ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಕ್ಷಿಪಣಿ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯು ನೆಲೆಯ ಮೇಲೆ ನಿಖರ ದಾಳಿ ನಡೆಸಿದೆ ಎಂಬುದನ್ನು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ದೃಢಪಡಿಸಿದ್ದಾರೆ.
ಇದುವರೆಗೂ ಭಾರತದ ಮಿಲಿಟರಿ ಕಾರ್ಯಾಚರಣೆಯನ್ನು ಪಾಕಿಸ್ತಾನ ನಿರಾಕರಿಸುತ್ತಾ ಬಂದಿತ್ತು. ಸದ್ಯ ಪಾಕ್ ಪ್ರಧಾನಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಬೆಳಗಿನ ಜಾವ 2:30ಕ್ಕೆ ತಮ್ಮನ್ನು ಸಂಪರ್ಕಿಸಿದ್ದರು ಎಂದು ಶಹಬಾಝ್ ಷರೀಫ್ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಭಾರತ- ಪಾಕಿಸ್ತಾನ ಯುದ್ಧದ ಸ್ಥಿತಿ | ದಾಳಿ ಬೆನ್ನಲ್ಲೇ ಎಲ್ಲೆಲ್ಲಿ ಬ್ಲ್ಯಾಕ್ ಔಟ್?
ಏಪ್ರಿಲ್ 22ರಂದು ಪಾಕಿಸ್ತಾನದ ಉಗ್ರ ಸಂಘಟನೆಯು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದನಾ ದಾಳಿ ನಡೆಸಿ 26 ಪ್ರವಾಸಿಗರನ್ನು ಕೊಂದಿದೆ. ಈ ದಾಳಿ ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಹೊತ್ತುಕೊಂಡಿದೆ.
ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ಹೆಸರಲ್ಲಿ ದಾಳಿ ನಡೆಸಿವೆ. ಅದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಅಧಿಕೃತವಾಗಿ ಯುದ್ಧ ಆರಂಭಿಸುವುದಕ್ಕೂ ಮುನ್ನವೇ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ನಡುವೆ ಭಾರತದ ದಾಳಿಗೆ ಪ್ರತೀಕಾರವಾಗಿ, ಪಾಕಿಸ್ತಾನವು ಮೇ 8, 9 ಮತ್ತು 10ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಯತ್ನ ಮಾಡಿತ್ತು. ಅದು ವಿಫಲವಾಗಿತ್ತು. ಬಳಿಕ ಭಾರತೀಯ ಪಡೆಗಳು ಪಾಕಿಸ್ತಾನದ ಬಹು ಸೇನಾ ನೆಲೆಗಳ ಮೇಲೆ ಪ್ರಬಲ ಪ್ರತಿದಾಳಿ ನಡೆಸಿದವು.
ಇವೆಲ್ಲವುದರ ನಡುವೆ ನೂರ್ ಖಾನ್ ವಾಯುನೆಲೆ ಮೇಲೆ ದಾಳಿ ನಡೆಸಿರುವುದಾಗಿ ಭಾರತ ಹೇಳಿತ್ತು. ಆದರೆ ಪಾಕಿಸ್ತಾನ ಮಾತ್ರ ಅದನ್ನು ನಿರಾಕರಿಸುತ್ತಿತ್ತು. ಆದರೆ ಇದೀಗ ಒಪ್ಪಿಕೊಂಡಿದೆ.
