- 2017ರಲ್ಲಿ ನಡೆದಿದ್ದ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ
- ಬೀದಿ ವ್ಯಾಪಾರಿಗಳ ಕಾಯ್ದೆ ಉಲ್ಲಂಘಿಸಿ ವ್ಯಾಪಾರಿಗಳ ತೆರವು
ರಾಜ್ಯ ರಾಜಧಾನಿ ಬೆಂಗಳೂರಿನ ಫುಟ್‌ಪಾತ್‌ಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಹಿನ್ನೆಲೆ, ‘ಮುಕ್ತ ಕಾಲುದಾರಿ’ ಅಭಿಯಾನದಡಿ ನಗರ ಸಂಚಾರ ಪೊಲೀಸರು ಸೋಮವಾರ ತೆರುವು ಕಾರ್ಯಾಚರಣೆ ನಡೆಸಿದ್ದರು. ಇದೀಗ, ಕೆಲವು ಬೀದಿಬದಿ ವ್ಯಾಪಾರಿಗಳನ್ನು ತೆಗೆದುಹಾಕಿದ್ದು, ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ 48 ಸಂಚಾರ ಪೊಲೀಸ್ ಠಾಣೆಗಳು ತಮ್ಮ ವ್ಯಾಪ್ತಿಯ ಮುಖ್ಯ ರಸ್ತೆ ಹಾಗೂ ಸರ್ವಿಸ್ ರಸ್ತೆ ಸೇರಿದಂತೆ ಅಕ್ರಮವಾಗಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸಿದ್ದಾರೆ. ಹಾಗೆಯೇ, ಅಕ್ರಮವಾಗಿ ವಾಹನ ನಿಲುಗಡೆ ಮಾಡಿದನ್ನು ತೆರವು ಮಾಡಿದ್ದಾರೆ. ಇದಕ್ಕೆ ಬೀದಿಬದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ವ್ಯಾಪಾರಿಗಳ ಕಾಯ್ದೆ ಉಲ್ಲಂಘಿಸಿ ಕೆಲವು ಸ್ಥಳಗಳಿಂದ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಟೌನ್ ವೆಂಡಿಂಗ್ ಕಮಿಟಿ (ಟಿವಿಸಿ) ಸದಸ್ಯ ಹಾಗೂ ಕೆಪಿಸಿಸಿ ಬೀದಿಬದಿ ವ್ಯಾಪಾರಿಗಳ ಸಮಿತಿ ರಾಜ್ಯಾಧ್ಯಕ್ಷ ರಂಗಸ್ವಾಮಿ ಮಾತನಾಡಿ, “ಈ ಅಭಿಯಾನ ಆರಂಭಿಸುವ ಮುನ್ನ ಬೀದಿಬದಿ ವ್ಯಾಪಾರಿಗಳೊಂದಿಗೆ ಸಂಪರ್ಕಿಸಿ ತಿರ್ಮಾನಿಸಬೇಕಿತ್ತು. ಮಾರಾಟ ಸಮಿತಿಯನ್ನು ಸಂಪರ್ಕಿಸದೇ ಈ ರೀತಿ ಮಾಡುವುದು ತಪ್ಪು. ಇದು ಮುಂದುವರೆದರೆ ನಾವು ಎದುರಿಸಲು ಸಿದ್ಧರಿದ್ದೇವೆ” ಎಂದರು.
ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸದಸ್ಯ ವಿನಯ್ ಶ್ರೀನಿವಾಸ ಮಾತನಾಡಿ, “ಇದು ಕಾನೂನು ನಿಯಮದ ಉಲ್ಲಂಘನೆ. ಬಿಬಿಎಂಪಿ ಸಮೀಕ್ಷೆ ನಡೆಸದೆ ಮಾರಾಟಗಾರರನ್ನು ಹೊರಹಾಕುವುದು. ಮಾರಾಟ ವಲಯಗಳನ್ನು ರಚಿಸುವುದು ಸರಿಯಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮುಂದಿನ ಐದು ದಿನ ಸಾಧಾರಣ ಮಳೆ ಸಾಧ್ಯತೆ : ಹವಾಮಾನ ಇಲಾಖೆ
“ಬೀದಿ ಬದಿ ವ್ಯಾಪಾರಿಗಳ ಕೊನೆಯ ಸಮೀಕ್ಷೆಯನ್ನು 2017ರಲ್ಲಿ ನಡೆಸಲಾಗಿತ್ತು. ಇಷ್ಟು ವರ್ಷ ಕಳೆದರೂ ಬಿಬಿಎಂಪಿ ಇನ್ನೂ ಸಮೀಕ್ಷೆ ಆರಂಭಿಸುತ್ತಿಲ್ಲ. ಯಾವುದೇ ಸೂಚನೆ ನೀಡದೆ ಬೀದಿಬದಿ ವ್ಯಾಪಾರಿಗಳನ್ನು ಹೊರಹಾಕಲು ಸಂಚಾರ ಪೊಲೀಸರು ಸೇರಿದಂತೆ ಯಾರಿಗೂ ಅವಕಾಶವಿಲ್ಲ” ಎಂದು ಹೇಳಿದರು.
ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಮಾತನಾಡಿ, “ಅಕ್ರಮವಾಗಿ ನಿಲುಗಡೆ ಮಾಡಿರುವ ವಾಹನಗಳು ಮತ್ತು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿರುವವರನ್ನು ಮಾತ್ರ ತೆಗೆದುಹಾಕುತ್ತಿದ್ದೇವೆ. ಡ್ರೈವ್ ಸಮಯದಲ್ಲಿ ನಾವು ಎಲ್ಲೆಲ್ಲಿ ಮಾರಾಟಗಾರರನ್ನು ಕಂಡುಕೊಂಡಿದ್ದೇವೆ. ಅವರನ್ನು ಬಿಬಿಎಂಪಿಯ ಅನುಮತಿಯೊಂದಿಗೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ. ಆದ್ದರಿಂದ ಪಾದಚಾರಿಗಳ ಚಲನೆಗೆ ತೊಂದರೆಯಾಗುವುದಿಲ್ಲ” ಎಂದರು.