ಸಿಂಧು ನದಿ ನೀರು ಹರಿಸಲೇಬೇಕು – ಇಲ್ಲದಿದ್ದರೆ ಭಾರತಕ್ಕೇ ಗಂಭೀರ ಸಮಸ್ಯೆ!

Date:

Advertisements
ನೈಸರ್ಗಿಕ ನದಿ ಮತ್ತು ಅದರ ನೀರನ್ನು ಯಾವುದೇ ರಾಷ್ಟ್ರವು ಯುದ್ಧ ಅಥವಾ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂಬ ಅಭಿಪ್ರಾಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಳ್ಳತೊಡಗಿವೆ...

ಪಹಲ್ಗಾಮ್ ದಾಳಿಯ ನಂತರ ಉದ್ವಿಗ್ನಗೊಂಡಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕೊನೆಗೊಂಡಿದೆ. ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡು ಸಂಘರ್ಷದಿಂದ ಹಿಂದೆ ಸರಿದಿವೆ. ಆದರೆ, ಸಿಂಧು ನದಿ ನೀರು ಬಿಡುಗಡೆ ವಿಚಾರದಲ್ಲಿ ಭಾರತ ಕಠಿಣ ನಿಲುವು ತಳೆದಿದೆ. ಪಾಕಿಸ್ತಾನಕ್ಕೆ ಸಿಂಧು ನದಿಯಲ್ಲಿ ನೀರು ಹರಿಸುವಂತೆ ಪಾಕಿಸ್ತಾನ ಬೃಹತ್ ನೀರಾವರಿ ಇಲಾಖೆಯು ಭಾರತದ ಜಲಶಕ್ತಿ ಇಲಾಖೆಗೆ ಪತ್ರ ಬರೆದಿದೆ. ಆದರೆ, ಪಾಕಿಸ್ತಾನಕ್ಕೆ ನೀರು ಹರಿಸುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಭಾರತವು ಪಾಕಿಸ್ತಾನ ಜೊತೆಗೆ 1960ರಲ್ಲಿ ಮಾಡಿಕೊಂಡಿದ್ದ ‘ಸಿಂಧು ನದಿ ಒಪ್ಪಂದ’ವನ್ನು (ಐಡಬ್ಲ್ಯೂಟಿ) ಭಾರತ ಸರ್ಕಾರ ಸ್ಥಗಿತಗೊಳಿಸಿದೆ. ಸಿಂಧು ನದಿ ವಿಚಾರ ಈಗ ವಿವಾದದ ವಿಚಾರವಾಗಿ ಮಾರ್ಪಟ್ಟಿದೆ. ವಿವಾದ ಹೊರತಾಗಿಯೂ, ಭಾರತವು ಸಿಂಧು ನದಿಯಲ್ಲಿ ನೀರು ಹರಿಸದೆ ತಡೆಹಿಡಿದರೆ, ಅದರಿಂದ ಪಾಕಿಸ್ತಾನಕ್ಕೆ ಎಷ್ಟು ಸಮಸ್ಯೆಯಾಗುತ್ತದೆಯೋ, ಅಷ್ಟೇ ಸಮಸ್ಯೆಯನ್ನು ಭಾರತದ ಜಮ್ಮು ಮತ್ತು ಕಾಶ್ಮೀರವೂ ಎದುರಿಸಲಿದೆ. ಹೀಗಾಗಿಯೇ, ಸಿಂಧು ನೀರನ್ನು ತಡೆಹಿಡಿಯಬೇಡಿ, ನದಿಗೆ (ಪಾಕಿಸ್ತಾನಕ್ಕೆ) ನೀರು ಹರಿಸಿ ಎಂದು ಜಮ್ಮು-ಕಾಶ್ಮೀರ ಜನರು ಮತ್ತು ಸರ್ಕಾರ ಹೇಳುತ್ತಿವೆ. ಆದರೆ, ಕೇಂದ್ರ ಸರ್ಕಾರ ಮಾತ್ರ ತನ್ನ ಕಠಿಣ ನಿಲುವಿನಿಂದ ಹಿಂದೆ ಸರಿಯಲು, ಬದಲಾಯಿಸಲು ಹಿಂದೇಟು ಹಾಕುತ್ತಿದೆ.

