ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ 2025-26 ಸಾಲಿನ ಯೋಜನೆಯಲ್ಲಿ ಬಂಜಾರ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಶಿಕ್ಷಣ ಕುರಿತು ಜಾಗೃತಿಗಾಗಿ ʻʻಬಂಜಾರ ಅಕಾಡೆಮಿಯ ನಡೆ ತಾಂಡದ ಕಡೆ-2025-26 ಅಭಿಯಾನʼʼ ಎಲ್ಲ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಚೌಕಸಂದ್ರ ತಾಂಡದಿಂದ ಬಂಜಾರ ಅಕಾಡೆಮಿ ಅಧ್ಯಕ್ಷ ಡಾ ಎ ಆರ್ ಗೋವಿಂದ ಸ್ವಾಮಿ ಅಭಿಯಾನಕ್ಕೆ ಚಾಲನೆ ನೀಡಿದರು.
ಸಂತ ಸೇವಾಲಾಲರ ಛಾಯಾಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ʻʻಕಲೆ,ಸಾಹಿತ್ಯ,ಸಂಸ್ಕೃತಿ ಸ್ವಸ್ಥ ಸಮಾಜ ಹಾಗೂ ಪ್ರಬುದ್ದ ಸಮಾಜ ಕಟ್ಟುತ್ತದೆ. ಹೀಗಾಗಿ ಬಂಜಾರ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲಿ ʻʻಅಕಾಡೆಮಿ ನಡೆ ತಾಂಡ ಕಡೆ 2025-26 ಅಭಿಯಾನʼʼದ ಮೂಲಕ ಬಂಜಾರ ತಾಂಡಾದ ಯುವ ಸಮುದಾಯ ಹಾಗೂ ಇತರರನ್ನು ಬಂಜಾರ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣದ ಕಡೆ ಮುಖ ಮಾಡುವಂ ಜಾಗೃತಿ ಮೂಡಿಸಲಿದೆ. ಈ ಮೂಲಕ ಜಾಗತಿಕವಾದ ಆಧುನಿಕ ಸವಾಲುಗಳನ್ನು ಎದುರಿಸಲು, ಸಾಂಸ್ಕೃತಿಕ ನಾಯಕತ್ವ ವಹಿಸಲು ಬಂಜಾರರನ್ನು ಸಜ್ಜುಗೊಳಿಸುವುದು ಇದರ ಉದ್ದೇಶ ಎಂದರು.
ಬಂಜಾರ ಕಲೆ ಮೌಖಿಕ ಸಾಹಿತ್ಯ, ಬಂಜಾರ ವಸ್ತ್ರ ಮತ್ತು ಭಾಷೆ ಬಗ್ಗೆ ಅಭಿಮಾನ ಹೊಂದುವಂತೆ ಮಾಡುವುದಾಗಿದೆ. ಪ್ರತಿ ತಾಂಡದಿಂದ ಕನಿಷ್ಠ ಇಬ್ಬರು ಜಾಗೃತರಾದರೂ ಅಕಾಡೆಮಿ ಹಾಗೂ ಸರ್ಕಾರದ ಉದ್ದೇಶ ಸಫಲ. ಪಠ್ಯೇತರ ಚಟುವಟಿಕೆಗಳಾದ ಸಂಸ್ಕೃತಿ, ಸಾಹಿತ್ಯಕ್ಕೆ ವಿದ್ಯಾರ್ಥಿಗಳು ಬಂದರೆ, ಓದಿನಲ್ಲೂ ಮುಂದೆ ಇರುತ್ತಾರೆ ವಿದ್ಯಾರ್ಥಿಗಳು ಹೆಚ್ಚಿನ ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಾಸ ಹೊಂದಬಹುದು ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿ ಜಯರಾಮ ನಾಯ್ಕ ಮಾತನಾಡಿ, ಬಂಜಾರರು ತಮ್ಮ ಭಾಷೆ, ವಸ್ತ್ರ ಸಂಹಿತೆ ಮರೆಯುತ್ತಿರುವ ಮತ್ತು ಈ ಸಂದರ್ಭದಲ್ಲಿ ಬಂಜಾರರ ಉತ್ತಮ ಕಸೂತಿ ಧರಿಸುವುದು ಅವಮಾನ ಎಂದು ಭಾವಿಸುತ್ತಿರುವ ಸಂದರ್ಭದಲ್ಲಿ ಬಂಜಾರ ಅಕಾಡೆಮಿ ಈ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ರಂಗಕರ್ಮಿ ನರೇಶ್ ಮಯ್ಯ ಮಾತನಾಡಿ, ಬಂಜಾರ ಅಕಾಡೆಮಿ ಬಂಜಾರ ಭಾಷೆ, ಸಂಸ್ಕೃತಿ ಸಾಹಿತ್ಯವನ್ನು ನೂತನವಾಗಿ ಕಟ್ಟುತ್ತಿದೆ. 60-70 ಕ್ಕೂ ಹೆಚ್ಚು ಜನರಿಗೆ ಸಾಹಿತ್ಯ ಸಂಸ್ಕೃತಿ ಪ್ರಶಸ್ತಿಗಳು, ಸಂತ ಸೇವಾಲಾಲ್ ಹೆಸರಿನಲ್ಲಿ ಒಂದು ಲಕ್ಷ ಮೊತ್ತದ ಪ್ರಶಸ್ತಿ ಅಧ್ಯಕ್ಷರು ಸ್ಥಾಪಿಸಿರುವುದು ಉತ್ತಮ ಬೆಳವಣಿಗೆ, ಅಕಾಡೆಮಿ ಇತರೆ ಅಕಾಡೆಮಿಗಿಂತ ಕ್ರಿಯಾತ್ಮಕವಾಗಿ ಕೆಲಸ ಮಾಡಿ ಗುರುತಿಸಿಕೊಳ್ಳುತ್ತಿರುವುದು ತಳಸಮುದಾಯಕ್ಕೆ ಸಿಕ್ಕ ಸ್ವಾತಂತ್ರ್ಯ ಎಂದರು.
ಸಮಾರಂಭದಲ್ಲಿ ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಾದ ವರಲಕ್ಷ್ಮಿ. ಎನ್, ವಕೀಲರಾದ ಶಂಕರ್ ನಾಯ್ಕ್, ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಣ್ಣ, ಸ್ಥಳೀಯ ಮುಖಂಡರಾದ ಲಲಿತಾಬಾಯಿ ಮಹದೇವ್ ನಾಯ್ಕ್, ಶಾಂತ ಬಾಯಿ ರವಿನಾಯ್ಕ್, ಪೂಜಾರಿ ಗೋಪಾಲನಾಯ್ಕ್ ಸದಸ್ಯ ಗಿರೀಶ್ ನಾಯ್ಕ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯರು ಮುಂತಾದವರು ಉಪಸ್ಥಿತರಿದ್ದರು.