ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್ ಕುರಿತು ಪ್ರತಿಕ್ರೀಯೆ ನೀಡಿರುವ ಬಿಜೆಪಿ, “ಜನರಿಗೆ ಸುಳ್ಳು ಹೇಳಿ, ನಂಬಿಕೆ ದ್ರೋಹವೆಸಗುವುದು ಕೈ ಪಕ್ಷದ ಡಿಎನ್‌ಎ ಯಲ್ಲಿ ಅಡಕವಾಗಿದೆ” ಎಂದು ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, “ಚುನಾವಣೆಗೂ ಮುನ್ನ ಕಾಂಗ್ರೆಸ್ ಪ್ರಕಟಿಸಿದ್ದ “ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಪ್ರಣಾಳಿಕೆಯು ಸಂಪೂರ್ಣ ಸುಳ್ಳಿನ ಕೂಪವಾಗಿದೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಯಾವ ಅಂಶಗಳಿಗೂ ಒತ್ತು ನೀಡದೇ, ಕೇವಲ ಓಲೈಕೆ ರಾಜಕಾರಣಕ್ಕೆ ಮಾತ್ರ ಭರಪೂರ ಅನುದಾನ ನೀಡಿದ್ದಾರೆ” ಎಂದು ಆರೋಪಿಸಿದೆ.
“ಪ್ರಣಾಳಿಕೆಯಲ್ಲಿ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕಾಗಿ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಕಲ್ಯಾಣಕ್ಕೆ ಅಗಸದಷ್ಟು ಆಶ್ವಾಸನೆಯನ್ನು ಕಾಂಗ್ರೆಸ್ ನೀಡಿತ್ತು. ಆದರೆ, ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ಹಿಂದುಳಿದ ಮತ್ತು ಶೋಷಿತ ವರ್ಗಗಳನ್ನು ಕಡೆಗಣಿಸಿ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪಿಸಿ, ₹100 ಕೋಟಿ ಅನುದಾನ ನೀಡಿದ್ದಾರೆ” ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
“ಕೋಲಾರದ ಕನಸು ಕಂಡಿದ್ದ ವರುಣಾ ಪುತ್ರ ಮಹಿಳೆಯರ ಮತಗಳ ಆಸೆಗಾಗಿ ರಾಜ್ಯದ ಎಲ್ಲ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆಂದು ಹೇಳಿದ್ದರು. ಆದರೆ, ಗೆದ್ದ ಬಳಿಕ ಅವರು ಮಂಡಿಸಿದ ಪ್ರಥಮ ಬಜೆಟ್ ನಲ್ಲಿ, ಸ್ತ್ರೀ ಸಬಲೀಕರಣಕ್ಕೆ ಯಾವುದೇ ಅಂಶಗಳನ್ನು ಒದಗಿಸದೇ, ನಾಡಿನ ಸ್ತ್ರೀ ಸಮುದಾಯವನ್ನು ವಂಚಿಸಿದ್ದಾರೆ” ಎಂದು ಬಿಜೆಪಿ ದೂರಿದೆ.
ಈ ಸುದ್ದಿಓದಿದ್ದೀರಾ? ಕೇಂದ್ರ ಸರ್ಕಾರದಿಂದ ಬಡವರ ವಿರೋಧಿ ಡರ್ಟಿ ಪಾಲಿಟಿಕ್ಸ್: ಸಿಎಂ ಸಿದ್ದರಾಮಯ್ಯ ಆಕ್ರೋಶ
“ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮಾಸಿಕ ವೇತನ ಹೆಚ್ಚಳ, ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ, ಒ.ಪಿ.ಎಸ್ ಜಾರಿ, ಹೀಗೆ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಜಾರಿಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಒಂದು ಬಿಡಿಗಾಸು ಸಹ ಮೀಸಲಿಟ್ಟಿಲ್ಲ. ಜನರಿಗೆ ಸುಳ್ಳು ಹೇಳಿ, ನಂಬಿಕೆ ದ್ರೋಹವೆಸಗುವುದು ಕೈ ಪಕ್ಷದ ಡಿಎನ್‌ಎ ಯಲ್ಲಿ ಅಡಕವಾಗಿದೆ” ಎಂದು ಟೀಕಿಸಿದೆ.