ಅಂದಹಾಗೆ, 1960ರಲ್ಲಿ ವಿಶ್ವ ಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಐಡಬ್ಲ್ಯೂಟಿ ಒಪ್ಪಂದವಾಯಿತು. ಸಿಂಧು ಮತ್ತು ಅದರ ಉಪನದಿಗಳಾದ ಝೇಲಂ, ಚಿನಾಬ್, ರಾವಿ, ಬಿಯಾಸ್ ಹಾಗೂ ಸಟ್ಲೇಜ್‌ ನದಿಗಳ ನೀರು ಹಂಚಿಕೆಗೆ ಉಭಯ ರಾಷ್ಟ್ರಗಳು ಸಹಿ ಹಾಕಿದವು.

Advertisements

ಪೂರ್ವದ ನದಿಗಳಾದ ರಾವಿ, ಬಿಯಾಸ್, ಸಟ್ಲೇಜ್ ನದಿಗಳ ನೀರು ಬಳಕೆಯಲ್ಲಿ ಭಾರತಕ್ಕೆ ಸಂಪೂರ್ಣ ಹಕ್ಕು – ವಾರ್ಷಿಕ 41 ಟಿಎಂಸಿ ನೀರು ಬಳಕೆ – ನೀಡಲಾಯಿತು. ಅಂತೆಯೇ, ಪಶ್ಚಿಮದ ನದಿಗಳಾದ ಸಿಂಧು, ಝೇಲಂ, ಚಿನಾಬ್ ನದಿಗಳ ನೀರು ಬಳಕೆಯಲ್ಲಿ ಪಾಕಿಸ್ತಾನಕ್ಕೆ ಹೆಚ್ಚಿನ ಹಕ್ಕು – ಒಟ್ಟು ನೀರಿನಲ್ಲಿ 80% ಪಾಕಿಸ್ತಾನಕ್ಕೆ (ವಾರ್ಷಿಕ 99 ಟಿಎಂಸಿ ನೀರು) ಮತ್ತು ಭಾರತಕ್ಕೆ ಕೃಷಿ ಮತ್ತು ಜಲವಿದ್ಯುತ್‌ಗಾಗಿ 20% ನೀರು –ನೀಡಲಾಯಿತು. ಜೊತೆಗೆ, ಉಭಯ ರಾಷ್ಟ್ರಗಳಲ್ಲಿ ಯಾವುದೇ ದೇಶವು ಏಕಪಕ್ಷೀಯವಾಗಿ ಒಪ್ಪಂದವನ್ನು ಬದಲಿಸಲು ಸಾಧ್ಯವಿಲ್ಲ ಎಂಬ ನಿರ್ಬಂಧವನ್ನೂ ವಿಧಿಸಲಾಗಿತ್ತು.

ಈ ವರದಿ ಓದಿದ್ದೀರಾ?: ಭಾರತ-ಪಾಕ್ ಸಂಘರ್ಷ | ಜಾಗತಿಕವಾಗಿ ಭಾರತಕ್ಕೆಷ್ಟು ಬೆಂಬಲ ಸಿಕ್ಕಿತು?

ನೀರನ್ನು ಸಮರ್ಪಕ ಮತ್ತು ಸಮಾನಾಂತರವಾಗಿ ಬಳಸಿಕೊಳ್ಳಬೇಕೆಂಬುದು ಐಡಬ್ಲ್ಯೂಟಿ ಒಪ್ಪಂದದ ಉದ್ದೇಶವಾಗಿತ್ತು. ಆದಾಗ್ಯೂ, ಕಾಲಾನಂತರದಲ್ಲಿ ಒಪ್ಪಂದವು ವಿವಾದ ಕೇಂದ್ರವಾಗಿ ಮಾರ್ಪಟ್ಟಿತು.

