳೆಯದಾದ ಸೇತುವೆಯಾಗಿದೆ ಹಾಗೂ ಸೇತುವೆ ಅಗಲ ತುಂಬಾ ಕಡಿಮೆ ಇದೆ. ನಮಗೆ ಶಾಸಕರು ಹಾಗೂ ಸರ್ಕಾರದಿಂದ ಯಾವದೇ ನೆರವು, ಅನುದಾನ ಬಿಡುಗಡೆಯಾಗಿಲ್ಲ. ಕಂದಾಯ ವಸೂಲಿ ಹಣದಿಂದ ನಮ್ಮ ಕೈಲಿ ಆಗುವ ಕೆಲಸಗಳನ್ನು ಮಾಡಿಸುತ್ತಿದ್ದೇವೆ. ನಾವು ಅಸಹಾಯಕರಾಗಿದ್ದೇವೆ. ಜೊತೆಗೆ ಇಲ್ಲಿ ಸೇತುವೆ ಸುತ್ತಮುತ್ತಲಿನಲ್ಲಿ ತಡೆಗೋಡೆ ಬದಲಿಗೆ ಕಬ್ಬಿಣದ ಪೈಪ್ಗಳನ್ನು ಹಾಕಿದ್ದೆವು. ಮತ್ತೆ ಸೇತುವೆ ಬದಿಗಳಲ್ಲಿ ಸೋಲಾರ್ ಲೈಟ್ ಕೂಡ ಅಳವಡಿಸಲಾಗಿತ್ತು. ಅದೆಲ್ಲ ಕಳ್ಳತನ ಆಗಿದೆ. ಈ ಸಂಬಂಧ ಪಿ ಡಬ್ಲ್ಯೂ ಡಿ ಇಲಾಖೆ ಗಮನಕ್ಕೆ ತಂದಿದ್ದು, ಅವರುಗಳು ಸಹ ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದಿದ್ದಾರೆ. ಶಾಸಕರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಶೀಘ್ರದಲ್ಲಿ ಬಗೆಹರಿಸಿಕೊಡುವ ಭರವಸೆಯಿದೆ” ಎಂದರು.
ಇದನ್ನೂ ಓದಿ: ಶಿವಮೊಗ್ಗ | ಗಾಂಜಾ ಆರೋಪಿಗಳ ಬಂಧನ
“ಸದ್ಯದ ಮಟ್ಟಿಗೆ ಸೇತುವೆ ದುರಸ್ಥಿ ಪಡಿಸುವಷ್ಟು ಅನುದಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಲ್ಲ, ಜೊತೆಗೆ ಸೇತುವೆ ಕಾಮಗಾರಿಗೆ ಬೇಕಾಗುವಷ್ಟು ಅನುದಾನ ಶಾಸಕರ ಅಥವಾ ಸರ್ಕಾರದಿಂದಲೇ ಆಗಬೇಕು. ಹೀಗಾಗಿ ತಾತ್ಕಾಲಿಕವಾಗಿ ಸೇತುವೆ ಬಳಿ ಅಪಾಯದ ಮುನ್ಸೂಚನೆ ಫಲಕ ಹಾಕುತ್ತೇವೆ” ಎಂದರು.
ನೆರಟೂರು ಗ್ರಾಮ ಪಂಚಾಯತಿಯನ್ನು ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಲು ಲಕ್ಷಗಟ್ಟಲೆ ಹಣ ಬಿಡುಗಡೆಯಾಗಿದೆ. ಈಗಿರುವ ಗ್ರಾಮಪಂಚಾಯತ್ ಮೇಲೆ ಮೊದಲನೇ ಮಹಡಿಯ ಬಿಲ್ಡಿಂಗ್ ಕಟ್ಟಲು ಹಣ ಬಿಡುಗಡೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸ್ಥಳೀಯವಾಗಿ ಕೇಳಿ ಬರುತ್ತಿದೆ.
ಆದರೆ ಜನಸಾಮಾನ್ಯರು ಹಾಗೂ ವಾಹನ ಸವಾರಾರು ದಿನ ನಿತ್ಯ ಅಪಾಯದ ಆತಂಕದೊಂದಿಗೆ ಓಡಾಡುತ್ತಿದ್ದಾರೆ, ಆದರೆ ಪಂಚಾಯತ್ ಕಚೇರಿ ಬಿಲ್ಡಿಂಗ್ ಕಾಮಗಾರಿಗೆ ಹಣ ಬಿಡುಗಡೆ ಮಾಡಿಸಿಕೊಳ್ಳಲು ಇರುವ ಅಧಿಕಾರಿಗಳ ಆಸಕ್ತಿ ಜನಸಾಮಾನ್ಯರ ಜೀವಕ್ಕೆ ಆಪತ್ತು ತರುವ ಸೇತುವೆ ಸರಿಪಡಿಸಿಕೊಡಲು ಇಲ್ಲ. ಸದ್ಯ ಹಣವಿಲ್ಲ, ಬಿಡುಗಡೆಯಾದಾಗ ನೋಡೋಣ ಎನ್ನುವ ಸಬೂಬು ಎಷ್ಟು ಸಮಯೋಚಿತ ಎಂಬುದು ಸ್ಥಳೀಯರ ಆರೋಪ.
ಬಿಸ್ನಳ್ಳಿಯ ಸರಳ ಸೇತುವೆಯ ದುಸ್ಥಿತಿ ಇಷ್ಟು ದಿನಗಳ ನಿರ್ಲಕ್ಷ್ಯಕ್ಕೆ ನಿದರ್ಶನವಾಗಿದೆ. ಜನಸಾಮಾನ್ಯರು ಪ್ರತಿದಿನವೂ ಆತಂಕದ ನೆರಳಲ್ಲಿ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿರುವಾಗ, ಸ್ಥಳೀಯ ಆಡಳಿತ ಮಾತ್ರ ಕಾಮಗಾರಿ ಯೋಜನೆಗಳ ಲಾಭದತ್ತ ತಿರುಗಿರುವುದು ಜನರನ್ನು ಮತ್ತಷ್ಟು ಆತಂಕ, ಅಸಹಾಯಕ ಸ್ಥಿತಿಗೆ ದೂಡಿದೆ. ಆಡಳಿತ ವ್ಯವಸ್ಥೆ ಬದಲಾಯಿಸಬೇಕಾದದ್ದು ಕೇವಲ ಸೇತುವೆಯ ಸ್ಥಿತಿಯಲ್ಲ, ಜನರ ಜೀವದ ಮೌಲ್ಯವನ್ನು ಅರಿಯುವ ಬಗೆಯಲ್ಲಿಯೂ ಹೌದು. ಪ್ರಶ್ನೆ ಇಷ್ಟೇ: ʼಖಚಿತ ನಿರ್ಧಾರವೊಂದನ್ನು ಕೈಗೊಳ್ಳಲು ಪ್ರಾಣ ಹೋಗಲೇಬೇಕೇ?ʼ

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.