ಕಲಬುರಗಿ ವಿಭಾಗದ ಹೊಸದಾದ 14 ತಾಲೂಕುಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಯ ಉದ್ದೇಶದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳನ್ನು ಪ್ರಾರಂಭಿಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಆದರೆ ಶಹಾಬಾದ್ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಾಡದೇ ಇರುವುದು ಖಂಡನೀಯ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಎಸ್. ಇಬ್ರಾಹಿಂಪೂರ ಹೇಳಿದರು.
ಹೊಸ ತಾಲೂಕು ಘೋಷಿಸಿ ಹಲವು ವರ್ಷಗಳಾದರೂ ಪೂರ್ಣ ಪ್ರಮಾಣದಲ್ಲಿ ತಾಲೂಕು ಕಚೇರಿಗಳನ್ನು ಪ್ರಾರಂಭಿಸದೆ ಇರುವುದರಿಂದ ಜನರು ಚಿತ್ತಾಪುರ ತಾಲ್ಲೂಕಿಗೆ ಅಲೆದಾಡುವುದು ಇನ್ನೂ ತಪ್ಪಿಲ್ಲ. ಇಲ್ಲಿಯ ಜನರ ಬೇಡಿಕೆಯಂತೆ ಎಲ್ಲ ತಾಲ್ಲೂಕು ಮಟ್ಟದ ಕಚೇರಿಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕಾದರೆ ಮೇಲ್ವಿಚಾರಣೆ ಮಾಡುವಂತಹ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭಿಸುವುದು ಪ್ರಮುಖವಾಗಿದೆ. ಶಹಾಬಾದನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆರಂಭಕ್ಕೆ ಹಿಂದೇಟು ಹಾಕುತ್ತಿರುವುದು ಇಲ್ಲಿಯ ಜನರಿಗೆ ಮಾಡುವ ಅವಮಾನವಾಗಿದೆ. ಸರಕಾರದ ನಿಯಮದಂತೆ ಪ್ರತಿಯೊಂದು ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇರುವುದು ಕಡ್ಡಾಯವಾಗಿದೆ’ ಎಂದರು.
ʼಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳನ್ನು ಹೊಂದಿರುವ ಶಹಾಬಾದ್ ತಾಲ್ಲೂಕನ್ನು ಸರಕಾರ ನಿರ್ಲಕ್ಷ್ಯಿಸದೆ ಎಲ್ಲ ತಾಲ್ಲೂಕು ಮಟ್ಟದ ಕಚೇರಿಗಳ ಆರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊಸದಾಗಿ ಆರಂಭಿಸಲಾಗುವ ಕಚೇರಿಗಳಿಗೆ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕುʼ ಎಂದು ಆಗ್ರಹಿಸಿದರು.