ಸಿಂಧು ಮತ್ತು ಅದರ ಉಪನದಿಗಳು ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಹುಟ್ಟಿ, ಪಾಕಿಸ್ತಾನದ ಮೂಲಕ ಅರೇಬಿಯನ್ ಸಮುದ್ರವನ್ನು ಸೇರುತ್ತವೆ. ಈ ಭೌಗೋಳಿಕ ಸ್ಥಿತಿಯಿಂದಾಗಿ, ಭಾರತಕ್ಕೆ ನದಿಗಳ ಹರಿವಿನ ಮೇಲಿನ ನಿಯಂತ್ರಣದ ಅಧಿಕಾರವಿದೆ. ಇದು ಪಾಕಿಸ್ತಾನದಲ್ಲಿ ಆತಂಕವನ್ನು ಉಂಟುಮಾಡಿದೆ. ಇದೇ ಅಧಿಕಾರದ ಮೇಲೆ ಈಗ ಪಾಕಿಸ್ತಾನಕ್ಕೆ ನೀರು ಹರಿಸದಿರಲು ಭಾರತ ನಿರ್ಧರಿಸಿದೆ. ಮತ್ತೊಂದೆಡೆ, ಚಿನಾಬ್, ಝೇಲಂ ನದಿಗಳ ಮೂಲಕ ಏಕಾಏಕಿ ನೀರು ಹರಿಸಿ, ಪಾಕಿಸ್ತಾನಕ್ಕೆ ಪ್ರವಾಹ ಭೀತಿ ಉಂಟಾಗುವಂತೆಯೂ ಮಾಡಿದೆ.

ನದಿ ನೀರು ವಿಚಾರದಲ್ಲಿ ಭಾರತವು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ, ಅತ್ತ ಪಾಕಿಸ್ತಾನ ಪರದಾಡುತ್ತಿದೆ, ಪರಿತಪಿಸುತ್ತಿದೆ. ಪಾಕಿಸ್ತಾನದ ಬರೋಬ್ಬರಿ 90% ಕೃಷಿ ಚಟುವಟಿಕೆಗಳು ಸಿಂಧು ನದಿ ನೀರಿನ ಮೇಲೆ ಅವಲಂಬಿತವಾಗಿವೆ. ಸಿಂಧು ನದಿ ನೀರು ದೊರೆಯದಿದ್ದರೆ, ಪಾಕಿಸ್ತಾನದ ಕೃಷಿ ಸಂಪೂರ್ಣ ನೆಲಕಚ್ಚುತ್ತದೆ.

ಈಗ, ಸಿಂಧು ನದಿ ನೀರನ್ನು ಭಾರತ ತಡೆಹಿಡಿದಿರುವ ಕಾರಣ, ಪಾಕಿಸ್ತಾನದಲ್ಲಿ ಕೃಷಿ ಪ್ರದೇಶಗಳು ಬರಗಾಲದ ಭೀತಿ ಎದುರಿಸುತ್ತಿವೆ. ನೀರಿಗಾಗಿ ಪಾಕಿಸ್ತಾನ ಹಾತೊರೆಯುತ್ತಿದೆ. ಸಿಂಧು ನದಿ ನೀರನ್ನು ಹರಿಸುವಂತೆ ಭಾರತವನ್ನು ಒತ್ತಾಯಿಸುತ್ತಿದೆ. ಪತ್ರವನ್ನೂ ಬರೆದಿದೆ. ನೀರಿನ ಹರಿವಿಗಾಗಿ ಮಧ್ಯಸ್ಥಿಕೆ ವಹಿಸುವಂತೆ ಅಮೆರಿಕದಂತಹ ರಾಷ್ಟ್ರಗಳನ್ನು ಕೇಳುತ್ತಿದೆ.

ಈ ವರದಿ ಓದಿದ್ದೀರಾ?: ಭಾರತ-ಪಾಕಿಸ್ತಾನ ಸಂಘರ್ಷದ ಬಳಿಕ ‘ಕೋಮು ಸೌಹಾರ್ದ’ದ ಪಾಠ ಕಲಿತರೇ ಮೋದಿ?

ಇತ್ತ, ಭಾರತವು ಕಿಷ್ಟ್‌ವಾರ್, ರತ್ಲೆ ಹಾಗೂ ಬಗ್ಲಿಹಾರ್‌ ಅಣೆಕಟ್ಟುಗಳನ್ನು ಕಟ್ಟುತ್ತಿದೆ. ಆದರೂ, ಆ ಅಣೆಕಟ್ಟುಗಳು ಸಂಪೂರ್ಣವಾಗಿ ನಿರ್ಮಾಣಗೊಳ್ಳಲು ಕನಿಷ್ಠ 20 ವರ್ಷಗಳು ಬೇಕಾಗಬಹುದು. ಸದ್ಯ, ಭಾರತವು ಬಗ್ಲಿಹಾರ್ ಮತ್ತು ಸಲಾಲ್ ಅಣೆಕಟ್ಟುಗಳ ಮೂಲಕ ನದಿ ನೀರಿನ ಹರಿವನ್ನು ನಿಯಂತ್ರಿಸುತ್ತಿದೆ. ಈ ಎರಡೂ ಅಣೆಕಟ್ಟುಗಳಲ್ಲಿ ಇಡೀ ನದಿ ನೀರನ್ನು ನಿಯಂತ್ರಿಸಲು ಸಾಧ್ಯವಾಗದು. ಹೀಗಾಗಿ, ಈಗ ಭಾರತವು ನೀರು ಹರಿಸಲು ನಿರಾಕರಿಸುತ್ತಿದ್ದರೂ, ಹೆಚ್ಚು ದಿನ ಸಿಂಧು ನದಿ ನೀರನ್ನು ಹಿಡಿದಿಟ್ಟುಕೊಳ್ಳಲು ಭಾರತಕ್ಕೂ ಸಾಧ್ಯವಿಲ್ಲ.

ನೀರನ್ನು ಹೆಚ್ಚು ದಿನ ಹಿಡಿದಿಟ್ಟುಕೊಳ್ಳಲು ಭಾರತ ಮುಂದಾದರೆ, ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆಯಲ್ಲಿ ಜಮ್ಮು ಮತ್ತು ಕಾಶ್ಮೀರವು ಭಾರೀ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಹೊಸ ಜಲಾಶಯಗಳ ನಿರ್ಮಾಣದಿಂದ ಜಮ್ಮು-ಕಾಶ್ಮೀರ ಭಾಗದಲ್ಲಿ ಭೂಕುಸಿತ, ಮೇಘಸ್ಫೋಟ ಹಾಗೂ ಜಲಾವೃತ ಮತ್ತು ಮುಳುಗಡೆಯಂತಹ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಇದು ಆಸ್ತಿ-ಪಾಸ್ತಿ ನಾಶ, ಜನರ ಮಾರಣಹೋಮಕ್ಕೆ ಕಾರಣವಾಗುತ್ತದೆ. ಇದಕ್ಕೆ, 2013ರಲ್ಲಿ ಉತ್ತರಾಖಂಡದ ಪ್ರವಾಹವು ಅತ್ಯಂತ ಸ್ಪಷ್ಟ ಉದಾಹರಣೆಯೂ ಆಗಿದೆ.

ಈ ನಡುವೆ, ಐಡಬ್ಲ್ಯೂಟಿ ಒಪ್ಪಂದವನ್ನು ಸ್ಥಗಿತಗೊಳಿಸಿರುವ ಭಾರತದ ವಿರುದ್ಧ ಪಾಕಿಸ್ತಾನವು ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ದೂರು ಸಲ್ಲಿಸಲು ಯೋಚಿಸುತ್ತಿದೆ. ಒಂದು ವೇಳೆ, ಭಾರತವು ತನ್ನ ನಿರ್ಧಾರವನ್ನು ಸಡಿಲಿಸದಿದ್ದರೆ, ಮತ್ತೆ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಉಂಟಾಗಬಹುದು. ಈಗ ಭಾರತದ ಪರವಾಗಿರುವ ಅಂತಾರಾಷ್ಟ್ರೀಯ ಅಭಿಪ್ರಾಯವು ಮುಂದಿನ ದಿನಗಳಲ್ಲಿ ಭಾರತದ ಮೇಲೆ ಒತ್ತಡ ಹೇರುವಂತೆ ಬದಲಾಗಬಹುದು.

ಈ ಎಲ್ಲ ಪ್ರಮುಖ ಕಾರಣಗಳಿಂದಾಗಿಯೇ, ಕಾಶ್ಮೀರಿ ಜನರು ಸಿಂಧು ನದಿಗೆ ನೀರು ಹರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಇದೆಲ್ಲದರ ಅರಿವಿದ್ದರೂ, ಹಠಕ್ಕೆ ಬಿದ್ದಂತೆ ತನ್ನ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಡಿದೆ.

ಭಾರತವು ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು, ವಿವಾದವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು, ತನ್ನ ಕೃಷಿ ಮತ್ತು ಜಲವಿದ್ಯುತ್ ಅಗತ್ಯಗಳನ್ನು ಪೂರೈಸುವುದರ ಜೊತೆಗೆ, ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಗೌರವಿಸಲು ಮತ್ತು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಅಗತ್ಯ ಕಾರ್ಯತಂತ್ರವನ್ನು ರೂಪಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಜೊತೆಗೆ, ನೈಸರ್ಗಿಕ ನದಿ ಮತ್ತು ಅದರ ನೀರನ್ನು ಯಾವುದೇ ರಾಷ್ಟ್ರವು ಯುದ್ಧ ಅಥವಾ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂಬ ಅಭಿಪ್ರಾಯಗಳು ಗಟ್ಟಿಯಾಗಿ ಹೊರಬರುತ್ತಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

8 COMMENTS

  1. ಈ ಬರಹ ಕಾಂಗ್ರೆಸ್ ಪಕ್ಷದ ಮುಖವಾಣಿಯಂತೆ ಕಾಣುತ್ತಿದೆ ಬಿಜೆಪಿ ಆಡಳಿತದಲ್ಲಿ ಎಲ್ಲರೂ ಸಮಾನರು ಎಂಬ ಸಿದ್ಧಾಂತವಿದೇ ಹೊರತು ಕಾಂಗ್ರೆಸ್ ರೀತಿ ತುಷ್ಟಿಗುಣ ಇಲ್ಲ ಜನರನ್ನು ದಾರಿ ತಪ್ಪಿಸಬೇಡಿ ಜನರು ಬುದ್ಧಿವಂತರಾಗಿದ್ದಾರೆ ಕರ್ನಲ್ ಸೋಫಿಯಾ ಖುರೇಶಿ ಅವರ ದೇಶಭಕ್ತಿಯನ್ನು ಮೆಚ್ಚ ಬೇಕಾದರೆ ಅವರು ಹೇಳಿದ್ದಾರೆ ಭಯೋತ್ಪಾದಕರಿಗೆ ಧರ್ಮ ಕೇಳದೆ ಸ್ಟಿಕರ್ ಒತ್ತುತ್ತೇನೆ ಎಂದು ಇತರ ಅರಿವು ಸ್ವಯಂ ಘೋಷಿತ ಜಾತಿ ತೂತುಗಳಿಗೆ ಇರಲಿ

  2. What a hell statement. ಮೂರ್ಖತನದ ಪರಮಾವಧಿ ಮತ್ತು ದೇಶಧ್ರೋಹಿ ಹೇಳಿಕೆ.

  3. ಈ ದಿನ ಓದುವಾಗಲೆಲ್ಲಾ ಇದು ಕಾಂಗ್ರೆಸ್ ಮತ್ತು ಲೆಫೆಟಿಸ್ಟ್ ಮನೋಭಾವ ಹೊಂದಿರುವ ಪತ್ರಿಕೆಯೆಂದು ಗೊತ್ತಾಗುತ್ತದೆ ಅದಕ್ಕ್ ಉದಾಹರಣೆ ಬೇಕಿಲ್ಲ !!

  4. ಪಾಕಿಸ್ತಾನವು ಎಷ್ಟೊಂದು ಒಪ್ಪಂದಗಳನ್ನು ಉಲ್ಲಂಗಿಸಿದೆ. ಇದಕ್ಕೇನು ಹೇಳುತ್ತೀಯಪ್ಪ ಚಲ್ಯ?

  5. ಈ ಪತ್ರಿಕೆ ಪಾಪಿ ಪಾಕಿಸ್ತಾನಕ್ಕೆ ಉಟ್ಟಿರೋರದು… ಲಜ್ಜೆಗೆಟ್ಟ ಜನಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X